ಐಐಟಿ ಹರಪನಹಳ್ಳಿಗೆ ಸಿಗಲಿ: ಸ್ಮೃತಿಗೆ ಸಿದ್ದೇಶ್ವರ್ ಪತ್ರ
ದಾವಣಗೆರೆ, ಮಾ.16: ಕರ್ನಾಟಕದಲ್ಲಿ ಐಐಟಿ ಸ್ಥಾಪನೆ ಮಾಡಲು ಯಾವುದು ಸೂಕ್ತ ಸ್ಥಳ ಎಂಬ ಚರ್ಚೆ ದಿನೇ ದಿನೇ ತಾರಕಕ್ಕೇರುತ್ತಿದೆ. ಯಾರು ಹೆಚ್ಚು ಲಾಬಿ ಮಾಡುತ್ತಾರೋ ಅವರ ಊರಿಗೆ ಐಐಟಿ ಹೋಗುತ್ತದೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಈಗ ಕೇಂದ್ರ ಭಾರಿ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ರಾಜ್ಯ ಸಚಿವ ಜಿ.ಎಂ. ಸಿದ್ದೇಶ್ವರ ಅವರ ಸರದಿ.
ದಾವಣಗೆರೆ ಜಿಲ್ಲೆಯಲ್ಲಿ ಐಐಟಿ ಕೇಂದ್ರ ತೆರೆಯುವಂತೆ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರನ್ನು ಇತ್ತೀಚೆಗೆ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ದಾವಣಗೆರೆ ಕರ್ನಾಟಕದ ಮಧ್ಯಭಾಗದಲ್ಲಿದ್ದು ಶೈಕ್ಷಣಿಕವಾಗಿ ವಿಶ್ವಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. [ಜಿಎಂ ಸಿದ್ದೇಶ್ ಪರಿಚಯ]
ರಾಷ್ಟ್ರೀಯ ಹೆದ್ದಾರಿ 4 ಮತ್ತು 13 ಜಿಲ್ಲೆಯ ಮುಖಾಂತರವೇ ಹಾದು ಹೋಗಿರುವುದರಿಂದ ಮೂಲ ಸೌಕರ್ಯ ಕೊರತೆ ಪ್ರಶ್ನೆಯೇ ಇಲ್ಲ ಎಂದು ತಮ್ಮ ವಾದ ಮಂಡಿಸಿದ್ದಾರೆ.[ಧಾರವಾಡದಲ್ಲಿ ಐಐಟಿಗೆ 500 ಎಕರೆ: ಗುಂಡೂರಾವ್]
ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಐಐಟಿ ಮಂಜೂರು ಮಾಡಿದ ಮೇಲೆ ಧಾರವಾಡ, ಬೆಂಗಳೂರು, ರಾಯಚೂರು ಮತ್ತು ಹಾಸನ ಜಿಲ್ಲೆಗಳ ಪೈಕಿ ಒಂದು ಸ್ಥಳ ಆಯ್ಕೆ ಮಾಡುವ ಅವಕಾಶ ಕರ್ನಾಟಕ ಸರ್ಕಾರಕ್ಕೆ ನೀಡಲಾಗಿದೆ. ಐಐಟಿ ಸ್ಥಾಪನೆಗೆ ಧಾರವಾಡವೇ ಸೂಕ್ತ ಸ್ಥಳವಾಗಿದ್ದು, ಐಐಟಿ ತೆರೆಯಲು ಮುಮ್ಮಿಗಟ್ಟಿ ಬಳಿ 500 ಎಕರೆ ಸ್ಥಳ ಕಾಯ್ದಿರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ದಾವಣಗೆರೆ ಜಿಲ್ಲೆ ಬಗ್ಗೆ ಸಿದ್ದೇಶ್ವರ ಅವರ ವಾದ
* ಒಂದು ವಿಶ್ವವಿದ್ಯಾನಿಲಯ, ಎರಡು ಮೆಡಿಕಲ್ ಕಾಲೇಜು, 2 ಡೆಂಟಲ್ ಕಾಲೇಜು, 4 ಇಂಜಿನಿಯರಿಂಗ್, 1 ಆಯುರ್ವೇದಿಕ್ ಮೆಡಿಕಲ್ ಕಾಲೇಜ್, ನೂರಕ್ಕೂ ಹೆಚ್ಚು ಪದವಿ ಕಾಲೇಜುಗಳನ್ನು ಒಳಗೊಂಡಂತೆ ಶೈಕ್ಷಣಿಕವಾಗಿ ಜಿಲ್ಲೆ ಸಾಕಷ್ಟು ಹೆಸರು ಮಾಡಿದೆ.
* ರಾಷ್ಟ್ರೀಯ ಹೆದ್ದಾರಿ 4 ಮತ್ತು 13 ಜಿಲ್ಲೆಯ ಮುಖಾಂತರವೇ ಹಾದು ಹೋಗಿರುವುದರಿಂದ ಉತ್ತಮ ಸಾರಿಗೆ ವ್ಯವಸ್ಥೆ, ಉತ್ತಮ ರೈಲ್ವೆ ಸಂಪರ್ಕವನ್ನೂ ಜಿಲ್ಲೆ ಹೊಂದಿದೆ.

