ಸರ್ಕಾರಿ ಅಧಿಕಾರಿಗಳಿಗೆ ಸರ್ಕಾರ ಖಡಕ್ ಆದೇಶ; ಜನಪ್ರತಿನಿಧಿಗಳ ಫೋನ್ ಕರೆ ಸ್ವೀಕರಿಸುವುದು ಇನ್ಮುಂದೆ ಕಡ್ಡಾಯ
ಬೆಂಗಳೂರು: ಕರ್ನಾಟಕ ಸರ್ಕಾರದ ಎಲ್ಲಾ ಸರ್ಕಾರಿ ಅಧಿಕಾರಿಗಳು ಜನಪ್ರತಿನಿಧಿಗಳಾದ ವಿಧಾನಸಭಾ ಹಾಗೂ ವಿಧಾನಪರಿಷತ್ತಿನ ಸದಸ್ಯರು ಮತ್ತು ಲೋಕಸಭಾ ಹಾಗೂ ರಾಜ್ಯ ಸಭಾ ಸದಸ್ಯರುಗಳ ದೂರವಾಣಿ ಸಂಖ್ಯೆಯನ್ನು ತಮ್ಮ ಬಳಿ ಕಡ್ಡಾಯವಾಗಿ ಇಟ್ಟುಕೊಳ್ಳಬೇಕು. ಅಲ್ಲದೇ ಇನ್ಮುಂದೆ ಅವರು ಕರೆ ಮಾಡಿದಾಗ ಕಡ್ಡಾಯವಾಗಿ ಸ್ವೀಕರಿಸುವಂತೆ ರಾಜ್ಯ ಸರ್ಕಾರವು ಖಡಕ್ ಆದೇಶ ಹೊರಡಿಸಿದೆ.
ಇನ್ಮುಂದೆ ಸರ್ಕಾರಿ ಅಧಿಕಾರಿಗಳು ಜನಪ್ರತಿನಿಧಿಗಳ ದೂರವಾಣಿ ಕರೆಯನ್ನು ಸ್ವೀಕರಿಸಲೇಬೇಕು ಎಂಬ ಸುತ್ತೋಲೆಯನ್ನು ಹೊರಡಿಸುವ ಮೂಲಕ ಸರ್ಕಾರಿ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ. ಸರ್ಕಾರಿ ಅಧಿಕಾರಿಗಳು ಜನಪ್ರತಿನಿಧಿಗಳ ದೂರವಾಣಿ ಕರೆಗಳನ್ನು ಸ್ವೀಕರಿಸದೆ ಇರುವ ಬಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುತ್ತೋಲೆಯೊಂದನ್ನು ಹೊರಡಿಸಿದ್ದಾರೆ. ಶಾಸಕರು, ಪರಿಷತ್ ಸದಸ್ಯರ, ಸಂಸದರ ಕರೆ ಸ್ವೀಕರಿಸುವ ಸಂಬಂಧ ಸರ್ಕಾರಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಸರ್ಕಾರಿ ಅಧಿಕಾರಿಗಳು ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರ ದೂರವಾಣಿ ಕರೆಗಳನ್ನು ಸ್ವೀಕರಿಸದೆ ಇರುವುದು, ಮರಳಿ ಕರೆ ಮಾಡದೇ ಇರುವ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಮಹತ್ವದ ಸೂಚನೆಯೊಂದನ್ನು ನೀಡಿದ್ದಾರೆ. ಈ ವಿಚಾರವಾಗಿ ಸುತ್ತೋಲೆ ಹೊರಡಿಸಿರುವ ಅವರು, ಇನ್ನು ಮುಂದೆ ಎಲ್ಲ ಸರ್ಕಾರಿ ಅಧಿಕಾರಿಗಳು ಎಂಎಲ್‌ಎಗಳ ಮತ್ತು ಎಂಎಲ್‌ಸಿಗಳ ದೂರವಾಣಿ ಕರೆಗಳನ್ನು ಸ್ವೀಕರಿಸಲೇಬೇಕು. ಒಂದು ವೇಳೆ ಕರೆ ಬಂದಾಗ ಇತರ ಕೆಲಸಗಳಲ್ಲಿ ನಿರತರಾಗಿದ್ದಲ್ಲಿ, ಮರಳಿ ಕರೆ ಮಾಡಿ ಮಾತನಾಡಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಇನ್ನೂ ರಾಜ್ಯದ ವಿವಿಧ ಭಾಗಗಳಿಂದ ಸಾರ್ವಜನಿಕರು ಅವರ ಸಮಸ್ಯೆ ಮತ್ತು ಕುಂದು ಕೊರತೆಗಳನ್ನು ಪರಿಹರಿಸಿಕೊಳ್ಳುವ ಉದ್ದೇಶದಿಂದ ವಿಧಾನಸಭಾ ಹಾಗೂ ಪರಿಷತ್ತಿನ ಸದಸ್ಯರಿಗೆ ವಿನಂತಿಸಿಕೊಂಡಾಗ ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡಬೇಕಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಜನಪ್ರತಿನಿಧಿಗಳ ಕರೆಗಳನ್ನು ಕೆಲವು ಅಧಿಕಾರಿಗಳು ಸ್ವೀಕರಿಸದೇ ಇರುವುದು ಹಾಗೂ ಒಂದು ವೇಳೆ ಆ ಸಮಯದಲ್ಲಿ ತುರ್ತು ಕಾರ್ಯದಲ್ಲಿ ನಿರತರಾಗಿದ್ದಲ್ಲಿ ತದನಂತರ ಸೌಜನ್ಯಕ್ಕಾದರೂ ಮರು ಕರೆ ಮಾಡದಿರುವುದು ನನ್ನ ಗಮನಕ್ಕೆ ಬಂದಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪತ್ರ ಬರೆದಿದ್ದಾರೆ.
