Gruha Lakshmi Scheme: ವರಮಹಾಲಕ್ಷ್ಮಿ ಹಬ್ಬ ಕಳೆದರೂ ಬರಲಿಲ್ಲ ಗೃಹಲಕ್ಷ್ಮಿ ಯೋಜನೆಯ 2,000: ಗೃಹಜ್ಯೋತಿ ಮಾದರಿ

Gruha Lakshmi Scheme: ಗೃಹಲಕ್ಷ್ಮಿ ಯೋಜನೆಯ ಹಣ ಇನ್ನೂ ಫಲಾನುಭವಿಗಳ ಖಾತೆಗೆ ಜಮೆ ಆಗಿಲ್ಲ. ಆದರೆ ಗೃಹಜ್ಯೋತಿ ಯೋಜನೆಯನ್ನು ಪರಿಶೀಲನೆ ಮಾಡಿದ ಮಾದರಿಯಲ್ಲೇ ಗೃಹಲಕ್ಷ್ಮಿ ಯೋಜನೆಗೂ ಮನೆ - ಮನೆ ಸಮೀಕ್ಷೆ ಮಾಡುವುದಕ್ಕೆ ಕರ್ನಾಟಕ ಕಾಂಗ್ರೆಸ್ ಸರ್ಕಾರವು ಮುಂದಾಗಿದೆ. ಸೇವಾ ಸಿಂಧು ಕೇಂದ್ರದಲ್ಲಿ ಹಾಗೂ ಮನೆ ಮನೆಗೆ ತೆರಳಿ ಫಲಾನುಭವಿಗಳ ಸರ್ವೆ ನಡೆಸುವುದಾಗಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಇದೀಗ ವರಮಹಾಲಕ್ಷ್ಮಿ ಹಬ್ಬ ಕಳೆದರೂ ಸಹ ಗೃಹಲಕ್ಷ್ಮಿ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ ಬಂದಿಲ್ಲ. ಈ ಬಗ್ಗೆ ವಿರೋಧ ಪಕ್ಷಗಳು ಸಹ ಟೀಕೆ ಮಾಡಿವೆ.

ಈ ಸಂಬಂಧ ಟ್ವೀಟ್ ಮಾಡಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ಗೃಹಲಕ್ಷ್ಮಿಯರಿಗೆ 2,000 ರೂಪಾಯಿ ಕೊಡಲು ದುಡ್ಡಿಲ್ಲ, ಮನೆ-ಮನೆಗೆ ಸಮೀಕ್ಷೆ ಮಾಡಲು ಮಾತ್ರ ಡ್ರಾಮಾ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಯ ಮತ್ತೊಂದು ಬಣ್ಣ ಬಯಲು. ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಹಲವು ತಿಂಗಳುಗಳಿಂದ 2,000 ರೂಪಾಯಿ ಕಂತುಗಳು ಬಾಕಿ ಉಳಿದಿವೆ. ರಾಜ್ಯದ ತಾಯಂದಿರು ತಮ್ಮದೇ ಹಣಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಕಾಂಗ್ರೆಸ್ ಸರ್ಕಾರಕ್ಕೆ ಬಾಕಿ ಕಂತುಗಳನ್ನು ಬಿಡುಗಡೆ ಮಾಡುವ ಕಾಳಜಿಗಿಂತ, ಈಗ ಫಲಾನುಭವಿಗಳ ಮನೆ-ಮನೆಗೆ ತೆರಳಿ ಬಯೋಮೆಟ್ರಿಕ್, ಫೇಸ್ ಆಥೆಂಟಿಕೇಶನ್ ಹೆಸರಿನಲ್ಲಿ ಹೊಸ ಸಮೀಕ್ಷೆ ನಡೆಸುವ ಆಟ ಆಡಲು ಮುಂದಾಗುತ್ತಿದೆ.

Gruha Lakshmi Scheme

ಸಿಎಂ ಶ್ರೀ ಡಿ.ಕೆ. ಶಿವಕುಮಾರ್ ಅವರೇ, ಮೊದಲು ಈ ಪ್ರಶ್ನೆಗಳಿಗೆ ಉತ್ತರಿಸಿ:

ಹಲವು ತಿಂಗಳುಗಳಿಂದ ಬಾಕಿ ಇರುವ ಗೃಹಲಕ್ಷ್ಮಿ ಕಂತುಗಳನ್ನು ಯಾವಾಗ ಬಿಡುಗಡೆ ಮಾಡುತ್ತೀರಿ?

