• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಪ ಚುನಾವಣೆ ಫಲಿತಾಂಶ: ಅಕ್ಕಿಆಲೂರಿನ ಅಳಿಯನ ಮಾತಿಗೆ ಜನ ಮರುಳಾಗಿಲ್ಲ: ಸಿದ್ದರಾಮಯ್ಯ

|
Google Oneindia Kannada News

ಕರ್ನಾಟಕ, ನವೆಂಬರ್ 2: ರಾಜ್ಯದಲ್ಲಿ 2023ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಗೆ ಒಂದೂವರೆ ವರ್ಷ ಇರುವಾಗಲೇ ರಾಜ್ಯದ ಜನರ ಗಮನ ಸೆಳೆದಿದ್ದ ಹಾನಗಲ್ ಮತ್ತು ಸಿಂದಗಿ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಮಂಗಳವಾರ ಪ್ರಕಟವಾಗಿದೆ.

ತೀವ್ರ ಕುತೂಹಲ ಕೆರಳಿಸಿದ್ದ ವಿಜಯಪುರ ಜಿಲ್ಲೆಯ ಸಿಂದಗಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಬಿಜೆಪಿಯ ರಮೇಶ್ ಭೂಸನೂರಗೆ 93,865 ಮತ, ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿಗೆ 62,680 ಮತ ಹಾಗೂ ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿಗೆ 4,353 ಮತ ದೊರೆತಿದ್ದು, 31,185 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಗೆ ಜಯ ಲಭಿಸಿದೆ.

ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಅಗ್ನಿಪರೀಕ್ಷೆ ಎಂದೇ ಕರೆಯಿಸಿಕೊಂಡಿದ್ದ ಹಾವೇರಿ ಜಿಲ್ಲೆಯ ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿಗೆ ಮುಖಭಂಗವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಜಯ ಗಳಿಸಿದ್ದಾರೆ. ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿ ಪ್ರಚಾರವನ್ನು ಸ್ವತಃ ಮುಖ್ಯಮಂತ್ರಿಯೇ ಮುನ್ನಡೆಸಿದ್ದರು.

ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆಗೆ 87,113 ಮತಗಳು, ಬಿಜೆಪಿಯ ಶಿವರಾಜ ಸಜ್ಜನರಗೆ 79,515 ಮತಗಳು ಹಾಗೂ ಜೆಡಿಎಸ್​ ಅಭ್ಯರ್ಥಿ ನಿಯಾಜ್ ಶೇಖ್​ಗೆ 921 ಮತಗಳು ಸಿಕ್ಕಿವೆ. ಕಾಂಗ್ರೆಸ್​ನ ಶ್ರೀನಿವಾಸ ಮಾನೆಗೆ 7,598 ಮತಗಳ ಅಂತದಿಂದ ಜಯ ಸಿಕ್ಕಿದೆ.

ಸಿದ್ದರಾಮಯ್ಯ ಹೇಳಿದ್ದೇನು?
ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

"ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾನಗಲ್ ಪಕ್ಕದ ಕ್ಷೇತ್ರದವರು. ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲೇ ಬಿಜೆಪಿ ಸೋತಿದೆ. ಹಾನಗಲ್‌ನಲ್ಲಿ ಪ್ರಚಾರದ ವೇಳೆ ನಾನು ಈ ಮಣ್ಣಿನಲ್ಲಿ ಹುಟ್ಟಿದ್ದೇನೆ, ಇಲ್ಲಿಯೇ ಮಣ್ಣಾಗುತ್ತೇನೆ, ನಾನು ಅಕ್ಕಿಆಲೂರಿನ ಅಳಿಯ ಎಂದೆಲ್ಲಾ ಭಾವನಾತ್ಮಕವಾಗಿ ಮಾತನಾಡಿದರೂ ಕೂಡ ಜನರು ಅವರ ಮಾತಿಗೆ ಮರುಳಾಗದೆ ನಮ್ಮ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸಿದ್ದಾರೆ," ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

"ಯಡಿಯೂರಪ್ಪ ಮತ್ತು ಅವರ ಮಗ ಎರಡೂ ಕಡೆಗಳಲ್ಲಿ ಕ್ರಿಯಾಶೀಲರಾಗಿ ಪ್ರಚಾರ ಮಾಡಿದರು. ಮುಖ್ಯಮಂತ್ರಿಗಳು, ಸಚಿವರು ಚುನಾವಣೆ ನಡೆಯುವ ಕ್ಷೇತ್ರದಲ್ಲೇ ಬೀಡುಬಿಟ್ಟಿದ್ದರು. ಇಷ್ಟೆಲ್ಲದರ ಹೊರತಾಗಿಯೂ ಜನ ಬಿಜೆಪಿಗೆ ಮತ ನೀಡದೆ, ಕಾಂಗ್ರೆಸ್‌ಗೆ ಮತ ನೀಡುವ ಮೂಲಕ ಬದಲಾವಣೆ ಬಯಸಿದ್ದಾರೆ. ಯಡಿಯೂರಪ್ಪನವರೇ ಅಧಿಕಾರದಲ್ಲಿ ಇದ್ದಿದ್ದರೂ ಫಲಿತಾಂಶ ಹೀಗೆ ಇರುತ್ತಿತ್ತು."

