ಶ್ರೀರಾಮುಲು ಪ್ರಶ್ನಿಸಿದ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಒಂದಿಷ್ಟು ಪ್ರಶ್ನೆಗಳು
Recommended Video

ಐದು ಕ್ಷೇತ್ರಗಳ ಉಪಚುನಾವಣೆಯ ಬಹಿರಂಗ ಪ್ರಚಾರ ಬುಧವಾರ (ಅ 31) ಮುಕ್ತಾಯಗೊಂಡಿದೆ. ಇನ್ನೇನು ಮತದಾನದ ಮುನ್ನಾ 48ಗಂಟೆ ಮನೆಮನೆ ಪ್ರಚಾರ. ಪ್ರಮುಖವಾಗಿ ಯಾವ ಪಕ್ಷಗಳಿಗೂ ಬೇಡವಾದ 3 ಲೋಕಸಭಾ ಕ್ಷೇತ್ರದ ಚುನಾವಣೆ ನಡೆಯುವ ವ್ಯಾಪ್ತಿಯ ಮತದಾರ ಮಾತ್ರ ಮೂರು ಪಕ್ಷಗಳ ಆರೋಪ, ಪ್ರತ್ಯಾರೋಪ ನೋಡಿಕೊಂಡು ಒಳ್ಳೆಯ ಮನೋರಂಜನೆಯನ್ನು ಪಡೆದುಕೊಂಡಿದ್ದಾರೆ.
ಜೆಡಿಎಸ್ - ಕಾಂಗ್ರೆಸ್ ಸಮ್ಮಿಶ್ರ ಸರಕಾರ ಅಧಿಕಾರದಲ್ಲಿದ್ದರೂ, ಕಾಂಗ್ರೆಸ್ ಪಾಲಿಗೆ ಸ್ಟಾರ್ ಕ್ಯಾಂಪೇನರ್ ಮಾಜಿ ಸಿಎಂ ಸಿದ್ದರಾಮಯ್ಯ. ವಿದೇಶ ಪ್ರವಾಸದ ನಂತರ ರಿಫ್ರೆಷ್ ಆದಂತಿರುವ ಸಿದ್ದರಾಮಯ್ಯ, ಮುಖ್ಯಮಂತ್ರಿಯಾಗಿದ್ದಾಗ ಇದ್ದ ತಮ್ಮ ಎಂದಿನ ಖದರ್ ನಲ್ಲೇ ಬಿಜೆಪಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಬಳ್ಳಾರಿ, ಜಮಖಂಡಿ ಮತ್ತು ಶಿವಮೊಗ್ಗ ಕ್ಷೇತ್ರದ ಚುನಾವಣೆಯ ಮೇಲೆ ಹೆಚ್ಚಿನ ನಿಗಾವಹಿಸಿರುವ ಸಿದ್ದರಾಮಯ್ಯ, ಪ್ರಮುಖವಾಗಿ ಬಳ್ಳಾರಿ ರೆಡ್ಡಿ ಸಹೋದರರು ಮತ್ತು ಶ್ರೀರಾಮುಲು ವಿರುದ್ದ ಟೀಕಾಪ್ರಹಾರ ನಡೆಸುತ್ತಿದ್ದಾರೆ. ಜೊತೆಗೆ, ಯಡಿಯೂರಪ್ಪನವರನ್ನೂ ಟೀಕಿಸುತ್ತಿದ್ದಾರೆ, ಮೋದಿಯ ಐವತ್ತಾರು ಇಂಚಿನ ಬಗ್ಗೆಯೂ ಮಾತನಾಡುತ್ತಿದ್ದಾರೆ.
ತಮ್ಮ ಮಗನ ಅಕಾಲಿಕ ಸಾವಿನ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಜನಾರ್ದನ ರೆಡ್ಡಿಯವರಿಗೆ ತೂಕವಾಗಿಯೇ ಟ್ವಿಟ್ಟರ್ ಮೂಲಕ ತಿರುಗೇಟು ನೀಡಿದ್ದ ಸಿದ್ದರಾಮಯ್ಯನವರು, ಶ್ರೀರಾಮುಲು ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ ಬಗ್ಗೆ ಮಾಡಿರುವ ಟ್ವೀಟ್ ಈಗ ಚರ್ಚೆಗೆ ಗುರಿಯಾಗಿದೆ.
ಜವಾಬ್ದಾರಿ ನಿಭಾಯಿಸಬೇಕಾಗಿರುವವರು, ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ರಾಜೀನಾಮೆ ನೀಡುವ ಮುನ್ನ, ಮತದಾರರನ್ನು ಕೇಳಿದ್ದಾರೆಯೇ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು. ಲೋಕಸಭಾ ಚುನಾವಣೆಯ ವೇಳೆ ಅಸೆಂಬ್ಲಿಗೆ, ಹಾಗೆಯೇ ಅಸೆಂಬ್ಲಿ ಚುನಾವಣೆಯ ವೇಳೆ ಲೋಕಸಭೆಗೆ ರಾಜೀನಾಮೆ ನೀಡುವುದು ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಮಾಮೂಲು. ಶ್ರೀರಾಮುಲು ಪ್ರಶ್ನಿಸುವ ಸಿದ್ದರಾಮಯ್ಯನವರಿಗೆ ಕೆಲವೊಂದು ಪ್ರಶ್ನೆಗಳು..

