ಧಾರವಾಡದಲ್ಲಿ ಐಐಟಿಗೆ 500 ಎಕರೆ: ಗುಂಡೂರಾವ್
ಧಾರವಾಡ,ಮಾ.9: ಕರ್ನಾಟಕದಲ್ಲಿ ಐಐಟಿ ಸ್ಥಾಪನೆ ಮಾಡಲು ಯಾವ ಸ್ಥಳ ಸೂಕ್ತ? ಯಾವ ಜಿಲ್ಲೆಗೆ ಐಐಟಿ ಹೋಗಬೇಕು? ಎಂದು ಒನ್ ಇಂಡಿಯಾ ಕೇಳಿದ ಪ್ರಶ್ನೆಗೆ ಜನರು ನೀಡಿದ ಅಭಿಮತವನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಅನುಮೋದಿಸಿದ್ದಾರೆ. ಬಿಜೆಪಿ ಪಕ್ಷದ ಸ್ಥಳೀಯ ಮುಖಂಡರ ಲಾಬಿಗೂ ಹೆಚ್ಚಾಗಿರುವುದರಿಂದ ಧಾರವಾಡಕ್ಕೆ ಈ ಬಂಪರ್ ಕೊಡುಗೆ ಒಲಿದರೆ ಅಚ್ಚರಿ ಪಡಬೇಕಾಗಿಲ್ಲ.
ಸರ್ಕಾರ ಸೂಚಿಸಿದ ಧಾರವಾಡ, ಬೆಂಗಳೂರು, ರಾಯಚೂರು ಮತ್ತು ಹಾಸನ ಜಿಲ್ಲೆಗಳ ಪೈಕಿ ಒಂದು ಸ್ಥಳ ಆಯ್ಕೆ ಕರ್ನಾಟಕ ಸರ್ಕಾರಕ್ಕೂ ತಲೆನೋವಾಗಿದೆ. ಈ ವಿಷಯದಲ್ಲಿ ಯಾರು ಹೆಚ್ಚು ಲಾಬಿ ಮಾಡುತ್ತಾರೋ ಅವರ ಜಿಲ್ಲೆಗೆ ಐಐಟಿ ಹೋಗುತ್ತದೆ ಎಂಬುದು ಬಹಿರಂಗ ಸತ್ಯ. [ಅಸಲಿಗೆ, ಕರ್ನಾಟಕಕ್ಕೆ ಐಐಟಿ ಅಗತ್ಯವಿದೆಯಾ?]
ಧಾರವಾಡ ಪರ ಲಾಬಿ ಜೋರು: ಐಐಟಿ ಸ್ಥಾಪನೆಗೆ ಧಾರವಾಡವೇ ಸೂಕ್ತ ಸ್ಥಳವಾಗಿದ್ದು, ಐಐಟಿ ತೆರೆಯಲು ಮುಮ್ಮಿಗಟ್ಟಿ ಬಳಿ 500 ಎಕರೆ ಸ್ಥಳ ಕಾಯ್ದಿರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. [ಐಐಟಿ ಎಲ್ಲಿ ಸ್ಥಾಪನೆ ಆಗಬೇಕು? ಸಮೀಕ್ಷೆ ಫಲಿತಾಂಶ!]
ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್, ಸರ್ಕಾರ ಇಲ್ಲಿ ಐಐಟಿ ಸ್ಥಾಪಿಸಲು ಮುಂದಾದರೆ ಸೂಕ್ತ ಸ್ಥಳ ನೀಡಲು ಜಿಲ್ಲಾಡಳಿತ ಸಜ್ಜಾಗಿದೆ. ಜೊತೆಗೆ ಇಲ್ಲಿ ಮೂಲ ಸೌಕರ್ಯಗಳಾದ ನೀರು, ರಸ್ತೆ, ಉತ್ತಮ ವಾತಾವಾರಣವಿದೆ. ಹಿಂದಿನಿಂದಲೂ ಧಾರವಾಡ ಉತ್ತಮ ಶೈಕ್ಷಣಿಕ ಜಿಲ್ಲೆಯಾಗಿ ಹೆಸರುವಾಸಿಯಾಗಿದೆ ಎಂದರು. ಸಚಿವ ದಿನೇಶ್ ಗುಂಡೂರಾವ್, ಪ್ರಹ್ಲಾದ್ ಜೋಶಿ ಹಾಗೂ ಜಗದೀಶ್ ಶೆಟ್ಟರ್ ಅವರ ಅಭಿಪ್ರಾಯ ಮುಂದೆ ಓದಿ...

ಅಧಿಕಾರಿಗಳ ಜೊತೆ ಚರ್ಚೆ ಆರಂಭಿಸಿರುವ ದಿನೇಶ್
ಧಾರವಾಡದಲ್ಲೇ ಐಐಟಿ ನಿರ್ಮಾಣ ಕುರಿತಂತೆ ಶೀಘ್ರವೇ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ದಿನೇಶ್ ಹೇಳಿದ್ದಾರೆ. ಅಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ದಿನೇಶ್ ಗುಂಡೂರಾವ್ ಅವರ ಜೊತೆಗೆ ಶಾಸಕ ಅಬ್ಬಯ್ಯ ಪ್ರಸಾಸ್, ಶ್ರೀನಿವಾಸ್ ಮಾನೆ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಚೋಳನ್ ಮುಂತಾದವರು ಈ ಬಗ್ಗೆ ಚರ್ಚೆ ನಡೆಸಿದ್ದಾರೆ.

