Cigarettes: ಕರ್ನಾಟಕದಲ್ಲಿ ಸಿಗರೇಟ್ ಖರೀದಿಸುವವರ ವಯಸ್ಸಿನ ಮಿತಿ ಹೆಚ್ಚಿಸಿದ ಸರ್ಕಾರ
ಬೆಂಗಳೂರು, ಫೆಬ್ರವರಿ 22: ರಾಜ್ಯಾದ್ಯಂತ ಹುಕ್ಕಾ ಬಾರ್‌ಗಳನ್ನು ನಿಷೇಧಿಸುವ ಮಸೂದೆಯನ್ನು ಕರ್ನಾಟಕ ಸರ್ಕಾರ ಅಂಗೀಕರಿಸಿದೆ. ಈ ನಿಷೇಧವನ್ನು ಉಲ್ಲಂಘಿಸುವವರಿಗೆ ಒಂದರಿಂದ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹ 1 ಲಕ್ಷದವರೆಗೆ ದಂಡ ವಿಧಿಸುವ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ.
ಈ ಮಹತ್ವದ ನಿರ್ಧಾರದ ಜೊತೆಗೆ ರಾಜ್ಯ ಸರ್ಕಾರ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳನ್ನು ಖರೀದಿಸುವ ಕನಿಷ್ಠ ವಯಸ್ಸನ್ನು 21 ವರ್ಷಕ್ಕೆ ಏರಿಸಿದೆ. ಸದ್ಯ ಅಸ್ತಿತ್ವದಲ್ಲಿರುವ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯಿದೆ (COTPA) ಅನ್ನು ತಿದ್ದುಪಡಿ ಮಾಡಿರುವ ಸರ್ಕಾರ, ಈ ಮೂಲಕ ಸಾರ್ವಜನಿಕ ಆರೋಗ್ಯವನ್ನು ಕಾಪಾಡುವ ಮತ್ತು ತಂಬಾಕು ಸಂಬಂಧಿತ ರೋಗಗಳನ್ನು ಎದುರಿಸುವ ಗುರಿಯನ್ನು ಹೊಂದಿದೆ.

ಸರ್ಕಾರದ ಈ ಕ್ರಮವು ಹೊಗೆ ಮುಕ್ತ ಪರಿಸರವನ್ನು ಸೃಷ್ಟಿಸುವ ಮತ್ತು ತಂಬಾಕು ಸೇವನೆಯ ಹಾನಿಕಾರಕ ಪರಿಣಾಮಗಳಿಂದ ನಾಗರಿಕರನ್ನು ರಕ್ಷಿಸುವ ಬದ್ಧತೆಯಾಗಿದೆ. ಸಿಗರೇಟ್ ಖರೀದಿಸುವ ಕನಿಷ್ಠ ವಯಸ್ಸನ್ನು 21 ವರ್ಷಕ್ಕೆ ಏರಿಸಿರುವ ಸರ್ಕಾರ ಈ ಕ್ರಮ ಅಪ್ರಾಪ್ತ ವಯಸ್ಸಿನವರು ಧೂಮಪಾನಕ್ಕೆ ದಾಸರಾಗದಂತೆ ತಡೆಯಲು ಹಾಗೂ ಯುವಜನರಲ್ಲಿ ಆರೋಗ್ಯಕರ ಜೀವನ ಶೈಲಿಯನ್ನು ಉತ್ತೇಜಿಸುವ ಪ್ರಯತ್ನವಾಗಿದೆ.
ವಿಧಾನಸಭೆಯಲ್ಲಿ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ, ಉತ್ಪಾದನೆ, ಸರಬರಾಜು ಮತ್ತು ವಿತರಣೆಯ ವಿನಿಯಮನ) (ಕರ್ನಾಟಕ ತಿದ್ದುಪಡಿ) ವಿಧೇಯಕ ಅಂಗೀಕರಿಸಲಾಗಿದೆ. ಇದರೊಂದಿಗೆ ಶಿಕ್ಷಣ ಸಂಸ್ಥೆಗಳ 100 ಮೀಟರ್ ವ್ಯಾಪ್ತಿಯಲ್ಲಿ ಸಿಗರೇಟ್ ಮತ್ತು ಇತರ ತಂಬಾಕು ವಸ್ತುಗಳ ಮಾರಾಟದ ಮೇಲೆ ಸರ್ಕಾರ ಕಡ್ಡಾಯ ನಿರ್ಬಂಧ ವಿಧಿಸಿದ್ದು, ಈ ನಿಯಮ ಉಲ್ಲಂಘಿಸು ವ್ಯಾಪಾರಿಗಳಿಗೆ 1,000 ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಲಾಗಿದೆ.












Click it and Unblock the Notifications