Land Acquisition: ನೀರಾವರಿ ಇಲಾಖೆಯ 61,843 ಕೇಸು ಬಾಕಿ, ಕರ್ತವ್ಯ ಲೋಪದ ತನಿಖೆಗೆ SIT ರಚನೆ: ಡಿಸಿಎಂ
ಕರ್ನಾಟಕ ನೀರಾವರಿ ಇಲಾಖೆ ಹಾಗೂ ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ಭೂಸ್ವಾಧೀನ ಕೋರ್ಟ್ ಪ್ರಕರಣಗಳ ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕೆ ಹೊಸ ಬದಲಾವಣೆಗಳನ್ನು ತರಲಾಗುವುದು. ತನಿಖೆಗೆ ಎಸ್ಐಟಿ ರಚಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ನೀರಾವರಿ ಇಲಾಖೆ ಹಾಗೂ ಬಿಡಿಎ ವ್ಯಾಪ್ತಿಯಲ್ಲಿನ ಭೂಸ್ವಾಧೀನ ಪ್ರಕ್ರಿಯೆ ವಿಚಾರವಾಗಿ ನ್ಯಾಯಾಲಯ ಪ್ರಕರಣಗಳ ಬಗ್ಗೆ ಶನಿವಾರ ಗಂಭೀರ ಚರ್ಚೆಗಳು ನಡೆದವು. ಬಳಿಕ ಮಾತನಾಡಿದ ಅವರು, ನೀರಾವರಿ ಇಲಾಖೆ ಹಾಗೂ ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ಭೂಸ್ವಾಧೀನ ಕೋರ್ಟ್ ಪ್ರಕರಣಗಳ ಕರ್ತವ್ಯ ಲೋಪವಾಗಿದೆ. ಅದರ ತನಿಖೆಗಾಗಿ ಎಸ್ಐಟಿ ರಚಿಸಲಾಗುವುದು. ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳನ್ನು ಅಮಾನತುಗೊಳಿಸಿ, ವಕೀಲರನ್ನು ವಜಾಗೊಳಿಸಲಾಗುವುದು ಎಂದರು.

ಈ ಇಲಾಖೆಗಳಲ್ಲಿ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಎಷ್ಟು ಪ್ರಕರಣಗಳಿವೆ, ಯಾವ ಕಾರಣಕ್ಕೆ ಇವೆ, ಯಾಕೆ ಇವು ಇತ್ಯರ್ಥವಾಗಿಲ್ಲ ಎಂಬ ವಿಚಾರವಾಗಿ ನಾನು ಇಲಾಖೆಯಲ್ಲಿ ತನಿಖೆ ಮಾಡಿಸಿದ್ದೇನೆ. ಲಭ್ಯ ಮಾಹಿತಿ ನೋಡಿದರೆ ಈ ಪ್ರಕರಣಗಳಿಂದ ಸರ್ಕಾರಕ್ಕೆ ಬಹಳ ಹೊರೆಯಾಗಲಿದೆ. ಈ ಹಿನ್ನೆಲೆಯಲ್ಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡರು, ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಅವರು ಹಾಗೂ ದೆಹಲಿಯ ವಕೀಲರ ತಂಡ ಸಭೆಯಲ್ಲಿ ಚರ್ಚೆ ನಡೆಸಿದ್ದೇವೆ.
ನೀರಾವರಿ ಇಲಾಖೆ: 61, 843 ಪ್ರಕರಣ ಬಾಕಿ
ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಕೃಷ್ಣಭಾಗ್ಯ ಜಲ ನಿಗಮದಲ್ಲಿ ಒಪ್ಪಿತ ಭೂಸ್ವಾಧೀನಕ್ಕೆ ಪರಿಹಾರದ ಮೊತ್ತ ಹೆಚ್ಚಿಸುವ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದ್ದೇವೆ. ಇದಕ್ಕೆ ಸುಮಾರು 75 ಸಾವಿರ ಕೋಟಿ ರೂ. ಮೀಸಲಿಡಲಾಗುವುದು. ವಿವಿಧ ನೀರಾವರಿ ನಿಗಮಗಳ ವ್ಯಾಪ್ತಿಯಲ್ಲಿ 61, 843 ಪ್ರಕರಣಗಳು ಇವೆ. ಕೆಎನ್ಎನ್ಎಲ್ ನಲ್ಲಿ 25,356, ವಿಜೆಎನ್ಎಲ್ ನಲ್ಲಿ 2,856, ಸಿಎನ್ಎನ್ಎಲ್ ನಲ್ಲಿ 4455, ಯುಕೆಪಿ, ಆರ್ ಅಂಡ್ ಆರ್ ಹಾಗೂ ಕೆಬಿಜೆಎನ್ಎಲ್ ನಲ್ಲಿ 29,176 ಪ್ರಕರಣಗಳು ಬಾಕಿ ಉಳಿದಿವೆ ಎಂದು ಇತ್ಯರ್ಥವಾಗದ ಕೇಸುಗಳ ಲೆಕ್ಕ ಅವರು ಕೊಟ್ಟರು.
ಕಂದಾಯ ಇಲಾಖೆ ಬೆಂಗಳೂರು ವ್ಯಾಪ್ತಿಯಲ್ಲಿ ತನಿಖೆ ಮಾಡಲು ಆದೇಶ ಮಾಡಿದೆ. ಅಧಿಕಾರಿಗಳು, ಕಾನೂನು ತಂಡದವರು ಸೇರಿ ಸರಿಯಾದ ಸಮಯದಲ್ಲಿ ಅರ್ಜಿ ಹಾಕದೇ ಕಾಲಹರಣ ಮಾಡಿದ್ದು, ವರದಿ ಸಲ್ಲಿಸುವಂತೆ ಸೂಚಿಸಿದ್ದೇವೆ. ಕೆಲವು ಪ್ರಮುಖ ಪ್ರಕರಣಗಳು ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ನಡೆಯಲಿದ್ದು, ಅಷ್ಟರೊಳಗೆ ಇಲ್ಲಿನ ನ್ಯೂನ್ಯತೆ ಗಮನಕ್ಕೆ ತರಬೇಕಾಗಿದೆ. ಇದರ ಜೊತೆಗೆ ಎಸ್ಐಟಿ ರಚಿಸಿ ಎಲ್ಲೆಲ್ಲಿ ಯಾವ ರೀತಿ ಪಿತೂರಿ ನಡೆದಿದೆ ಎಂದು ಬಯಲು ಮಾಡಲಾಗುವುದು ಎಂದು ಹೇಳಿದರು.

ಕರ್ತವ್ಯ ಲೋಪ ಮಾಡಿರುವ ಅಧಿಕಾರಿಗಳ ವಿರುದ್ಧ ಇಲಾಖೆವಾರು ತನಿಖೆಗೆ ಆದೇಶಿಸಿ ಎಲ್ಲರನ್ನು ಅಮಾನತುಗೊಳಿಸಲು ನಿರ್ಧರಿಸಲಾಗಿದೆ. ಇನ್ನು ವಕೀಲರುಗಳ ಪೈಕಿ ಯಾರು ಸಮಯಕ್ಕೆ ಸರಿಯಾಗಿ ನ್ಯಾಯಾಲಯದಲ್ಲಿ ಅರ್ಜಿಯನ್ನು ಕಾನೂನುಬದ್ಧವಾಗಿ ಸಲ್ಲಿಸದೇ ಕರ್ತವ್ಯ ಲೋಪ ಎಸಗಿದ್ದಾರೆ ಅವರನ್ನು ವಜಾಗೊಳಿಸಲು ತೀರ್ಮಾನಿಸಲಾಗಿದೆ. ಅಧಿಕಾರಿಗಳು, ವಕೀಲರು ಎಲ್ಲರನ್ನು ಹೊಣೆಗಾರರನ್ನಾಗಿ ಮಾಡಲು ನಿರ್ಧರಿಸಿದ್ದೇವೆ. ಇದರಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಸಿದರು.
