ಸಿಂಧಗಿ, ಹಾನಗಲ್ ಉಪ ಚುನಾವಣೆ; ನವೆಂಬರ್ 2ಕ್ಕೆ ಮತ ಎಣಿಕೆ
ಬೆಂಗಳೂರು, ಅಕ್ಟೋಬರ್ 31; ಹಾನಗಲ್ ಮತ್ತು ಸಿಂಧಗಿ ಕ್ಷೇತ್ರದ ಉಪ ಚುನಾವಣೆ ಮುಗಿದಿದ್ದು ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ. ನವೆಂಬರ್ 2ರ ಮಂಗಳವಾರ ಮತ ಎಣಿಕೆ ನಡೆಯಲಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶದ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ.
ಹಾವೇರಿ ಜಿಲ್ಲೆಯ ಹಾನಗಲ್ ಕ್ಷೇತ್ರದಲ್ಲಿ 13 ಅಭ್ಯರ್ಥಿಗಳು ಕಣಲ್ಲಿದ್ದಾರೆ. ಶನಿವಾರ ಕ್ಷೇತ್ರದಲ್ಲಿ 83.44ರಷ್ಟು ಮತದಾನವಾಗಿದೆ. ವಿಜಯಪುರ ಜಿಲ್ಲೆಯ ಸಿಂಧಗಿಯಲ್ಲಿ 6 ಅಭ್ಯರ್ಥಿಗಳು ಕಣದಲ್ಲಿದ್ದು, ಶೇ 69.41ರಷ್ಟು ಮತದಾನ ನಡೆದಿದೆ.
ಉಪ ಚುನಾವಣೆಗಳು 2021: 29 ಅಸೆಂಬ್ಲಿ, 3 ಲೋಕಸಭೆ ಕ್ಷೇತ್ರಗಳಲ್ಲಿ ಹೆಚ್ಚಿನ ಮತದಾನ
ಹಾನಗಲ್‌ನಲ್ಲಿ ಶಾಸಕ ಸಿ. ಎಂ. ಉದಾಸಿ ನಿಧನದಿಂದ ಮತ್ತು ಸಿಂಧಗಿಯಲ್ಲಿ ಶಾಸಕ ಎಂ. ಸಿ. ಮುನಗೂಳಿ ನಿಧನದಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಯಿತು. ಮೂರು ಪಕ್ಷಗಳಿಗೆ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ. ವೈಯಕ್ತಿಕ ಟೀಕೆಗಳಗೂ ಚುನಾವಣಾ ಪ್ರಚಾರ ಸಾಕ್ಷಿಯಾಗಿತ್ತು.
ಸಿಂದಗಿ, ಹಾನಗಲ್ ಉಪ ಚುನಾವಣೆ ಮತದಾನ: ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣ
ಎರಡೂ ಕ್ಷೇತ್ರದಲ್ಲಿ ಶಾಂತಿಯುತವಾಗಿ ಮತದಾನ ನಡೆದಿದೆ. ಕೋವಿಡ್ ಮಾರ್ಗಸೂಚಿ ಪ್ರಕಾರ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಮತದಾರರ ಥರ್ಮಲ್ ಸ್ಕ್ಯಾನಿಂಗ್ ಮಾಡಿ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು.
Explained: 13 ರಾಜ್ಯಗಳ 29 ವಿಧಾನಸಭೆ, 3 ಲೋಕಸಭೆಗೆ ಉಪ ಚುನಾವಣೆ
ಪ್ರಮುಖ ಅಭ್ಯರ್ಥಿಗಳು; ಉಪ ಚುನಾವಣೆಯಲ್ಲಿ ರಾಜ್ಯದ ಆಡಳಿತ ಪಕ್ಷ ಬಿಜೆಪಿಯ ಅಭ್ಯರ್ಥಿಗಳು ಸೋತರೂ ಸರ್ಕಾರಕ್ಕೆ ಯಾವುದೇ ರೀತಿಯ ಧಕ್ಕೆ ಆಗುವುದಿಲ್ಲ. ಆದರೆ ರಾಜ್ಯ ಸರ್ಕಾರಕ್ಕೆ ಉಪ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.
ಅದರಲ್ಲೂ ಜುಲೈ 26ರಂದು ಮುಖ್ಯಮಂತ್ರಿ ಸ್ಥಾನಕ್ಕೆ ಬಿ. ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವುದು ಮೊದಲ ಸವಾಲು ಆಗಿದೆ.
