Global Investors Meet 2025: ಬೆಂಗಳೂರಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ, ಹೂಡಿಕೆ ನಿರೀಕ್ಷೆ ಎಷ್ಟು?
ಬೆಂಗಳೂರು, ಫೆಬ್ರವರಿ 03: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಕ್ಷಣಗಣನೆ ಆರಂಭವಾಗಲಿದೆ. ಫೆಬ್ರವರಿ 12ರಿಂದ 14ರವರೆಗೆ ಇಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಸಕಲ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ಫೆ.11ರ ಸಂಜೆಯೇ ಸಮಾವೇಶ ಉದ್ಘಾಟನೆಗೊಳ್ಳಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೋಮವಾರ ತಿಳಿಸಿದರು.
ಸಮಾವೇಶದ ಸಿದ್ಧತೆ ಮತ್ತು ನಾನಾ ಇಲಾಖೆಗಳ ನಡುವಿನ ಸಮನ್ವಯಕ್ಕೆ ಸಂಬಂಧಿಸಿದಂತೆ ಡಿಸಿಎಂ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಸೋಮವಾರ ಉನ್ನತ ಮಟ್ಟದ ಸಮಿತಿಯ ಸಭೆ ನಡೆಯಿತು. ಈ ವೇಳೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರೊಂದಿಗೆ ಉಪಸ್ಥಿತರಿದ್ದರು. ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಿದರು.

ಈಗಾಗಲೇ 2,000ಕ್ಕೂ ಹೆಚ್ಚು ಹೂಡಿಕೆದಾರರು ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಸಕ್ತಿ ತೋರಿ, ನೋಂದಾಯಿಸಿಕೊಂಡಿದ್ದಾರೆ. 10 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯನ್ನು ರಾಜ್ಯಕ್ಕೆ ಆಕರ್ಷಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದರು.
ಸಮಾವೇಶದಲ್ಲಿ ಸುಮಾರು 18 ದೇಶಗಳು ಪಾಲ್ಗೊಳ್ಳಲಿವೆ. ಈ ಪೈಕಿ 9 ದೇಶಗಳು ಪ್ರತ್ಯೇಕ ಪೆವಿಲಿಯನ್ ಹೊಂದಿರಲಿವೆ. ಈ ಸಂದರ್ಭದಲ್ಲಿ 60ಕ್ಕೂ ಹೆಚ್ಚು ಉದ್ಯಮ ಪರಿಣತರು ಗೋಷ್ಠಿಗಳಲ್ಲಿ ಮಾತನಾಡಲಿದ್ದಾರೆ. ಜೊತೆಗೆ ಸರ್ಕಾರ ರಾಜ್ಯದಲ್ಲಿ ಹೂಡಿಕೆಗೆ ಇರುವ ಪ್ರಶಸ್ತ ಅವಕಾಶಗಳನ್ನು ಮತ್ತು ನಮ್ಮಲ್ಲಿರುವ ಉದ್ಯಮಸ್ನೇಹಿ ನೀತಿ ಹಾಗೂ ಪ್ರೋತ್ಸಾಹಕ ಕ್ರಮಗಳನ್ನು ಹೂಡಿಕೆದಾರರಿಗೆ ಮನವರಿಕೆ ಮಾಡಿಕೊಡಲಿದೆ ಎಂದು ಅವರು ಮಾಹಿತಿ ನೀಡಿದರು.

