ಬಿಜೆಪಿಯ ಕುದುರೆ ವ್ಯಾಪಾರದ ಕಥೆ ಹೇಳಿದ ಸಿದ್ದರಾಮಯ್ಯ!
ಬೆಂಗಳೂರು, ಜುಲೈ 23 : ಕರ್ನಾಟಕ ವಿಧಾನಸಭೆಯಲ್ಲಿ ವಿಶ್ವಾಸಮತದ ಕುರಿತು ಮಂಗಳವಾರವೂ ಚರ್ಚೆ ನಡೆಯುತ್ತಿದೆ. ಬಿಜೆಪಿಯ ಕುದುರೆ ವ್ಯಾಪಾರದ ಕುರಿತು ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ಉಲ್ಲೇಖ ಮಾಡಿದರು.
ಮಂಗಳವಾರ ಸದನದಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, "ಇಷ್ಟೆಲ್ಲಾ ನಾಟಕ ಮಾಡಿ, ಶಾಸಕರನ್ನು ಖರೀದಿಸಿ ಸರ್ಕಾರ ರಚಿಸಿದರೂ ಯಡಿಯೂರಪ್ಪನವರು ವರ್ಷಕ್ಕಿಂತ ಹೆಚ್ಚು ಕಾಲ ಅಧಿಕಾರ ನಡೆಸಲು ಆಗುವುದಿಲ್ಲ" ಎಂದು ಭವಿಷ್ಯ ನುಡಿದರು.
ಆಪರೇಷನ್ ಕಮಲದ ಮೂಲಕ ಶಾಸಕರನ್ನು ಖರೀದಿ ಮಾಡುವ ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ ಕರ್ನಾಟಕ ಮಾತ್ರವಲ್ಲ ದೇಶದ ಹಲವು ರಾಜ್ಯಗಳಲ್ಲಿ ಬಿಜೆಪಿ ಶಾಸಕರನ್ನು ಖರೀದಿ ಮಾಡಿದ ವಿಷಯವನ್ನು ಉಲ್ಲೇಖ ಮಾಡಿದರು.
"ಬೇರೆ-ಬೇರೆ ರಾಜ್ಯಗಳಲ್ಲಿ ಹೆಚ್ಚು ಸ್ಥಾನ ಪಡೆಯದಿದ್ದರೂ ಬಿಜೆಪಿ ಸಮ್ಮಿಶ್ರ ಸರ್ಕಾರ ರಚನೆ ಮಾಡಲಿಲ್ಲವೇ? ಕರ್ನಾಟಕದಲ್ಲಿ ನಮ್ಮದು ಅಪವಿತ್ರ ಮೈತ್ರಿಯಾದರೇ, ಗೋವಾದಲ್ಲಿ ಬಿಜೆಪಿ ಸಮ್ಮಿಶ್ರ ಸರ್ಕಾರ ರಚಿಸಿರುವುದು ಅಪವಿತ್ರ ಮೈತ್ರಿಯಲ್ಲವೇ?" ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

ಸಿದ್ದರಾಮಯ್ಯ ಭಾಷಣ
ತಮಿಳುನಾಡಲ್ಲಿ ಪಳನಿಸ್ವಾಮಿಯವರ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಾಸ್ಸು ಪಡೆಯುತ್ತೇವೆ ಎಂದು ಕೆಲವು ಶಾಸಕರು ರಾಜ್ಯಪಾಲರಿಗೆ ಪತ್ರ ನೀಡಿದ್ದರು. ಅಲ್ಲಿ ವಿಪ್ ಸಹ ನೀಡದೆ ಆ ಶಾಸಕರನ್ನು ಅನರ್ಹಗೊಳಿಸಲಾಗಿದೆ. ಯಾವುದೇ ಶಾಸಕ ಪಕ್ಷದ ನಿಯಮಗಳಿಗೆ ವಿರುದ್ಧವಾಗಿ ವರ್ತಿಸಿದರೆ ತಕ್ಷಣ ಅವರನ್ನು ವಜಾ ಮಾಡುವ ಅಧಿಕಾರವಿದೆ.

