ಕಾಂಗ್ರೆಸ್ ಸೇರಲು ಜೆಡಿಎಸ್ ಶಾಸಕನ ತೀರ್ಮಾನ!
ತುಮಕೂರು ಜಿಲ್ಲೆಯ ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಎಸ್. ಆರ್. ಶ್ರೀನಿವಾಸ್ ಕಾಂಗ್ರೆಸ್ ಸೇರಲಿದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ ಈಗಾಗಲೇ ಅವರು ಪಕ್ಷದಿಂದ ಉಚ್ಛಾಟನೆಗೊಂಡಿದ್ದಾರೆ.
ಬೆಂಗಳೂರು, ಫೆಬ್ರವರಿ 12; ಹಲವು ದಿನಗಳ ಕುತೂಹಲಕ್ಕೆ ತೆರೆ ಬಿದ್ದಿದೆ. ಜೆಡಿಎಸ್ ಶಾಸಕ ಕಾಂಗ್ರೆಸ್ ಸೇರುವುದಾಗಿ ಘೋಷಣೆ ಮಾಡಿದ್ದಾರೆ. 2023ರ ಚುನಾವಣೆಗೆ ಈಗಾಗಲೇ ಕ್ಷೇತ್ರಕ್ಕೆ ಜೆಡಿಎಸ್ ಬೇರೆ ಅಭ್ಯರ್ಥಿ ಘೋಷಣೆ ಮಾಡಿದೆ.
ತುಮಕೂರು ಜಿಲ್ಲೆಯ ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ, ಮಾಜಿ ಸಚಿವ ಎಸ್. ಆರ್. ಶ್ರೀನಿವಾಸ್ ಕಾಂಗ್ರೆಸ್ ಸೇರುತ್ತೇನೆ ಎಂದು ಹೇಳಿದ್ದಾರೆ. ಅವರು ಈ ಬಾರಿಯ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗುತ್ತಾರೋ?, ಕಾಂಗ್ರೆಸ್ ಸೇರಲಿದ್ದಾರೆಯೋ? ಎಂಬ ಕುತೂಹಲ ಹಲವು ದಿನಗಳಿಂದ ಇತ್ತು.
ಎಸ್. ಆರ್. ಶ್ರೀನಿವಾಸ್ ಮಾತನಾಡಿ, "ಶಾಸಕನಾಗಿ ಜೊತೆಗೆ ಸಚಿವರಾಗುವವರೆಗೂ ನನ್ನ ಜೊತೆಯಲ್ಲೇ ಇರುವ ನನ್ನ ಕಾರ್ಯಕರ್ತರ ನಿರ್ಧಾರಕ್ಕೆ ನಾನು ಬದ್ಧನಾಗಿ ಕಾಂಗ್ರೆಸ್ ಸೇರಲು ಸಿದ್ಧನಿದ್ದೇನೆ" ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಪಕ್ಷ ಸೇರುವ ದಿನಾಂಕ ಇನ್ನೂ ನಿಗದಿಯಾಗಿಲ್ಲ.
ಜೆಡಿಎಸ್ ಚಟುವಟಿಕೆಗಳಿಂದ ದೂರವಾಗಿದ್ದ ಎಸ್. ಆರ್. ಶ್ರೀನಿವಾಸ್ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದರು. ಆಗ ಜೆಡಿಎಸ್ ಪಕ್ಷ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿತ್ತು. ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ತುಮಕೂರಿಗೆ ಬಂದಾಗ ಅವರನ್ನು ಸ್ವಾಗತಿಸಿ, ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದರು.

ಎಸ್. ಆರ್. ಶ್ರೀನಿವಾಸ್ ಹೇಳಿದ್ದು
ಗುಬ್ಬಿ ತಾಲೂಕಿನ ಕಡಬ ಹೋಬಳಿ ಕೊಪ್ಪಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿ ಮಾತನಾಡಿದ ಶಾಸಕ ಎಸ್. ಆರ್. ಶ್ರೀನಿವಾಸ್, "ಮೊದಲಿಂದ ನನ್ನ ಜೊತೆ ಇರುವ ಮುಖಂಡರು, ಕಾರ್ಯಕರ್ತರು ಈಗಲೂ ಹುರಿದುಂಬಿಸಿ ವಿಶ್ವಾಸದ ಮಾತನಾಡಿದರು.ಕಾರ್ಯಕರ್ತರ ಸೂಚನೆಯಂತೆ ನಾನು ಸ್ಪರ್ಧೆ ಮಾಡುತ್ತೇನೆ" ಎಂದರು.
ಹಲವು ದಿನಗಳಿಂದ ಎಸ್. ಆರ್. ಶ್ರೀನಿವಾಸ್ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿ ಇತ್ತು. ಇದರ ನಡುವೆ ಅವರು ಪಕ್ಷೇತರರಾಗಿ ಕಣಕ್ಕಿಳಿಯಲಿದ್ದಾರೆ ಎಂಬ ವರದಿಗಳು ಇದ್ದವು.

