ಕರ್ನಾಟಕದಲ್ಲಿ ಫೆ.5ರಿಂದ ಚಿತ್ರಮಂದಿರ ಶೇ.100ರಷ್ಟು ಭರ್ತಿಗೆ ಅನುಮತಿ
ಬೆಂಗಳೂರು, ಫೆಬ್ರವರಿ 4: ಕರ್ನಾಟಕದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ಕೊಂಚ ತಗ್ಗಿದೆ. ರಾಜ್ಯದಲ್ಲಿ ಕೊವಿಡ್-19 ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿರುವುದರ ಹಿನ್ನೆಲೆ ಮಾರ್ಗಸೂಚಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ.
ರಾಜ್ಯದಲ್ಲಿ ಫೆಬ್ರವರಿ 5ರ ಶನಿವಾರದಿಂದ ಎಲ್ಲ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಆಸನಗಳ ಭರ್ತಿಗೆ ಅನುಮತಿ ನೀಡಲಾಗಿದೆ. ಇದರ ಜೊತೆ ಜಿಮ್ ಹಾಗೂ ಸ್ವಿಮ್ಮಿಂಗ್ ಪೂಲ್ ಗಳಲ್ಲಿ ಶೇ.50ರಷ್ಟು ಜನರಿಗೆ ಮಾತ್ರ ಅವಕಾಶ ನೀಡಬೇಕು ಎನ್ನುವ ನಿರ್ಬಂಧವನ್ನು ತೆರವುಗೊಳಿಸಲಾಗಿದೆ.
ಬೆಂಗಳೂರಿನಲ್ಲಿ ಕೊವಿಜಡ್-19 ನಿಯಮಗಳ ಸಡಿಲಿಕೆ ಬಗ್ಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ. ಆ ಮೂಲಕ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮನವಿಗೆ ಸರ್ಕಾರ ಸ್ಪಂದಿಸಿದ್ದು, ಚಿತ್ರರಂಗ ಹಾಗೂ ಸಿನಿಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟಿದೆ.

ಜನವರಿ 31ರಂದು ಪಬ್, ರೆಸ್ಟೋರೆಂಟ್, ಹೋಟೆಲ್ ಗಳಿಗೆ ರಿಲೀಫ್:
ಕರ್ನಾಟಕದಲ್ಲಿ ಕಳೆದ ಜನವರಿ 31ರಿಂದ ರಾತ್ರಿ ನಿಷೇಧಾಜ್ಞೆಯನ್ನು ತೆರವುಗೊಳಿಸಲಾಗಿತ್ತು. ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ ಇಳಿಮುಖವಾದ ಹಿನ್ನೆಲೆ ಹಲವು ನಿರ್ಬಂಧಗಳನ್ನು ಸಡಿಲಗೊಳಿಸಲಾಗಿತ್ತು. ತದನಂತರದಲ್ಲಿ ಪಬ್ ಆ್ಯಂಡ್ ರೆಸ್ಟೋರೆಂಟ್, ಹೋಟೆಲ್ಗಳಿಗೆ ಶೆ. 100 ರಷ್ಟು ಅವಕಾಶ ನೀಡಲಾಗಿತ್ತು.
ಈ ಹಿಂದಿ ಥಿಯೇಟರ್, ಜಿಮ್, ಸ್ವಿಮ್ಮಿಂಗ್ ಪೂಲ್ ನಿರ್ಬಂಧ:
ಕಳೆದ ಜನವರಿ 29ರಂದು ನಡೆಸಿದ ಸಭೆಯಲ್ಲಿ ಕೆಲವು ನಿರ್ಬಂಧಗಳನ್ನು ಮುಂದುವರಿಸಲಾಗಿತ್ತು. ಅಂದು ಸಿನಿಮಾ ಥಿಯೇಟರ್ಗಳಿಗೆ ಶೇ. 50 ಜನರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಮದುವೆಗಳಿಗೆ ಒಳಾಂಗಣದಲ್ಲಿ 200 ಜನರಿಗೆ, ಹೊರಾಂಗಣದಲ್ಲಿ 300 ಜನರಿಗೆ ಅವಕಾಶ ನೀಡಲಾಗಿದೆ. ಮಂದಿರ, ಮಸೀದಿ, ಚರ್ಚ್ಗಳಲ್ಲಿ ಸೇವೆ ಪುನಾರಂಭ ಮಾಡಬಹುದು. ಆದರೆ ಧಾರ್ಮಿಕ ಸ್ಥಳಗಳಲ್ಲಿ 50 ಜನ ಮಾತ್ರ ಒಂದೇ ಬಾರಿ ದರ್ಶನ ಪಡೆಯಬಹುದು. ಜಾತ್ರೆ, ಮೆರವಣಿಗೆ, ಧರಣಿ, ಪ್ರತಿಭಟನೆ ಧಾರ್ಮಿಕ ಉತ್ಸವಗಳಿಗೆ ನಿರ್ಬಂಧ ಹೇರಲಾಗಿದೆ. ಜಿಮ್, ಈಜುಕೊಳದಲ್ಲಿ ಶೇ. 50ರಷ್ಟು ಅವಕಾಶ ನೀಡಲಾಗಿದೆ ಅಂತ ಆರ್ ಅಶೋಕ್ ಹೇಳಿದ್ದರು.












Click it and Unblock the Notifications