ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾಷಾ ಸಮರ: ಸುದೀಪ್ ಹೇಳಿದ್ದು ಸರಿ ಇದೆ, ಅಜಯ್ ದೇವಗನ್‌ದು ಅಧಿಕ ಪ್ರಸಂಗತನ: ಎಚ್‌ಡಿಕೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 27: ಹಿಂದಿ ರಾಷ್ಟ್ರೀಯ ಭಾಷೆಯ ವಿಚಾರವಾಗಿ ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ ಮತ್ತು ಬಾಲಿವುಡ್ ನಟ ಅಜಯ್ ದೇವಗನ್ ನಡುವೆ ಟ್ವೀಟ್ ಸಮರಕ್ಕೆ ರಾಜಕೀಯ ಮುಖಂಡರು ಪ್ರತಿಕ್ರಿಯಿಸುತ್ತಿದ್ದಾರೆ.

ಹಿಂದಿ ಈಗ ರಾಷ್ಟ್ರೀಯ ಭಾಷೆಯಾಗಿ ಉಳಿದಿಲ್ಲ ಎಂದು ಸುದೀಪ್ ಹೇಳಿದ್ದಕ್ಕೆ, "ನೀವೇಕೆ ಹಿಂದಿಯಲ್ಲಿ ನಿಮ್ಮ ಸಿನಿಮಾಗಳನ್ನು ಡಬ್ ಮಾಡಿ ಬಿಡುತ್ತೀರಿ,' ಎಂದು ಅಜಯ್ ದೇವಗನ್ ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ದರು. ಇದರಿಂದಾಗಿ ಇಬ್ಬರು ಸ್ಟಾರ್‌ಗಳ ನಡುವೆ ಟ್ವಿಟ್ಟರ್‌ನಲ್ಲೇ ಪ್ರಶ್ನೋತ್ತರ ನಡೆದಿತ್ತು.

ಅಜಯ್ ದೇವಗನ್ ಅವರ ಟ್ವೀಟ್‌ಗೆ ಟ್ವೀಟ್ ಮೂಲಕವೇ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಕನ್ನಡ ಚಿತ್ರನಟ ಕಿಚ್ಚ ಸುದೀಪ್ ಅವರು, ಹಿಂದಿ ರಾಷ್ಟ್ರ ಭಾಷೆಯಲ್ಲ ಎಂದು ಹೇಳಿರುವುದು ಸರಿ ಇದೆ. ಅವರ ಮಾತಿನಲ್ಲಿ ತಪ್ಪು ಹುಡುಕುವಂಥದ್ದು ಏನೂ ಇಲ್ಲ. ನಟ ಅಜಯ್ ದೇವಗನ್ ಅತಿರೇಖದಿಂದ ಪ್ರತಿಕ್ರಿಯಿಸಿ ಅಧಿಕ ಪ್ರಸಂಗತನ ಮೆರೆದಿದ್ದಾರೆ ಎಂದು ಹೇಳಿದ್ದಾರೆ.

Former CM HD Kumaraswamy Reacted On Bollywood Actor Ajay Devagan Tweet

ದೇಶದ ಭಾಷೆಗಳಲ್ಲಿ ಹಿಂದಿಯೂ ಒಂದಷ್ಟೇ. ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಮರಾಠಿಯಂತೆ ಅದೂ ಒಂದು ಭಾಷೆ ಮಾತ್ರ. ಭಾರತ ಬಹು ಭಾಷೆಗಳ ತೋಟ. ಬಹು ಧರ್ಮ, ಬಹು ಭಾಷೆ, ಬಹು ಸಂಸ್ಕೃತಿಗಳ ಬೀಡು. ಇದನ್ನು ಕದಡುವ ಪ್ರಯತ್ನ ಬೇಡ ಎಂದು ಮಾಜಿ ಸಿಎಂ ಎಚ್‌ಡಿಕೆ ಟ್ವೀಟ್ ಮಾಡಿದ್ದಾರೆ.

ಹೆಚ್ಚು ಜನ ಮಾತನಾಡುತ್ತಾರೆ ಎಂದ ಮಾತ್ರಕ್ಕೆ ಹಿಂದಿ ಎಲ್ಲರ ಭಾಷೆಯಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕೇವಲ 9ಕ್ಕಿಂತ ಕಡಿಮೆ ರಾಜ್ಯಗಳಲ್ಲಿ ಹಿಂದಿ 2ನೇ ಭಾಷೆ, ಇಲ್ಲವೇ 3ನೇ ಭಾಷೆ ಅಥವಾ ಅದೂ ಆಗಿಲ್ಲ. ಹೀಗಿದ್ದ ಮೇಲೆ ಅಜಯ್ ದೇವಗನ್ ಮಾತುಗಳು ಎಷ್ಟು ಸರಿ. ಡಬ್ ಮಾಡಬೇಡಿ ಎಂದರೆ ಏನರ್ಥ? ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.

ಮೊದಲಿನಿಂದಲೂ ಕೇಂದ್ರದಲ್ಲಿ ಆಡಳಿತ ನಡೆಸಿದ 'ಹಿಂದಿ ರಾಜಕೀಯ ಪಕ್ಷಗಳು' ಪ್ರಾದೇಶಿಕ ಭಾಷೆಗಳನ್ನು ಹೊಸಕಿ ಹಾಕುವ ದುಷ್ಟ ಪ್ರಯತ್ನ ಮಾಡುತ್ತಿವೆ. ಕಾಂಗ್ರೆಸ್ ಆರಂಭ ಮಾಡಿದ ಅನ್ಯಭಾಷೆಗಳ ಹತ್ತಿಕ್ಕುವ ಕೃತ್ಯಗಳನ್ನು ಈಗ ಬಿಜೆಪಿ ಅತಿಯಾಗಿ ಮುಂದುವರಿಸುತ್ತಿದೆ ಎಂದು ರಾಷ್ಟ್ರೀಯ ಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ.

ಒಂದೇ ಪಕ್ಷ, ಒಂದೇ ತೆರಿಗೆ, ಒಂದೇ ಭಾಷೆ, ಒಂದೇ ಸರಕಾರ ಎನ್ನುವ ಸರ್ವಾಧಿಕಾರಿ ಮನಃಸ್ಥಿತಿಯ ಬಿಜೆಪಿ ಮತ್ತು ಅದರ ಹಿಂದಿ ರಾಷ್ಟ್ರೀಯವಾದದ ಮುಖವಾಣಿ ರೀತಿಯಲ್ಲಿ ಅಜಯ್ ದೇವಗನ್ ಬಡಬಡಿಸಿದ್ದಾರೆ.

Former CM HD Kumaraswamy Reacted On Bollywood Actor Ajay Devagan Tweet

ದೇವಗನ್ ಅರ್ಥ ಮಾಡಿಕೊಳ್ಳಬೇಕು. ಕನ್ನಡ ಚಿತ್ರರಂಗ ಇವತ್ತು ಹಿಂದಿ ಚಿತ್ರರಂಗವನ್ನು ಮೀರಿ ಬೆಳೆಯುತ್ತಿದೆ. ಕನ್ನಡಿಗರು ಕೂಡ ಪ್ರೋತ್ಸಾಹಿಸಿದ ಪರಿಣಾಮ ಹಿಂದಿ ಚಿತ್ರರಂಗ ಬೆಳೆದಿದೆ. ಅವರ 'ಫೂಲ್ ಔರ್ ಕಾಂಟೆ' ಸಿನಿಮಾ ಬೆಂಗಳೂರಿನಲ್ಲಿ ಒಂದು ವರ್ಷ ಪ್ರದರ್ಶನ ಆಗಿದ್ದನ್ನು ದೇವಗನ್ ಮರೆಯಬಾರದು.

ಶ್ರೇಷ್ಠತೆಯ ವ್ಯಸನ ಭಾರತವನ್ನು ಒಡೆಯುತ್ತಿದೆ. ಬಿಜೆಪಿ ಭಿತ್ತಿದ ಈ ರೋಗ, ಅಂಟುಜಾಡ್ಯದಂತೆ ಹರಡುತ್ತಾ ದೇಶವನ್ನು ಛಿದ್ರಗೊಳಿಸುವಂತಿದೆ. ಭಾರತದ ಏಕತೆಗೆ ಇದು ಅಪಾಯಕಾರಿ.

#ನಾವು_ಕನ್ನಡಿಗರು #ಕರ್ನಾಟಕದಲ್ಲಿಕನ್ನಡವೇಮೊದಲು #ಹಿಂದಿಹೇರಿಕೆನಿಲ್ಲಿಸಿ ಎಂದು ಹ್ಯಾಷ್ ಟ್ಯಾಗ್ ಮಾಡಿ ನಟ ಸುದೀಪ್ ಹೇಳಿಕೆಯನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಬೆಂಬಲಿಸಿದ್ದಾರೆ.

Former CM HD Kumaraswamy Reacted On Bollywood Actor Ajay Devagan Tweet

ತಪ್ಪು ತಿಳ್ಕೊಂಡಿದ್ದೆ ಎಂದ ಅಜಯ್ ದೇವಗನ್
ಇನ್ನು ಅಜಯ್ ದೇವಗನ್ ಪ್ರಶ್ನೆಗೆ ಉತ್ತರಿಸಿದ್ದ ಸುದೀಪ್, ನಾನು ಯಾವ ಅರ್ಥದಲ್ಲಿ ಆ ಮಾತನ್ನು ಹೇಳಿದ್ದೇನೆ ಎನ್ನುವುದನ್ನು ಖುದ್ದಾಗಿ ತಮ್ಮನ್ನು ಭೇಟಿಯಾದ ನಂತರ ವಿವರಿಸುವೆ. ನನ್ನ ಹೇಳಿಕೆ ಸಂಪೂರ್ಣ ವಿಭಿನ್ನವಾದದ್ದು. ಯಾರನ್ನೂ ನೋಯಿಸಲು, ಪ್ರಚೋದಿಸಲು ಮತ್ತು ಚರ್ಚೆ ಮಾಡಲು ಅದನ್ನು ಹೇಳಿದ್ದಂತೂ ಅಲ್ಲ ಎಂದು ಕಿಚ್ಚ ಸುದೀಪ್ ಮತ್ತೊಂದು ಟ್ವೀಟ್ ಮಾಡಿದ್ದರು.

ಈ ಟ್ವೀಟ್‌ಗೆ ಉತ್ತರಿಸಿದ ಅಜಯ್ ದೇವಗನ್, ತಪ್ಪು ತಿಳುವಳಿಕೆಯಿಂದಾಗಿ ಇಷ್ಟೆಲ್ಲ ಆಯಿತು. ಈ ವಿಷಯವನ್ನು ತಿಳಿಗೊಳಿಸಿದ್ದಕ್ಕೆ ಧನ್ಯವಾದಗಳು ಸ್ನೇಹಿತ ಸುದೀಪ್. ನಾವು ಎಲ್ಲ ಭಾಷೆಗಳನ್ನೂ ಗೌರವಿಸುತ್ತೇವೆ. ಮತ್ತು ಪ್ರತಿಯೊಬ್ಬರೂ ನಮ್ಮ ಭಾಷೆಯನ್ನು ಗೌರವಿಸಬೇಕು ಎಂದು ನಿರೀಕ್ಷಿಸುತ್ತೇವೆ. ಬಹುಶಃ ಅನುವಾದದಲ್ಲಿ ಏನೋ ಮಿಸ್ ಆಗಿರಬಹುದು ಎಂದು ಅಜಯ್ ದೇವಗನ್ ಟ್ವೀಟ್ ಮಾಡುವ ಮೂಲಕ ಈ ಪ್ರಕರಣಕ್ಕೆ ಅಂತ್ಯ ಹಾಡಲು ಪ್ರಯತ್ನಿಸಿದ್ದಾರೆ.

English summary
Former CM HD Kumaraswamy Reacted on Bollywood actor Ajay Devagan tweet For Sudeep Statement on Hindi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X