Gold: ಗದಗ - ಲಕ್ಕುಂಡಿಯಲ್ಲಿ ಇನ್ನಷ್ಟು ನಿಧಿಗೆ ಶೋಧ: 101 ಬಾವಿ - ದೇವಾಲಯಗಳ ಅನಾವರಣಕ್ಕೆ ಸ್ಯಾಟಲೈಟ್ ತಂತ್ರಜ್ಞಾನ ಬಳಕೆ
Gold: ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಈಚೆಗೆ ಅಪಾರ ಪ್ರಮಾಣದ ನಿಧಿ ಸಿಕ್ಕಿತ್ತು. ಈ ಭಾಗದಲ್ಲಿ ಸಿಕ್ಕಿದ್ದ 664 ಗ್ರಾಂ ಚಿನ್ನದ ನಿಧಿಯನ್ನು ಪ್ರಜ್ವಲ್ ರಿತ್ತಿ ಕುಟುಂಬವು ಸರ್ಕಾರಕ್ಕೆ ನೀಡಿ ಪ್ರಮಾಣಿಕತೆ ಮೆರೆದಿತ್ತು. ಈ ಭಾಗದಲ್ಲಿ ನಿಧಿ ಸಿಕ್ಕ ಮೇಲೆ ಇನ್ನಷ್ಟು ಪ್ರದೇಶಗಳಲ್ಲಿ ನಿಧಿ ಅಥವಾ ಪುರಾತನ ವಸ್ತುಗಳ ಪರಿಶೋಧನೆಗೆ ಸರ್ಕಾರ ಮುಂದಾಗಿದೆ. ಎನ್.ಐ.ಎ.ಎಸ್. ಸಂಸ್ಥೆ ಸಹಕಾರದೊಂದಿಗೆ ಲಕ್ಕುಂಡಿಯ ನೂರೊಂದು ಬಾವಿ ದೇವಾಲಯಗಳನ್ನು ಅನಾವರಣ ಮಾಡುವುದಾಗಿ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅವರು ತಿಳಿಸಿದ್ದಾರೆ. ಐತಿಹಾಸಿಕ ಲಕ್ಕುಂಡಿಯಲ್ಲಿರುವ ನೂರೊಂದು ಬಾವಿ ನೂರೊಂದು ದೇವಾಲಯಗಳನ್ನು ಶೀಘ್ರದಲ್ಲಿಯೇ ಸ್ಯಾಟಲೈಟ್ ಇಮೇಜಿಂಗ್ ಟೆಕ್ನಾಲಜಿಯ ಮೂಲಕ NIAS ಸಂಸ್ಥೆ (ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆ) ಸಹಕಾರದೊಂದಿಗೆ ಪತ್ತೆ ಹಚ್ಚಿ ದೇಶಕ್ಕೆ ಅನಾವರಣ ಮಾಡುವುದಾಗಿ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಅವರು ತಿಳಿಸಿದ್ದಾರೆ. ಬೆಂಗಳೂರಿನ ವಿಧಾನಸೌಧದಲ್ಲಿ ಲಕ್ಕುಂಡಿಯಲ್ಲಿರುವ ನೂರೊಂದು ಬಾವಿ ನೂರೊಂದು ದೇವಾಲಯಗಳನ್ನು ಹೊರತರುವ ಸಲುವಾಗಿ NIAS ಸಂಸ್ಥೆ ವಿಜ್ಞಾನಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡುತ್ತಾ ಈಗಾಗಲೇ 2023 ರಿಂದ ಲಕ್ಕುಂಡಿಯಲ್ಲಿ 32 ದೇವಾಲಯಗಳು, 28 ಬಾವಿಗಳು ಹಾಗೂ 7 ಇತರೆ ಸ್ಮಾರಕಗಳನ್ನು ಒಳಗೊಂಡಂತೆ ಒಟ್ಟು 70ಕ್ಕೂ ಹೆಚ್ಚು ಸ್ಮಾರಕಗಳನ್ನು ಗುರುತಿಸಲಾಗಿದೆ. ಮುಂಬರುವ ಡಿಸೆಂಬರ್-31 ರೊಳಗೆ ಲಕ್ಕುಂಡಿಯಲ್ಲಿ 101 ಬಾವಿ 101 ದೇವಾಲಯಗಳನ್ನು NIAS ಸಂಸ್ಥೆ ಹಾಗೂ ಸ್ಥಳೀಯರ ಸಹಭಾಗಿತ್ವದೊಂದಿಗೆ ಅನಾವರಣಗೊಳಿಸಲು ಅಗತ್ಯ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು ಎಂದರು.