ತಮ್ಮ ಹಕ್ಕಿನ ₹2,000 ಪಡೆಯಲು ಮಹಿಳೆಯರು ಕಚೇರಿಯಿಂದ ಕಚೇರಿಗೆ ಅಲೆಯುವಂತೆ ಮಾಡಿರುವುದೇಕೆ?

ಖಜಾನೆ ಖಾಲಿಯಾದ ಬಳಿಕ ಫಲಾನುಭವಿಗಳ ಸಂಖ್ಯೆಯನ್ನು ಕಡಿತಗೊಳಿಸಲು ಮರುಪರಿಶೀಲನೆಯ ನೆಪ ಮಾಡುತ್ತಿದ್ದೀರಾ?

ಸಮೀಕ್ಷೆ, ಆ್ಯಪ್, ವೆಬ್ ಅಪ್ಲಿಕೇಶನ್, ಬಯೋಮೆಟ್ರಿಕ್, ಫೇಸ್ ಆಥೆಂಟಿಕೇಶನ್ ಹೆಸರಿನಲ್ಲಿ ಕಾಲಹರಣ ಮಾಡುವ ಹೊಸ ತಂತ್ರವೇ ಇದು?

ಸರ್ಕಾರದ ಲಿಖಿತ ಮಾಹಿತಿಯೇ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯವನ್ನು ಬಯಲು ಮಾಡಿದೆ. ಯೋಜನೆ ಆರಂಭದಿಂದ ಜೂನ್ 2026ರವರೆಗೆ 3,13,297 ಫಲಾನುಭವಿಗಳು ಮೃತಪಟ್ಟಿದ್ದಾರೆ. ಅವರಲ್ಲಿ 1,10,562 ಮೃತ ಫಲಾನುಭವಿಗಳ ಖಾತೆಗಳಿಗೆ ಮರಣದ ನಂತರವೂ 117.31 ಕೋಟಿ ರೂ. ಜಮೆಯಾಗಿದೆ. ಆದರೆ ಸರ್ಕಾರದ ಲೆಕ್ಕಶೀರ್ಷಿಕೆಗೆ ವಾಪಸ್ ಬಂದಿರುವುದು ಕೇವಲ 40.07 ಕೋಟಿ ರೂ. ಹಾಗೂ ಸತ್ತವರ ಖಾತೆಗೆ ಹಣ ಹೋಗುವವರೆಗೆ ನಿದ್ರಿಸುತ್ತಿದ್ದ ಸರ್ಕಾರ, ಜೀವಂತ ಗೃಹಲಕ್ಷ್ಮಿಯರ ಖಾತೆಗೆ ಹಣ ಹಾಕುವ ಸಮಯದಲ್ಲಿ ಮಾತ್ರ ನಿಯಮ-ನಿಬಂಧನೆಗಳ ನೆಪ ಹೇಳುತ್ತಿದೆ.

ಇದು ಕೇವಲ ಹಣ ಪಾವತಿಯಲ್ಲಿ ವಿಳಂಬವಲ್ಲ; ಇದು ಕಾಂಗ್ರೆಸ್ ಸರ್ಕಾರದ ಆಡಳಿತಾತ್ಮಕ ವೈಫಲ್ಯ ಮತ್ತು ಹಣಕಾಸು ನಿರ್ವಹಣೆಯ ಅಸಮರ್ಥತೆಗೆ ಸಾಕ್ಷಿ ಹಾಗೂ ಖಜಾನೆ ಖಾಲಿಯಾಗಿರುವುದಕ್ಕೆ ಸ್ಪಷ್ಟ ನಿದರ್ಶನ. ಗೃಹಲಕ್ಷ್ಮಿ ಯೋಜನೆಯಡಿ ಇದುವರೆಗೆ 1,24,48,938 ಫಲಾನುಭವಿಗಳಿಗೆ 76,951 ಕೋಟಿ ರೂ. ಪಾವತಿಸಲಾಗಿದೆ ಎಂದು ಸರ್ಕಾರವೇ ಹೇಳಿಕೊಂಡಿದೆ. ಪ್ರತಿ ಮನೆಯ ಯಜಮಾನಿಗೆ ತಲಾ 2,000 ರೂ. ನೀಡುವ ಯೋಜನೆಯಡಿ 32 ಕಂತುಗಳವರೆಗೆ ಹಣ ಪಾವತಿಸಲಾಗಿದೆ ಎಂದು ಸರ್ಕಾರದ ಉತ್ತರದಲ್ಲಿದೆ. ಆದರೆ ಇಂದು ಬಾಕಿ ಕಂತುಗಳಿಗಾಗಿ ಕರ್ನಾಟಕದ ತಾಯಂದಿರು ಸರ್ಕಾರದ ಬಾಗಿಲು ತಟ್ಟಬೇಕಾದ ಸ್ಥಿತಿ ಬಂದಿದೆ.

