ಉತ್ತರಪ್ರದೇಶದಿಂದ ಕರ್ನಾಟಕ ಕಲಿಯಬೇಕಾದ ರಾಜಕೀಯ ಪಾಠಗಳೇನು?
ಬೆಂಗಳೂರು, ಮಾರ್ಚ್ 24 : ಗೋರಖಪುರ ಉಪಚುನಾವಣೆಯಲ್ಲಿ ಅನುಭವಿಸಿದ ಸೋಲಿನ ಸೇಡನ್ನು ಅಮಿತ್ ಶಾ ಅವರು ಎರಡೇ ವಾರದಲ್ಲಿ ರಾಜ್ಯಸಭೆ ಚುನಾವಣೆಯಲ್ಲಿ ತೀರಿಸಿಕೊಂಡಿದ್ದಾರೆ. ಹತ್ತರಲ್ಲಿ ಒಂಬತ್ತನ್ನು ಗೆದ್ದು ಮಾಯಾವತಿಗೆ ತಾವೆಂಥ ರಾಜಕಾರಣಿ ಎಂಬುದನ್ನು ಅಮಿತ್ ಶಾ ಮನವರಿಕೆ ಮಾಡಿಕೊಟ್ಟಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಈ ಎರಡು ಚುನಾವಣೆ ಮತ್ತು ಫಲಿತಾಂಶಗಳು, ಇನ್ನು ಒಂದೂವರೆ ತಿಂಗಳಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ಕರ್ನಾಟಕಕ್ಕೂ ಹಲವಾರು ಪಾಠಗಳನ್ನು ಕಲಿಸಿದೆ. ಮೈತ್ರಿ ಮಾಡಿಕೊಂಡು ಏನು ಬೇಕಾದರೂ ಸಾಧಿಸಬಹುದು ಎಂದು ಮೆರೆದಾಡುತ್ತಿದ್ದ ಸಮಾಜವಾದಿ ಮತ್ತು ಬಹುಜನ ಸಮಾಜವಾದಿ ಪಕ್ಷಕ್ಕೆ ಮುಟ್ಟಿ ನೋಡಿಕೊಳ್ಳುವಂಥ ಪಾಠ ಕಲಿಸಿದ್ದಾರೆ ಶಾ ಮೇಷ್ಟ್ರು.
ಲಿಂಗಾಯತ ಪ್ರತ್ಯೇಕ ಧರ್ಮದ ಸಿದ್ದು ದಾಳಕ್ಕೆ ದಂಗಾದರೇ ಅಮಿತ್ ಶಾ?
ಲಿಂಗಾಯತ ಮತ್ತು ವೀರಶೈವ ಪಂಗಡಗಳನ್ನು ಒಡೆದು ಚುನಾವಣೆಯಲ್ಲಿ ಲಿಂಗಾಯತರ ಮತಗಳನ್ನು ಅನಾಮತ್ ಪಡೆಯುತ್ತೇನೆ ಎಂದುಕೊಂಡಿರುವ ಕಾಂಗ್ರೆಸ್ ಪಕ್ಷ, ಅಮಿತ್ ಶಾ ಇದಕ್ಕೆ ಪ್ರತಿಯಾಗಿ ಏನೇನು ದಾಳಗಳನ್ನು ಉರುಳಿಸಲಿದ್ದಾರೆ ಎಂಬುದರತ್ತ ಒಂದು ಕಣ್ಣು ನೆಟ್ಟಿರಬೇಕು. ಈಗಾಗಲೆ, ಅಮಿತ್ ಶಾ ಅವರು ಕರ್ನಾಟಕದತ್ತ ಪಾದ ಬೆಳೆಸಿದ್ದು, ಹಲವಾರು ಲಿಂಗಾಯತ ಮಠಗಳಿಗೆ ಭೇಟಿ ನೀಡಲಿದ್ದಾರೆ.
ಮಾಯಾವತಿ-ಅಖಿಲೇಶ್ ಮುಂದಿನ ಟಾರ್ಗೆಟ್ 'ಕೈರಾನ', ಬಿಜೆಪಿಗೆ ನಡುಕ
ಹಾಗೆಯೆ, ಉತ್ತರ ಪ್ರದೇಶದಲ್ಲಿ ಮಣ್ಣುಮುಕ್ಕಿರುವ ಮಾಯಾವತಿಯೊಂದಿಗೆ ಚುನಾವಣಾ ಮೈತ್ರಿಯ ಮಾಡಿಕೊಂಡಿರುವ ಜಾತ್ಯತೀತ ಜನತಾದಳದ ನಾಯಕರು ಕೂಡ, ಯಾವ ಲೆಕ್ಕಾಚಾರದಿಂದ ಮೈತ್ರಿ ಮಾಡಿಕೊಳ್ಳಲಾಗಿದೆ ಮತ್ತು ಅದು ಎಷ್ಟರ ಮಟ್ಟಿಗೆ ಫಲ ನೀಡುತ್ತದೆ ಎಂಬುದರ ಬಗ್ಗೆ ಎಚ್ಚರಿಕೆಯಿಂದಿರಬೇಕು. ಸ್ವಲ್ಪ ಯಡವಟ್ಟಾದರೂ ಜೆಡಿಎಸ್ ಮತ್ತೆ ಮೂರನೇ ಸ್ಥಾನದಲ್ಲಿ ಕೂತಿರಬೇಕಾಗುತ್ತದೆ ಕರ್ನಾಟಕದಲ್ಲಿ.

ಜಾತಿಗಣತಿಯ ಪ್ರಕಾರ ದಲಿತರೇ ಬಹುಸಂಖ್ಯಾತರು
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕೆಲ ವರ್ಷಗಳ ಹಿಂದೆ ನಡೆಸಿದ ಜಾತಿ ಜನಗಣತಿಯ ಪ್ರಕಾರ, ರಾಜ್ಯದಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿರುವವರು ದಲಿತರು. ಆರೂಕಾಲು ಕೋಟಿಯಲ್ಲಿ ಒಂದುಕಾಲು ಕೋಟಿಯಷ್ಟು, ಅಂದರೆ ಹೆಚ್ಚೂ ಕಡಿಮೆ ಶೇ.20ರಷ್ಟು ದಲಿತರು ಕರ್ನಾಟಕದಲ್ಲಿದ್ದಾರೆ. ಈ ವರದಿಯನ್ನು ಸಿದ್ದರಾಮಯ್ಯ ಸರಕಾರ ಬಿಡುಗಡೆ ಮಾಡಲಿಲ್ಲವಾದರೂ, ಸೋರಿಕೆಯಾದ ಮಾಹಿತಿಯಂತೆ ದಲಿತರೇ ಕರ್ನಾಟಕದಲ್ಲಿ ಬಹುಸಂಖ್ಯಾತರು. ಅವರ ನಂತರ ಬರುವವರು ಮುಸ್ಲಿಂರು. ಅವರ ಸಂಖ್ಯೆ ಶೇ.16ರಷ್ಟು. ಶೇ.14ರಷ್ಟು ಲಿಂಗಾಯತರಿದ್ದರೆ, ಶೇ. 11ರಷ್ಟು ಒಕ್ಕಲಿಗರಿದ್ದಾರೆ. ಮೇಲ್ವರ್ಗದಲ್ಲಿ ಅತಿಕಡಿಮೆ ಸಂಖ್ಯೆಯಲ್ಲಿರುವವರೆಂದರೆ ಬ್ರಾಹ್ಮಣರು, ಕೇವಲ 8 ಲಕ್ಷದಷ್ಟು.
ಉತ್ತರ ಪ್ರದೇಶದಲ್ಲಿ ಬಿಎಸ್ಪಿಗೆ ಮರ್ಮಾಘಾತ, ಸೇಡು ತೀರಿಸಿಕೊಂಡ ಬಿಜೆಪಿ

ಕೈಗೂಡುವುದೇ ಗೌಡ-ಮಾಯಾವತಿ ಮೈತ್ರಿ?
