Government Employee: ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ, ಸರ್ಕಾರಿ ನೌಕರರರಿಗೆ ಗುಡ್ ನ್ಯೂಸ್
ಬೆಂಗಳೂರು, ಡಿಸೆಂಬರ್ 25: ಕರ್ನಾಟಕ ಸರ್ಕಾರ ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಕಡ್ಡಾಯಗೊಳಿಸಿದೆ. ಈ ಪರೀಕ್ಷೆ ಉತ್ತೀರ್ಣರಾಗಲು 2024ರ ಡಿಸೆಂಬರ್ 31 ಕೊನೆಯ ದಿನ ಎಂದು ಈ ಹಿಂದಿನ ಆದೇಶದಲ್ಲಿ ಸರ್ಕಾರ ತಿಳಿಸಿದೆ. ಆದರೆ ಈಗ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಉತ್ತೀರ್ಣರಾಗಲು ಇರುವ ಗಡುವು ವಿಸ್ತರಣೆ ಮಾಡುವ ನಿರೀಕ್ಷೆ ಇದೆ. ಒಂದು ವರ್ಷ ಗಡುವು ವಿಸ್ತರಣೆ ಮಾಡಬೇಕು ಎಂದು ಸರ್ಕಾರಕ್ಕೆ ಪತ್ರವನ್ನು ಬರೆಯಲಾಗಿದೆ.
ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಇ-ಆಡಳಿತ ಕೇಂದ್ರ ಬೆಂಗಳೂರು ಈ ಕುರಿತು ಮಾನ್ಯ ಕಾರ್ಯದರ್ಶಿಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಇವರಿಗೆ ಪತ್ರವನ್ನು ಬರೆದಿದ್ದಾರೆ. ಈ ಪತ್ರವು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯ ಅವಧಿಯನ್ನು ದಿನಾಂಕ 31-12-2025ರ ವರೆಗೆ ವಿಸ್ತರಿಸುವ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ.

ಪತ್ರದ ವಿವರಗಳು: ಈ ವಿಷಯಕ್ಕೆ ಸಂಬಂಧಿಸಿದಂತೆ, ರಾಜ್ಯ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರುಗಳು ಹಾಗೂ ನಿಗಮ-ಮಂಡಳಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಹ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಸರ್ಕಾರವು ದಿನಾಂಕ 31-12-2024 ರವರೆಗೆ ಸಮಯಾವಕಾಶ ವಿಸ್ತರಿಸಿ ಅಧಿಸೂಚನೆ ಹೊರಡಿಸಿರುತ್ತದೆ ಎಂದು ಹೇಳಿದೆ.
ಸರ್ಕಾರಿ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿದ್ದು, ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗದ ನೌಕರರು ಪರಿವೀಕ್ಷಣಾ ಅವಧಿ, ಮುಂಬಡ್ತಿ ಹಾಗೂ ವಾರ್ಷಿಕ ವೇತನ ಬಡ್ತಿ ಇತ್ಯಾದಿಗಳನ್ನು ಪಡೆಯಲು ಅನರ್ಹರಾಗುತ್ತಾರೆ. ಆದುದರಿಂದ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗದೆ ಇರುವ, ಪರೀಕ್ಷೆ ತೆಗೆದುಕೊಳ್ಳದೆ ಇರುವ ಸರ್ಕಾರಿ ನೌಕರರು ಪರೀಕ್ಷೆ ತೆಗೆದುಕೊಂದು ಉತ್ತೀರ್ಣರಾಗಲು ಸೂಚಿಸಲಾಗಿರುತ್ತದೆ.
ಆದರೆ, 2024ರ ಜನವರಿಯಿಂದ ಈವರೆಗೆ ಕಿಯೋನಿಕ್ಸ್ ಸಂಸ್ಥೆಯಿಂದ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ನಡೆಸಲು ಸಾಧ್ಯವಾಗದೇ ಇದ್ದ ಕಾರಣ, ಇನ್ನೂ ಸುಮಾರು 1.40 ಲಕ್ಷಕ್ಕೂ ಹೆಚ್ಚು ಸರ್ಕಾರಿ ಅಧಿಕಾರಿಗಳು ಮತ್ತು ನೌಕರರುಗಳು ಹಾಗೂ ನಿಗಮ-ಮಂಡಳಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಹ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ತೆಗೆದುಕೊಳ್ಳಬೇಕಾಗಿರುತ್ತದೆ ಎಂದು ಪತ್ರ ಹೇಳಿದೆ.
