Gujarat Election Results 2022: ಚುನಾವಣೆಗೆ ಸ್ಪರ್ಧಿಸದಂತೆ ಕರ್ನಾಟಕದ ಹಿರಿಯ ನಾಯಕರಿಗೆ ಬಿಜೆಪಿ ಆದೇಶ?
ಬೆಂಗಳೂರು, ಡಿಸೆಂಬರ್ 8: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ. ಇದಕ್ಕೆ ಬಿಜೆಪಿ ಹೈಕಮಾಂಡ್ ಬಳಸಿರುವ ತಂತ್ರವೆಂದು ವಿಶ್ಲೇಷಿಸಲಾಗುತ್ತಿದೆ. ಬಿಜೆಪಿಯ ಹಿರಿಯ ನಾಯಕರಿಗೆ ಸ್ಪರ್ಧಿಸದಂತೆ ಹೈಕಮಾಂಡ್ ಆದೇಶಿಸಿತ್ತು. ಯುವ ನಾಯಕರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಇದು ಚುನಾವಣೆಯಲ್ಲಿ ಬಿಜೆಪಿಗೆ ಲಾಭ ತಂದು ಕೊಟ್ಟಿದೆ ಎಂಬ ಮಾತುಗಳು ಕೇಳಿಬಂದಿವೆ. ಯುವ ನಾಯಕರಾದ ಹಾರ್ದಿಕ್ ಪಟೇಲ್, ಅಲ್ಪೇಶ್ ಠಾಕೂರ್, ರಿವಾನಾ ಜಡೇಜಾ ಸೇರಿದಂತೆ ಹಲವರು ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇದೇ ತಂತ್ರವನ್ನು ಕರ್ನಾಟಕದಲ್ಲಿ ಬಳಸಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಮುಂದಿನ ಏಳೆಂಟು ತಿಂಗಳಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿದೆ. ಇಲ್ಲಿಯೂ ಯುವ ನಾಯಕರಿಗೆ ಅವಕಾಶ ನೀಡಲು ಬಿಜೆಪಿ ತಯಾರಿ ನಡೆಸಿದೆ ಎಂಬ ಮಾತುಗಳು ರಾಜಕೀಯ ಮೊಗಸಾಲೆಯಲ್ಲಿ ದಟ್ಟವಾಗಿವೆ. ಚುನಾವಣೆಗೆ ಸ್ಪರ್ಧಿಸದಂತೆ ಮನವೊಲಿಸಲು 70 ವರ್ಷಕ್ಕೂ ಮೇಲ್ಪಟ್ಟ ತನ್ನ ನಾಯಕರ ಪಟ್ಟಿಯನ್ನು ರಾಜ್ಯ ಬಿಜೆಪಿ ಸಿದ್ಧಪಡಿಸುತ್ತಿದೆ ಎಂದು ತಿಳಿದುಬಂದಿದೆ.

ಪ್ರಸ್ತುತ ಕರ್ನಾಟಕ ವಿಧಾನಸಭೆಯಲ್ಲಿ, ಬಿಜೆಪಿಯು 120 ಸ್ಥಾನಗಳನ್ನು ಹೊಂದಿದೆ. ಸವದತ್ತಿಯನ್ನು ಪ್ರತಿನಿಧಿಸುತ್ತಿದ್ದ ಆನಂದ ಮಾಮನಿ ಹಾಗೂ ಹುಕ್ಕೇರಿಯನ್ನು ಪ್ರತಿನಿಧಿಸುತ್ತಿದ್ದ ಶಾಸಕ ಉಮೇಶ ಕತ್ತಿ ನಿಧನ ಹೊಂದಿದ್ದಾರೆ. ಈ ಕ್ಷೇತ್ರಗಳಲ್ಲಿ ಯುವ ನೇತಾರರಿಗೆ ಮಣೆ ಹಾಕಲು ಬಿಜೆಪಿ ಸಿದ್ಧತೆ ನಡೆಸಿದೆ.

ಮೂರ್ನಾಲ್ಕು ಅವಧಿಗೆ ಚುನಾಯಿತರಾಗಿ 70 ವರ್ಷ ಮೀರಿದ ಶಾಸಕರು ಬಿಜೆಪಿಯಲ್ಲಿ ಅನೇಕರಿದ್ದಾರೆ. 79 ರ ವರ್ಷದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಬಹಿರಂಗವಾಗಿ ಹೇಳಿದ್ದರು. ಇನ್ನು ಕೆಲವು ಪಕ್ಷದ ಶಾಸಕರು ಕೂಡ ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವ ಸಾಧ್ಯತೆ ಇದೆ. ಕೆಲವು ಹಿರಿಯ ಶಾಸಕರನ್ನು ಚುನಾವಣೆಗೆ ಸ್ಪರ್ಧಿಸದಂತೆ ಮನವೊಲಿಸುವ ಯತ್ನವನ್ನೂ ಮಾಡಲಾಗುತ್ತದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.












Click it and Unblock the Notifications