ಲಕ್ಕುಂಡಿ: ಯುನೆಸ್ಕೋ ಪಟ್ಟಿಗೆ ಸೇರಿಸಲು ಸಿದ್ಧತೆ
ಲಕ್ಕುಂಡಿಯನ್ನು ವಿಶ್ವಪಾರಂಪರಿಕ ತಾಣಗಳ ಪಟ್ಟಿಗೆ (ಯುನೆಸ್ಕೋ) ಸೇರಿಸಲು ಪ್ರಸ್ತಾವನೆ ಸಿದ್ಧಪಡಿಸುವ ಕಾರ್ಯ ಪ್ರಗತಿಯಲ್ಲಿದ್ದು ಯುನೆಸ್ಕೋ ಪಟ್ಟಿಗೆ ಸೇರಿಸಲು ನವಂಬರ್-2024 ರಲ್ಲಿ ಪ್ರಾಚ್ಯಾವಶೇಷಗಳ ಅನ್ವೇಷಣೆ ಭಾಗ-1ನ್ನು ನಡೆಸಿ 1500ಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳನ್ನು ಅನ್ವೇಷಿಸಲಾಗಿದೆ. ಜೊತೆಗೆ 2026 ರ ಮೇ-02 ರಿಂದ ಪ್ರಾಚ್ಯಾವಶೇಷಗಳ ಅನ್ವೇಷಣೆ ಭಾಗ-2 ನ್ನು ನಡೆಸುತ್ತಿದ್ದು, ಈಗಾಗಲೇ ಎರಡನೇ ಹಂತದಲ್ಲಿ 1800 ಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳು ದೊರೆತಿವೆ. ಮೊದಲ ಹಂತ ಮತ್ತು ಎರಡನೇ ಹಂತದ ಪ್ರಾಚ್ಯಾವಶೇಷಗಳನ್ನು ಸೇರಿಸಿ ಜೂನ್-30ರ ಒಳಗಾಗಿ ದಾಖಲೆಯ ರೀತಿಯ 5000ಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳನ್ನು ಅನ್ವೇಷಿಸಿ ಅವುಗಳನ್ನು ಬಯಲು ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶಿಸಲು ಸಹ ಕ್ರಮ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ.

