ಬೆಂಗಳೂರು: ಬೆಳಗ್ಗೆಯಿಂದಲೇ ಜಿಟಿಜಿಟಿ ಮಳೆ, ವಾಹನ ಸವಾರರ ಪರದಾಟ
ಬೆಂಗಳೂರು: ನಗರದ ಹಲವೆಡೆ ಶನಿವಾರ ಮುಂಜಾನೆಯಿಂದಲೇ ವರುಣ ದೇವ ಕೃಪೆ ತೋರಿದ್ದಾನೆ. ನಗರದ ಹಲವು ಭಾಗಗಳಲ್ಲಿ ಬೆಳಗಿನ ಜಾವದಿಂದಲೇ ಜಿಟಿ ಜಿಟಿ ಮಳೆಯಾಗುತ್ತಿದ್ದು, ಕಳೆದ ಹಲವು ದಿನಗಳಿಂದ ಬಿಸಿಲು ಹಾಗೂ ಸೆಖೆಯಿಂದ ಬಳಲುತ್ತಿದ್ದ ರಾಜಧಾನಿಯ ಜನರಿಗೆ ತಂಪಾದ ವಾತಾವರಣ ಹಿತವಾದ ಅನುಭವ ನೀಡಿದೆ.
ಸಾಮಾನ್ಯವಾಗಿ ಶನಿವಾರ ಮತ್ತು ಭಾನುವಾರ ಬಂತೆಂದರೆ ಬೆಂಗಳೂರಿಗರು ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಮಾಲ್, ಪಾರ್ಕ್ ಅಥವಾ ನಂದಿಬೆಟ್ಟದಂತಹ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಪ್ಲಾನ್ ಮಾಡಿಕೊಳ್ಳುತ್ತಾರೆ. ಆದರೆ, ಇಂದು ಮುಂಜಾನೆಯಿಂದಲೇ ಶುರುವಾದ ಜಿಟಿ ಜಿಟಿ ಮಳೆಯಿಂದಾಗಿ ವಾರಾಂತ್ಯದ ರಜೆಯನ್ನು ಎಂಜಾಯ್ ಮಾಡಲು ಹೊರಹೋಗುವ ಪ್ಲಾನ್ ಹಾಕಿಕೊಂಡಿದ್ದವರ ಮೂಡ್ ಕೊಂಚ ಹಾಳಾಗಿದೆ. ಆದರೂ, ಸುಡುವ ಧಗೆಯಿಂದ ಬೇಸತ್ತಿದ್ದ ಜನರಿಗೆ ಈ ಮಳೆ ನೆಮ್ಮದಿ ತಂದಿರುವುದು ಸುಳ್ಳಲ್ಲ.

ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಸಾಧಾರಣ ಬಿಸಿಲಿನಿಂದ ಕೂಡಿದ ವಾತಾವರಣವಿತ್ತು. ಆದರೆ ಇಂದು ಬೆಳಗಾಗುತ್ತಿದ್ದಂತೆ ಆಕಾಶದಲ್ಲಿ ಕಾರ್ಮೋಡ ಕವಿದು, ಮಳೆಯ ಸಿಂಚನ ಶುರುವಾಗಿದೆ. ನಗರದ ಪ್ರಮುಖ ಪ್ರದೇಶಗಳಾದ ವಿದ್ಯಾರಣ್ಯಪುರ, ಕೆಂಗೇರಿ, ಶಾಂತಿನಗರ, ರಿಚ್ಮಂಡ್ ಟೌನ್, ಮೆಜೆಸ್ಟಿಕ್, ಕಾರ್ಪೊರೇಷನ್ ಸರ್ಕಲ್ ಸೇರಿದಂತೆ ಸುತ್ತಮುತ್ತಲಿನ ಹಲವು ಬಡಾವಣೆಗಳಲ್ಲಿ ಸಾಧಾರಣ ಮಳೆಯಾಗುತ್ತಿದೆ. ಮಳೆಯಿಂದಾಗಿ ನಗರದೆಲ್ಲೆಡೆ ಹಿತಕರ ಹಾಗೂ ಚಳಿಯ ವಾತಾವರಣ ನಿರ್ಮಾಣವಾಗಿದೆ.
ಮತ್ತೊಂದೆಡೆ, ವಾರಾಂತ್ಯದ ದಿನವಾದ ಇಂದು ಬೆಳಗ್ಗೆಯೇ ಕಚೇರಿಗೆ ಹೋಗುವವರು ಹಾಗೂ ತಮ್ಮ ಅಗತ್ಯ ಕೆಲಸಗಳಿಗಾಗಿ ಹೊರಟಿದ್ದ ವಾಹನ ಸವಾರರು, ಅದರಲ್ಲೂ ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಮಳೆಯಿಂದಾಗಿ ಕೊಂಚ ಪರದಾಡುವಂತಾಯಿತು. ರಸ್ತೆಗಳಲ್ಲಿ ಅಲ್ಲಲ್ಲಿ ಮಳೆ ನೀರು ನಿಂತು ವಾಹನ ಸಂಚಾರವೂ ಸ್ವಲ್ಪ ಮಟ್ಟಿಗೆ ನಿಧಾನಗತಿಯಲ್ಲಿ ಸಾಗುವಂತಾಯಿತು.
ಸಾಮಾಜಿಕ ಜಾಲತಾಣಗಳಲ್ಲಂತೂ ಬೆಂಗಳೂರು ಮಳೆಯದ್ದೇ ಕಾರುಬಾರು. ನೆಟ್ಟಿಗರು ತಮ್ಮ ತಮ್ಮ ಪ್ರದೇಶಗಳ ಸುತ್ತಮುತ್ತ ಆಗುತ್ತಿರುವ ಮಳೆಯ ವಿಡಿಯೋ ಹಾಗೂ ಫೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಇನ್ಸ್ಟಾಗ್ರಾಮ್ ಸ್ಟೇಟಸ್‌ಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. "ನಮ್ಮ ಬೆಂಗಳೂರು ವೆದರ್" ಎಂದು ಖುಷಿಪಡುತ್ತಿದ್ದಾರೆ.
ಹವಾಮಾನ ಇಲಾಖೆ ಮೂಲಗಳ ಪ್ರಕಾರ, ಮುಂದಿನ ಮೂರು ದಿನಗಳ ಕಾಲ ನಗರದ ಹಲವೆಡೆ ಹಾಗೂ ಬೆಂಗಳೂರು ಗ್ರಾಮಾಂತರ ಭಾಗಗಳಲ್ಲಿ ಇದೇ ರೀತಿಯ ಸಾಧಾರಣ ಅಥವಾ ಜಿಟಿ ಜಿಟಿ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಬಿಸಿಲ ಬೇಗೆಯಿಂದ ಕಾದಿದ್ದ ರಾಜಧಾನಿಗೆ ವರುಣನ ಈ ತಂಪು ಸ್ಪರ್ಶವು ಹೊಸ ಚೈತನ್ಯವನ್ನು ತುಂಬಿದೆ.












Click it and Unblock the Notifications