ನಾನೂ ಕೂಡಾ ಕಾಂಗ್ರೆಸ್ ಸೇರುತ್ತೇನೆ
ಎಸ್. ಆರ್. ಶ್ರೀನಿವಾಸ್ ಮಾತನಾಡಿ, "ಸಾಕಷ್ಟು ಮಂದಿ ನನ್ನ ಜೊತೆ ಸೇರಿದ್ದಾರೆ. ಕಾಂಗ್ರೆಸ್ ಸೇರುವ ಒಲವು ಕಾರ್ಯಕರ್ತರಲ್ಲಿದೆ ಹಾಗಾಗಿ ನಾನು ಕೂಡ ಕಾಂಗ್ರೆಸ್ ಸೇರುತ್ತೇನೆ. ಕಾಂಗ್ರೆಸ್ ಪಕ್ಷದ ಪಟ್ಟಿ ಬಗ್ಗೆ ನನಗೆ ತಿಳಿಯದು. ಅದು ಒಂದು ಪಕ್ಷದ ಅಂತರಿಕ ವಿಚಾರ, ಮಾಧ್ಯಮದಲ್ಲಿ ಬಂದ ಪಟ್ಟಿ ವಿಚಾರ ಬಗ್ಗೆ ಪ್ರತಿಕ್ರಿಯೆ ನೀಡಲಾಗದು" ಎಂದರು.
ಜೆಡಿಎಸ್ ಈ ಬಾರಿಯ ಚುನಾವಣೆಗೆ ಈಗಾಗಲೇ 93 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಅದರಲ್ಲಿ ಗುಬ್ಬಿ ಕ್ಷೇತ್ರಕ್ಕೆ ನಾಗರಾಜ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ.

ಅಭಿವೃದ್ಧಿ ಕೆಲಸ ಮಾಡೋಣ
ಗುಬ್ಬಿ ಶಾಸಕ ಎಸ್. ಆರ್. ಶ್ರೀನಿವಾಸ್, "ಬಜೆಟ್ ನಂತರ ನನ್ನ ಕಾರ್ಯಕರ್ತರ ಜೊತೆ ಸಭೆ ನಡೆಸಿಯೇ ಅಂತಿಮ ತೀರ್ಮಾನ ಮಾಡಲಾಗುವುದು. ಊಹಾಪೋಹ ಬಗ್ಗೆ ಉತ್ತರ ನೀಡಲಾಗದು. ಉಳಿದ ದಿನಗಳನ್ನು ಅಭಿವೃದ್ಧಿ ಕೆಲಸ ಪೂರ್ಣಗೊಳಿಸಲು ಮೀಸಲಿಡೋಣ. ರಾಜೀನಾಮೆ ನಂತರ ಕಾರ್ಯಕರ್ತರ ತೀರ್ಮಾನಕ್ಕೆ ಬದ್ಧನಾಗಿ ಮುನ್ನುಗ್ಗುತ್ತೇನೆ" ಎಂದು ಹೇಳಿದರು.
ಎಸ್. ಆರ್. ಶ್ರೀನಿವಾಸ್ 2018ರ ಚುನಾವಣೆಯಲ್ಲಿ ಗುಬ್ಬಿಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. 55,572 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದು ಎಚ್. ಡಿ. ಕುಮಾರಸ್ವಾಮಿ ಸಿಎಂ ಆದಾಗ ಎಸ್. ಆರ್. ಶ್ರೀನಿವಾಸ್ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದರು.

ತಿಥಿ ಕಾರ್ಡ್ ವೈರಲ್ ಆಗಿತ್ತು
2022ರ ಜೂನ್‌ನಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘನೆ ಮಾಡಿ ಎಸ್. ಆರ್. ಶ್ರೀನಿವಾಸ್ ಅಡ್ಡ ಮತದಾನ ಮಾಡಿದ್ದಾರೆ ಎಂಬ ಆರೋಪವಿದೆ. ಈ ಹಿನ್ನಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಶಾಸಕರು ಬದುಕಿರುವಾಗಲೇ ತಿಥಿ ಕಾರ್ಡ್ ಡಿಸೈನ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು.
ಮತ್ತೊಂದು ಕಡೆ ಜೆಡಿಎಸ್ ಪಕ್ಷ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಎಸ್. ಆರ್. ಶ್ರೀನಿವಾಸ್‌ರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಸ್ಪೀಕರ್‌ಗೆ ದೂರು ನೀಡಿತ್ತು. ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿತ್ತು.

ಜೆಡಿಎಸ್‌ಗೆ ವಾಪಸ್ ಹೋಗಲ್ಲ
2022ರ ನವೆಂಬರ್‌ನಲ್ಲಿ ಮಾತನಾಡಿದ್ದ ಎಸ್. ಆರ್. ಶ್ರೀನಿವಾಸ್, "ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಿರುವುದು ಮುಗಿದ ಅಧ್ಯಾಯ. ಜೆಡಿಎಸ್‌ಗೆ ಮರಳಲು ನಾನು ಜಿ. ಟಿ. ದೇವೇಗೌಡ ಅಲ್ಲ, ವಾಸಣ್ಣ" ಎಂದು ಹೇಳಿದ್ದರು.
"ನಾನು ಜೆಡಿಎಸ್ ಪಕ್ಷಕ್ಕೆ ಮರಳುವ ಪ್ರಶ್ನೆಯೇ ಇಲ್ಲ. ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಗೆ ನನ್ನನ್ನು ಎದುರಿಸು ಧೈರ್ಯ ಇಲ್ಲ" ಎಂದು ವಾಗ್ದಾಳಿಯನ್ನು ನಡೆಸಿದ್ದರು.
ಸೆಪ್ಟೆಂಬರ್‌ನಲ್ಲಿ ಭಾರತ್ ಜೋಡೋ ಯಾತ್ರೆ ತುಮಕೂರಿಗೆ ಆಗಮಿಸಿದಾಗ ಎಸ್. ಆರ್. ಶ್ರೀನಿವಾಸ್ ಅದರಲ್ಲಿ ಪಾಲ್ಗೊಂಡಿದ್ದರು. ಆಗಲೇ ಅವರು ಕಾಂಗ್ರೆಸ್ ಸೇರಬಹುದು ಎಂದು ಅಂದಾಜಿಸಲಾಗಿತ್ತು.












Click it and Unblock the Notifications