ಶಾಸಕರನ್ನು ಖರೀದಿ ಮಾಡಿದ್ದಾರೆ
ಇಂದು ಚರ್ಚೆಯಾಗಬೇಕಿರುವ ಮುಖ್ಯ ವಿಚಾರ ಶಾಸಕರ ಪಕ್ಷಾಂತರದ್ದು. ಇದೇ ರೀತಿಯ ಕೀಳು ಮನೋಭಾವ ಮುಂದುವರೆದರೆ ಯಾವ ಸರ್ಕಾರ ಕೂಡ ಸ್ಥಿರವಾಗಿ ನಿಲ್ಲಲಾರದು. ಬಿಜೆಪಿಯವರು ನಮ್ಮ ಶಾಸಕರನ್ನು ಸಾರಾಸಗಟಾಗಿ ಖರೀದಿ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಬೆಳವಣಿಗೆ. ಇದನ್ನು ರಾಜ್ಯದ ಜನ ಒಪ್ಪುತ್ತಾರೆಯೇ?.

ಯಡಿಯೂರಪ್ಪ ಅಧಿಕಾರ
ಇಷ್ಟೆಲ್ಲಾ ನಾಟಕ ಮಾಡಿ, ಶಾಸಕರನ್ನು ಖರೀದಿಸಿ ಸರ್ಕಾರ ರಚಿಸಿದರೂ ಯಡಿಯೂರಪ್ಪನವರು ವರ್ಷಕ್ಕಿಂತ ಹೆಚ್ಚು ಕಾಲ ಅಧಿಕಾರ ನಡೆಸಲು ಆಗುವುದಿಲ್ಲ. 2008ರಲ್ಲೂ ಇದೇ ಪರಿಸ್ಥಿತಿಯನ್ನು ಅವರು ಎದುರಿಸಿದ್ದಾರೆ.

ಗಾದೆ ಮಾತು ಉಲ್ಲೇಖಿಸಿದ ಸಿದ್ದರಾಮಯ್ಯ
ಬಿಜೆಪಿಯವರು ನಾಟಕ ಮಾಡುತ್ತಿದ್ದಾರೆ. ಇದೊಂದು ರೀತಿ ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಪ್ರಪಂಚಕ್ಕೆ ತಿಳಿಯದು ಎಂಬಂತಿದೆ. ಮುಂದೆ ಬಿಜೆಪಿ ಸರ್ಕಾರ ಬಂದು ಈಗ ಪಕ್ಷಾಂತರ ಮಾಡಿದವರೆಲ್ಲ ಬಿಜೆಪಿಯಲ್ಲಿ ಮಂತ್ರಿಗಳಾದರೆ ಜಗತ್ತಿಗೆ ಇವರ ಕುತಂತ್ರ ತಿಳಿಯುವುದಿಲ್ಲವೇ?.

ಅಲ್ಲಿರುವುದು ಯಾವ ಸರ್ಕಾರ
ಹಾಗಾದರೆ ಮಹಾರಾಷ್ಟ್ರದಲ್ಲಿ ಯಾವ ಸರ್ಕಾರವಿದೆ? 15 ಜನ ಪಕ್ಷಾಂತರ ಶಾಸಕರನ್ನು ಕಾಯಲು ಸಾವಿರಾರು ಜನರನ್ನು ಬಿಟ್ಟಿದ್ದಾರಲ್ಲ ಇದು ಪ್ರಜಾಪ್ರಭುತ್ವ ವ್ಯವಸ್ಥೆಯೇ? ನಾವು ನಮ್ಮ ಪಕ್ಷದ ಶಾಸಕರ ಬಳಿಯೇ ಮಾತನಾಡುವಂತಿಲ್ಲ, ಇಂದು ಇಂದಿನ ರಾಜಕಾರಣದ ವಾಸ್ತವ ಪರಿಸ್ಥಿತಿ. ಇದನ್ನು ಜನ ಅರ್ಥ ಮಾಡಿಕೊಳ್ಳಬೇಕು.












Click it and Unblock the Notifications