ಲಕ್ಕುಂಡಿಯಲ್ಲಿ ಬಂಗಾರದ ನಿಧಿ ಸಿಕ್ಕ ಬಳಿಕ ಹೊಸ ತಿರುವು, ಭೂಮಿ ಬೆಲೆ ದುಪ್ಪಟ್ಟು
ಗದಗ: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಪಟ್ಟಣದಲ್ಲಿ ಇತ್ತೀಚೆಗೆ ಮನೆ ನಿರ್ಮಾಣದ ವೇಳೆ ಬಂಗಾರದ ನಿಧಿ ಪತ್ತೆಯಾದ ಘಟನೆ ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಘಟನೆಯ ನಂತರ ಲಕ್ಕುಂಡಿಯ ಇತಿಹಾಸ, ಪಾರಂಪರಿಕ ಮಹತ್ವ ಹಾಗೂ ಅಭಿವೃದ್ಧಿ ಸಾಧ್ಯತೆಗಳ ಬಗ್ಗೆ ಮತ್ತೆ ಗಮನ ಸೆಳೆಯಲಾಗಿದೆ. ಇದೀಗ ಸರ್ಕಾರದ ವತಿಯಿಂದ ಲಕ್ಕುಂಡಿಯಲ್ಲಿ ಅಧಿಕೃತ ಉತ್ಖನನ ಕಾರ್ಯ ಕೂಡ ಆರಂಭಗೊಂಡಿದ್ದು, ಉತ್ಖನನದಲ್ಲಿ ಅನೇಕ ಅಮೂಲ್ಯ ಹಾಗೂ ಐತಿಹಾಸಿಕ ವಸ್ತುಗಳು ಪತ್ತೆಯಾಗುತ್ತಿವೆ. ಇದರೊಂದಿಗೆ ಇಲ್ಲಿನ ಜಮೀನಿನ ಬೆಲೆಗಳು ಕೂಡ ದುಪ್ಪಟ್ಟಾಗಿವೆ ಎಂದು ವರದಿಯಾಗಿದೆ.
ಉತ್ಖನನದ ವೇಳೆ ಪ್ರಾಚೀನ ಕಾಲಕ್ಕೆ ಸೇರಿದ ವಾಸ್ತುಶಿಲ್ಪದ ಅವಶೇಷಗಳು, ಶಿಲ್ಪಗಳು, ಮಣ್ಣಿನ ಪಾತ್ರೆಗಳು ಸೇರಿದಂತೆ ವಿವಿಧ ಐತಿಹಾಸಿಕ ಮಹತ್ವದ ವಸ್ತುಗಳು ದೊರೆತಿವೆ ಎಂದು ತಿಳಿದುಬಂದಿದೆ. ಇದರಿಂದ ಲಕ್ಕುಂಡಿಯ ಪಾರಂಪರಿಕ ಮತ್ತು ಸಾಂಸ್ಕೃತಿಕ ಮಹತ್ವ ಮತ್ತಷ್ಟು ಹೆಚ್ಚಾಗಿದೆ. ಈಗಾಗಲೇ ಚಾಲುಕ್ಯ ಕಾಲದ ದೇವಾಲಯಗಳು, ಕೆರೆಗಳು ಮತ್ತು ಶಿಲ್ಪಕಲೆಗೆ ಪ್ರಸಿದ್ಧವಾಗಿರುವ ಲಕ್ಕುಂಡಿ, ಇದೀಗ ಪುರಾತತ್ವದ ದೃಷ್ಟಿಯಿಂದಲೂ ಮತ್ತೆ ಕೇಂದ್ರಬಿಂದು ಆಗುತ್ತಿದೆ.

