Gold: ಲಕ್ಕುಂಡಿ: ನಿಧಿ ನೀಡಿ ಪ್ರಾಮಾಣಿಕತೆ ಮೆರೆದ ರಿತ್ತಿ ಕುಟುಂಬಕ್ಕೆ 30/40 ನಿವೇಶನ ಸೇರಿ ಗುಡ್‌ನ್ಯೂಸ್
ಗದಗ: ಇಲ್ಲಿನ ಲಕ್ಕುಂಡಿ ಗ್ರಾಮದಲ್ಲಿ ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿರುವ ರಿತ್ತಿ ಕುಟುಂಬಕ್ಕೆ ಸರ್ಕಾರದಿಂದ ಭರ್ಜರಿ ಗುಡ್‌ನ್ಯೂಸ್ ಸಿಕ್ಕಿದೆ. ಪ್ರಾಮಾಣಿಕ ಬಾಲಕ ಪ್ರಜ್ವಲ್ ರಿತ್ತಿ ಅವರ ಫೋಟೊವನ್ನು ಎಲ್ಲಾ ಶಾಲೆಗಳಲ್ಲಿ ಹಾಕಿಸುವುದಕ್ಕೆ ಸ್ಥಳೀಯ ಆಡಳಿತ ನಿರ್ಧರಿಸಿದೆ. ಅಲ್ಲದೇ ನಿಧಿ ಒಪ್ಪಿಸಿದ ಕುಟುಂಬಕ್ಕೆ ನಿವೇಶನ ನೀಡಲು ಮುಂದಾಗಿದೆ. ಈ ಕುಟುಂಬಕ್ಕೆ 30/40 ನಿವೇಶನ ಸಿಗಲಿದೆ.
ಮನೆ ನಿರ್ಮಾಣಕ್ಕೆ ಪಾಯ ಅಗೆಯುವಾಗ ಸಿಕ್ಕ ಚಿನ್ನದ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿರುವ 8ನೇ ತರಗತಿ ಓದುತ್ತಿರುವ ಬಾಲಕ ಪ್ರಜ್ವಲ್ ರಿತ್ತಿ ಪ್ರಾಮಾಣಿಕತೆಗೆ ಮೆಚ್ಚಿ ಲಕ್ಕುಂಡಿ ಗ್ರಾಮ ಪಂಚಾಯಿತಿಯು ರಿತ್ತಿ ಕುಟುಂಬಕ್ಕೆ 30/40 ನಿವೇಶನ ಹಂಚಿಕೆ ಮಾಡಲು ನಿರ್ಣಯ ತೆಗೆದುಕೊಂಡಿದೆ. ಲಕ್ಕುಂಡಿಯಲ್ಲಿ ಗುರುವಾರ ನಡೆದ ವಿಶೇಷ ಗ್ರಾಮ ಸಭೆಯಲ್ಲಿ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ನಿಧಿ ಸಿಕ್ಕ ಬೆನ್ನಲ್ಲೇ ನಿಂತ ನೆಲವನ್ನೂ ಕಳೆದುಕೊಂಡು ಕಂಗಾಲಾಗಿದ್ದ ಕುಟುಂಬವು ಸರ್ಕಾರದ ಈ ನಿರ್ಧಾರದಿಂದ ತುಸು ನಿರಾಳವಾಗಿದೆ.

ಇನ್ನು ಗ್ರಾಮದ ಮಾರುತಿ ನಗರದಲ್ಲಿ ರಿತ್ತಿ ಕುಟುಂಬದವರಿಗೆ 30/40 ನಿವೇಶನ ಮಂಜೂರು ಮಾಡಲು ಹಾಗೂ ಆ ಕುಟುಂಬಕ್ಕೆ ಮನೆ ಕಟ್ಟಿಸಿಕೊಡಲು ನೆರವಾಗುವಂತೆ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ ಸಚಿವ ಎಚ್.ಕೆ ಪಾಟೀಲ್ ಅವರು ಕುಟುಂಬಕ್ಕೆ ಸರ್ಕಾರದಿಂದ ಸಲ್ಲಬೇಕಾಗಿರುವ ಎಲ್ಲಾ ಸೌಲಭ್ಯಗಳನ್ನೂ ನೀಡುವುದಾಗಿ ಹೇಳಿ ಭರವಸೆ ನೀಡಿದ್ದಾರೆ.
ವಿಶೇಷ ಗ್ರಾಮಸಭೆ ನಡೆಸುವ ಮೂಲಕ ರಿತ್ತಿ ಕುಟುಂಬಕ್ಕೆ ನಿವೇಶನ ಹಂಚಿಕೆ ಮಾಡಲು ಠರಾವು ಪಾಸು ಮಾಡಲಾಗಿದೆ. ಅನುಮತಿಗಾಗಿ ಮೇಲಾಧಿಕಾರಿಗಳಿಗೆ ಶಿಫಾರಸು ಪತ್ರ ಬರೆಯಲಾಗಿದ್ದು, ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ಗಂಗವ್ವ ರಿತ್ತಿ ಅವರಿಗೆ ನಿವೇಶನ ಹಕ್ಕುಪತ್ರ ನೀಡಲಾಗುವುದು ಎಂದು ಲಕ್ಕುಂಡಿ ಪಾರಂಪರಿಕ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ರಾಜ್ಯ ಸದಸ್ಯರಾದ ಸಿದ್ದು ಪಾಟೀಲ ಅವರು ಮಾಹಿತಿ ನೀಡಿದ್ದಾರೆ.