ಲಕ್ಕುಂಡಿಯಲ್ಲಿರುವ ದೇವಸ್ಥಾನಗಳಿಗೆ ಹೊಸ ರೂಪ ನೀಡಲು ಈಗಾಗಲೇ ಫೆಬ್ರವರಿ ತಿಂಗಳಿನಲ್ಲಿ ಪಂಚ ದೇವಾಲಯ ಮತ್ತು ಪಂಚ ಬಾವಿಗಳ ಅನಾವರಣ ಕೈಗೊಂಡಿದ್ದು, ಮೇ-2 ರಿಂದ ದಶ ಬಾವಿ ದಶ ದೇವಾಲಯಗಳ ಅನಾವರಣ ಕಾರ್ಯವೂ ಸಹ ನಡೆಯುತ್ತಿದ್ದು 10 ಕೋಟಿ ವೆಚ್ಚದಲ್ಲಿ 6 ಸ್ಮಾರಕಗಳನ್ನು ಸಂಪೂರ್ಣವಾಗಿ ಸಂರಕ್ಷಣೆ ಮಾಡಿ ಅಭಿವೃದ್ಧಿಗೊಳಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ. 2026-27 ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ 10ಕ್ಕಿಂತ ಹೆಚ್ಚು ಸ್ಮಾರಕಗಳನ್ನು ಸಂರಕ್ಷಣೆ ಮಾಡಿ ಅಭಿವೃದ್ಧಿಗೊಳಿಸಲಾಗುವುದು. ಒಟ್ಟಾರೆಯಾಗಿ ಲಕ್ಕುಂಡಿಯನ್ನು ವಿಶ್ವಮಟ್ಟದಲ್ಲಿ ಗುರುತಿಸುವ ಕಾರ್ಯಕ್ಕೆ (ಯುನೆಸ್ಕೋ ಪಟ್ಟಿಗೆ ಸೇರಿಸಲು) ಮತ್ತಷ್ಟು ಉಪಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಸಭೆಯಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಡಾ: ಕಿರಣ ಕುಮಾರ್ ಅವರು ಮಾತನಾಡಿ, ಲಕ್ಕುಂಡಿ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೆರ್ಪಡೆಯಾಗುವುದು ಅಗತ್ಯವಾಗಿದೆ. ಆ ದಿಸೆಯಲಿ ಪ್ರಯತ್ನ ಸ್ವಾಗತಾರ್ಹ. ಸ್ಯಾಟಲೈಟ್ ತಂತ್ರಜ್ಞಾನ ಬಳಸಿ ಲಕ್ಕುಂಡಿಯಲ್ಲಿರುವ 101 ಭಾವಿ ಹಾಗೂ 101 ದೇವಾಲಯಗಳನ್ನು ಅನಾವರಣಗೊಳಿಸುವ ಪ್ರಯತ್ನಕ್ಕೆ ಕೈಜೊಡಿಸುವುದಾಗಿ ಇಸ್ರೋದ ಮಾಜಿ ಅಧ್ಯಕ್ಷರು ತಿಳಿಸಿದರು.
ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸಲಹಾ ಸಮಿತಿ ಸದಸ್ಯ ಸಿದ್ದಲಿಂಗೇಶ್ವರ ಪಾಟೀಲ ಮಾತನಾಡಿ, ಲಕ್ಕುಂಡಿ ಯುನೆಸ್ಕೋ ಪಟ್ಟಿಗೆ ಸೇರಿಸಲು ಪ್ರವಾಸೋದ್ಯಮ ಸಚಿವರಾದ ಎಚ್.ಕೆ.ಪಾಟೀಲ ರವರು ಕೈಗೊಂಡಿರುವ ಎಲ್ಲಾ ಕಾರ್ಯಗಳಿಗೆ ಸ್ಥಳೀಯರ ಸಂಪೂರ್ಣ ಸಹಕಾರವಿದೆ ಎಂದರು.
ಸಭೆಯಲ್ಲಿ 2023 ರಿಂದ ಇಲ್ಲಿಯವರೆಗೆ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯಚಟುವಟಿಕೆಗಳ ಕುರಿತು ಪ್ರಾಧಿಕಾರದ ಆಯುಕ್ತ ಡಾ: ಶರಣು ಗೋಗೇರಿ ಪ್ರಾತ್ಯಕ್ಷಿಕೆ ಪ್ರಸ್ತುತಪಡಿಸಿದರು. 101 ಬಾವಿ 101 ದೇವಾಲಯಗಳನ್ನು ಪತ್ತೆಹಚ್ಚುವಲ್ಲಿ ಸ್ಯಾಟಲೈಟ್ ತಂತ್ರಜ್ಞಾನದ ಬಳಕೆ ಕುರಿತು NIAS ಸಂಸ್ಥೆಯ ಪ್ರೊಫೆಸರ್ ಎಂ.ಬಿ. ರಜನಿ ಪ್ರಾತ್ಯಕ್ಷಿಕೆ ನೀಡಿದರು.













Click it and Unblock the Notifications