ಭೂಮಿಯ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ
ಈ ಬೆಳವಣಿಗೆಗಳ ಪರಿಣಾಮವಾಗಿ ಲಕ್ಕುಂಡಿ ಹಾಗೂ ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ಭೂಮಿಯ ಬೆಲೆಗಳಲ್ಲಿ ಭಾರೀ ಏರಿಕೆ ಕಂಡುಬಂದಿದೆ. ರಿಯಲ್ ಎಸ್ಟೇಟ್ ವಲಯದ ಮಾಹಿತಿಯಂತೆ, ಕಳೆದ ಎರಡು ವರ್ಷಗಳ ಹಿಂದಿನ ದರಕ್ಕೆ ಹೋಲಿಸಿದರೆ ಈಗ ಜಮೀನಿನ ಬೆಲೆಗಳು ದುಪ್ಪಟ್ಟಾಗಿವೆ. ಈ ಪ್ರದೇಶದಲ್ಲಿ ಭೂಮಿಯ ಬೆಲೆಗಳು ಇದೀಗ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿವೆ ಎಂದು ವರದಿಯಾಗಿದೆ.
'ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಪ್ರಕಾರ, 2023ರಲ್ಲಿ ಲಕ್ಕುಂಡಿಯ ಬಳಿ ಹಾಗೂ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಕೃಷಿ ಭೂಮಿಯ ಬೆಲೆ ಎಕರೆಗೆ ಸರಾಸರಿ 50 ಲಕ್ಷ ರೂಪಾಯಿ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ಬೆಲೆ ಬಹುತೇಕ ದ್ವಿಗುಣಗೊಂಡಿದ್ದು, ಕೆಲ ಕಡೆಗಳಲ್ಲಿ ಇದಕ್ಕಿಂತಲೂ ಹೆಚ್ಚಿನ ದರಕ್ಕೆ ವ್ಯವಹಾರಗಳು ನಡೆಯುತ್ತಿವೆ ಎಂಬ ಮಾಹಿತಿ ಲಭ್ಯವಾಗಿದೆ.
ರಿಯಲ್ ಎಸ್ಟೇಟ್ ಏಜೆಂಟರು ಮತ್ತು ತಜ್ಞರ ಅಭಿಪ್ರಾಯದಂತೆ, ಲಕ್ಕುಂಡಿಯ ಪಾರಂಪರಿಕ ಮೌಲ್ಯದಲ್ಲಿ ಆಗುತ್ತಿರುವ ಹೆಚ್ಚಳ, ಉತ್ಖನನದಿಂದ ಹೊರಬರುತ್ತಿರುವ ಐತಿಹಾಸಿಕ ಮಹತ್ವದ ಅಂಶಗಳು ಹಾಗೂ ರಾಷ್ಟ್ರೀಯ ಹೆದ್ದಾರಿಯ ಮೂಲಕ ಸಂಪರ್ಕ ವ್ಯವಸ್ಥೆಯಲ್ಲಿ ಕಂಡುಬಂದ ಸುಧಾರಣೆಗಳು ಈ ಪ್ರದೇಶದ ತ್ವರಿತ ಬೆಳವಣಿಗೆಗೆ ಪ್ರಮುಖ ಕಾರಣಗಳಾಗಿವೆ. ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮ, ಸಂಶೋಧನೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಹೆಚ್ಚಾಗುವ ಸಾಧ್ಯತೆ ಇದ್ದು, ಇದರೊಂದಿಗೆ ಲಕ್ಕುಂಡಿಯ ಆರ್ಥಿಕ ಮಹತ್ವವೂ ಹೆಚ್ಚಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಬಂಗಾರದ ನಿಧಿ ಪತ್ತೆಯಾದ ಘಟನೆಯಿಂದ ಆರಂಭವಾದ ಲಕ್ಕುಂಡಿಯ ಬೆಳವಣಿಗೆ, ಇದೀಗ ಪುರಾತತ್ವ ಉತ್ಖನನ, ಐತಿಹಾಸಿಕ ವಸ್ತುಗಳ ಪತ್ತೆ ಹಾಗೂ ಭೂಮಿಯ ಬೆಲೆಯಲ್ಲಿ ಉಂಟಾದ ಭಾರೀ ಏರಿಕೆಯೊಂದಿಗೆ ಹೊಸ ಹಂತ ತಲುಪಿದೆ ಎಂದು ಹೇಳಬಹುದು.
