ಮಹಾ ಕುಂಭಮೇಳಕ್ಕೆ ತೆರಳಿದ್ದ ಕರ್ನಾಟಕದ ನಾಲ್ವರು ಅಪಘಾತದಲ್ಲಿ ಸಾವು
ಬೆಂಗಳೂರು, ಫೆಬ್ರವರಿ 25: ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳಕ್ಕೆ ತೆರಳಿದ ಕರ್ನಾಟಕದ ಭಕ್ತರು ಅಪಘಾತದಲ್ಲಿ ಸಾವನ್ನಪ್ಪುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂದು ಮತ್ತೆ ನಾಲ್ವರು ಭಕ್ತರು ಭೀಕರ ಅಪಘಾತದಲ್ಲಿ ಅಸುನೀಗಿದ್ದಾರೆ. ವಿಜಯಪುರ ಜಿಲ್ಲೆಯ ಇಬ್ಬರು ಹಾಗೂ ಬೀದರ್‌ನ ಇಬ್ಬರು ಭಕ್ತರು ಮಹಾ ಕುಂಭ ಮೇಳದಿಂದ ಹಿಂದಿರುವಾಗ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಿಂದ 17 ಜನರ ತಂಡ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳಕ್ಕೆ ತೆರಳಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮುಗಿಸಿ ಮರಳುವ ವೇಳೆ ಗುಜರಾತ್ನ ಪೋರ್ ಬಂದರ್ ಬಳಿ ಕರ್ನಾಟಕದ ಭಕ್ತಾದಿಗಳಿದ್ದ ವಾಹನಕ್ಕೆ ಎದುರಿಗೆ ಬಂದ ಟಿಪ್ಪರ್ಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಇಬ್ಬರು ಭಕ್ತರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಚಡಚಣ ಪಟ್ಟಣದ ನಿವಾಸಿಗಳಾದ ಮಲ್ಲಿಕಾರ್ಜುನ ಸದ್ದಲಗಿ (40) ಹಾಗೂ ವಿಶ್ವನಾಥ ಅವಜಿ (55) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಇನ್ನು ಉಳಿದವರಿಗೆ ಗಾಯಗಳಾಗಿದ್ದು, ಪೋರ್ ಬಂದರ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಇನ್ನು ಅಪಘಾತದಲ್ಲಿ ವಾಹನ ಬಹುತೇಕ ಜಖಂ ಆಗಿದೆ ಎಂದು ತಿಳಿದು ಬಂದಿದೆ.
ಪ್ರಯಾಗ್ ರಾಜ್‌ನಿಂದ ಮರಳುವ ವೇಳೆ ಭೀಕರ ಅಪಘಾತ: ಬೀದರ್ ಮೂಲದ ಇಬ್ಬರು ದಾರುಣ ಸಾವು
ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳಕ್ಕೆ ತೆರಳಿ ಮರಳುವ ವೇಳೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೀದರ್ ಮೂಲದ ಇಬ್ಬರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ವರ್ದಾ ಬಳಿ ನಡೆದಿದೆ. ಕಳೆದ ಐದು ದಿನಗಳ ಹಿಂದೆ ಬೀದರ್ನ ಓಲ್ಡ್ ಸಿಟಿಯ ದರ್ಜಿಗಲ್ಲಿಯ 16 ಜನರು ಟಿಟಿ ವಾಹನದಲ್ಲಿ ಉತ್ತರ ಪ್ರದೇಶದ ಪ್ರಯಾಗ್ರಾಜ್ ಕುಂಭಮೇಳಕ್ಕೆ ತೆರಳಿದ್ದರು.
ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮುಗಿಸಿ ಅಲ್ಲಿಂದ ಕಾಶಿ ಹಾಗೂ ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿ ವಾಪಸ್ ಮರಳುವ ವೇಳೆ ಮಹಾರಾಷ್ಟ್ರದ ವರ್ದಾ ಬಳಿ ಚಾಲಕನ ನಿರ್ಲಕ್ಷ್ಯದಿಂದ ಟಿಟಿ ವಾಹನ ಲಾರಿಗೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಉಳಿದವರು ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳಿಗೆ ವರ್ದಾ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಇನ್ನು ಅಪಘಾತದ ಭೀಕರತೆಗೆ ಟಿಟಿ ವಾಹನ ಕೂಡ ಜಖಂಗೊಂಡಿಗೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications