ಹಾಸನ: ಅನಸ್ತೇಶಿಯಾ ಓವರ್ ಡೋಸ್ ಬಾಣಂತಿ ಸಾವು
ಹಾಸನ, ಮೇ 19: ಅತಿಯಾದ ಅರವಳಿಕೆ ಚುಚ್ಚುಮದ್ದಿನ ಪರಿಣಾಮ 4 ದಿನಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಣಂತಿಯೊಬ್ಬರು ಹಾಸನದಲ್ಲಿ ಮೃತಪಟ್ಟಿದ್ದಾರೆ.
ವೈದ್ಯರ ನಿರ್ಲಕ್ಷ್ಯದಿಂದಲೇ ಬಾಣಂತಿ ಸಾವನ್ನಪ್ಪಿದ್ದಾರೆ ಎಂದು ಸಂಬಂಧಿಕರು ಆರೋಪಿಸಿ ಮೃತ ಮಹಿಳೆಯ ನವಜಾತ ಹೆಣ್ಣು ಮಗುವನ್ನು ಬಿಸಿಲಿನಲ್ಲಿ ಇರಿಸಿ ಹಾಸನ ಜಿಲ್ಲಾಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸಿದರು.
ಹೊಳೆನರಸೀಪುರದ ತಾಲೂಕಿನ ನ್ಯಾಮನಹಳ್ಳಿ ಗ್ರಾಮದ ರೂಪಾ (25) ಮೃತಪಟ್ಟ ಬಾಣಂತಿ. ಹೆರಿಗೆಗಾಗಿ ಕಳೆದ 4 ದಿನಗಳ ಹಿಂದೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ರೂಪಾ ಅವರಿಗೆ ವೈದ್ಯ ಡಾ.ರಘುಪತಿ ಅವರು ಶಸ್ತ್ರ ಚಿಕಿತ್ಸೆ ನಡೆಸಿ ಹೆರಿಗೆ ನಡೆಸಿದ್ದರು.[ಹೆಚ್ಚಿನ ಅರವಳಿಕೆ ಚುಚ್ಚುಮದ್ದಿಗೆ ಮತ್ತೊಂದು ಸಾವು]

ವೈದ್ಯೆ ಡಾ.ಶೃತಿ ಅವರು ಅರವಳಿಕೆ ನೀಡಿದ್ದು, ಅತಿಯಾದ ಅರವಳಿಕೆ ಚುಚ್ಚುಮದ್ದಿನಿಂದ ರೂಪಾ ಪ್ರಜ್ಞಾಹೀನ ಸ್ಥಿತಿ ತಲುಪಿದ್ದಾರೆ. ಕಳೆದ 4 ದಿನದಿಂದ ಪ್ರಜ್ಞಾಹೀನ ಸ್ಥಿತಿಯಲ್ಲೇ ಇರುವುದನ್ನು ಕಂಡು ವೈದ್ಯರಲ್ಲಿ ಪ್ರಶ್ನಿಸಿದಾಗ ಮೈಸೂರಿನಿಂದ ನುರಿತ ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಿ ಗುಣಮುಖರನ್ನಾಗಿ ಮಾಡುವುದಾಗಿ ಸಂಬಂಧಿಕರಿಗೆ ಹಾರಿಕೆ ಉತ್ತರ ನೀಡಿದ್ದರು .
ಆದರೆ ಮೇ.19 ಸೋಮವಾರ ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೇ ರೂಪಾ ಮೃತಪಟ್ಟಿದ್ದಾರೆ. ಇದರಿಂದ ಆಕ್ರೋಶಗೊಂಡ ಸಂಬಂಧಿಕರು, ವಿಷಯ ತಿಳಿದ ಗ್ರಾಮಸ್ಥರು ಆಸ್ಪತ್ರೆ ಬಳಿ ಜಮಾಯಿಸಿ ಪ್ರತಿಭಟನೆ ನಡೆಸಿದರು.[ಬೆಂಗಳೂರು : ವೈದ್ಯನ ನಿರ್ಲಕ್ಷ್ಯದಿಂದ ಮಗು ಸಾವು]
ರೂಪಾ ಅವರ ಸಾವಿಗೆ ಅರವಳಿಕೆ ಓವರ್ ಡೋಸ್ ಕಾರಣ ಎಂದು ಸಂಬಂಧಿಕರು ಆರೋಪಿಸುತ್ತಿದ್ದರೂ, ಮರಣೋತ್ತರ ಪರೀಕ್ಷೆಯ ನಂತರವೇ ಸ್ಪಷ್ಟ ಮಾಹಿತಿ ತಿಳಿಯಬೇಕಿದೆ.












Click it and Unblock the Notifications