ರಾಜ್ಯದಲ್ಲಿ ಹೊಸ ರೂಲ್ಸ್: ಇದನ್ನ ಮಾಡಿದ್ರೆ ₹10 ಕೋಟಿ ದಂಡ, 10 ವರ್ಷ ಜೈಲು ಫಿಕ್ಸ್!
ರಾಜ್ಯದಲ್ಲಿ ಇನ್ನು ಮುಂದೆ ಹೊಸ ನಿಯಮ ಜಾರಿಯಾಗಲಿದೆ. ಇತ್ತೀಚೆಗೆ ವಿವಿಧ ಸರ್ಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮಗಳು ಹೆಚ್ಚಾಗಿರುವ ಹಿನ್ನೆಲೆ ರಾಜ್ಯ ಸರ್ಕಾರವು ಇದಕ್ಕೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕಾನೂನು ತರಲು ಮುಂದಾಗಿದ್ದು, ಇದಕ್ಕೆ ರಾಜ್ಯಪಾಲರ ಒಪ್ಪಿಗೆ ಕೂಡ ಸಿಕ್ಕಿದೆ.
ಅದರಂತೆ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ಎಸಗಿದರೆ ಭಾರಿ ಮೊತ್ತದ ದಂಡ ವಿಧಿಸಬೇಕಾಗುತ್ತದೆ. ಇದರ ಜೊತೆಗೆ ಜೈಲು ಸೇರುವುದು ಹತ್ತು ವರ್ಷಗಳವರೆಗೆ ಜೈಲು ಶಿಕ್ಷೆ ಕೂಡ ಅನುಭವಿಸಬೇಕು ಎಂದು ಸರ್ಕಾರ ಹೇಳಿದೆ.

ಸರ್ಕಾರ ವಿವಿಧ ಇಲಾಖೆಗಳ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ಎಸಗುವವರಿಗೆ ₹10 ಕೋಟಿ ದಂಡ ಮತ್ತು 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸುವ ಕರ್ನಾಟಕ ಸಾರ್ವಜನಿಕ ಪರೀಕ್ಷಾ (ನೇಮಕಾತಿಯಲ್ಲಿ ಭ್ರಷ್ಟಾಚಾರ ಮತ್ತು ಅನುಚಿತ ವಿಧಾನಗಳ ಪ್ರತಿಬಂಧಕ ಕ್ರಮಗಳು) ಮಸೂದೆ-2023ಕ್ಕೆ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅನುಮೋದನೆ ನೀಡಿದ್ದಾರೆ.
ಹಾಗಾಗಿ ಇನ್ನು ಮುಂದೆ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ಎಸಗಿ ಸಿಕ್ಕಿಬಿದ್ದವರು ಕೋಟಿಗಟ್ಟಲೆ ರೂಪಾಯಿ ದಂಡ ಕಟ್ಟಬೇಕಲ್ಲದೆ, ಹತ್ತು ವರ್ಷ ಜೈಲಿಗೂ ಹೋಗಬೇಕಾಗುತ್ತದೆ. ಈ ಹೊಸ ಕಾನೂನಿಗೆ ರಾಜ್ಯಪಾಲರ ಅಂಕಿತ ಬಿದ್ದಿರುವುದರಿಂದ ಶೀಘ್ರವೇ ರಾಜ್ಯದಲ್ಲಿ ಜಾರಿಯಾಗಲಿದೆ.
ರಾಜ್ಯದಲ್ಲಿ ಹಿಂದಿನ ವರ್ಷಗಳಲ್ಲಿ ನಡೆದಿದ್ದ ವಿವಿಧ ಇಲಾಖೆಗಳ ನೇಮಕಾತಿ ಪರೀಕ್ಷೆಗಳಲ್ಲಿ ಭಾರಿ ಅಕ್ರಮಗಳು ನಡೆದಿದ್ದವು. ಪಿಎಸ್‌ಐ ಪರೀಕ್ಷೆ, ಸಹಾಯಕ ಪ್ರಾಧ್ಯಾಪಕರ ನೇಮಕಾತಿ, ಪ್ರಥಮ ದರ್ಜೆ ಸಹಾಯಕ ಪರೀಕ್ಷೆಗಳಲ್ಲೂ ಅಕ್ರಮ ನಡೆದಿದ್ದವು. ಹೀಗಾಗಿ ಪರೀಕ್ಷಾ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲಾಗಿತ್ತು.

