1ನೇ ತರಗತಿ ಪ್ರವೇಶಕ್ಕೆ ವಯೋಮಿತಿ ಸಡಿಲಿಕೆ: ಷರತ್ತು, ಆದೇಶದ ವಿವರ
ಬೆಂಗಳೂರು, ಏಪ್ರಿಲ್ 17: 1ನೇ ತರಗತಿಗೆ 5 ವರ್ಷ 5 ತಿಂಗಳು ತುಂಬಿದ ಮಕ್ಕಳನ್ನು ಸೇರಿಸಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ, 6 ವರ್ಷವಿದ್ದ ವಯೋಮಿತಿ ಸಡಿಲಿಕೆ ಬಗ್ಗೆ ಮಾಡಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದ್ದರು. ಬುಧವಾರ ಈ ಕುರಿತು ಕರ್ನಾಟಕ ಸರ್ಕಾರ ಅಧಿಕೃತ ಆದೇಶವನ್ನು ಹೊರಡಿಸಿದೆ. ಸರ್ಕಾರದ ತೀರ್ಮಾನದಿಂದಾಗಿ ಪೋಷಕರು ಸಂತಸಗೊಂಡಿದ್ದಾರೆ. ವಯೋಮಿತಿ ಸಡಿಲಿಕೆ ಮಾಡಬೇಕು ಎಂದು ಪೋಷಕರು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದರು.
ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ ಶಾಲ್ಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶವನ್ನು ಹೊರಡಿಸಿದ್ದಾರೆ. ಈ ಆದೇಶ ಒಂದನೇ ತರಗತಿಗೆ ಮಕ್ಕಳನ್ನು ದಾಖಲಾತಿ ಮಾಡಲು ನಿಗದಿಪಡಿಸಿರುವ ವಯೋಮಿತಿಯನ್ನು 2025-26ನೇ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗುವಂತೆ ಒಂದು ಬಾರಿಗೆ ಮಾತ್ರ ಸಡಿಲಿಸುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.

ಶಿಕ್ಷಣ ಹಕ್ಕು ಕಾಯ್ದೆ 2009 ಮತ್ತು ಕಡ್ಡಾಯ ಶಿಕ್ಷಣ ನಿಯಮಗಳು 2012ರಂತೆ ಶೈಕ್ಷಣಿಕ ವರ್ಷದ ಜೂನ್ 1ನೇ ತಾರೀಖಿಗೆ ಕಡ್ಡಾಯವಾಗಿ 6 ವರ್ಷಗಳು ಪೂರ್ಣಗೊಂಡಿರುವ ಮಗುವನ್ನು ಒಂದನೇ ತರಗತಿಗೆ ದಾಖಲಿಸಲು ವಯೋಮಿತಿಯನ್ನು ನಿಗದಿಪಡಿಸಿ ಆದೇಶಿಸಲಾಗಿರುತ್ತದೆ.
ಶೈಕ್ಷಣಿಕ ವರ್ಷದ ಜೂನ್ 1ನೇ ತಾರೀಖಿಗೆ ಕಡ್ಡಾಯವಾಗಿ 6 ವರ್ಷಗಳು ಪೂರ್ಣಗೊಂಡಿರುವ ಮಗುವನ್ನು 1ನೇ ತರಗತಿಗೆ ದಾಖಲಿಸಲು ವಯೋಮಿತಿಯನ್ನು ನಿಗದಿಪಡಿಸಿರುವುದನ್ನು 2025-2026ನೇ ಶೈಕ್ಷಣಿಕ ಸಾಲಿನಿಂದ ಅನ್ವಯವಾಗುವಂತೆ ತಿದ್ದುಪಡಿ ಮಾಡಲಾಗಿರುತ್ತದೆ.
ಒಂದನೇ ತರಗತಿ ಪ್ರವೇಶಾತಿಗೆ ಪ್ರಸ್ತುತ ನಿಗದಿಪಡಿಸಿರುವ ಕನಿಷ್ಠ 6 ವರ್ಷಗಳ ವಯೋಮಿತಿಯನ್ನು ಸಡಿಲಿಸಲು ರಾಜ್ಯಾದ್ಯಂತ ಪೋಷಕರಿಂದ ಹಲವಾರು ಮನವಿಗಳು ಸ್ವೀಕೃತವಾಗುತ್ತಿದ್ದು, ಒಂದನೇ ತರಗತಿಗೆ 5 ವರ್ಷ 5 ತಿಂಗಳು ವಯೋಮಿತಿಯನ್ನು ಮರುನಿಗದಿಗೊಳಿಸಲು ಸರ್ಕಾರದ ಹಂತದಲ್ಲಿ ಸೂಕ್ತ ಆದೇಶ ಹೊರಡಿಸುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ.