ಈ ಅಂಶದ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ, ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ದಿನಾಂಕ 31-12-2025ರವರೆಗೆ ಅವಧಿಯನ್ನು ವಿಸ್ತರಿಸಿ ಆದೇಶ ಹೊರಡಿಸಲು ತಮ್ಮಲ್ಲಿ ಕೋರಿದೆ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.
ಸರ್ಕಾರ ದಿನಾಂಕ 31/12/2022ರೊಳಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ತೆಗೆದುಕೊಂಡು ಕಡ್ಡಾಯವಾಗಿ ಉತ್ತೀರ್ಣರಾಗಬೇಕು ಎಂದು ಆದೇಶಿಸಿತ್ತು. ಬಳಿಕ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಬೇಡಿಕೆಯಂತೆ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ದಿನಾಂಕವನ್ನು ಮುಂದೂಡಲಾಗಿತ್ತು. ಮತ್ತೊಂದು ಆದೇಶದಲ್ಲಿ 31/12/2024ರ ಅಂತಿಮ ಗಡುವು ನೀಡಿತ್ತು. ಆದರೆ ಈ ಪುನಃ 1 ವರ್ಷದ ಗಡುವು ವಿಸ್ತರಣೆಗೆ ಮನವಿ ಸಲ್ಲಿಕೆಯಾಗಿದೆ.
ರಾಜ್ಯ ಸರ್ಕಾರ ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಬಳಕೆಯ ಸಾಮಾನ್ಯ ಜ್ಞಾನವನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸಿವಿಲ್ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು 2012 ರೂಪಿಸಿದೆ. ಈ ನಿಯಮಾವಳಿಗಳ ನಿಯಮ 1(3)ರಲ್ಲಿ ನಿರ್ಧಿಷ್ಟಪಡಿಸಿರುವ ಕೆಲವೊಂದು ಹುದ್ದೆಗಳನ್ನು ಹೊರತುಪಡಿಸಿ, 50 ವರ್ಷಗಳ ವಯಸ್ಸಾಗಿರುವ ಸರ್ಕಾರಿ ನೌಕರರನ್ನು ಹೊರತುಪಡಿಸಿ ಉಳಿದ ಸರ್ಕಾರಿ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಪಾಸು ಮಾಡುವುದು ಕಡ್ಡಾಯ.
ಈ ಪರೀಕ್ಷೆಯನ್ನು ನಡೆಸಿ ಅಧಿಕಾರಿ/ ನೌಕರರಿಗೆ ಪ್ರಮಾಣ ಪತ್ರವನ್ನು ನೀಡುವ ಜವಾಬ್ದಾರಿಯನ್ನು ಕಿಯೋನಿಕ್ಸ್ ಸಂಸ್ಥೆಗೆ ನೀಡಲಾಗಿದೆ. ಆದರೆ ಸಂಸ್ಥೆಯೇ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ನಡೆಸಲು ಸಾಧ್ಯವಾಗದ ಕಾರಣ ಇನ್ನೂ ಸುಮಾರು 1.40 ಲಕ್ಷಕ್ಕೂ ಅಧಿಕ ಅಧಿಕಾರಿ/ ನೌಕರರು ಪರೀಕ್ಷೆ ಪಾಸು ಮಾಡಬೇಕಿದೆ ಎಂದು ಹೇಳಿದೆ. ಆದ್ದರಿಂದ ಸರ್ಕಾರ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಕಡ್ಡಾಯವಾಗಿ ಪಾಸು ಮಾಡುವ ಅವಧಿಯನ್ನು ವಿಸ್ತರಣೆ ಮಾಡುವುದು ಖಚಿತವಾಗಿದೆ. ಆದರೆ ಈ ಕುರಿತು ಇನ್ನೂ ಅಧಿಕೃತ ಆದೇಶ ಪ್ರಕಟವಾಗಬೇಕಿದೆ.












Click it and Unblock the Notifications