ಪರೀಕ್ಷೆಯಲ್ಲಿ ಕಾಪಿ ಮಾಡುವುದು, ಪ್ರಶ್ನೆಪತ್ರಿಕೆಗಳ ಸೋರಿಕೆಯಾಗುವುದು, ಉತ್ತರ ಪತ್ರಿಕೆ ಮತ್ತು ಒಎಂಆರ್ ಹಾಳೆಗಳನ್ನು ತಿದ್ದುವುದು, ಪರೀಕ್ಷೆ ವೇಳೆ ಉಪಕರಣ ಬಳಸುವುದು, ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಪ್ರವೇಶ, ಪರೀಕ್ಷಾ ಅಭ್ಯರ್ಥಿ ಬೇರೊಬ್ಬರ ಹೆಸರಿನಲ್ಲಿ ಪರೀಕ್ಷೆ ಬರೆಯಲು ಯತ್ನಿಸುವುದು, ಪ್ರಶ್ನೆಪತ್ರಿಕೆ ಲೀಕ್ ಮಾಡುವುದು, ಸೋರಿಕೆಗೆ ಪ್ರಯತ್ನಿಸುವುದು, ಅಕ್ರಮವಾಗಿ ಪ್ರಶ್ನೆಪತ್ರಿಕೆಗಳನ್ನು ತರಿಸಿಕೊಳ್ಳುವುದು ಸೇರಿದಂತೆ ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾಗುವುದು ಶಿಕ್ಷಾರ್ಹ ಅಪರಾಧ ಎಂದು ಹೇಳಲಾಗಿದೆ.
ಒಂದು ವೇಳೆ ಪರೀಕ್ಷಾ ಅಕ್ರಮದಲ್ಲಿ ಯಾವುದೇ ಸಂಸ್ಥೆ ಅಥವಾ ಅದರ ಆಡಳಿತ ಮಂಡಳಿ ಭಾಗಿಯಾದರೆ, ಆ ಪರೀಕ್ಷೆಯ ಸಂಪೂರ್ಣ ವೆಚ್ಚವನ್ನು ಅಂತಹ ಸಂಸ್ಥೆ ಅಥವಾ ಆಡಳಿತ ಮಂಡಳಿಯಿಂದಲೇ ವಸೂಲಿ ಮಾಡಲು ಈ ಕಾಯ್ದೆ ನೆರವಾಗಲಿದೆ.
ವಿವಿಧ ಮಸೂದೆಗಳಿಗೆ ಅನುಮೋದನೆ: ನಗರ ಸ್ಥಳೀಯ ಪ್ರಾಧಿಕಾರಗಳ ವ್ಯಾಪ್ತಿಯ ಎಲ್ಲ ಆಸ್ತಿಗಳನ್ನು ಆರ್ಥಿಕ ಸಂಪನ್ಮೂಲ ಜಾಲಕ್ಕೆ ಒಳಪಡಿಸುವ, ಅನಧಿಕೃತ ವಸತಿ ಪ್ರದೇಶದಲ್ಲಿರುವ ನಿವೇಶನ ಮತ್ತು ಕಟ್ಟಡಗಳು ಹಾಗೂ ಅಧಿಕೃತ ವಸತಿ ಪ್ರದೇಶಗಳ ಅನಧಿಕೃತ ಕಟ್ಟಡಗಳಿಗೆ ಆಸ್ತಿ ತೆರಿಗೆ ನಿಗದಿ ಮಾಡುವ ಉದ್ದೇಶದ ʼಕರ್ನಾಟಕ ಮುನ್ಸಿಪಾಲಿಟಿಗಳ ಮತ್ತು ಕೆಲವು ಇತರ ಕಾನೂನು ತಿದ್ದುಪಡಿ ಮಸೂದೆ-2024ʼಕ್ಕೆ ಕೂಡ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಅಂಕಿತ ಹಾಕಿದ್ದಾರೆ.

ರೇಣುಕಾ ಯಲ್ಲಮ್ಮ ದೇವಸ್ಥಾನದ ಸಮಗ್ರ ಅಭಿವೃದ್ಧಿಗಾಗಿ ಪ್ರಾಧಿಕಾರ ರಚಿಸುವ ಉದ್ದೇಶದ ಶ್ರೀರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ಮಸೂದೆ-2024ಕ್ಕೆ ಕೂಡ ರಾಜ್ಯಪಾಲರು ಗೆಹ್ಲೋಟ್ ಅನುಮೋದನೆ ನೀಡಿದ್ದಾರೆ.












Click it and Unblock the Notifications