1 ನೇ ತರಗತಿಯ ಪ್ರವೇಶಾತಿಗೆ ಕನಿಷ್ಠ ವಯೋಮಿತಿಯನ್ನು ನಿಗದಿಪಡಿಸುವುದು ರಾಜ್ಯ ಶಿಕ್ಷಣ ನೀತಿಯ ಚೌಕಟ್ಟಿಗೆ ಒಳಪಟ್ಟಿರುವುದರಿಂದ ಈ ಕುರಿತು ಕೂಲಂಕಷವಾಗಿ ಪರಿಶೀಲಿಸಿ ಸಲಹೆ ನೀಡುವಂತೆ ರಾಜ್ಯ ಶಿಕ್ಷಣ ನೀತಿ ಆಯೋಗವನ್ನು ಕೋರಲಾಗಿತ್ತು.
ರಾಜ್ಯ ಶಿಕ್ಷಣ ನೀತಿ ಆಯೋಗವು ಸಂವಿಧಾನದ ಅನುಚ್ಛೇದ 21(ಎ), ಶಿಕ್ಷಣ ಹಕ್ಕು ಕಾಯ್ದೆ-2009, ಕಡ್ಡಾಯ ಶಿಕ್ಷಣ ನಿಯಮಗಳು-2012 ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ-2020ರ ಅನುಸಾರ ಒಂದನೇಯ ತರಗತಿಯ ಪ್ರವೇಶಕ್ಕೆ 6 ವರ್ಷಗಳ ಕನಿಷ್ಠ, ವಯೋಮಿತಿ ನಿಗದಿಪಡಿಸಿರುವುದು ಅಗತ್ಯ ಮತ್ತು ಔಚಿತ್ಯಪೂರ್ಣ ಎಂಬುದನ್ನು ಸ್ಪಷ್ಟಪಡಿಸಿರುತ್ತದೆ.
ಮುಂದುವರೆದು, ಈ ವಿಷಯದಲ್ಲಿ ಅನುಸರಿಸಲಾಗುತ್ತಿರುವ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪದ್ಧತಿಗಳು, ಮಗುವಿನ ಮಾನಸಿಕ ಬೆಳವಣಿಗೆ ಮತ್ತು ಕೇಂದ್ರ ಸರ್ಕಾರ ಮತ್ತು ವಿವಿಧ ರಾಜ್ಯ ಸರ್ಕಾರಗಳು ಒಂದನೇ ತರಗತಿಯ ದಾಖಲಾತಿಗೆ 6 ವರ್ಷಗಳ ಕನಿಷ್ಠ ವಯೋಮಿತಿ ನಿಗದಿಪಡಿಸಿರುವುದು ಹಾಗೂ ಮಗುವಿನ ಒತ್ತಡರಹಿತ ಕಲಿಕೆಗೆ ಪೂರಕವಾಗಿ ರಾಜ್ಯ ಸರ್ಕಾರವು ನಿಗದಿಪಡಿಸಿರುವ ಆರು ವರ್ಷಗಳ ಕನಿಷ್ಠ ವಯೋಮಿತಿ ಸಮರ್ಪಕವಾಗಿರುತ್ತದೆ ಎಂದು ಅಭಿಪ್ರಾಯಿಸಿರುತ್ತದೆ. ವೈಯಕ್ತಿಕ ತೊಡಕಗಳನ್ನು ಪರಿಗಣಿಸಿ ಶಿಕ್ಷಣ ನೀತಿಯಲ್ಲಿ ಬದಲಾವಣೆ ಮಾಡಲಾಗದು ಎಂದು ಮತ್ತು ವಿವಿಧ ನ್ಯಾಯಾಲಯಗಳು ಈ ಅಂಶವನ್ನು ಎತ್ತಿ ಹಿಡಿದಿರುವುದಾಗಿ ವರದಿಯಲ್ಲಿ ತಿಳಿಸಿರುತ್ತಾರೆ.
ಆದಾಗ್ಯೂ, 2025-2026ರ ಶೈಕ್ಷಣಿಕ ವರ್ಷಕ್ಕಿಂತ ಪೂರ್ವದಲ್ಲಿ ಪೂರ್ವ ಪ್ರಾಥಮಿಕ ತರಗತಿ ಪೂರ್ಣಗೊಳಿಸಿರುವ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಈಗಾಗಲೇ ನಿಗದಿಪಡಿಸಿರುವ ಆರು ವರ್ಷಗಳ ಕನಿಷ್ಠ ವಯೋಮಿತಿಗೆ 2025-2026ನೇ ಶೈಕ್ಷಣಿಕ ಸಾಲಿಗೆ ಮಾತ್ರ ಸೀಮಿತಗೊಳಿಸಿ ವಿನಾಯಿತಿ ನೀಡಬಹುದೆಂದು ಅಭಿಪ್ರಾಯ ನೀಡಿರುತ್ತದೆ.
