Youtuber Sameer MD: ಖ್ಯಾತ ಯುಟ್ಯೂಬರ್ ಸಮೀರ್ ವಿರುದ್ಧ FIR ದಾಖಲು, ಆರೋಪವೇನು?
ಧರ್ಮಸ್ಥಳದ ಸೌಜನ್ಯ ಕೇಸ್ ಕುರಿತು ವಿಶೇಷ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದ ಖ್ಯಾತ ಯೂಟ್ಯೂಬರ್ ಸಮೀರ್ ಎಂ.ಡಿ (Youtuber Sameer MD) ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಸಮೀರ್ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಮೀರ್ ಅವರು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸಿ ಕಾಲ್ಪನಿಕ ಹಾಗೂ ಸುಳ್ಳು ಮಾಹಿತಿಯನ್ನೊಳಗೊಂಡ ವಿಡಿಯೋ ಮಾಡಿ, ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸಮೀರ್ ಅವರ ವಿಡಿಯೋ ಸಾರ್ವಜನಿಕರಲ್ಲಿ ಪ್ರಚೋದನೆ ಉಂಟು ಮಾಡುವ ರೀತಿಯಲ್ಲಿ ಇದೆ ಎಂದು ಅವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂಲ ಪ್ರಕರಣದಲ್ಲಿ ಸಾಕ್ಷಿದಾರರು ಮತ್ತು ದೂರುದಾರರು ನ್ಯಾಯಾಲಯದಲ್ಲಿ ನೀಡಿರುವ ಮಾಹಿತಿಯನ್ನು ಬಿಟ್ಟುಕೊಟ್ಟು, ಇತರೆ ಸುಳ್ಳು ಹಾಗೂ ಕಾಲ್ಪನಿಕ ಮಾಹಿತಿಯನ್ನು ವಿಡಿಯೋ ಮೂಲಕ ಹರಡಲಾಗಿದೆ ಎಂಬ ಆರೋಪವೂ ಇವರ ಮೇಲೆ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಸಂಬಂಧಿತ ಸಮೀರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪ್ರಜಾವಾಣಿ ವರದಿ ಮಾಡಿದೆ.

ಏನಿದು ಪ್ರಕರಣ?
ಧರ್ಮಸ್ಥಳದಲ್ಲಿ ಹಲವಾರು ಹೆಣಗಳನ್ನು ಹೂತು ಹಾಕಿರುವ ಬಗ್ಗೆ ಸಾಕ್ಷಿ ದೂರುದಾರ ನೀಡಿರುವ ದೂರಿನ ಬಗ್ಗೆ ಯೂಟ್ಯೂಬರ್ ಸಮೀರ್ ಅವರು ಕಾಲ್ಪನಿಕವಾಗಿ ಎ.ಐ ವಿಡಿಯೋ ಸೃಷ್ಟಿಸಿ ಸುಳ್ಳು ಮಾಹಿತಿಗಳನ್ನು ಒಳಗೊಂಡಿರುವ ವೀಡಿಯೋ ಮಾಡಿದ್ದಾರೆ. ಈ ಮೂಲಕ ಸಾರ್ವಜನಿಕರನ್ನು ಉದ್ರೇಕಗೊಳ್ಳುವಂತೆ ಮಾಡಿದ್ದಾರೆ ಎಂದು ಸಮೀರ್ ಧರ್ಮಸ್ಥಳ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ದೂರುದಾರರು ತನ್ನ ದೂರಿನಲ್ಲಿ ಹಾಗೂ ನ್ಯಾಯಾಲಯದ ಮುಂದೆ ಬಹಿರಂಗಪಡಿಸಿರುವ ಮಾಹಿತಿಗಳಲ್ಲದೆ, ಸಾಕ್ಷಿ ದೂರುದಾರರ ಬಗ್ಗೆ ಹಾಗೂ ಕೇಸ್‌ನ ಬಗ್ಗೆ ಹೆಚ್ಚಿನ ಮಾಹಿತಿ ಇರುವ ಕಾಲ್ಪನಿಕ ವಿಡಿಯೋ ಅನ್ನು ಎಐ ತಂತ್ರಜ್ಞಾನದ ಮೂಲಕ ರಚಿಸಲಾಗಿದೆ ಎಂದು ಆರೋಪಿಸಲಾಗಿದೆ. ಕಾಲ್ಪನಿಕ ವಿಡಿಯೋ ಮೂಲಕ ಸಮೀರ್ ಸುಳ್ಳು ಮಾಹಿತಿಗಳಿರುವ ವೀಡಿಯೋವನ್ನು ಯುಟ್ಯೂಬ್‌ನಲ್ಲಿ ಪ್ರಸಾರ ಮಾಡಿದ್ದು, ಇದು ಸಾರ್ವಜನಿಕರು ಉದ್ರೇಕಗೊಳ್ಳುವಂತೆ ಇದೆ ಎಂಬ ಆರೋಪದ ಮೇರೆಗೆ ಧರ್ಮಸ್ಥಳ ಠಾಣೆಯಲ್ಲಿ 192, 240, 353(1)(b) ಸೇರಿದಂತೆ ವಿವಿಧ ಕಲಂಗಳಡಿ ಕೇಸ್ ದಾಖಲಿಸಿರುವುದಾಗಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.
ಮಂಗಳೂರು ಮೂಲದ ಜನಪ್ರಿಯ ಯೂಟ್ಯೂಬರ್ ಸಮೀರ್ ಎಂ.ಡಿ ಈ ಹಿಂದೆ ಧರ್ಮಸ್ಥಳದ ಸೌಜನ್ಯ ಅವರ ಅ*ತ್ಯಾಚಾರ ಕೇಸ್ ಸಂಬಂಧ ವಿಡಿಯೋ ಮಾಡಿ ಯುಟ್ಯೂಬ್‌ನಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಎಲ್ಲಡೆ ವೈರಲ್ ಆಗಿ ಸಂಚಲನ ಮೂಡಿಸಿತ್ತು. ಈಗ ಧರ್ಮಸ್ಥಳದ ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಸಮೀರ್ ವಿಡಿಯೋ ಮಾಡಿದ್ದರು. ಆದರೆ ಈ ವಿಡಿಯೋ ಸುಳ್ಳಿನಿಂದ ಹಾಗೂ ಪ್ರಚೋದನಕಾರಿಯಾಗಿ ಕೂಡಿದೆ ಎಂದು ಆರೋಪಿಸಲಾಗಿದೆ. ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಹೆಣ್ಣುಮಕ್ಕಳ ಹೆಣಗಳನ್ನು ಹೂತು ಹಾಕಿರುವ ಕೇಸ್ ಸಂಬಂಧ ಎಐ ವಿಡಿಯೋ ಮಾಡಿದ್ದಾರೆ ಎಂಬ ಆರೋಪ ಸಮೀರ್ ಮೇಲೆ ಕೇಳಿಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಹಲವರು ಸಮೀರ್ ಬೆಂಬಲಕ್ಕೆ ನಿಂತಿದ್ದಾರೆ.












Click it and Unblock the Notifications