ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಎಚ್. ವಿಶ್ವನಾಥ್ ನೇಮಕ
Recommended Video

ಬೆಂಗಳೂರು, ಆಗಸ್ಟ್ 05 : ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾಗಿ ಮಾಜಿ ಸಚಿವ ಎಚ್.ವಿಶ್ವನಾಥ್ ನೇಮಕವಾಗಿದ್ದಾರೆ. ಎಚ್.ಡಿ.ದೇವೇಗೌಡ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಶ್ವನಾಥ್ ಅವರನ್ನು ಆಯ್ಕೆ ಮಾಡಲಾಗಿದೆ.
ಭಾನುವಾರ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರು, 'ಎಚ್.ವಿಶ್ವನಾಥ್ (ಅಡಗೂರು ಹುಚ್ಚೇಗೌಡ ವಿಶ್ವನಾಥ್) ಅವರು ಪಕ್ಷದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ' ಎಂದು ಘೋಷಣೆ ಮಾಡಿದರು. ಎಚ್.ಡಿ.ಕುಮಾರಸ್ವಾಮಿ ಅವರು ನೂತನ ಅಧ್ಯಕ್ಷರಿಗೆ ಬಾವುಟ ನೀಡುವ ಮೂಲಕ ಅಧಿಕಾರ ಹಸ್ತಾಂತರ ಮಾಡಿದರು.

'ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ಮೇಲೆ ಎರಡೂ ಹುದ್ದೆ ನಿಭಾಯಿಸುವುದು ಕಷ್ಟ ಎಂದು ಹೇಳಿದ್ದರು. ಹೊಸ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದ್ದರು. ಇಂದು ನಡೆದ ಸಭೆಯಲ್ಲಿ ವಿಶ್ವನಾಥ್ ಅವರನ್ನು ಆಯ್ಕೆ ಮಾಡಲಾಗಿದೆ' ಎಂದು ದೇವೇಗೌಡರು ಹೇಳಿದರು.
ಮೊದಲು ಕಾಂಗ್ರೆಸ್ ಪಕ್ಷದಲ್ಲಿದ್ದ ಎಚ್.ವಿಶ್ವನಾಥ್ ಅವರು 2018ರ ಚುನಾವಣೆ ಸಮಯದಲ್ಲಿ ಜೆಡಿಎಸ್ ಸೇರಿದ್ದರು. ಹುಣಸೂರು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ, ಜಯಗಳಿಸಿದ್ದರು. ಮೈಸೂರು-ಕೊಡಗು ಕ್ಷೇತ್ರದಿಂದ ಸಂಸದರಾಗಿಯೂ ಅವರು ಆಯ್ಕೆಯಾಗಿದ್ದರು.
ಮುಂದಿನ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯಾಧ್ಯಕ್ಷರನ್ನು ನೇಮಕ ಮಾಡಲಾಗಿದೆ. 2019ರ ಲೋಕಸಭೆ ಚುನಾವಣೆಗೆ ಇದು ಯಾವ ರೀತಿಯಲ್ಲಿ ಸಹಕಾರಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications