ಮುಂದುವರಿದ ಮುಷ್ಕರ, ಇನ್ನೆರಡು ದಿನ ರಾಜ್ಯದಲ್ಲಿ ಈ ಸೇವೆ ಬಂದ್!
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಪಂಚಾಯಿತಿಗಳ ಅಧಿಕಾರಿಗಳು, ನೌಕರರು ಮತ್ತು ಸದಸ್ಯರು ಆರಂಭಿಸಿರುವ ಅನಿರ್ದಿಷ್ಟಾವಧಿ ಮುಷ್ಕರವು ಇಂದೂ ಮುಂದುವರಿದಿದೆ. ಇದರಿಂದ ಪಂಚಾಯಿತಿಗಳಲ್ಲಿ ಸೇವೆಗಳು ಕೂಡ ಬಂದ್ ಆಗಿದೆ ಎಂದು ವರದಿಯಾಗಿದೆ. ಇನ್ನೂ ಎರಡು ದಿನಗಳವರೆಗೆ ಈ ಮುಷ್ಕರ ಮುಂದುವರಿಯಲಿದೆ.
ಅಕ್ಟೋಬರ್ 10ರಂದು ನೌಕರರ ಬೇಡಿಕೆಗಳನ್ನು ಈಡೇರಿಸುವ ಸಂಬಂಧ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಭೆ ಕರೆದಿದ್ದಾರೆ. ಆದರೂ ಪಟ್ಟು ಬಿಡದ ನೌಕರರು ಸರ್ಕಾರದಿಂದ ಸ್ಪಷ್ಟ ಆದೇಶ ಬರುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ. ಹಾಗಾಗಿ ಕಳೆದ ವಾರ ಬೆಂಗಳೂರಿನಲ್ಲಿ ಧರಣಿ ನಡೆಸಿದ ನೌಕರರು ಈಗಲೂ ಜಿಲ್ಲಾಮಟ್ಟದಲ್ಲಿ ಮುಷ್ಕರ ಮುಂದುವರಿಸಿದ್ದಾರೆ. ಹಾಗಾಗಿ ನಿನ್ನೆಯಿಂದಲೂ ಪಂಚಾಯಿತಿಗಳಲ್ಲಿ ಯಾವುದೇ ಸೇವೆಗಳು ಸಿಗುತ್ತಿಲ್ಲ ಎಂದು ವರದಿಯಾಗಿದೆ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ), ಗ್ರಾಮ ಪಂಚಾಯಿತಿಯ ಕಾರ್ಯದರ್ಶಿಗಳು ಹಾಗೂ ಇತರೆ ನೌಕರರು ಧರಣಿ ನಡೆಸುತ್ತಿದ್ದು, ಪಂಚಾಯಿತಿಗಳಲ್ಲಿ ಸೇವೆ ಬಂದ್ ಆಗಿವೆ. ಗ್ರಾಮ ಪಂಚಾಯಿತಿಯ ಕಾರ್ಯದರ್ಶಿಗಳು ಹಾಗೂ ಇತರೆ ನೌಕರರು ಧರಣಿ ನಡೆಸಿದ ಕಾರಣ ಪಂಚಾಯಿತಿಗಳ ಎಲ್ಲ ಸೇವೆಗಳಲ್ಲಿ ವ್ಯತ್ಯಯವಾಗಿದೆ. ಕಚೇರಿಗಳಲ್ಲಿ ಸಿಬ್ಬಂದಿ ಇಲ್ಲದೆ ಸಾರ್ವಜನಿಕರು ಪರದಾಟ ಕೂಡ ನಡೆಸಿದ್ದಾರೆ. ಪಂಚಾಯಿತಿಗಳಲ್ಲಿ ಬರೋಬ್ಬರಿ ನಲವತ್ತಕ್ಕೂ ಹೆಚ್ಚು ಸೇವೆಗಳು ಬಂದ್ ಆಗಿವೆ ಎನ್ನಲಾಗಿದೆ.
