ಹೆಚ್ಚಿನ ಅರವಳಿಕೆ ಚುಚ್ಚುಮದ್ದಿಗೆ ಮತ್ತೊಂದು ಸಾವು

ಶಸ್ತ್ರಚಿಕಿತ್ಸೆಗೆಂದು ಚಿಕ್ಕಪೇಟೆ ನಿವಾಸಿ ವೈಶಾಲಿ ಎಂಬುವವರನ್ನು ಸದಾಶಿವನಗರದ ನರ್ಸಿಂಗ್ ಹೋಂಗೆ ದಾಖಲಿಸಲಾಗಿತ್ತು. ಶಸ್ತ್ರಚಿಕಿತ್ಸೆಗೆ ಮುನ್ನ ಅರವಳಿಕೆ ಇಂಜೆಕ್ಷನ್ ನೀಡಿದ ನಂತರ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಕೂಡಲೆ ಅವರನ್ನು ಫೋರ್ಟಿಸ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಬದುಕಿ ಉಳಿಯಲಿಲ್ಲ.
ಹೆಚ್ಚಿನ ಪ್ರಮಾಣದಲ್ಲಿ ಅನಸ್ತೀಶಿಯಾ ನೀಡಿದ್ದರಿಂದಲೇ ಆಕೆಯಲ್ಲಿ ತೊಂದರೆ ಕಾಣಿಸಿಕೊಂಡಿತು ಎಂದು ವೈಶಾಲಿ ಕುಟುಂಬದವರು ಆರೋಪಿಸಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಸದಾಶಿವನಗರ ಪೊಲೀಸರು ನಿರ್ಲಕ್ಷ್ಯ ತೋರಿದ ವೈದ್ಯರ ವಿರುದ್ಧ ದೂರು ದಾಖಲಿಸಿಕೊಂಡಿದ್ದು, ಮಹಿಳೆಯನ್ನು ಪೋಸ್ಟ್ ಮಾರ್ಟಂಗಾಗಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಹೆಚ್ಚಿನ ಪ್ರಮಾಣದಲ್ಲಿ ಅರವಳಿಕೆ ನೀಡಿದ್ದರಿಂದ ರೋಗಿಗಳು ಸಾವಿಗೀಡಾದ ಹಲವಾರು ಘಟನೆಗಳು ಇತ್ತೀಚಿನ ದಿನಗಳಲ್ಲಿ ನಡೆದಿವೆ. ಕೆಲವೇ ದಿನಗಳ ಹಿಂದೆ ಚಿತ್ರದುರ್ಗದ ಚೇತನಾ ಅವರು ಸಾವು ಬದುಕಿನ ಹೋರಾಟ ನಡೆಸಿ ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಕೊನೆಯುಸಿರೆಳೆದರು. ಅವರಿಗೆ ಕೂಡ ಹೆಚ್ಚಿನ ಪ್ರಮಾಣದಲ್ಲಿ ಅರವಳಿಕೆ ನೀಡಿದ್ದರಿಂದಲೇ ಸಾವಿಗೀಡಾಗಿದ್ದರು ಎಂದು ಆರೋಪಿಸಲಾಗಿತ್ತು. ಕಳೆದ ಫೆಬ್ರವರಿಯಲ್ಲಿ ಕೂಡ ವೈದ್ಯರ ನಿರ್ಲಕ್ಷ್ಯದಿಂದಾಗಿ ಹೆಚ್ಚಿನ ಅರವಳಿಕೆ ನೀಡಿದ್ದರಿಂದ ಪುಟ್ಟ ಮಗು ಶಿರೀಶ್ ಸಾವಿಗೀಡಾಗಿದ್ದ.
ಬಳ್ಳಾರಿಯಲ್ಲಿ ವೇಶ್ಯಾವಾಟಿಕೆ ಬಯಲು : ಅನೈತಿಕ ಚಟುವಟಿಕೆ ನಡೆಯುತ್ತಿದೆಂಬ ಸುಳಿವಿನ ಮೇರೆಗೆ ಬಳ್ಳಾರಿಯ ಡಿಸಿ ನಗರದ ಮನೆಯೊಂದರ ಮೇಲೆ ಶನಿವಾರ ಮಧ್ಯಾಹ್ನ ದಾಳಿ ಮಾಡಿ ಪೊಲೀಸರು 32 ಅಪ್ರಾಪ್ತೆಯರು, 23 ಮಹಿಳೆಯರು ಸೇರಿದಂತೆ 62 ಜನರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಹಲವಾರು ಮಹಿಳೆಯರು ಮಹಾರಾಷ್ಟ್ರ, ಆಂಧ್ರ, ಪಶ್ಚಿಮ ಬಂಗಾಳಕ್ಕೆ ಸೇರಿದವರು ಎಂದು ಕೂಡ ತಿಳಿದುಬಂದಿದೆ.
ಬೆಂಗಳೂರಿನ ಜಸ್ಟಿಸ್ ಹ್ಯಾಂಡ್ ಕೇರ್ ಎನ್‌ಜಿಓ ಸಂಸ್ಥೆ ನೀಡಿದ ಸುಳಿವಿನ ಮೇರೆಗೆ, ಬಳ್ಳಾರಿ ಎಸ್‌ಪಿ ಚೇತನ್ ಸಿಂಗ್ ರಾಥೋಡ್ ನೇತೃತ್ವದಲ್ಲಿ ದಾಳಿ ಮಾಡಿದ ಪೊಲೀಸರು 57ಕ್ಕೂ ಹೆಚ್ಚು ಮಹಿಳೆಯರನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಇವರಲ್ಲಿ ಮೂವರು ಬಾಂಗ್ಲಾ ದೇಶಿಯರು ಮತ್ತು ಐವರು ಪುರುಷರು ಇದ್ದಾರೆ ಎಂದು ತಿಳಿದುಬಂದಿದೆ. ಅಪ್ರಾಪ್ತೆಯರನ್ನು ಬಾಲಮಂದಿರಕ್ಕೆ ಕಳುಹಿಸಲಾಗಿದೆ.












Click it and Unblock the Notifications