ವಿಶೇಷ: ಸಿಎಂ ಹುದ್ದೆಗೇರುವ ಡಿಕೆಶಿ ಕನಸು ಇವತ್ತಿನದಲ್ಲ!

ಮುಂದಿನ 2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನವನ್ನು ಗೆದ್ದು ಅಧಿಕಾರಕ್ಕೆ ಬರುವ ಕನಸನ್ನು ಕಾಂಗ್ರೆಸ್ ನಾಯಕರು ಕಾಣುತ್ತಿದ್ದಾರೆ. ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಮುಗಿಯುವ ವೇಳೆಗೆ ರಾಜ್ಯದಲ್ಲಿ ಪಕ್ಷ ಬಲಿಷ್ಠವಾಗುತ್ತದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಗೆಲುವು ನಮ್ಮದೇ ಎಂಬ ಲೆಕ್ಕಾಚಾರ ಕಾಂಗ್ರೆಸ್ಸಿನೊಳಗೆ ಜೋರಾಗಿಯೇ ನಡೆಯುತ್ತಿದೆ.

ಭಾರತ್ ಜೋಡೋ ಯಾತ್ರೆ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಮುಂದಿನ ದಿನಗಳಲ್ಲಿ ಯಾವ ರೀತಿ ಲಾಭತಂದು ಕೊಡುತ್ತದೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲವಾದರೂ ಪಕ್ಷದ ಕಾರ್ಯಕರ್ತರು ಮತ್ತು ನಾಯಕರಲ್ಲಿ ಆಶಾಭಾವನೆಯನ್ನು ಹುಟ್ಟು ಹಾಕಿದ್ದಂತು ನಿಜ. ಆದರೆ ಜೋಡೋ ಯಾತ್ರೆ ರಾಜ್ಯವನ್ನು ನಿರ್ಗಮಿಸುವ ವೇಳೆಗೆ ಕಾಂಗ್ರೆಸ್ ಒಳಗೆ ಇರುವ ಭಿನ್ನಾಭಿಪ್ರಾಯಗಳನ್ನು ದೂರ ಮಾಡಿ ನಾಯಕರನ್ನು ಒಂದು ಮಾಡಿದರೆ ಜೋಡೋ ಯಾತ್ರೆ ಸಾರ್ಥಕವಾದಂತೆ.

ರಾಜ್ಯ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಈಗಾಗಲೇ ಜಗಜ್ಜಾಹೀರಾಗಿದೆ. ವಿಪಕ್ಷನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನಡುವೆ ಸಿಎಂ ಅಭ್ಯರ್ಥಿ ವಿಚಾರ ಫೈಟ್ ತಾರಕಕ್ಕೇರಿದೆ. ಅದು ಹಲವು ಸಂದರ್ಭಗಳಲ್ಲಿ ಸಾರ್ವಜನಿಕವಾಗಿಯೂ ಪ್ರಕಟವಾಗಿದೆ. ಹೀಗಾಗಿ ಈ ಇಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಲ್ಲರೂ ಒಟ್ಟಾಗಿದ್ದೇವೆ ಎಂಬುದನ್ನು ಸಾರ್ವಜನಿಕವಾಗಿ ತೋರಿಸುವ ಕೆಲಸವನ್ನು ರಾಹುಲ್ ಗಾಂಧಿ ಮಾಡುತ್ತಾ ಬಂದಿದ್ದು ಅದನ್ನು ಹೇಗೆಲ್ಲ ಮಾಡಿದ್ದಾರೆ ಎಂಬುದನ್ನು ಕೂಡ ಜನ ನೋಡಿದ್ದಾರೆ.

ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡುವಲ್ಲಿ ಪಕ್ಷದ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ ಎರಡು ಮಾತಿಲ್ಲ. ಆದರೆ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಎಲ್ಲರನ್ನು ಒಟ್ಟಾಗಿ ಕೊಂಡೊಯ್ಯುವುದು ಅವರಿಗೆ ಇದುವರೆಗೆ ಸಾಧ್ಯವಾಗಿಲ್ಲ. ಹೀಗಾಗಿ ಸದ್ಯ ಪಕ್ಷದಲ್ಲಿ ಎರಡು ಬಣಗಳಿವೆ ಎಂಬುದು ಎದ್ದು ಕಾಣಿಸುತ್ತಿದೆ.