ಶಾಲೆಗಳಲ್ಲಿ ಪ್ರಜ್ವಲ್ ರಿತ್ತಿ ಫೋಟೋ
ಇನ್ನು ಪ್ರಜ್ವಲ್ ರಿತ್ತಿ ಅವರ ಪ್ರಾಮಾಣಿಕತೆ ಇತರರಿಗೂ ಸ್ಫೂರ್ತಿ ಆಗಬೇಕು ಎನ್ನುವ ಕಾರಣಕ್ಕೆ ಹಾಗೂ ಇವರ ಪ್ರಮಾಣಿಕತೆಯನ್ನು ಗೌರವಿಸುವ ಉದ್ದೇಶದಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲೆಗಳಲ್ಲಿ ಪ್ರಜ್ವಲ್‌ನ ಪ್ರಾಮಾಣಿಕತೆಯ ಕುರಿತಾದ ಪುಟ್ಟ ಬರಹದೊಂದಿಗೆ ಪ್ರಜ್ವಲ್ ರಿತ್ತಿ ಫೋಟೊ ಹಾಕಿಸುವ ನಿರ್ಧಾರವನ್ನೂ ಇದೇ ಸಂದರ್ಭದಲ್ಲಿ ತೆಗೆದುಕೊಳ್ಳಲಾಗಿದೆ.
ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದ ರಿತ್ತಿ ಕುಟುಂಬವು ಪ್ರಾಮಾಣಿಕತೆ ಮೆರೆದಿದೆ. ಈ ಕುಟುಂಬಕ್ಕೆ ಗೌರವ ಸಲ್ಲಿಸುವ ಉದ್ದೇಶದಿಂದ ಗುರುವಾರ / ಜನವರಿ 22ರಂದು ಗ್ರಾಮ ಪಂಚಾಯಿತಿಯಲ್ಲಿ ವಿಶೇಷ ಗ್ರಾಮ ಸಭೆ ಕರೆದಿದ್ದೆವು. ಎಲ್ಲರೂ ಒಮ್ಮತದ ನಿರ್ಣಯದೊಂದಿಗೆ ಈ ಕುಟುಂಬಕ್ಕೆ ನಿವೇಶನ ಹಂಚಿಕೆ ಮಾಡುವ ನಿರ್ಧಾರ ತೆಗೆದುಕೊಂಡಿದ್ದೇವೆ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅವರು ಸಹ ಪಂಚಾಯಿತಿ ವತಿಯಿಂದ ನಿವೇಶನ ನೀಡುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವಂತೆ ಹೇಳಿದ್ದರು ಎಂದು ಲಕ್ಕುಂಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆಂಚಪ್ಪ ಪೂಜಾರ ಅವರು ತಿಳಿಸಿದ್ದಾರೆ.
ಆರ್ಥಿಕ ಸಹಾಯ ಸಿಗುವ ನಿರೀಕ್ಷೆ
ಇನ್ನು ರಿತ್ತಿ ಕುಟುಂಬವು ಆರ್ಥಿಕವಾಗಿ ಹಿಂದುಳಿದಿದೆ. ಹೀಗಾಗಿ ರಿತ್ತಿ ಕುಟುಂಬದವರಿಗೆ ಮನೆ ಕಟ್ಟಿಕೊಳ್ಳಲು ಸರ್ಕಾರದ ಯೋಜನೆಗಳಿಂದ ಸಿಗುವ ನೆರವು ಸಾಕಾಗಲ್ಲ. ಹೀಗಾಗಿ ಅವರಿಗೆ ಕನಿಷ್ಠ 10ರಿಂದ 15 ಲಕ್ಷ ರೂಪಾಯಿ ಧನ ಸಹಾಯ ಒದಗಿಸುವಂತೆ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಲಾಗುವುದು ಎಂದು ಲಕ್ಕುಂಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆಂಚಪ್ಪ ಪೂಜಾರ ಅವರು ಹೇಳಿದ್ದಾರೆ.
ಜನವರಿ 26ಕ್ಕೆ ಇನ್ನಷ್ಟು ಸೌಲಭ್ಯ ನಿರೀಕ್ಷೆ
ಇನ್ನು ರಿತ್ತಿ ಕುಟುಂಬಕ್ಕೆ ಜನವರಿ 26ರ ಗಣರಾಜ್ಯೋತ್ಸವದಂದು ಇನ್ನಷ್ಟು ಸೌಲಭ್ಯ ಸಿಗುವ ನಿರೀಕ್ಷೆ ಇದೆ. ರಿತ್ತಿ ಕುಟುಂಬವನ್ನು ಗಣರಾಜ್ಯೋತ್ಸವದಂದು ಸನ್ಮಾನಿಸುವುದಾಗಿ ಹಾಗೂ ವಿಶೇಷ ಸೌಲಭ್ಯವನ್ನು ಅಂದೇ ಘೋಷಣೆ ಮಾಡುವುದಾಗಿ ಸಚಿವ ಎಚ್.ಕೆ ಪಾಟೀಲ್ ಅವರು ಸಹ ತಿಳಿಸಿದ್ದಾರೆ.












Click it and Unblock the Notifications