ಈ ಹಿನ್ನೆಲೆಯಲ್ಲಿ ಇನ್ಮುಂದೆ ಎಲ್ಲ ಅಧಿಕಾರಿಗಳು ಜನಪ್ರತಿನಿಧಿಗಳಾದ ವಿಧಾನಸಭಾ, ಪರಿಷತ್ತಿನ ಸದಸ್ಯರು, ಸಂಸದರ ದೂರವಾಣಿ ಸಂಖ್ಯೆಯನ್ನು ತಮ್ಮ ಬಳಿ ಕಡ್ಡಾಯವಾಗಿ ಇಟ್ಟುಕೊಳ್ಳಬೇಕು. ಜನಪ್ರತಿನಿಧಿಗಳು ಕರೆ ಮಾಡಿದಾಗ ಕರೆಯನ್ನು ಸ್ವೀಕರಿಸುವುದು, ಒಂದು ವೇಳೆ ಅನ್ಯ ಕರ್ತವ್ಯದಲ್ಲಿ ನಿರತರಾಗಿದ್ದಲ್ಲಿ ಕರ್ತವ್ಯ ಮುಗಿದ ನಂತರ ಮರು ಕರೆಯನ್ನು ಮಾಡಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸುತ್ತೋಲೆ ಹೊರಡಿಸಿದ್ದಾರೆ.
ಸರ್ಕಾರದ ಆದೇಶದಲ್ಲಿ ಏನಿದೆ?
ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸಭಾಪತಿಯವರ ದಿನಾಂಕ:16.12.2025ರ ಪತ್ರದಲ್ಲಿ ತಿಳಿಸಿದಂತೆ, ರಾಜ್ಯದ ವಿವಿಧ ಭಾಗಗಳಿಂದ ಸಾರ್ವಜನಿಕರು ಅವರ ಸಮಸ್ಯೆಗಳನ್ನು ಮತ್ತು ಕುಂದು ಕೊರತೆಗಳನ್ನು ಪರಿಹರಿಸಿಕೊಳ್ಳುವ ಉದ್ದೇಶದಿಂದ ಮಾನ್ಯ ವಿಧಾನಸಭಾ ಹಾಗೂ ವಿಧಾನಪರಿಷತ್ತಿನ ಸದಸ್ಯರುಗಳಿಗೆ ವಿನಂತಿಸಿಕೊಂಡಾಗ ಅನಿವಾರ್ಯವಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಬೇಕಾಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ಜನಪ್ರತಿನಿಧಿಗಳ ದೂರವಾಣಿ ಕರೆಗಳನ್ನು ಕೆಲವು ಅಧಿಕಾರಿಗಳು ಸ್ವೀಕರಿಸದೇ ಇರುವುದು ಹಾಗೂ ಒಂದು ವೇಳೆ ಆ ಸಮಯದಲ್ಲಿ ಬೇರೆ ತುರ್ತು ಕಾರ್ಯದಲ್ಲಿ ನಿರತರಾಗಿದ್ದಲ್ಲಿ ತದನಂತರ ಸೌಜನ್ಯಕ್ಕಾದರೂ ಮರು ಕರೆ ಮಾಡದೆ ಇರುವುದು ನನ್ನ ಗಮನಕ್ಕೆ ಬಂದಿದೆ ಎಂದಿದ್ದಾರೆ.
ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಇನ್ನು ಮುಂದೆ ಎಲ್ಲಾ ಅಧಿಕಾರಿಗಳು ಜನಪ್ರತಿನಿಧಿಗಳಾದ ಮಾನ್ಯ ವಿಧಾನಸಭಾ ಹಾಗೂ ವಿಧಾನಪರಿಷತ್ತಿನ ಸದಸ್ಯರು ಮತ್ತು ಮಾನ್ಯ ಲೋಕಸಭಾ ಹಾಗೂ ಸಭಾ ರಾಜ್ಯ ಸಭಾ ಸದಸ್ಯರುಗಳ ದೂರವಾಣಿ ಸಂಖ್ಯೆಯನ್ನು ತಮ್ಮ ಬಳಿ ಕಡ್ಡಾಯವಾಗಿ ಇಟ್ಟುಕೊಳ್ಳತಕ್ಕದ್ದು ಹಾಗೂ ಅವರು ಕರೆ ಮಾಡಿದಾಗ ಕರೆಯನ್ನು ಸ್ವೀಕರಿಸುವುದು, ಒಂದು ವೇಳೆ ತಾವು ಅನ್ಯ ಕರ್ತವ್ಯದಲ್ಲಿ ನಿರತರಾಗಿದ್ದಲ್ಲಿ ಅವರುಗಳಿಗೆ ತಮ್ಮ ಕರ್ತವ್ಯ ಮುಗಿದ ನಂತರ ಮರು ಕರೆಯನ್ನು ಮಾಡುವುದರ ಮೂಲಕ ಸೂಕ್ತವಾಗಿ ಸಮಸ್ಯೆಗಳ ಕುರಿತು ಸ್ಪಂದಿಸುವಂತೆ ಈ ಮೂಲಕ ಸೂಚನೆಯನ್ನು ನೀಡಿದೆ. ಸದರಿ ಸೂಚನೆಯನ್ನು ತಮ್ಮ ಆಪ್ತ ಶಾಖೆ ಸಿಬ್ಬಂದಿಗಳಿಗೂ ನೀಡಲು ಕೋರಿದೆ.












Click it and Unblock the Notifications