ಡಾ. ನಂಜುಂಡಪ್ಪ ವರದಿ ಅನ್ವಯ
* ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕು ಡಾ. ನಂಜುಂಡಪ್ಪ ವರದಿ ಅನ್ವಯ ಅತ್ಯಂತ ಹಿಂದುಳಿದ ಪ್ರದೇಶವಾಗಿದೆ.
* ದಾವಣಗೆರೆ ಜಿಲ್ಲೆಯಲ್ಲಿ ಐಐಟಿ ಕೇಂದ್ರ ತೆರೆದರೆ, ಪ್ರಾದೇಶಿಕ ಅಸಮಾನತೆ ಹೋಗಲಾಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಂತಾಗುತ್ತದೆ

ಹರಪನಹಳ್ಳಿಯಲ್ಲಿ ಸಾಕಷ್ಟು ಸರ್ಕಾರಿ ಜಮೀನಿದೆ
ದಾವಣಗೆರೆಯಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಹರಪನಹಳ್ಳಿ ತಾಲ್ಲೂಕಿನ ಮಾಚೀಹಳ್ಳಿಯಲ್ಲಿ 2748 ಹೆಕ್ಟೇರ್, ಅನಂತನಹಳ್ಳಿಯಲ್ಲಿ 573 ಹೆಕ್ಟೇರ್, ಮಲ್ಲೇಕಟ್ಟೆಯಲ್ಲಿ 642 ಹೆಕ್ಟೇರ್ ಸರ್ಕಾರಿ ಜಮೀನು ಲಭ್ಯವಿದ್ದು, ಇವುಗಳಲ್ಲಿ ಯಾವುದಾದರೊಂದು ಸ್ಥಳವನ್ನು ಐಐಟಿ ಕೇಂದ್ರಕ್ಕೆ ಬಳಸಿಕೊಳ್ಳಬಹುದಾಗಿದೆ.
ಸರ್ಕಾರಿ ಜಮೀನು ಆಗಿರುವುದರಿಂದ ರೈತರಿಂದಲೂ ಸಹ ಯಾವುದೇ ಪ್ರತಿರೋಧವಿರುವುದಿಲ್ಲ ಎಂದು ಮನವಿ ಪತ್ರದಲ್ಲಿ ವಿವರಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹರಪನಹಳ್ಳಿ ತಾಲ್ಲೂಕಿನಲ್ಲಿ ಐಐಟಿ ಕೇಂದ್ರ ತೆರೆಯಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಕೇಂದ್ರ ಸಚಿವ ಜಿ.ಎಂ. ಸಿದ್ದೇಶ್ವರ ಒತ್ತಾಯಿಸಿದ್ದಾರೆ.

ಕುತೂಹಲ ಇನ್ನೂ ಮುಂದುವರೆದಿದೆ
ಈ ನಡುವೆ ಬೆಳಗಾವಿಯಲ್ಲಿ ಐಐಟಿ ಸ್ಥಾಪಿಸುವಂತೆ ಸಂಸದ ಸುರೇಶ್ ಅಂಗಡಿ, ಹೊಳೆನರಸೀಪುರದಲ್ಲಿ ಸ್ಥಾಪಿಸಿ ಎಂದು ಮಾಜಿ ಪ್ರಧಾನಿ ದೇವೇಗೌಡ ಅವರು ಸೇರಿದಂತೆ ಎಲ್ಲರೂ ನಮ್ಮೂರಿಗೆ ಐಐಟಿ ಕೊಡಿ ಎಂದು ಲಾಬಿ ನಡೆಸಲು ಶುರು ಮಾಡಿದ್ದಾರೆ. ಬೆಂಗಳೂರು, ಧಾರವಾಡ, ಹಾಸನ, ರಾಯಚೂರು ಅಲ್ಲದೆ ಇನ್ನೂ ಅನೇಕ ಕರ್ನಾಟಕದ ಜಿಲ್ಲೆಗಳು ಊರುಗಳ ಹೆಸರು ಇಂಟರ್ನೆಟ್ ನಲ್ಲೂ ಚರ್ಚೆಗೊಳಲಾಗುತ್ತಿದೆ.












Click it and Unblock the Notifications