5ವರ್ಷ ಜವಾಬ್ದಾರಿಯನ್ನು ನಿಭಾಯಿಸಬೇಕಾಗಿರುವುದು ಕರ್ತವ್ಯ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಮ್ಮೆ ಆಯ್ಕೆಯಾದವರು 5 ವರ್ಷ ಆ ಜವಾಬ್ದಾರಿಯನ್ನು ನಿಭಾಯಿಸಬೇಕಾಗಿರುವುದು ಅವರ ಕರ್ತವ್ಯ, ಬಳ್ಳಾರಿಯಲ್ಲಿ ಶ್ರೀರಾಮುಲುರವರ ರಾಜಕೀಯ ಸ್ವಾರ್ಥದಿಂದ ಮತ್ತೊಮ್ಮೆ ಚುನಾವಣೆ ನಡೆಯುವಂತಾಗಿದೆ. ಅವರು ರಾಜೀನಾಮೆ ನೀಡುವಾಗ ಇಲ್ಲಿನ ಮತದಾರರನ್ನು ಕೇಳಿದ್ದಾರೆಯೇ ಎಂದು @INCKarnataka ವನ್ನು ಟ್ಯಾಗ್ ಮಾಡಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.

ಶ್ರೀರಾಮುಲು, ಮೊಣಕಾಲ್ಮೂರು ಕ್ಷೇತ್ರದಲ್ಲಿ ಗೆದ್ದಿದ್ದರು. ಹಾಗಾಗಿ, ಬಳ್ಳಾರಿಗೆ ರಾಜೀನಾಮೆ
ಯಡಿಯೂರಪ್ಪ (ಶಿವಮೊಗ್ಗ), ಶ್ರೀರಾಮುಲು (ಬಳ್ಳಾರಿ), ಸಿ ಎಸ್ ಪುಟ್ಟರಾಜು (ಮಂಡ್ಯ), ಎಚ್ ಡಿ ಕುಮಾರಸ್ವಾಮಿ (ರಾಮನಗರ, ಎರಡು ಕ್ಷೇತ್ರದಿಂದ ಗೆದ್ದದ್ದು) ಮತ್ತು ಜಮಖಂಡಿ (ಸಿದ್ದುನ್ಯಾಮೇ ಗೌಡ ನಿಧನ) ಕ್ಷೇತ್ರದ ಉಪಚುನಾವಣೆ ನಡೆಯುತ್ತಿದೆ. ಮೊಣಕಾಲ್ಮೂರು, ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶ್ರೀರಾಮುಲು, ಮೊಣಕಾಲ್ಮೂರು ಕ್ಷೇತ್ರದಲ್ಲಿ ಗೆದ್ದಿದ್ದರು. ಹಾಗಾಗಿ, ಬಳ್ಳಾರಿ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು.

ಮಂಡ್ಯದಲ್ಲಿ ಸಿ ಎಸ್ ಪುಟ್ಟರಾಜು ಮಾಡಿದ್ದು ಎಷ್ಟು ಸರಿ?
ಶ್ರೀರಾಮುಲು ಮಾಡಿದ್ದು ತಪ್ಪಾದರೆ, ಮಂಡ್ಯದಲ್ಲಿ ಸಿ ಎಸ್ ಪುಟ್ಟರಾಜು ಮಾಡಿದ್ದು ಎಷ್ಟು ಸರಿ? ಶ್ರೀರಾಮುಲುಗೆ ಕೇಳಿದ ಪ್ರಶ್ನೆಯನ್ನು ದೇವೇಗೌಡ, ಕುಮಾರಸ್ವಾಮಿಯವರಿಗೂ ಸಿದ್ದರಾಮಯ್ಯ ಕೇಳುತ್ತಾರಾ ಎನ್ನುವುದಿಲ್ಲಿ ಪ್ರಶ್ನೆ. ಮೇಲುಕೋಟೆ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದ ಪುಟ್ಟರಾಜು, ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು.

ರಾಮನಗರದಲ್ಲಿ ಕುಮಾರಸ್ವಾಮಿ ಸೋಲುವ ಯಾವುದೇ ಲೆಕ್ಕಾಚಾರ ಇರಲಿಲ್ಲ
ಮುಖ್ಯಮಂತ್ರಿ ಕುಮಾರಸ್ವಾಮಿಯ ವಿಚಾರಕ್ಕೆ ಬರುವುದಾದರೆ, ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರದಿಂದ ಎಚ್ಢಿಕೆ ಸ್ಪರ್ಧಿಸಿದ್ದರು. ತಮ್ಮ ರಾಜಕೀಯ ಕರ್ಮಭೂಮಿ ರಾಮನಗರದಲ್ಲಿ ಕುಮಾರಸ್ವಾಮಿ ಸೋಲುವ ಯಾವುದೇ ಲೆಕ್ಕಾಚಾರ ಅಲ್ಲಿ ಇಲ್ಲದಿದ್ದರೂ, ಎಚ್ಡಿಕೆ ಚನ್ನಪಟ್ಟಣದಿಂದಲೂ ಸ್ಪರ್ಧಿಸಿದ್ದರು. ಅಲ್ಲಿನ ಬಿಜೆಪಿ ಅಭ್ಯರ್ಥಿ ಸಿ ಪಿ ಯೋಗೇಶ್ವರ್ ಅವರನ್ನು ರಾಜಕೀಯವಾಗಿ ಮೂಲೆಗುಂಪು ಮಾಡಲು ಅಲ್ಲಿಂದ ಸ್ಪರ್ಧಿಸಿದ್ದದ್ದು ಎನ್ನುವುದು ಒಳ ರಾಜಕೀಯ. ಈ ಬಗ್ಗೆ ಸಿದ್ದರಾಮಯ್ಯ ಏನಂತಾರೆ?

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಮಾಜಿ ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿ ಮತ್ತು ಬಾದಾಮಿ ಎರಡೂ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಚಾಮುಂಡೇಶ್ವರಿಯಲ್ಲಿ ಸೋಲುವ ಭೀತಿಯಿಂದ ಬಾದಾಮಿ ಕ್ಷೇತ್ರವನ್ನೂ ಸಿದ್ದರಾಮಯ್ಯ ಆಯ್ಕೆ ಮಾಡಿಕೊಂಡಿದ್ದರು. ಒಂದು ವೇಳೆ, ಎರಡೂ ಕ್ಷೇತ್ರದಲ್ಲಿ ಗೆದ್ದಿದ್ದರೆ, ಯಾವುದಾದರೂ ಒಂದು ಕ್ಷೇತ್ರಕ್ಕೆ ಮತ್ತೆ ಚುನಾವಣೆ ನಡೆಯಬೇಕಿತ್ತಲ್ಲವೇ? ಆಗ, ಶ್ರೀರಾಮುಲುಗೆ ನೀವು ಹೇಳಿದ ರಾಜಕೀಯ ಸ್ವಾರ್ಥದ ಮಾತು, ನಿಮಗೂ ಅನ್ವಯವಾಗುತ್ತಿತ್ತಲ್ಲವೇ?

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ
1999ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರು ಯಾವುದಕ್ಕೂ ಸೇಫ್ ಇರಲಿ ಎಂದು ಅಮೇಠಿಯ ಜೊತೆಗೆ ರಾಜ್ಯದ ಬಳ್ಳಾರಿ ಕ್ಷೇತ್ರದಲ್ಲೂ ಸ್ಪರ್ಧಿಸಿದ್ದರು. ಸುಷ್ಮಾ ಸ್ವರಾಜ್ ವಿರುದ್ದ 55,800 ಮತಗಳ ಅಂತರದಿಂದ ಗೆದ್ದಿದ್ದರು. ಜೊತೆಗೆ, ಅಮೇಠಿಯಲ್ಲೂ ಭಾರೀ ಅಂತರದಿಂದ ಗೆದ್ದಿದ್ದರು. ನಂತರ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು. ಅಂದು, ಸೋನಿಯಾ ಗಾಂಧಿ ಬಳ್ಳಾರಿ ಕ್ಷೇತ್ರದ ಜನತೆಯನ್ನು ಕೇಳಿ ರಾಜೀನಾಮೆ ನೀಡಿದ್ರಾ ಎನ್ನುವುದೂ ನಿಮಗೊಂದು ಪ್ರಶ್ನೆ.












Click it and Unblock the Notifications