ಜಾತಿ ಗಣತಿಯ ಪ್ರಕಾರ ಅತಿಹೆಚ್ಚು ಸಂಖ್ಯೆಯಲ್ಲಿರುವ ದಲಿತರ ಅಧಿನಾಯಕಿಯಾಗಿರುವ ಮಾಯಾವತಿಯ ಸಖ್ಯವನ್ನು ಜೆಡಿಎಸ್ ಪರಮೋಚ್ಚ ನಾಯಕ ಎಚ್ ಡಿ ದೇವೇಗೌಡ ಅವರು ಬೆಳೆಸಿರುವುದರಿಂದ, ಇದರ ಲಾಭ ಪಡೆದು ವಿಧಾನಸಭೆ ಚುನಾವಣೆಯಲ್ಲಿ ಮೇಲುಗೈ ಸಾಧಿಸಬಹುದು ಎಂಬ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ. ಇಂಥ ಲೆಕ್ಕಾಚಾರದಲ್ಲಿ ದೇವೇಗೌಡರದು ಎಂಥ ಪಳಗಿದ ಕೈ ಮತ್ತು ಇಂಥ ರಾಜಕಾರಣದಲ್ಲಿ ಅವರು ಎಂಥ ಚಾಣಾಕ್ಷ ಎಂಬುದನ್ನು ರಾಜ್ಯದ ಜನತೆ ಬಲ್ಲರು. ಆದರೆ, ದಲಿತರೆಲ್ಲರೂ ದೇವೇಗೌಡ-ಮಾಯಾವತಿ ಮೈತ್ರಿಕೂಟಕ್ಕೆ ಮತ ಹಾಕಿಬಿಡುತ್ತಾರಾ ಎಂಬುದು ಕಾಡುತ್ತಿರುವ ಯಕ್ಷಪ್ರಶ್ನೆ.
ಓವೈಸಿ ಕರ್ನಾಟಕ ಎಂಟ್ರಿ ಸಮಾಚಾರ ಮತ್ತು ಗೌಡ್ರ ಲೆಕ್ಕಾಚಾರ

ದಲಿತ ನಾಯಕ ಮುಖ್ಯಮಂತ್ರಿಯಾಗ್ತಾರಾ?
ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ದಲಿತರ ಮತಗಳನ್ನು ಕಬಳಿಸಲು ಎಲ್ಲ ರೀತಿಯ ಪ್ರಯತ್ನ ಮಾಡಲಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ದಲಿತರನ್ನು ಯಾರೂ ಟೇಕನ್ ಫಾರ್ ಗ್ರಾಂಟೆಡ್ ಆಗಿ ಪರಿಗಣಿಸುವಂತಿಲ್ಲ. ಕರ್ನಾಟಕದಲ್ಲಿ ದಲಿತ ನಾಯಕನೊಬ್ಬ ಮುಖ್ಯಮಂತ್ರಿಯಾಗಬೇಕು ಎಂಬ ಕೂಗು ಹಲವಾರು ದಶಕಗಳಿಂದಲೇ ಎದ್ದಿದೆ. ಕುರ್ಚಿಯನ್ನು ಅಲಂಕರಿಸಲು ಹಲವಾರು ದಲಿತ ನಾಯಕರು ಕೂಡ ಹೊಸಬಟ್ಟೆ ಹೊಲಿಸಿಕೊಂಡು ತಯಾರಾಗೇ ಕುಳಿತಿದ್ದಾರೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಅದು ಸಾಧ್ಯವೇ ಆಗಿಲ್ಲ. ಇದಕ್ಕೆ ರಾಜಕೀಯ ಕುತಂತ್ರ, ಹುನ್ನಾರಗಳೂ ಕಾರಣ ಎಂಬುದು ಸರ್ವವಿದಿತ.

ದಲಿತರ ಒಲವು ಯಾವ ಪಕ್ಷದೆಡೆಗೆ?