ಗ್ಯಾರಂಟಿ ಘೋಷಿಸುವಾಗ ಬಡ ತಾಯಂದಿರನ್ನು ನೆನಪಿಸಿಕೊಂಡ ಕಾಂಗ್ರೆಸ್, ಹಣ ನೀಡುವಾಗ ಮಾತ್ರ ಅವರನ್ನು ಮರೆತಿದೆ. ಈಗ ಮತ್ತೆ ವರಮಹಾಲಕ್ಷ್ಮಿ ಹಬ್ಬ ಬಂದಿದೆ. ಮನೆಗಳಲ್ಲಿ ಹಬ್ಬದ ಸಂಭ್ರಮ ಇರಬೇಕಾದ ಸಮಯದಲ್ಲಿ, ಕಾಂಗ್ರೆಸ್ ಸರ್ಕಾರದ ಸುಳ್ಳಿನ ಗ್ಯಾರಂಟಿಯ ಗೃಹಲಕ್ಷ್ಮಿ ಹಣವೇ ರಾಜ್ಯದ ತಾಯಂದಿರಿಗೆ ಮರೀಚಿಕೆಯಾಗಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಸಮೀಕ್ಷೆಯ ಡ್ರಾಮಾ ಸಾಕು. ಆ್ಯಪ್, ವೆಬ್ ಅಪ್ಲಿಕೇಶನ್, ಫೇಸ್ ಆಥೆಂಟಿಕೇಶನ್ ಹೆಸರಿನ ಕಾಲಹರಣ ಸಾಕು. ಮೊದಲು ಗೃಹಲಕ್ಷ್ಮಿಯರ ಹಲವು ತಿಂಗಳ ಬಾಕಿ ಕಂತುಗಳನ್ನು ತಕ್ಷಣ ಬಿಡುಗಡೆ ಮಾಡಿ. ಮೃತರ ಖಾತೆಗೆ ಹೋದ ಹಣವನ್ನು ವಾಪಸ್ ಪಡೆಯುವಲ್ಲಿ ನಿಮ್ಮ ಸರ್ಕಾರ ಎಷ್ಟು ವಿಫಲವಾಗಿದೆ ಎಂಬುದಕ್ಕೂ ಉತ್ತರ ನೀಡಿ. ಜೀವಂತ ಫಲಾನುಭವಿಗಳ ಹಕ್ಕಿನ ಹಣವನ್ನು ತಡೆದು, ಅವರನ್ನೇ ಮರುಪರಿಶೀಲನೆಗೆ ಒಳಪಡಿಸುವ ನೈತಿಕ ಹಕ್ಕು ನಿಮ್ಮ ಸರ್ಕಾರಕ್ಕಿಲ್ಲ.

ಕಾಂಗ್ರೆಸ್‌ನ ಗ್ಯಾರಂಟಿ ಎಂದರೆ-ಘೋಷಣೆ ಭರ್ಜರಿ, ಪ್ರಚಾರ ಜೋರು, ಆದರೆ ಹಣದ ವಿಷಯ ಬಂದಾಗ ಬಾಕಿ, ವಿಳಂಬ ಮತ್ತು ಹೊಸ ಹೊಸ ನೆಪಗಳು! ಕರ್ನಾಟಕದ ತಾಯಂದಿರು ಕಾಂಗ್ರೆಸ್ ಸರ್ಕಾರಕ್ಕೆ ಕೇಳುತ್ತಿರುವ ಪ್ರಶ್ನೆ ಒಂದೆ: "ನಮ್ಮ ₹2,000 ಎಲ್ಲಿದೆ?" ಆ ಪ್ರಶ್ನೆಗೆ ಉತ್ತರ ಕೊಡಿ, ಶ್ರೀ ಡಿ.ಕೆ. ಶಿವಕುಮಾರ್. ಮನೆ-ಮನೆಗೆ ಸಮೀಕ್ಷೆಗಿಂತ ಮೊದಲು, ಮನೆ-ಮನೆಗೆ ಬಾಕಿ ಹಣ ತಲುಪಿಸಿ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+