ಆಯುಕ್ತರಿಂದ ಸ್ವೀಕೃತವಾಗಿರುವ ಏಕ ಕಡತದಲ್ಲಿನ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ರಾಜ್ಯ ಶಿಕ್ಷಣ ನೀತಿ ಆಯೋಗವು ಮಾಡಿರುವ ಶಿಫಾರಸ್ಸುಗಳನ್ನು ಪರಿಗಣಿಸಿ 2025-26ನೇ ಶೈಕ್ಷಣಿಕ ಸಾಲಿಗೆ ಮಾತ್ರ ಅನ್ವಯವಾಗುವಂತೆ ಉಲ್ಲೇಖಿಸಿರುವ ಕಾರಣಗಳಿಂದ 1ನೇ ತರಗತಿಗೆ ದಾಖಲು ಮಾಡಲು ನಿಗದಿಪಡಿಸಿರುವ 6 ವರ್ಷಗಳ ವಯೋಮಿತಿಗೆ ಸಡಿಲಿಕೆಯನ್ನು ನೀಡಲು, ಅಂದರೆ ಪೂರ್ವ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿರುವ ಹಾಗೂ ಜೂನ್ 1ನೇ ತಾರೀಖಿಗೆ 5 ವರ್ಷ 5 ತಿಂಗಳು ಪೂರ್ಣಗೊಂಡಿರುವ ಮಕ್ಕಳನ್ನು ಒಂದನೇ ತರಗತಿಗೆ ದಾಖಲು ಮಾಡಿಕೊಳ್ಳಲು ನಿರ್ಧರಿಸಿ ಆದೇಶಿಸಿದೆ.
ಆದೇಶದ ವಿವರಗಳು: ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳ ಹಿನ್ನೆಲೆಯಲ್ಲಿ ರಾಜ್ಯ ಶಿಕ್ಷಣ ನೀತಿ ಆಯೋಗದ ಶಿಫಾರಸ್ಸು/ ಅಭಿಪ್ರಾಯವನ್ನು ಪರಿಗಣಿಸಿ ಸರ್ಕಾರದ ಆದೇಶ ದಿನಾಂಕ 26.07.2022ರಲ್ಲಿ ಶೈಕ್ಷಣಿಕ ವರ್ಷದ ಜೂನ್ 1ನೇ ತಾರೀಖಿಗೆ 6 ವರ್ಷಗಳು ಪೂರ್ಣಗೊಂಡಿರುವ ಮಗುವನ್ನು 1ನೇ ತರಗತಿಗೆ ದಾಖಲಿಸಲು ವಯೋಮಿತಿಯನ್ನು ನಿಗದಿಪಡಿಸಿರುವುದಕ್ಕೆ ಒಂದು ಬಾರಿಯ ಕ್ರಮವಾಗಿ ಸಡಿಲಿಕೆಯನ್ನು ನೀಡಿ ಉಲ್ಲೇಖಿಸಿರುವ ಕಾರಣಗಳಿಂದ ಪೂರ್ವ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿರುವ ಹಾಗೂ ಜೂನ್ 1ನೇ ತಾರೀಖಿಗೆ 5 ವರ್ಷ 5 ತಿಂಗಳು ಪೂರ್ಣಗೊಂಡಿರುವ ಮಕ್ಕಳನ್ನು 2025-2026ನೇ ಶೈಕ್ಷಣಿಕ ವರ್ಷಕ್ಕೆ ಮಾತ್ರ ಒಂದನೇ ತರಗತಿಗೆ ದಾಖಲು ಮಾಡಿಕೊಳ್ಳಲು ಆದೇಶಿಸಿದೆ.
ಮುಂದುವರೆದು, 2026-27ನೇ ಶೈಕ್ಷಣಿಕ ವರ್ಷದಿಂದ ಜೂನ್ ಒಂದನೇ ತಾರೀಖಿಗೆ 6 ವರ್ಷಗಳು ಪೂರ್ಣಗೊಂಡಿರುವ ಮಕ್ಕಳನ್ನು ಮಾತ್ರ ಒಂದನೇ ತರಗತಿಗೆ ದಾಖಲಿಸಿಕೊಳ್ಳತಕ್ಕದ್ದು ಮತ್ತು ಸರ್ಕಾರದ ಆದೇಶ ದಿನಾಂಕ 26.06.2024ರಲ್ಲಿ ಈಗಾಗಲೇ ಎಲ್.ಕೆ.ಜಿ ಪ್ರವೇಶಾತಿಗೆ 4 ವರ್ಷ ಮತ್ತು ಯು.ಕೆ.ಜಿ ಪವೇಶಾತಿಗೆ 5 ವರ್ಷಗಳ ಕನಿಷ್ಠ ವಯೋಮಿತಿ ನಿಗದಿಪಡಿಸಲಾಗಿರುತ್ತದೆ.
ಅದರಂತೆ 2025-2026ನೇ ಶೈಕ್ಷಣಿಕ ವರ್ಷದಿಂದ ಎಲ್.ಕೆ.ಜಿ ಅಥವಾ ತತ್ಸಮಾನ ದಾಖಲಾತಿಗೆ 4 ವರ್ಷ ಪೂರ್ಣಗೊಂಡಿರುವ ಮತ್ತು ಯು.ಕೆ.ಜಿ ಅಥವಾ ತತ್ಸಮಾನ ದಾಖಲಾತಿಗೆ 5 ವರ್ಷ ಪೂರ್ಣಗೊಂಡಿರುವ ಮಕ್ಕಳನ್ನು ಮಾತ್ರ ದಾಖಲಿಸಿಕೊಳ್ಳತಕ್ಕದ್ದು ಎಂದು ಹೇಳಿದೆ.












Click it and Unblock the Notifications