ನೀರಾವರಿ ಇಲಾಖೆ ಪ್ರಕರಣಗಳ ವಾದ ಮಂಡಿಸಲು 219 ವಕೀಲರು ಇದ್ದಾರೆ. ಇವುಗಳಲ್ಲಿ ಯಾರು ಹೊಣೆಗಾರರಿಲ್ಲ, ಅವರೆಲ್ಲರನ್ನು ಕಿತ್ತೊಗೆದು ಬೇರೆ ವಕೀಲರನ್ನು ನೇಮಿಸಲಾಗುವುದು. ನಮ್ಮ ಇಲಾಖೆಯ ಗೌರವ ಉಳಿಸಲು ರಾಜ್ಯದಲ್ಲೇ ಐತಿಹಾಸಿಕ ತೀರ್ಮಾನಕ್ಕೆ ಬರಲಾಗಿದೆ.
ಪ್ರಕರಣ ಇತ್ಯರ್ಥಕ್ಕೆ ಪ್ರಾಧಿಕಾರ ರಚನೆ
ನೂತನ ಕಾಯ್ದೆ ಪ್ರಕಾರ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಪ್ರಾಧಿಕಾರ ರಚನೆಗೆ ಅವಕಾಶವಿದೆ. ಆಮೂಲಕ ಕೋರ್ಟ್ ಮೆಟ್ಟಿಲೇರದೆ ಇಲ್ಲೇ ಪ್ರಕರಣಗಳನ್ನು ಬಗೆಹರಿಸಿಕೊಳ್ಳಬಹುದು. ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಹಾಗೂ ನೀರಾವರಿ ಇಲಾಖೆಗೆ ಸಂಬಂಧಿಸಿದಂತೆ ಈ ಪ್ರಾಧಿಕಾರ ಯಾವ ರೀತಿ ರಚಿಸಬೇಕು ಎಂದು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ತೀರ್ಮಾನ ಮಾಡಲಾಗುವುದು. ನಮ್ಮ ಸರ್ಕಾರ ಈ ಪ್ರಾಧಿಕಾರ ರಚಿಸಲಿದೆ ಎಂದು ಮಾಹಿತಿ ನೀಡಿದರು.
ವಕೀಲರ ವಾದ ದಾಖಲಾತಿಗೆ ಪ್ರತ್ಯೇಕ ಘಟಕ
ಇನ್ನೂ ವಿಳಂಬವಾಗುವಿಕೆ ತಡೆಗೆ ಸುಪ್ರೀಂ ಕೋರ್ಟಿನ ವಕೀಲರ ಸಲಹೆ ಪಡೆದು ಮುಂದಿನ ಅಧಿವೇಶನದಲ್ಲಿ ಕಾನೂನಿಗೆ ತಿದ್ದುಪಡಿ ತರಲಾಗುವುದು. ದೆಹಲಿಯಲ್ಲಿ ಹಾಗೂ ಬೆಂಗಳೂರಿನಲ್ಲಿ ಇಂತಹ ಕಾನೂನು ಪ್ರಕರಣಗಳ ಪರಿಶೀಲನೆಗೆ ಕಾನೂನು ಘಟಕ ಸ್ಥಾಪಿಸಲು ತೀರ್ಮಾನಿಸಿದ್ದೇವೆ. ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಹಾಗೂ ಜಿಲ್ಲಾ ನ್ಯಾಯಾಲಯಗಳಲ್ಲಿ ನಮ್ಮ ಪರ ವಕೀಲರು ಮಂಡಿಸುವ ವಾದವನ್ನು ದಾಖಲಾತಿ ಮಾಡಲು ಘಟಕ ಆರಂಭಿಸಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.












Click it and Unblock the Notifications