Farmers Marriage: ರೈತರನ್ನು ಮದುವೆಯಾಗುವ ಯುವತಿಯರಿಗೆ ಪ್ರೋತ್ಸಾಹ ಧನ ಸರ್ಕಾರಕ್ಕೆ ಶಾಸಕ ಡಾ ಎಚ್.ಡಿ. ರಂಗನಾಥ್ ಪತ್ರ
Farmers Marriage: ಕರ್ನಾಟಕದಲ್ಲಿ ರೈತರ ಮದುವೆ ವಿಳಂಬವಾಗುತ್ತಿದೆ. ಕೃಷಿ ಮಾಡುತ್ತಿರುವ ಹುಡುಗರಿಗೆ ಹೆಣ್ಣು ಕೊಡುತ್ತಿಲ್ಲ, ಹೀಗಾಗಿ ಮದುವೆ ವಿಳಂಬವಾಗುತ್ತಿದೆ ಎನ್ನುವುದು ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಹೆಚ್ಚು ಗಂಭೀರವಾಗಿ ಚರ್ಚೆ ಆಗುತ್ತಿರುವ ವಿಷಯಗಳಲ್ಲಿ ಒಂದಾಗಿದೆ. ಕೃಷಿಯಿಂದ ವಿಮುಖರಾಗುವವರ ಸಂಖ್ಯೆ ಹೆಚ್ಚಾಗುತ್ತಿರುವಾಗಲೇ ಕೃಷಿ ಮಾಡುತ್ತಿರುವ ಯುವಕರಿಗೆ ಮದುವೆಗೆ ವಧು ಸಿಗುತ್ತಿಲ್ಲ ಎನ್ನುವುದು ಸಹ ಚರ್ಚೆ ಆಗುತ್ತಿದೆ. ಇದೀಗ ಕರ್ನಾಟಕದಲ್ಲಿ ರೈತರನ್ನು ಮದುವೆ ಆಗುವ ಯುವತಿಯರಿಗೆ ಆರ್ಥಿಕ ಪ್ರೋತ್ಸಾಹ ಧನ ನೀಡುವ ವಿಷಯವನ್ನು ಸರ್ಕಾರದ ಮುಂದಿರಿಸಲಾಗಿದೆ. ಅದೇನು ಎನ್ನುವ ವಿವರ ಇಲ್ಲಿದೆ.
ಕುಣಿಗಲ್ ಕಾಂಗ್ರೆಸ್ ಶಾಸಕ ಡಾ. ಎಚ್.ಡಿ. ರಂಗನಾಥ್ ಅವರು ಬುಧವಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ರೈತ ಯುವಕರನ್ನು ಮದುವೆಯಾಗುವ ಯುವತಿಯರಿಗೆ ಆರ್ಥಿಕವಾಗಿ ಪ್ರೋತ್ಸಾಹ ನೀಡುವ ಯೋಜನೆಯನ್ನು ಘೋಷಿಸುವಂತೆ ಮನವಿ ಮಾಡಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ, ಯುವತಿಯರು ರೈತರನ್ನು ಮದುವೆ ಆಗುವುದಕ್ಕೆ ಮುಂದೆ ಬರುತ್ತಿಲ್ಲ. ರೈತರಿಗೆ ಯಾರೂ ಹೆಣ್ಣು ಕೊಡುತ್ತಿಲ್ಲ. ಇದೊಂದು ಗಂಭೀರ ಸಮಸ್ಯೆ ಆಗುತ್ತಿದೆ ಎಂದು ರಂಗನಾಥ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಯುವತಿಯರು ರೈತರನ್ನು ಮದುವೆಯಾಗಿ ಹಳ್ಳಿಗಳಿಗೆ ಏಕೆ ಹೋಗಬೇಕು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ದೂರದ ಊರುಗಳಿಂದ ಬರುವ ವರರು, ಇಲ್ಲಿಯ ಯುವತಿಯರನ್ನು ಮದುವೆ ಆಗುತ್ತಿದ್ದಾರೆ ಎಂದು ರಂಗನಾಥ್ ಹೇಳಿದ್ದಾರೆ. ಇದು ವಾಸ್ತವ, ಕೃಷಿ ಕುಟುಂಬಗಳ ಜೀವನವನ್ನು ಸುಧಾರಿಸಲು ನಮ್ಮ ಸರ್ಕಾರ ಏನಾದರೂ ಮಾಡಬೇಕೆಂದು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 6ರಂದು 2026-27ರ ಬಜೆಟ್ ಮಂಡಿಸಲಿದ್ದಾರೆ. ಈ ಬಜೆಟ್‌ನಲ್ಲಿ ರೈತರನ್ನು ಮದುವೆ ಆಗುವ ಯುವತಿಯರಿಗೆ ಪ್ರೋತ್ಸಾಹ ಧನ ನೀಡುವ ಯೋಜನೆಯನ್ನು ಪ್ರಸ್ತಾಪಿಸಬೇಕು ಎಂದು ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ. ಈ ರೀತಿ ಪ್ರೋತ್ಸಾಹಧನ ನೀಡುವುದರಿಂದ ಸಮಸ್ಯೆ ಪರಿಹಾರವಾಗಬಹುದು ಎನ್ನುವ ಕಾರಣಕ್ಕೆ ಯೋಜನೆ ರೂಪಿಸುವಂತೆ ರಂಗನಾಥ್ ಅವರು ಹೇಳಿದ್ದಾರೆ.
ಕೃಷಿ ಕುಟುಂಬಗಳು ಮದುವೆ ವಿಷಯದಲ್ಲಿ ಸಮಸ್ಯೆ ಎದುರಿಸುತ್ತಿವೆ. ರೈತರನ್ನು ಮದುವೆಯಾಗುವ ಯಾವುದೇ ಮಹಿಳೆಗಾದರೂ ಪ್ರೋತ್ಸಾಹಧನ ನೀಡಬೇಕು. ನಾನು ಈಗಾಗಲೇ ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ ಎಂದಿದ್ದಾರೆ. ರೈತರ ನಿಯೋಗವೊಂದು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ತಮ್ಮ ಬೇಡಿಕೆಗಳನ್ನು ಚರ್ಚಿಸಿದ ಬೆನ್ನಲ್ಲೇ ಈ ವಿಷಯವೂ ಸಹ ಗಮನ ಸೆಳೆದಿದೆ.
ರೈತರಿಗೆ ಸಮಸ್ಯೆ: ನಿರ್ಣಯ ಅಂಗೀಕರಿಸಲು ಮನವಿ
ಇನ್ನು ಇದೇ ಸಂದರ್ಭದಲ್ಲಿ ಭಾರತ - ಅಮೆರಿಕ ವ್ಯಾಪಾರ ಒಪ್ಪಂದವನ್ನು ವಿರೋಧಿಸಿ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸುವಂತೆ ನಿಯೋಗವು ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದೆ. ಭಾರತ ಹಾಗೂ ಅಮೆರಿಕದ ನಡುವಿನ ವ್ಯಾಪಾರ ಒಪ್ಪಂದದಿಂದ ಭಾರತದ ರೈತರಿಗೆ ಸಮಸ್ಯೆ ಆಗಲಿದೆ. ರೈತರ ಆತ್ಮಹತ್ಯೆಗಳಲ್ಲಿ ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಹೀಗಾಗಿ, ಇದೀಗ ಈ ಒಪ್ಪಂದವು ಕಳವಳಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ. ಇನ್ನು ಪ್ರತಿ ರೈತರಿಗೆ 10,000 ರೂ. ನೆರವು ನೀಡುವ ಕಿಸಾನ್ ಸಮ್ಮಾನ್ ಮಾದರಿಯ ಯೋಜನೆಯನ್ನು ಪುನರುಜ್ಜೀವನಗೊಳಿಸುವಂತೆ ನಿಯೋಗವು ಕೋರಿದೆ.













Click it and Unblock the Notifications