ಸೆ 21ರಿಂದ ಅಸೆಂಬ್ಲಿ ಅಧಿವೇಶನ: ಈ ನಾಲ್ವರು ಸಚಿವರು ಗೈರು ಸಾಧ್ಯತೆ
ಬೆಂಗಳೂರು, ಸೆ 17: ಸೋಮವಾರದಿಂದ (ಸೆ 21) ಆರಂಭವಾಗಲಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ಯಡಿಯೂರಪ್ಪ ಸರಕಾರದ ನಾಲ್ವರು ಸಚಿವರು ದೂರವುಳಿಯುವ ಸಾಧ್ಯತೆಯಿದೆ.
ನಾಲ್ವರು ಸಚಿವರಿಗೆ ಕೋವಿಡ್ 19 ಸೋಂಕು ತಗಲಿರುವುದರಿಂದ, ಅವರೆಲ್ಲರೂ ಕ್ವಾರಂಟೈನ್ ಗೆ ಒಳಪಟ್ಟಿದ್ದಾರೆ. ಕಳೆದ ಒಂದು ವಾರದಲ್ಲಿ ನಾಲ್ವರು ಸಚಿವರಿಗೆ ಸೋಂಕು ತಗಲಿದೆ.
ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್, ನಗರಾಭಿವೃದ್ದಿ ಖಾತೆಯ ಸಚಿವ ಬೈರತಿ ಬಸವರಾಜ್ ಮತ್ತು ಆಹಾರ, ನಾಗರೀಕ ಪೂರೈಕೆ ಖಾತೆಯ ಕೆ.ಗೋಪಾಲಯ್ಯ, ಈ ನಾಲ್ವರು ಸಚಿವರು ಅಧಿವೇಶನಕ್ಕೆ ಗೈರಾಗುವ ಸಾಧ್ಯತೆಯಿದೆ.

ಕೊರೊನಾ ಹಾವಳಿಯ ನಡುವೆ, ಹಲವು ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಂಡು ಅಧಿವೇಶನ ಆರಂಭಿಸಲು ಸಕಲ ಸಿದ್ದತೆಗಳನ್ನು ಸರಕಾರ ನಡೆಸಿದೆ. ಲೋಕಸಭಾ ಅಧಿವೇಶನ ಆರಂಭವಾದ ಮೊದಲ ದಿನವೇ ಹಲವು ಸಂಸದಿರಿಗೆ ಕೊರೊನಾ ಪಾಸಿಟೀವ್ ಬಂದಿತ್ತು.
ನಾಲ್ವರೂ ಸಚಿವರು ಸಂಪೂರ್ಣ ಗುಣಮುಖರಾದ ನಂತರವೂ ಒಂದು ವಾರ ಐಸೋಲೇಷನ್ ನಲ್ಲಿ ಇರಬೇಕಾಗಿರುವುದರಿಂದ, ಇವರೆಲ್ಲಾ ಸದನದ ಕಲಾಪದಲ್ಲಿ ಭಾಗವಹಿಸುವ ಸಾಧ್ಯತೆ ಕಮ್ಮಿ. ಈ ಬಗ್ಗೆ, ಸಚಿವರಿಂದ ಅಧಿಕೃತ ಹೇಳಿಕೆ ಬಂದಿಲ್ಲ.
ಕೊರೊನಾ ನಿರ್ವಹಣೆ, ನೆರೆ ಪರಿಹಾರ, ಡಿ ಜೆ ಹಳ್ಳಿ ಘಟನೆ, ಡ್ರಗ್ಸ್ ಮುಂತಾದ ವಿಚಾರದಲ್ಲಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿರೋಧ ಪಕ್ಷಗಳು ತಂತ್ರಗಾರಿಕೆ ರೂಪಿಸುತ್ತಿವೆ. ಈ ವೇಳೆ, ನಾಲ್ವರು ಸಚಿವರ ಗೈರು, ಯಡಿಯೂರಪ್ಪನವರಿಗೆ ತಲೆನೋವಾಗಿ ಪರಿಣಮಿಸಬಹುದು. ಸೆಪ್ಟಂಬರ್ 21ರಿಂದ ಹತ್ತು ದಿನಗಳ ಕಾಲ ಅಧಿವೇಶನ ನಡೆಯಲಿದೆ.












Click it and Unblock the Notifications