"ಸಿಂದಗಿಯಲ್ಲಿ ಜೆಡಿಎಸ್‌ನಿಂದ ಬಂದ ಕಾರ್ಯಕರ್ತರು ಮತ್ತು ಕಾಂಗ್ರೆಸ್‌ನ ಕಾರ್ಯಕರ್ತರ ನಡುವೆ ಹೊಂದಾಣಿಕೆ ಕೊರತೆಯಾಗಿದ್ದು, ಸೋಲಿಗೆ ಕಾರಣವಾಗಿರಬಹುದು ಎಂಬ ಅನುಮಾನವಿದೆ. ಈ ಬಗ್ಗೆ ಪೂರ್ಣ ಮಾಹಿತಿ ಬಂದ ನಂತರ ಗೊತ್ತಾಗುತ್ತದೆ," ಎಂದು ತಿಳಿಸಿದರು.

Mandya: Former CM Siddaramaiah Reaction After By Election Results

"ರಾಜ್ಯ ಬಿಜೆಪಿ ಸರ್ಕಾರದ ಅವನತಿ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಬಿಜೆಪಿ ಸರ್ಕಾರ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಹಾಗಾಗಿ ಈ ಸರ್ಕಾರದ ಆಡಳಿತದ ವಿರುದ್ಧದ ಅಲೆ ಆರಂಭಗೊಂಡಿದೆ. ಮುಂದಿನ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ."

"ಮುಂದಿನ ಬಾರಿ ಪಕ್ಷದಿಂದ ತಾನು ಮುಖ್ಯಮಂತ್ರಿ ಆಗಬೇಕು ಎಂದು ಪಕ್ಷದ ಯಾವ ನಾಯಕರು ಬೇಕಾದರೂ ಕೇಳಬಹುದು. ಅದರಲ್ಲಿ ಯಾವ ತಪ್ಪಿಲ್ಲ. ಆದರೆ ಪಕ್ಷದ ಹೆಚ್ಚಿನ ಶಾಸಕರ ಅಭಿಪ್ರಾಯ ಮತ್ತು ಹೈಕಮಾಂಡ್ ತೀರ್ಮಾನ ಅಂತಿಮವಾಗಲಿದೆ," ಎಂದು ಅಭಿಪ್ರಾಯಪಟ್ಟರು.

"ಹಾನಗಲ್‌ನಲ್ಲಿ ಜೆಡಿಎಸ್ ಪಕ್ಷ ನಾಲ್ಕಂಕಿ ಮತಗಳನ್ನು ಪಡೆಯದೆ, ಠೇವಣಿ ಕಳೆದುಕೊಂಡಿದೆ. ದೇವೇಗೌಡರು ಹತ್ತು ದಿನ ಹಾನಗಲ್ ಮತ್ತು ಸಿಂದಗಿಯಲ್ಲಿ ಪ್ರಚಾರ ಮಾಡಿದರು. ಮಾಜಿ ಪ್ರಧಾನಿಗಳು ಅವರು, ಅನುಭವ ಹೆಚ್ಚಿದೆ. ಅವರ ಪಕ್ಷದ ಸೋಲಿಗೆ ಏನು ಕಾರಣ ಎಂದು ಅವರನ್ನೇ ಕೇಳಬೇಕು," ಎಂದು ಟಾಂಗ್ ನೀಡಿದರು.

"ಬಿಟ್ ಕಾಯಿನ್ ಪ್ರಕರಣದ ಆರೋಪಿಯಾದ ಶ್ರೀಕೃಷ್ಣ ಎಂಬುವವರನ್ನು ಬಂಧಿಸಲಾಗಿತ್ತು. ಆತನ ಮೇಲೆ ಚಾರ್ಜ್‌ಶೀಟ್ ಹಾಕಲಾಗಿದೆ. ಸಾಕ್ಷಿಗಳನ್ನು ಸಂಗ್ರಹಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ರಾಜಕೀಯ ನಾಯಕರ ಹೆಸರನ್ನು ಮುಖ್ಯಮಂತ್ರಿಗಳೇ ಬಹಿರಂಗಪಡಿಬೇಕು. ಅವರು ಕಾಂಗ್ರೆಸ್‌ನವರಾದರೂ ಸರಿ, ಬಿಜೆಪಿಯವರಾದರೂ ಸರಿ. ಜನರಿಗೆ ಸತ್ಯ ಗೊತ್ತಾಗಲಿ," ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

