Government Employee; ಜ. 4ರಂದು ವಿಶೇಷ ಸಾಂದರ್ಭಿಕ ರಜೆ
ಬೆಂಗಳೂರು, ಜನವರಿ 03: ಕರ್ನಾಟಕ ಸರ್ಕಾರ ಅಂಧ ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡುವ ಕುರಿತು ಆದೇಶ ಹೊರಡಿಸಿದೆ. ಜನವರಿ 4ರ ಗುರುವಾರ ಈ ವಿಶೇಷ ರಜೆ ಇದೆ.
ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ರಶ್ಮಿ ಎಂ. ಎಸ್. ಸರ್ಕಾರದ ಅಧೀನ ಕಾರ್ಯದರ್ಶಿ-2, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಆದೇಶ ಹೊರಡಿಸಿದ್ದಾರೆ.

ಈ ಆದೇಶ ದಿನಾಂಕ 4/1/2024ರಂದು ಲೂಯಿ ಬ್ರೈಲ್ ಇವರ ಜನ್ಮ ದಿನದ ಅಂಗವಾಗಿ ಅಂಧ ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ. ನಿರ್ದೇಶಕರು, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಇವರ ಪತ್ರ 29/11/2023 ಉಲ್ಲೇಖ ಮಾಡಲಾಗಿದೆ.
ಆದೇಶದ ವಿವರಗಳು; ಪ್ರತಿ ವರ್ಷ ಜನವರಿ 4ರಂದು ನಡೆಯುವ ವಿಶ್ವ ಬ್ರೈಲ್ ದಿನಾಚರಣೆಯಲ್ಲಿ ಪಾಲ್ಗೊಳ್ಳುವ ದೃಷ್ಟಿದೋಷವುಳ್ಳ ವಿಕಲಚೇತನ ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ ಸೌಲಭ್ಯವನ್ನು ಒದಗಿಸುವಂತೆ ಪ್ರಧಾನ ಕಾರ್ಯದರ್ಶಿಗಳು, ನ್ಯಾಷನಲ್ ಪೆಡರೇಷನ್ ಆಫ್ ಡಿ. ಬ್ಲೈಂಡ್, ಬೆಂಗಳೂರು ಅವರು ಕೋರಿದ್ದಾರೆ ಎಂದು ಹೇಳಿದೆ.
ಅದರಂತೆ ದಿನಾಂಕ 4/1/2024ರಂದು ದಿವಂಗತ ಲೂಯಿ ಬ್ರೈಲ್ ಅವರ ಜನ್ಮ ದಿನದ ಅಂಗವಾಗಿ ಅಂಧ ಸರ್ಕಾರಿ ನೌಕರರಿಗೆ ಒಂದು ದಿನದ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಿ ಆದೇಶ ಹೊರಡಿಸುವಂತೆ ನಿರ್ದೇಶಕರು, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಇಲಾಖೆ ಅವರು ಪತ್ರದಲ್ಲಿ ಕೋರಿರುತ್ತಾರೆ.
ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಈ ಆದೇಶ ನೀಡಲಾಗಿದೆ. ದಿನಾಂಕ 4/1/2024ರಂದು ದಿವಂಗತ ಲೂಯಿ ಬ್ರೈಲ್ ಅವರ ಜನ್ಮ ದಿನದ ಅಂಗವಾಗಿ ಆಚರಿಸಲಾಗುವ ವಿಶ್ವ ಬ್ರೈಲ್ ದಿನದ ಆಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ದೃಷ್ಟಿ ವಿಕಲಚೇತನ ಸರ್ಕಾರಿ ನೌಕರರಿಗೆ ಮಾತ್ರ ಅನ್ವಯಿಸಿ, ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸುವ ನೌಕರರು ಹಾಜರಾತಿ ಪ್ರಮಾಣ ಪತ್ರವನ್ನು ಒದಗಿಸುವ ಹಾಗೂ ಈ ವಿಶೇಷ ಸಾಂದರ್ಭಿಕ ರಜೆ ದಿನಕ್ಕೆ ಸರ್ಕಾರದಿಂದ ಯಾವುದೇ ದಿನ ಭತ್ಯೆ ಅಥವಾ ಪ್ರಯಾಣ ಭತ್ಯೆಯನ್ನು ಕ್ಲೈಮ್ ಅನ್ನು ಪರಿಗಣಿಸಲಾಗುವುದಿಲ್ಲವೆಂಬ ಷರತ್ತಿಗೊಳಪಟ್ಟು ರಜೆ ನೀಡಲಾಗಿದೆ.