ದಲಿತರ ಮತಗಳ ಪ್ರಾಬಲ್ಯವನ್ನು ಅರಿತಿರುವ ದೇವೇಗೌಡರು ಎಲ್ಲ ಪಕ್ಷಗಳ ನಾಯಕರಿಗಿಂತ ಮೊದಲೇ ಲೆಕ್ಕ ಹಾಕಿ, ಮಾಯಾವತಿಯೊಂದಿಗೆ ಚುನಾವಣಾ ಪೂರ್ವ ಮೈತ್ರಿಯನ್ನು ಮಾಡಿಕೊಂಡಿದ್ದಾರೆ. ದಲಿತ ಪ್ರಾಬಲ್ಯವಿರುವ 60 ಕ್ಷೇತ್ರಗಳಲ್ಲಿ ಮಾಯಾವತಿಗಾಗಿ 20 ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದ್ದಲ್ಲದೆ, ಮಾಯಾವತಿಯವರ ಪ್ರಭಾವವನ್ನು ಬಳಸಿಕೊಂಡು ಇತರ ಕ್ಷೇತ್ರಗಳಲ್ಲಿಯೂ ಜಯಭೇರಿ ಬಾರಿಸುವುದು ಅವರ ಮುತ್ಸದ್ದಿತನಕ್ಕೆ ಹಿಡಿದ ಕನ್ನಡಿ. ದಲಿತರಲ್ಲಿ ಛಲವಾದಿಗಳು ಕಾಂಗ್ರೆಸ್ ಬಗ್ಗೆ ಒಲವು ಹೊಂದಿದ್ದರೆ, ಮಾದಿಗರು ಬಿಜೆಪಿಯನ್ನು ಬೆಂಬಲಿಸುತ್ತ ಬಂದಿದ್ದಾರೆ. ಆದರೆ, ಮಾಯಾವತಿಯವರ ಸಹಾಯದಿಂದ ಈ ಎರಡೂ ಪಂಗಡಗಳ ಮತಗಳನ್ನು ಕಬಳಿಸಬೇಕೆನ್ನುವುದು ಗೌಡರ ಲೆಕ್ಕಾಚಾರ.

ಪ್ರತಿಯಾಗಿ ಅಮಿತ್ ಶಾ ಅವರ ತಂತ್ರಗಾರಿಕೆಯೇನು?
ಇತ್ತೀಚೆಗೆ ನಡೆದಿರುವ ಕೆಲ ಘಟನೆಗಳಿಂದಾಗಿ ದಲಿತರು ಬಿಜೆಪಿಯಿಂದ ವಿಮುಖರಾಗುವಂತೆ ಮಾಡಿದೆ. ಕೆಲ ತಿಂಗಳ ಹಿಂದೆ ಅಂಬೇಡ್ಕರ್ ಮತ್ತು ಸಂವಿಧಾನದ ಬಗ್ಗೆ ಲಘುವಾಗಿ ಮಾತನಾಡಿದ ಬಿಜೆಪಿ ನಾಯಕ, ಉತ್ತರ ಕನ್ನಡದ ಸಂಸದ ಅನಂತ್ ಕುಮಾರ್ ಹೆಗಡೆ ಅವರ ವಿರುದ್ಧ ದಲಿತರು ದಂಗೆಯೆದ್ದಿದ್ದರು. ಸಂವಿಧಾನವನ್ನೇ ಬದಲಿಸುವುದಾಗಿ ಹೆಗಡೆ ಹೇಳಿ ನಂತರ ಸಂಸತ್ತಿನಲ್ಲಿ ಕ್ಷಮೆಯನ್ನೂ ಕೇಳಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡು ಬಿಜೆಪಿಯ ವಿರುದ್ಧ ಕರ್ನಾಟಕದಲ್ಲಿ ಮಾಯಾವತಿ ಮುಗಿಬಿದ್ದರೂ ಅಚ್ಚರಿಯಿಲ್ಲ. ಇದಕ್ಕೆ ಪ್ರತಿಯಾಗಿ ಅಮಿತ್ ಶಾ ಅವರು ಏನೇನು ತಂತ್ರಗಳನ್ನು ರೂಪಿಸಲಿದ್ದಾರೆ ಬಲ್ಲವರು ಯಾರು?