"ನಾನು ತನಿಖಾ ಸಂಸ್ಥೆಗೆ ಸಾಕ್ಷಿ ಕೊಡುವುದಾದರೆ ತನಿಖೆ ಯಾಕೆ ಬೇಕು? ಪ್ರಕರಣದಲ್ಲಿ ರಾಜಕೀಯ ನಾಯಕರು ಭಾಗಿಯಾದ ಬಗ್ಗೆ ನನಗೆ ಮಾಹಿತಿ ಇದೆ ಅಷ್ಟೆ. ಕಾನೂನು ಬಾಹಿರ ಕೃತ್ಯವೊಂದು ನಡೆಯದೆ ಹೋಗಿದ್ದರೆ ಬಸವರಾಜ ಬೊಮ್ಮಾಯಿ ಪ್ರಕರಣವನ್ನು ಇಡಿಗೆ ಯಾಕೆ ವಹಿಸಿದ್ದು? ತನಿಖೆ ಯಾಕೆ ಮಾಡುತ್ತಿರುವುದು?," ಎಂದು ಪ್ರಶ್ನಿಸಿದರು.

"ಜೆಡಿಎಸ್‌ನಿಂದ ಬಂದ ಜಮೀರ್ ಅಹ್ಮದ್, ಅಖಂಡ ಶ್ರೀನಿವಾಸಮೂರ್ತಿ, ಭೀಮಾ ನಾಯ್ಕ್ ಗೆದ್ದಿದ್ದಾರೆ. ನಾನು ಕೂಡ ಜೆಡಿಎಸ್‌ನಿಂದ ಕಾಂಗ್ರೆಸ್ ಸೇರಿ ಗೆದ್ದಿದ್ದೇನೆ. ಜೆಡಿಎಸ್‌ನಿಂದ ಬಂದ ಮತ್ತು ಕಾಂಗ್ರೆಸ್‌ನ ಹಳೆಯ ಕಾರ್ಯಕರ್ತರ ನಡುವೆ ಎಲ್ಲಾ ಕಡೆ ಹೊಂದಾಣಿಕೆ ಕೊರತೆ ಆಗುವುದಿಲ್ಲ. ಕೆಲವೊಂದು ಕ್ಷೇತ್ರದಲ್ಲಿ ಹೊಂದಾಣಿಕೆಯಲ್ಲಿ ಹೆಚ್ಚು ಕಡಿಮೆ ಆಗುತ್ತದೆ, ಅದನ್ನು ಮುಂದೆ ಸರಿಪಡಿಸಬಹುದು. ಅಲ್ಪಸಂಖ್ಯಾತ ಬಂಧುಗಳು ಹಿಂದೆಯೂ ಜೆಡಿಎಸ್‌ನ ನಂಬಿಲ್ಲ, ಮುಂದೆಯೂ ನಂಬಲ್ಲ. ಜೆಡಿಎಸ್ ಒಂದು ಅವಕಾಶವಾದಿ ಪಕ್ಷ ಎಂಬುದು ಅವರಿಗೆ ಗೊತ್ತಿದೆ," ಎಂದು ಹೇಳಿದ್ದಾರೆ.

"ನವೆಂಬರ್ ತಿಂಗಳು ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸುವಂತೆ ನಾನು ಕೂಡ ಸರ್ಕಾರವನ್ನು ಒತ್ತಾಯ ಮಾಡಿದ್ದೇನೆ. ಕಳೆದ ಮೂರು ವರ್ಷದಲ್ಲಿ ಒಂದು ಬಾರಿಯೂ ಬೆಳಗಾವಿಯಲ್ಲಿ ಅಧಿವೇಶನ ನಡೆದಿಲ್ಲ. ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳು ಚರ್ಚೆಯಾಗಬೇಕು ಎಂಬ ಉದ್ದೇಶದಿಂದಲೇ ಸುವರ್ಣಸೌಧ ಕಟ್ಟಿದ್ದು. ಉತ್ತರ ಕರ್ನಾಟಕದ ಬಗ್ಗೆ ಬಹಳ ಮಾತನಾಡುವ ಬಿಜೆಪಿಯವರು ಅಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮನಸಿದ್ದರೆ ಬೆಳಗಾವಿಯಲ್ಲೇ ಅಧಿವೇಶನ ಕರೆಯಬೇಕು," ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.

   ಈ ಪವಾಡ ನಡೆದು ಟೀಮ್ ಇಂಡಿಯಾಗೆ ಸೆಮಿಫೈನಲ್ ಚಾನ್ಸ್ ಸಿಗುತ್ತಾ? | Oneindia Kannada
   English summary
   Karnataka By Elections Results 2021: BJP candidate Win in Sindagi assembly constituency, Congress candidate Win in Hanagal constituency. Former CM Siddaramaiah Reaction After By Election Results.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X