ಐತಿಹಾಸಿಕ ಪೀಠ ಪತ್ತೆ
ಲಕ್ಕುಂಡಿ ಗ್ರಾಮದಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯದಲ್ಲಿ ಅಪರೂಪದ ಐತಿಹಾಸಿಕ ಪೀಠವನ್ನು ಕಾರ್ಮಿಕರು ಹೊರತೆಗೆದಿದ್ದಾರೆ. ಈ ಪೀಠವು ಎರಡು ತುಂಡುಗಳಾಗಿ ವಿಭಜಿತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅದನ್ನು ವೈಜ್ಞಾನಿಕ ವಿಧಾನದಲ್ಲಿ ಜೋಡಿಸಿ ಮೂಲ ಸ್ವರೂಪಕ್ಕೆ ತರಲು ಯೋಜನೆ ರೂಪಿಸಲಾಗಿದೆ ಎಂದು ಉತ್ಖನನದ ಅಧಿಕಾರಿಗಳು ತಿಳಿಸಿದ್ದಾರೆ. ಈ ಪಾಣಿಪೀಠವು ಅರ್ಧಪ್ರದಕ್ಷಿಣೆ ಹಾಕುವ ವಿನ್ಯಾಸದಲ್ಲಿದ್ದು, ಚಾಲುಕ್ಯರ ಕಾಲಘಟ್ಟದ ದೇವಾಲಯ ವಾಸ್ತುಶಿಲ್ಪ ಮತ್ತು ಶಿಲ್ಪಕಲೆಯ ಉನ್ನತ ಮಟ್ಟವನ್ನು ಪ್ರತಿಬಿಂಬಿಸುತ್ತದೆ. ಶಿಲ್ಪದ ಅಳತೆ, ವಿನ್ಯಾಸ, ಕೆತ್ತನೆಯ ಶೈಲಿ ಮತ್ತು ರಚನಾತ್ಮಕ ಅಂಶಗಳನ್ನು ಆಧರಿಸಿ, ಇದು ಶೈವ ಪರಂಪರೆಯ ಪೂಜಾ ವ್ಯವಸ್ಥೆಗೆ ಸಂಬಂಧಿಸಿದೆ ಎಂದು ಅಂದಾಜಿಸಲಾಗಿದೆ. ಶಿವಲಿಂಗ ಪ್ರತಿಷ್ಠಾಪನೆ ಹಾಗೂ ದೇವಾಲಯದ ಒಳಾಂಗಣ ಪೂಜಾ ಕ್ರಮದಲ್ಲಿ ಈ ಪೀಠ ಬಳಸಲಾಗುತ್ತಿತ್ತು ಎಂದು ಪುರಾತತ್ವ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಉತ್ಖನನ ಪ್ರದೇಶದಲ್ಲಿ ಕಾರ್ಯಾಚರಣೆ ಮುಂದುವರೆದಿದ್ದು, ಇನ್ನಷ್ಟು ಪುರಾತನ ಅವಶೇಷಗಳು, ಶಿಲ್ಪಗಳು ಹಾಗೂ ವಾಸ್ತುಘಟಕಗಳು ಸಿಗುವ ನಿರೀಕ್ಷೆಯಿದೆ. ಪತ್ತೆಯಾದ ಪೀಠವನ್ನು ಹಾನಿಯಾಗದಂತೆ ಸಂರಕ್ಷಿಸುವುದು, ವೈಜ್ಞಾನಿಕವಾಗಿ ಪುನರ್‌ಜೋಡಣೆ ಮಾಡುವುದು ಮತ್ತು ಮುಂದಿನ ದಿನಗಳಲ್ಲಿ ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ. ಈ ಉತ್ಖನನ ಕಾರ್ಯವು ಲಕ್ಕುಂಡಿಯ ಇತಿಹಾಸವನ್ನು ಇನ್ನಷ್ಟು ಆಳವಾಗಿ ಅರ್ಥಮಾಡಿಕೊಳ್ಳಲು ಸಹಕಾರಿಯಾಗಲಿದೆ. ಜೊತೆಗೆ, ಪ್ರವಾಸೋದ್ಯಮ ಹಾಗೂ ಸಂಶೋಧನಾ ಕ್ಷೇತ್ರಕ್ಕೂ ಹೊಸ ಉತ್ತೇಜನ ದೊರೆಯಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.












Click it and Unblock the Notifications