ದಿನಾಂಕ 4/1/2024ರಂದು ಒಂದು ದಿನದ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಿ ಆದೇಶಿಸಿದೆ. ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ದಿನಾಂಕ 29/12/2023ರಲ್ಲಿ ನೀಡಿರುವ ಸಹಮತಿಯನ್ವಯ ಹೊರಡಿಸಿದೆ ಎಂದು ಹೇಳಿದೆ.
ಅಂಧರು ಬ್ರೈಲ್ ಲಿಪಿ ಮೂಲಕ ಆರಂಭಿಕ ಶಿಕ್ಷಣವನ್ನು ಪಡೆಯುತ್ತಾರೆ. ಜನವರಿ 4ರಂದು ಅಂಧರ ವ್ಯಾಸಂಗಕ್ಕೆ ಹೊಸ ಭಾಷ್ಯವನ್ನು ಬರೆದ ಲೂಯಿಸ್ ಬ್ರೈಲ್ ಜನ್ಮದಿನವಾಗಿದೆ. ಬ್ರೈಲ್ ಲಿಪಿಯನ್ನು ಸಂಶೋಧಿಸಿದ ಲೂಯಿಸ್ ಬ್ರೈಲ್ ಜನ್ಮದಿನವನ್ನು ವಿಶ್ವ ಬ್ರೈಲ್ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.
ವಿಶ್ವಸಂಸ್ಥೆ ಸಾಮಾನ್ಯ ಸಭೆಯು ಜನವರಿ 4 ಅನ್ನು ವಿಶ್ವ ಬ್ರೈಲ್ ದಿನವಾಗಿ ಆಚರಣೆ ಮಾಡಲು ನವೆಂಬರ್ 2018ರಲ್ಲಿ ಅಧಿಕೃತವಾಗಿ ಒಪ್ಪಿಗೆ ನೀಡಿದೆ. ವಿಶ್ವ ಬ್ರೈಲ್ ದಿನಾಚರಣೆ ಮೂಲಕ ಲೂಯಿಸ್ ಬ್ರೈಲ್ ಅವರಿಗೆ ಗೌರವ ಸಲ್ಲಿಸುವುದು ಮಾತ್ರವಲ್ಲ. ಅಂಧರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅವರಿಗೆ ಆರ್ಥಿಕ ಮತ್ತು ಸಾಮಾಜಿಕ ಅವಕಾಶಗಳನ್ನು ಸೃಷ್ಟಿಸಲು ಎನ್‌ಜಿಒಗಳು ಶ್ರಮಿಸುತ್ತಿವೆ.
ಲೂಯಿಸ್ ಬ್ರೈಲ್ ಫ್ರಾನ್ಸ್‌ನಲ್ಲಿ 1809ರ ಜನವರಿ 4ರಂದು ಜನಿಸಿದರು. ಮೂರನೇ ವಯಸ್ಸಿನಲ್ಲಿ ಅವರು ದೃಷ್ಟಿ ಕಳೆದುಕೊಂಡರು. ಆದರೆ ಓದು ಮತ್ತು ಬರವಣಿಗೆಯಲ್ಲಿ ಚುರುಕಾಗಿದ್ದರು. ಕಾಗದದ ತುಂಡಿನಲ್ಲಿ ಚುಕ್ಕಿಗಳನ್ನು ಜೋಡಿಸುವ ಮೂಲಕ ಹೊಸ ಬ್ರೈಲ್ ಲಿಪಿಯನ್ನು ಅಭಿವೃದ್ಧಿಗೊಳಿಸಿದರು.
ಮುಂದೆ ಈ ಬ್ರೈಲ್ ಲಿಪಿಯನ್ನು ಇನ್ನಷ್ಟು ಅಭಿವೃದ್ಧಿಗೊಂಡಿತು. ಈ ಬ್ರೈಲ್ ಲಿಪಿಯ ಸಹಾಯದಿಂದಾಗಿ ದೃಷ್ಟಿ ವಿಶೇಷ ಚೇತನರು ಆತ್ಮವಿಶ್ವಾಸದಿಂದ ಓದು, ಬರಹವನ್ನು ಕಲಿಯುತ್ತಿದ್ದಾರೆ.












Click it and Unblock the Notifications