ಪ್ರಹ್ಲಾದ್ ಜೋಶಿ ಮಂಡಿಸಿದ ವಾದ ಏನು?
ಬಿಜೆಪಿ ಮುಖಂಡರ ಬೆಂಬಲ: ಸ್ಥಳೀಯ ಬಿಜೆಪಿ ಮುಖಂಡರಾದ ಪ್ರಹ್ಲಾದ್ ಜೋಶಿ ಹಾಗೂ ಜಗದೀಶ್ ಶೆಟ್ಟರ್ ಅವರು ಕೂಡಾ ಧಾರವಾಡ ಪರ ಬ್ಯಾಟಿಂಗ್ ಆರಂಭಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರು ಮಾತನಾಡಿ ಪ್ರೊ. ಯುಆರ್ ರಾವ್ ಸಮಿತಿ ಈ ಹಿಂದೆ ಸಲ್ಲಿಸಿದ್ದ ವರದಿಯಂತೆ ಐಐಟಿ ಸ್ಥಾಪನೆಗೆ ಧಾರವಾಡವೇ ಸೂಕ್ತ. ಒಂದಕ್ಕಿಂತ ಹೆಚ್ಚು ಜಿಲ್ಲೆಗಳ ಹೆಸರನ್ನು ಆಯ್ಕೆಗೆ ಪರಿಗಣಿಸಿದರೆ ಐಐಟಿ ಸ್ಥಾಪನೆ ಪ್ರಕ್ರಿಯೆ ಅನಗತ್ಯ ವಿಳಂಬವಾಗಲಿದೆ ಈ ಬಗ್ಗೆ ಸಿದ್ದರಾಮಯ್ಯ ಸರ್ಕಾರ ಗಮನ ಹರಿಸಬೇಕಿದೆ ಎಂದಿದ್ದಾರೆ.

ಜಗದೀಶ್ ಶೆಟ್ಟರ್ ಇನ್ನೂ ನಿರ್ಣಯ ಮಂಡಿಸಿಲ್ಲ
ಐಐಟಿ ಸ್ಥಾಪನೆಗೆ ಧಾರವಾಡವೇ ಸೂಕ್ತ ಆದರೆ, ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಜಿಲ್ಲೆಗಳ ಪಟ್ಟಿಯಲ್ಲಿರುವ ರಾಯಚೂರಿನಲ್ಲಿ ಐಐಟಿಯಂಥ ಸಂಸ್ಥೆ ಸ್ಥಾಪನೆಯಾದರೆ ಶೈಕ್ಷಣಿಕ ಅಭಿವೃದ್ಧಿ ಸಾಧ್ಯ ಎಂದು ಪ್ರೊ ನಂಜುಂಡಪ್ಪ ವರದಿ ಹೇಳುತ್ತದೆ. ಈ ಬಗ್ಗೆ ಇನ್ನೂ ವಿಸ್ತೃತ ಚರ್ಚೆ ಅಗತ್ಯ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಬೆಂಗಳೂರು ಬೇಡವೇ ಬೇಡ ಎಂದ ಜನರು
ಒನ್ ಇಂಡಿಯಾ ನಡೆಸಿದ ಸಮೀಕ್ಷೆ ಸೇರಿದಂತೆ ಎಲ್ಲೆಡೆ ಬೆಂಗಳೂರಿಗೆ ಐಐಟಿ ಬೇಡ ಎಂಬ ಅಭಿಪ್ರಾಯ ಬಂದಿದೆ. ಈ ನಡುವೆ ಬೆಳಗಾವಿಯಲ್ಲಿ ಐಐಟಿ ಸ್ಥಾಪಿಸುವಂತೆ ಸಂಸದ ಸುರೇಶ್ ಅಂಗಡಿ, ಹೊಳೆನರಸೀಪುರದಲ್ಲಿ ಸ್ಥಾಪಿಸಿ ಎಂದು ಮಾಜಿ ಪ್ರಧಾನಿ ದೇವೇಗೌಡ ಅವರು ಸೇರಿದಂತೆ ಎಲ್ಲರೂ ನಮ್ಮೂರಿಗೆ ಐಐಟಿ ಕೊಡಿ ಎಂದು ಲಾಬಿ ನಡೆಸಲು ಶುರು ಮಾಡಿದ್ದಾರೆ. ಬೆಂಗಳೂರು, ಧಾರವಾಡ, ಹಾಸನ, ರಾಯಚೂರು ಅಲ್ಲದೆ ಇನ್ನೂ ಅನೇಕ ಕರ್ನಾಟಕದ ಜಿಲ್ಲೆಗಳು ಊರುಗಳ ಹೆಸರು ಇಂಟರ್ನೆಟ್ ನಲ್ಲೂ ಚರ್ಚೆಗೊಳಲಾಗುತ್ತಿದೆ.












Click it and Unblock the Notifications