ಬೆಂಗಳೂರಿನಲ್ಲಿ ಧರಣಿ ಸ್ಥಳಕ್ಕೆ ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಉಮಾ ಮಾಧವನ್ ಭೇಟಿ ನೀಡಿ ಮನವಿ ಸ್ವೀಕರಿಸಿದ್ದರು. ಆದರೂ ಧರಣಿ ಮುಂದುವರಿಸುವುದಾಗಿ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕ್ಷೇಮಾಭಿವೃದ್ಧಿ ಸಂಘ ನಿರ್ಧರಿಸಿತ್ತು. ಅಕ್ಟೋಬರ್ 10ರಂದು ಸಂಘದ ಅಧ್ಯಕ್ಷರ ಜೊತೆ ಸಭೆ ನಡೆಸುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಸಮಯ ನಿಗದಿ ಮಾಡಿದ್ದಾರೆ. ಆದರೆ, ಸರ್ಕಾರದಿಂದ ನಮ್ಮ ಬೇಡಿಕೆಗಳ ಬಗ್ಗೆ ಸ್ಪಷ್ಟ ಆದೇಶ ಬರುವತನಕ ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿಗಳ ಮುಂದೆ ಪ್ರತಿಭಟನೆ ಮಾಡುವುದಾಗಿ ಸಿಬ್ಬಂದಿ ಪಟ್ಟು ಹಿಡಿದಿದ್ದಾರೆ.
ವಿಜಯೇಂದ್ರ ತರಾಟೆ: ನೌಕರರ ಮುಷ್ಕರದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ವತಃ ಮುಖ್ಯಮಂತ್ರಿಗಳ ಮುಡಾ ಹರಣ, ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಣ ದುರ್ಬಳಕೆ ಸೇರಿದಂತೆ ನಿರಂತರ ಭ್ರಷ್ಟಾಚಾರದಲ್ಲಿ ಮುಳುಗಿರುವ ಕರ್ನಾಟಕ ಸರ್ಕಾರಕ್ಕೆ ರಾಜ್ಯದ ಯಾವೊಂದು ಸಮಸ್ಯೆಗಳೂ ಕೇಳಿಸುತ್ತಿಲ್ಲ ಎಂದು ಟೀಕಿಸಿದ್ದಾರೆ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಪಂಚಾಯಿತಿಗಳ ಅಧಿಕಾರಿಗಳು, ನೌಕರರು ಮತ್ತು ಸದಸ್ಯರು ಆರಂಭಿಸಿರುವ ಅನಿರ್ದಿಷ್ಟಾವಧಿ ಮುಷ್ಕರ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಮುಂದುವರಿದು ಮೂರನೇ ದಿನಕ್ಕೆ ಕಾಲಿಟ್ಟಿದ್ದು ರಾಜ್ಯ ಸರ್ಕಾರದ ಯಾರೊಬ್ಬರೂ ಈ ಸಂಬಂಧ ಸಮಸ್ಯೆ ಆಲಿಸದಿರುವುದು ದುರಾದೃಷ್ಟಕರ ಸಂಗತಿ ಎಂದಿದ್ದಾರೆ.
ರಾಜ್ಯದ ಬಹುತೇಕ ಗ್ರಾಮ ಪಂಚಾಯಿತಿಗಳ ಆಡಳಿತ ಸ್ತಬ್ಧವಾಗಿದ್ದು ದಾಖಲೆಗಳ ವಿತರಣೆ, ನೀರು ಪೂರೈಕೆ ಮತ್ತು ಘನ ತ್ಯಾಜ್ಯ ವಿಲೇವಾರಿಯಲ್ಲಿ ವ್ಯತ್ಯಯ ಉಂಟಾಗಿ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾದರೂ ಸಚಿವ ಪ್ರಿಯಾಂಕ್ ಖರ್ಗೆ ಈ ಕುರಿತು ಸಮಸ್ಯೆ ಆಲಿಸದೇ ಇರುವುದು ಅವರ ಮಿತಿಮೀರಿದ ಬೇಜವಾಬ್ದಾರಿತನದ ಪರಮಾವಧಿ ಅಲ್ಲದೇ ಬೇರೇನೂ ಅಲ್ಲ. ಆಡಳಿತಕ್ಕೆ ಜಡ್ಡು ಹಿಡಿಸಿಕೊಂಡಿರುವ ಈ ಜನವಿರೋಧಿ ಭ್ರಷ್ಟ ಸರ್ಕಾರದ ವಿರುದ್ಧ ಜನಸಾಮಾನ್ಯರು ಬೀದಿಗಿಳಿಯುವ ಕಾಲ ದೂರವಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.












Click it and Unblock the Notifications