ಹಾನಗಲ್ ಕ್ಷೇತ್ರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುವ ಕ್ಷೇತ್ರದ ಪಕ್ಕದ ಕ್ಷೇತ್ರವಾಗಿದೆ. ಆದ್ದರಿಂದ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಿಸಿಬೇಕು ಎಂದು ಹಾನಗಲ್‌ನಲ್ಲಿಯೇ ಹಲವು ದಿನಗಳ ಕಾಲ ಮುಖ್ಯಮಂತ್ರಿಗಳು ಪ್ರಚಾರ ನಡೆಸಿದ್ದರು.
ಉಪ ಚುನಾವಣೆಯಲ್ಲಿ ಸಿಂಧಗಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಅಶೋಕ್ ಮನಗೂಳಿ, ಬಿಜೆಪಿಯಿಂದ ರಮೇಶ್ ಭೂಸನೂರ, ಜೆಡಿಎಸ್‌ನಿಂದ ನಾಜಿಯಾ ಶಕೀಲಾ ಅಂಗಡಿ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು.
ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಶ್ರೀನಿವಾಸ ಮಾನೆ, ಬಿಜೆಪಿಯಿಂದ ಶಿವರಾಜ್ ಸಜ್ಜನರ, ಜೆಡಿಎಸ್ ಪಕ್ಷದಿಂದ ನಿಯಾಜ್ ಶೇಕ್ ಪ್ರಮುಖ ಅಭ್ಯರ್ಥಿಗಳು. 2018ರ ಚುನಾವಣೆಯಲ್ಲಿ ಹಾನಗಲ್‌ನಲ್ಲಿ ಬಿಜೆಪಿ, ಸಿಂಧಗಿಯಲ್ಲಿ ಜೆಡಿಎಸ್ ಗೆದ್ದಿತ್ತು.
ಬಿಜೆಪಿ ಮತ್ತು ಜೆಡಿಎಸ್ 2018ರ ಚುನಾವಣೆಯಲ್ಲಿ ಗೆದ್ದಿದ್ದ ಕ್ಷೇತ್ರವನ್ನು ಉಳಿಸಿಕೊಳ್ಳಲು ಹೋರಾಟ ಮಾಡುತ್ತಿವೆ. ಎರಡೂ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಇತ್ತು. ಆದ್ದರಿಂದ ಉಪ ಚುನಾವಣೆ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ.
ಕೇಂದ್ರ ಸರ್ಕಾರದ ಜನವಿರೋಧಿ ಆಡಳಿತ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಕರ್ನಾಟಕದ ಸರ್ಕಾರದ ಆಡಳಿತ ಮುಂತಾದವುಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಉಪ ಚುನಾವಣೆಯಲ್ಲಿ ಪ್ರಚಾರ ನಡೆಸಿದೆ. ಇದೇ ಅಲೆಯಲ್ಲಿ ಗೆಲ್ಲುವ ನಿರೀಕ್ಷೆಯಲ್ಲಿದೆ.
ಸಿಂಧಗಿಯಲ್ಲಿ 2018ರಲ್ಲಿ ಗೆದ್ದಿದ್ದ ಜೆಡಿಎಸ್‌ನ ಎಂ. ಸಿ. ಮನಗೂಳಿ ಪುತ್ರನನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತಂದು ಉಪ ಚುನಾವಣೆಯಲ್ಲಿ ಟಿಕೆಟ್ ನೀಡಲಾಗಿದೆ. ಆದ್ದರಿಂದ ಕ್ಷೇತ್ರದಲ್ಲೇ ಗೆದ್ದೇ ಗೆಲ್ಲುತ್ತೇವೆ ಎಂಬ ನಿರೀಕ್ಷೆಯಲ್ಲಿ ಕಾಂಗ್ರೆಸ್ ನಾಯಕರು ಇದ್ದಾರೆ.
ಸಿಂಧಗಿ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಒಂದು ವಾರಕ್ಕೂ ಅಧಿಕ ಕಾಲ ಪ್ರಚಾರ ಮಾಡಿದ್ದು, ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ಪಣತೊಟ್ಟಿದ್ದರು. ಮತದಾರರು ತಮ್ಮ ತೀರ್ಪು ನೀಡಿದ್ದಾಗಿದೆ. ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ.
ನವೆಂಬರ್ 2ರಂದು ಬೆಳಗ್ಗೆ 8 ಗಂಟೆಗೆ ಮತಎಣಿಕೆ ಆರಂಭವಾಗಲಿದೆ. ಮತದಾನಕ್ಕೆ ಇವಿಎಂ ಬಳಕೆ ಮಾಡಿರುವುದರಿಂದ ಮಧ್ಯಾಹ್ನ 12 ಗಂಟೆ ವೇಳೆಗೆ ಯಾರಿಗೆ ಗೆಲುವು ಎಂಬ ಸೂಚನೆ ಸಿಗಲಿದೆ.