ಸಿದ್ದರಾಮಯ್ಯನವರ ಜಾತಿ ರಾಜಕೀಯ
ಜೊತೆಗೆ, ಸಿದ್ದರಾಮಯ್ಯನವರು ಅಹಿಂದ ತತ್ತ್ವವನ್ನು ಪಾಲಿಸಿಕೊಂಡು ಬಂದವರು. ಅಹಿಂದವನ್ನು ಸಂಘಟಿಸಿಯೇ ಅವರು ಪ್ರವರ್ಧಮಾನಕ್ಕೆ ಬಂದವರು. ನಾವು ಯಾವುದೇ ಜಾತಿಯ ಪರ ಇಲ್ಲ, ನಾವು ಜಾತ್ಯತೀತ ಎಂದು ಹೇಳುತ್ತಲೇ ಬಂದಿರುವ ಕುರುಬರ ನಾಯಕ ಸಿದ್ದರಾಮಯ್ಯನವರು, ದಲಿತರಿಗಾಗಿ, ಮುಸ್ಲಿಂಗಾಗಿ ಸರಕಾರದಿಂದ ಹಲವಾರು ಭಾಗ್ಯಗಳನ್ನು ದಯಪಾಲಿಸಿದ್ದಾರೆ, ಬಜೆಟ್ಟಿನಲ್ಲಿ ಕೇಳಿದ್ದಕ್ಕಿಂತ ಹೆಚ್ಚು ನೀಡಿದ್ದಾರೆ. ಕೆಲ ದಿನಗಳ ಹಿಂದೆ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಿ, ಲಿಂಗಾಯತ ಮತ್ತು ವೀರಶೈವರನ್ನು ಒಡೆದು ರಾಜಕೀಯದಾಟವನ್ನು ಚೆನ್ನಾಗಿಯೇ ಆಡುತ್ತಿದ್ದಾರೆ. ಇದೀಗ ದಲಿತ ಸಾಹಿತಿ ಎಲ್ ಹನುಮಂತಯ್ಯನವರನ್ನು ರಾಜ್ಯಸಭೆಗೆ ಆರಿಸಿ ಬೇರೆ ಕಳಿಸಿದ್ದಾರೆ.

ಬಿಜೆಪಿಯೊಡನೆ ಮೈತ್ರಿಗೆ ಮಾಯಾವತಿ ಒಪ್ಪುತ್ತಾರಾ?
ಇಷ್ಟೆಲ್ಲ ಮಾಡಿಯೂ ದಲಿತರ ಮತಗಳನ್ನು ಸಿದ್ದರಾಮಯ್ಯನವರು ಕಬಳಿಸಲು ಸಾಧ್ಯವೆ? ಅಥವಾ ದಲಿತರ ಮತಗಳನ್ನು ಕಿತ್ತುಕೊಂಡು ಮಾಯಾವತಿಯವರು ಕಾಂಗ್ರೆಸ್ ಮತ್ತು ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರಾ? ಒಂದು ವೇಳೆ, ಹಲವಾರು ಸಮೀಕ್ಷೆಗಳು ಹೇಳಿರುವಂತೆ, ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ಎದುರಾದರೆ, ದೇವೇಗೌಡರೊಡನೆ ಮೈತ್ರಿ ಮಾಡಿಕೊಂಡಿರುವ ಮಾಯಾವತಿಯವರು ಬಿಜೆಪಿಯೊಡನೆ ಕೈಜೋಡಿಸಲು ಒಪ್ಪುತ್ತಾರಾ? ಏಕೆಂದರೆ, ಅತಂತ್ರ ಸ್ಥಿತಿ ಎದುರಾದರೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕಿದ್ದರೆ ಗೌಡರಿಗೆ ಮೋದಿಯೊಡನೆ ಕೈಜೋಡಿಸದೆ ಗತ್ಯಂತರವೇ ಇಲ್ಲ. ಉತ್ತರ ಪ್ರದೇಶದಲ್ಲಿ ಬಿಜೆಪಿ ವಿರುದ್ಧವೇ ಕೆಂಡ ಕಾರುತ್ತಿರುವ ಮಾಯಾವತಿಯವರು ಇದಕ್ಕೆ ಒಪ್ಪುತ್ತಾರಾ? ಎಲ್ಲ ಪ್ರಶ್ನೆಗಳಿಗೂ ಕಾಲವೇ ಉತ್ತರ ನೀಡಲಿದೆ.