ಈ ಸಮಾವೇಶಕ್ಕೆ ಸಚಿವ ಎಂ.ಬಿ.ಪಾಟೀಲರು ಕಳೆದ ಕೆಲವು ತಿಂಗಳುಗಳಿಂದಲೇ ಶ್ರಮಿಸುತ್ತಿದ್ದಾರೆ. ಇದರ ಭಾಗವಾಗಿ ಅಮೆರಿಕ, ಯೂರೋಪ್, ದಕ್ಷಿಣ ಕೊರಿಯಾ, ಜಪಾನ್ ದೇಶಗಳಲ್ಲಿ ಅವರು ಉನ್ನತ ಮಟ್ಟದ ನಿಯೋಗದೊಂದಿಗೆ ತೆರಳಿ ರೋಡ್-ಶೋ ಮತ್ತು ಹೂಡಿಕೆದಾರರ ಜೊತೆ ಮಾತುಕತೆಗಳನ್ನು ನಡೆಸಿದ್ದಾರೆ. ಸಮಾವೇಶದಲ್ಲಿ ಕೈಗಾರಿಕಾ ಬೆಳವಣಿಗೆಗೆ ಪೂರಕವಾದ ಇನ್ನೂ ಹಲವು ನೀತಿಗಳನ್ನು ಅನಾವರಣಗೊಳಿಸಲಾಗುವುದು ಎಂದರು.
'ಪ್ರಗತಿಯ ಮರುಕಲ್ಪನೆ'ಯ ಥೀಮ್: ಎಂಬಿ ಪಾಟೀಲ್
ಜಾಗತಿಕ ಹೂಡಿಕೆದಾರರ ಸಮಾವೇಶವು 'ಪ್ರಗತಿಯ ಮರುಕಲ್ಪನೆ'' ಎನ್ನುವ ಪ್ರಧಾನ ಥೀಮ್ ಒಳಗೊಂಡಿದೆ. ತಂತ್ರಜ್ಞಾನ-ಚಾಲಿತ, ಪರಿಸರಸ್ನೇಹಿ, ಒಳಗೊಳ್ಳುವಿಕೆ ಮತ್ತು ಕ್ಷಮತೆ (Tech-driven, Green, Inclusive & Resilient) ಎನ್ನುವ ನಾಲ್ಕು ಉಪಆಶಯಗಳನ್ನು ಹೊಂದಿದೆ.
ದಾವೋಸ್ ಆರ್ಥಿಕ ಶೃಂಗಸಭೆಯಲ್ಲಿನ ಕೆಲವು ಅತ್ಯುತ್ತಮ ಅಂಶಗಳನ್ನೂ ಇಲ್ಲಿ ಅಳವಡಿಸಿಕೊಂಡಿದ್ದೇವೆ. ಅಂಕಿತ ಹಾಕುವ ಒಡಂಬಡಿಕೆಗಳ ಪೈಕಿ ಶೇಕಡ 70-80ರಷ್ಟಾದರೂ ನಿಜವಾದ ಹೂಡಿಕೆಯಾಗಿ ಪರಿವರ್ತನೆಯಾಗಬೇಕು ಎನ್ನುವುದು ಸರಕಾರದ ಗುರಿಯಾಗಿದೆ ಎಂದು ಹೇಳಿದರು.
ಐದು ವರ್ಷಗಳ ನೂತನ ಕೈಗಾರಿಕಾ ನೀತಿ ಬಿಡುಗಡೆ
ಸಮಾವೇಶದಲ್ಲಿ ರಫ್ತಿಗೆ ಉತ್ತೇಜನ ನೀಡುವಂತಹ, 2025-30ರವರೆಗಿನ ಐದು ವರ್ಷಗಳ ನೂತನ ಕೈಗಾರಿಕಾ ನೀತಿಯನ್ನು ಬಿಡುಗಡೆ ಮಾಡುತ್ತಿದ್ದೇವೆ. ಇದರಲ್ಲಿ ಡಾ.ಡಿ ಎಂ ನಂಜುಂಡಪ್ಪ ವರದಿಯಲ್ಲಿ ಹಿಂದುಳಿದ ಮತ್ತು ಅತೀ ಹಿಂದುಳಿದ ಜಿಲ್ಲೆಗಳಲ್ಲಿ ಹೂಡಿಕೆ ಮಾಡುವವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು. ಸುಲಲಿತ ವಹಿವಾಟು ಸಂಸ್ಕೃತಿ ಮತ್ತು ಏಕಗವಾಕ್ಷಿ ವ್ಯವಸ್ಥೆಗೆ ಕೂಡ ಚಾಲನೆ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಬಹುತೇಕ ಜಾಗತಿಕ ಮಟ್ಟದ ಕಂಪನಿಗಳೆಲ್ಲವೂ ಬೆಂಗಳೂರಿನಲ್ಲಿ ಆರ್ & ಡಿ ಕೇಂದ್ರಗಳನ್ನು ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು (ಜಿಸಿಸಿ) ಹೊಂದಿವೆ. ಆದ್ದರಿಂದ ಸ್ಥಳೀಯ ಮಟ್ಟದಲ್ಲೇ ಉತ್ಪಾದನೆಯೂ ಆಗುವಂತೆ ನೋಡಿಕೊಳ್ಳಲು ಸರ್ಕಾರ ಉಪಕ್ರಮಗಳನ್ನು ತೆಗೆದುಕೊಳ್ಳಲಿದೆ. ಪರಿಸರ ಸ್ನೇಹಿ ಇಂಧನ ಮತ್ತು ವಿದ್ಯುತ್ ಚಾಲಿತ ವಾಹನಗಳ ತಯಾರಿಕೆಗೂ ಗಮನಹರಿಸಲಾಗುವುದು ಎಂದು ಮಾಹಿತಿ ನೀಡಿದರು.
ಮೊದಲು ಕರ್ನಾಟಕ, ಮಹಾರಾಷ್ಟ್ರ, ಗುಜರಾತಿನಂತಹ ಕೆಲವೇ ರಾಜ್ಯಗಳು ಮಾತ್ರ ಹೂಡಿಕೆದಾರರ ಸಮಾವೇಶ ನಡೆಸುತ್ತಿದ್ದವು. ಈಗ ಹೆಚ್ಚಿನ ರಾಜ್ಯಗಳು ಇಂಥ ಸಮಾವೇಶ ಹಮ್ಮಿಕೊಳ್ಳುತ್ತಿವೆ. ಈ ಸಲದ ಸಮಾವೇಶದಲ್ಲಿ ಕುಮಾರ್ ಬಿರ್ಲಾ, ಆನಂದ್ ಮಹೀಂದ್ರ, ಕಿರಣ್ ಮಜುಂದಾರ್ ಸೇರಿದಂತೆ ಖ್ಯಾತ ಉದ್ಯಮಿಗಳು ಪಾಲ್ಗೊಳ್ಳಲಿದ್ದಾರೆ.
ಫೆಬ್ರವರಿ 12 ಮತ್ತು 13ರಂದು ಇಡೀ ಎರಡು ದಿನ ಸಮಾವೇಶದಲ್ಲಿ ಅತ್ಯಂತ ಗಂಭೀರ ಚಟುವಟಿಕೆಗಳು ನಡೆಯಲಿವೆ. ಹೀಗಾಗಿ 11ರಂದು ಸಂಜೆ 4 ಗಂಟೆಗೆ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಸಭೆಯಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ, ಕೃಷ್ಣ ಬೈರೇಗೌಡ, ಚೆಲುವರಾಯಸ್ವಾಮಿ, ಶರಣಬಸಪ್ಪ ದರ್ಶನಾಪುರ, ಪ್ರಿಯಾಂಕ್ ಖರ್ಗೆ ಮತ್ತು ದಿನೇಶ್ ಗುಂಡೂರಾವ್ ಭಾಗವಹಿಸಿದ್ದರು. ಸರ್ಕಾರದ ಅಧಿಕಾರಿಗಳು ಪಾಲ್ಗೊಂಡರು.












Click it and Unblock the Notifications