ಹೊಸ ವರ್ಷದಲ್ಲಿ ಕೆಎಸ್ಆರ್‌ಟಿಸಿ ಬಸ್ ದರ ಹೆಚ್ಚಳ?
ಬೆಂಗಳೂರು, ಡಿಸೆಂಬರ್ 27 : ಹೊಸ ವರ್ಷಕ್ಕೆ ಸರ್ಕಾರಿ ಬಸ್ ದರ ಏರಿಕೆಯಾಗುವ ಸಾಧ್ಯತೆ ಇದೆ. ಬಸ್ ದರವನ್ನು ಏರಿಕೆ ಮಾಡುವಂತೆ ಸಾರಿಗೆ ಇಲಾಖೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಿದೆ.
ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು ಗುರುವಾರ ಈ ಕುರಿತು ಮಾಹಿತಿ ನೀಡಿದರು. 'ಮೊದಲು ಶೇ 18ರಷ್ಟು ಪ್ರಯಾಣ ದರ ಏರಿಕೆಗೆ ಪ್ರಸ್ತಾಪ ಸಲ್ಲಿಸಲಾಗಿತ್ತು. ಈಗ ಮತ್ತೆ ಪ್ರಸ್ತಾಪ ಸಲ್ಲಿಸಿ ವಿವೇಚನೆಗೆ ಅನುಸಾರವಾಗಿ ದರ ಏರಿಕೆ ಮಾಡುವಂತೆ ಮನವಿ ಮಾಡಲಾಗುತ್ತದೆ' ಎಂದರು.
ಬುಧವಾರ ಸಾರಿಗೆ ನಿಗಮಗಳ ಎಂಡಿಗಳ ಜೊತೆ ಸಚಿವರು ಸಭೆ ನಡೆಸಿದ್ದರು. ಸಭೆಯಲ್ಲಿ ದರ ಏರಿಕೆ ಮಾಡುವಂತೆ ಸಚಿವರನ್ನು ಒತ್ತಾಯಿಸಲಾಗಿತ್ತು. ಶುಕ್ರವಾರ ಸಾರಿಗೆ ಇಲಾಖೆ ಈ ಕುರಿತು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಿದೆ.

'ಡೀಸೆಲ್ ಬೆಲೆ ಹೆಚ್ಚಳವಾಗಿರುವುದರಿಂದ ಎಲ್ಲಾ ಸಾರಿಗೆ ನಿಗಮಗಳು ನಷ್ಟ ಅನುಭವಿಸುತ್ತಿವೆ. ಈಗಾಗಲೇ ಎಲ್ಲಾ ಸಾರಿಗೆ ನಿಗಮಗಳು ಸುಮಾರು 677 ಕೋಟಿ ನಷ್ಟ ಅನುಭವಿಸಿವೆ. ಹೀಗಾಗಿ ಪ್ರಯಾಣ ದರ ಏರಿಕೆ ಅನಿವಾರ್ಯವಾಗಿದೆ' ಎಂದು ಸಚಿವರು ಹೇಳಿದರು.
ಡಿಸೇಲ್ ಬೆಲೆ 53 ರೂ. ಇದ್ದಾಗ ಬಸ್ ದರ ಏರಿಕೆ ಮಾಡಲಾಗಿತ್ತು. ಅಲ್ಲಿಂದ ಇಲ್ಲಿಯ ತನಕ ಬಸ್ ದರ ಏರಿಕೆ ಮಾಡಿಲ್ಲ. ಹೀಗಾಗಿ ಬಸ್ ದರ ಏರಿಕೆ ಮಾಡಬೇಕು ಎಂಬುದು ಅಧಿಕಾರಿಗಳ ವಾದ. ಈ ಹಿನ್ನಲೆಯಲ್ಲಿ ವಾಸ್ತವ ಚಿತ್ರಣವನ್ನು ಮುಖ್ಯಮಂತ್ರಿಗಳಿಗೆ ತಿಳಿಸಿ ದರ, ಏರಿಕೆಗೆ ಮನವಿ ಮಾಡಲಾಗುತ್ತದೆ.












Click it and Unblock the Notifications