ಮಾತು ಮರೆತ ಸಿದ್ದರಾಮಯ್ಯ

ಮಾತು ಮರೆತ ಸಿದ್ದರಾಮಯ್ಯ

ಕಳೆದ 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿ ಮುಖ್ಯಮಂತ್ರಿಯಾದಾಗ ಸಿದ್ದರಾಮಯ್ಯರವರು ಇದೇ ನನ್ನ ಕೊನೆಯ ಚುನಾವಣೆ ಎಂದಿದ್ದರು. ಅದಾದ ಬಳಿಕ 2018ರಲ್ಲಿ ಚುನಾವಣೆ ನಡೆದಾಗ ತಾವು ಹಿಂದೆ ಹೇಳಿದ್ದ ಮಾತನ್ನು ಮರೆತು ಬಿಟ್ಟರಲ್ಲದೆ, ತಮ್ಮದೇ ನೇತೃತ್ವದಲ್ಲಿ ಚುನಾವಣೆಗೆ ಹೋಗುವುದರೊಂದಿಗೆ ಮತ್ತೊಮ್ಮೆ ಸಿಎಂ ಆಗುವ ಕನಸು ಹೊತ್ತಿದ್ದರು.

2018ರಲ್ಲೇ ಸಿಎಂ ಕನಸು ಹೊರ ಹಾಕಿದ್ದ ಡಿಕೆಶಿ

2018ರಲ್ಲೇ ಸಿಎಂ ಕನಸು ಹೊರ ಹಾಕಿದ್ದ ಡಿಕೆಶಿ

ಆದರೆ ಆ ವೇಳೆಗೆ ಸಿದ್ದರಾಮಯ್ಯ ಅವರಿಗೆ ಪ್ರತಿಸ್ಪರ್ಧಿಯಾಗಿ ಅವತ್ತು ಇಂಧನ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಅವರು ನಾನು ಕೂಡ ಸಿಎಂ ಹುದ್ದೆ ಆಕಾಂಕ್ಷಿ ಎಂಬುದನ್ನು ಸಮಯ ಸಿಕ್ಕಾಗ ಹೇಳುತ್ತಾ ಬಂದಿದ್ದರು. ಅಷ್ಟೇ ಅಲ್ಲದೆ, ತಮ್ಮಲ್ಲಿರುವ ಸಿಎಂ ಹುದ್ದೆ ಆಕಾಂಕ್ಷೆಯನ್ನು 2018ರ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯದ ಮದ್ದೂರಿನಲ್ಲಿ ಅವತ್ತಿನ ಕಾಂಗ್ರೆಸ್ ಅಭ್ಯರ್ಥಿ ಮಧುಮಾದೇಗೌಡರ ಪರ ನಡೆದ ರೋಡ್ ಶೋ ವೇಳೆ ಜೆಡಿಎಸ್‌ನ ಭದ್ರಕೋಟೆಯಲ್ಲಿ ನಿಂತು ತಾನು ಕೂಡ ಸಿಎಂ ಹುದ್ದೆ ಆಕಾಂಕ್ಷಿ ಎಂಬುದನ್ನು ಹೊರಹಾಕಿದ್ದರು.

ಅವತ್ತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಣ್ಣ ಮುಖ್ಯಮಂತ್ರಿ ಆಗ್ತಾರೆ ಓಟ್ ಹಾಕಿ ಅಂತಾರೆ. ಹಾಗಾದ್ರೆ ನಾನೇನಿಲ್ವಾ? ನನಗೇನು ಸಿಎಂ ಆಗೋ ಸಾಮರ್ಥ್ಯವಿಲ್ಲವೇ? ಎಂದು ಸುದ್ದಿಗಾರರನ್ನು ಪ್ರಶ್ನಿಸುವ ಮೂಲಕ ತಮ್ಮ ಒಳಗಿನ ಬಯಕೆಯನ್ನು ಹೊರಹಾಕಿದ್ದರು. ಆ ವಿಚಾರ ಅವತ್ತಿನ ಮಟ್ಟಿಗೆ ಭಾರೀ ಸುದ್ದಿಗೆ ಗ್ರಾಸವಾಗಿತ್ತು.

ಡಿಕೆಶಿಗೆ ಕಾಂಗ್ರೆಸ್ ಅಧಿಕಾರಕ್ಕೆ ತರುವ ಹಠ

ಡಿಕೆಶಿಗೆ ಕಾಂಗ್ರೆಸ್ ಅಧಿಕಾರಕ್ಕೆ ತರುವ ಹಠ

ಅದಾದ ಬಳಿಕ ಐದು ವರ್ಷದಲ್ಲಿ ರಾಜಕೀಯವಾಗಿ ರಾಜ್ಯದಲ್ಲಿ ಮತ್ತು ಕಾಂಗ್ರೆಸ್ ನಲ್ಲಿ ಏನೇನು ಬೆಳವಣಿಗೆ ಆಯಿತು ಎಂಬುದನ್ನು ರಾಜ್ಯದ ಜನತೆ ನೋಡಿದ್ದಾರೆ. ಕಳೆದ 2018ರ ಚುನಾವಣೆಯ ಸೋಲಿನ ಬಳಿಕ ಕಾಂಗ್ರೆಸ್‌ನ ಸಾರಥ‍್ಯ ವಹಿಸಿಕೊಂಡಿರುವ ಡಿ.ಕೆ.ಶಿವಕುಮಾರ್ ಮುಂದಿನ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಗೆಲ್ಲಿಸಿ ತಾವು ಮುಖ್ಯಮಂತ್ರಿಯಾಗಬೇಕೆಂಬ ಹಠಕ್ಕೆ ಬಿದ್ದಿದ್ದಾರೆ. ಅದಕ್ಕಾಗಿ ಏನೆಲ್ಲ ಬೇಕೋ ಅದೆಲ್ಲವನ್ನು ಮಾಡುತ್ತಲೇ ಇದ್ದಾರೆ.

ಇನ್ನೊಂದೆಡೆ ಸಿದ್ದರಾಮಯ್ಯ ಅವರ ಬೆಂಬಲಿಗರು ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ ಎಂಬುದಾಗಿ ಹೋದಲ್ಲಿ ಬಂದಲ್ಲಿ ಘೋಷಣೆ ಮಾಡುವ ಮೂಲಕ ಟಕ್ಕರ್ ನೀಡುತ್ತಿದ್ದಾರೆ. ಈ ನಡುವೆ ಸಿಬಿಐ, ಐಟಿ, ಇಡಿ ವಿಚಾರಣೆಗಳನ್ನು ಎದುರಿಸುತ್ತಲೇ ಪಕ್ಷವನ್ನು ಸಂಘಟಿಸಿ ಹೇಗಾದರೂ ಮಾಡಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದೇ ತರಬೇಕು ಅಷ್ಟೇ ಅಲ್ಲ ನಾನೇ ಮುಖ್ಯಮಂತ್ರಿಯಾಗಬೇಕು ಎಂಬ ಆಕಾಂಕ್ಷೆಯಲ್ಲಿ ಡಿ.ಕೆ.ಶಿವಕುಮಾರ್ ಇದ್ದಾರೆ.

ಸಾಮೂಹಿಕ ನಾಯಕತ್ವ ಕೈ ಅಸ್ತ್ರ

ಸಾಮೂಹಿಕ ನಾಯಕತ್ವ ಕೈ ಅಸ್ತ್ರ

ಸದ್ಯ ರಾಹುಲ್ ಗಾಂಧಿ ಅವರು ರಾಜ್ಯದಲ್ಲಿ ಭಾರತ್ ಜೋಡೋ ಯಾತ್ರೆ ಮಾಡುತ್ತಿರುವುದರಿಂದ ಕಾಂಗ್ರೆಸ್ ನಾಯಕರು ನಾವೆಲ್ಲ ಒಟ್ಟಾಗಿದ್ದೇವೆ ಎಂಬಂತೆ ಮೌನವಾಗಿದ್ದಾರೆ. ಜತೆಗೆ ಕಾರ್ಯಕರ್ತರು ಕೂಡ ಸಿಎಂ ಅಭ್ಯರ್ಥಿ ಕುರಿತಂತೆ ಘೋಷಣೆ ಮಾಡುತ್ತಿಲ್ಲ. ಆದರೆ ಇಲ್ಲಿವರೆಗೆ ಏನೆಲ್ಲ ಆಗಿದೆಯೋ ಅದು ಮುಖ್ಯವಲ್ಲ. ಮುಂದಿನ ದಿನಗಳಲ್ಲಿ ಏನೆಲ್ಲ ಬೆಳವಣಿಗೆ ಆಗುತ್ತದೆಯೋ ಅದು ಚುನಾವಣೆ ದೃಷ್ಟಿಯಲ್ಲಿ ಕಾಂಗ್ರೆಸ್‌ಗೆ ಬಹುಮುಖ್ಯವಾಗಲಿದೆ.

ಸಿಎಂ ಅಭ್ಯರ್ಥಿ ಯಾರು ಎಂಬುದರ ಬಗ್ಗೆ ಪಕ್ಷದಲ್ಲಿ ಇನ್ನೂ ಕೂಡ ನಿರ್ಧಾರವಾಗಿಲ್ಲ. ಆ ರೇಸ್ ನಲ್ಲಿ ಬಹುಮುಖ್ಯವಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಕಾಣಿಸುತ್ತಿದ್ದಾರೆ. ಇನ್ನು ಒಂದಷ್ಟು ಆಕಾಂಕ್ಷಿಗಳು ಹುಟ್ಟಿಕೊಂಡರೂ ಅಚ್ಚರಿಪಡಬೇಕಾಗಿಲ್ಲ. ಆದರೆ ಚುನಾವಣೆ ವೇಳೆಗೆ ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡಿದರೂ, ಮಾಡದಿದ್ದರೂ ಸಮಸ್ಯೆಯಂತು ಇದ್ದೇ ಇದೆ. ಹೀಗಾಗಿ ರಾಜಕೀಯ ವಿರೋಧಿಗಳು ಕೇಳುವ ಪ್ರಶ್ನೆಗೆ ಸಾಮೂಹಿಕ ನಾಯಕತ್ವದ ಜಪವೇ ಕಾಂಗ್ರೆಸ್‌ನ ಉತ್ತರವಾದರೂ ಅಚ್ಚರಿಯಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+