ಮೈಸೂರಿನಿಂದ ಚಂದ್ರಶೇಖರಯ್ಯ ಜೆಡಿಎಸ್ ಅಭ್ಯರ್ಥಿ
ಬೆಂಗಳೂರು, ಮಾ. 26 : ರಾಜ್ಯದಲ್ಲಿ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದು, ಅಭ್ಯರ್ಥಿಗಳು ಅಖಾಡಕ್ಕೆ ಇಳಿಯಬೇಕಾಗಿದೆ. ಎಚ್.ಡಿ.ಕುಮಾರಸ್ವಾಮಿ, ರಮ್ಯಾ, ಬಿ.ಎನ್.ಬಚ್ಚೇಗೌಡ, ಬಳ್ಳಾರಿಯಲ್ಲಿ ಬಿ.ಶ್ರೀರಾಮುಲು, ಚಿಕ್ಕೋಡಿಯಲ್ಲಿ ಪ್ರಕಾಶ್ ಹುಕ್ಕೇರಿ, ಧಾರವಾಡದಲ್ಲಿ ಪ್ರಮೋದ್ ಮುತಾಲಿಕ್ ಮುಂತಾದವರು ಇಂದು ನಾಮಪತ್ರ ಸಲ್ಲಿಸಲಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಆದರೆ, ಜೆಡಿಎಸ್ 15 ಕ್ಷೇತ್ರಗಳ ಅಭ್ಯರ್ಥಿಗಳನ್ನು ಮಾತ್ರ ಘೋಷಿಸಿದ್ದು, ಉಳಿದ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಿದ ನಂತರವೇ ಅಭ್ಯರ್ಥಿಗಳು ಯಾರು ಎಂದು ತಿಳಿಯಲಿದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿ]

ಸಮಯ 10.30 : ನಾಗಮಾರಪಲ್ಲಿ ಏನು ಮಾಡ್ತಾರೆ? : ಬೀದರ್ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ವಂಚಿತರಾಗಿರುವ ಸೂರ್ಯಕಾಂತ ನಾಗಮಾರಪಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವ ಕುರಿತು ಆಲೋಚನೆ ನಡೆಸಿದ್ದಾರೆ. ಆದರೆ, ಬಿಜೆಪಿ ನಾಯಕರು ಅವರ ಮನವೊಲಿಸುತ್ತಿದ್ದಾರೆ. ಕ್ಷೇತ್ರದ ಬಿಜೆಪಿ ಟಿಕೆಟ್ ಪಡೆದಿರುವ ಭಗವಂತ ಖೂಬಾ ಬುಧವಾರ ಬೆಳಗ್ಗೆ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಸೂರ್ಯಕಾಂತ ನಾಗಮಾರಪಲ್ಲಿ ಅಂತಿಮ ನಿರ್ಧಾರ ಹೊರಬಿದ್ದಿಲ್ಲ.
ಸಮಯ 9.45 : ಚಿಕ್ಕಬಳ್ಳಾಪುರದಲ್ಲಿ ಎಚ್ಡಿಕೆ ನಾಮಪತ್ರ : ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ವಿರುದ್ಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸಲಿದ್ದಾರೆ. ಬುಧವಾರ 11.45ಕ್ಕೆ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಲಿದ್ದು, ಅದಕ್ಕೂ ಮೊದಲು ನಗರದಲ್ಲಿ ಬೃಹತ್ ಮೆರವಣಿಗೆ ನಡೆಸಲಿದ್ದಾರೆ.
9 ಗಂಟೆ : ಮೈಸೂರಿನಿಂದ ಚಂದ್ರಶೇಖರಯ್ಯ ಸ್ಪರ್ಧೆ : ಮೈಸೂರು-ಕೊಡಗು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಉಪ ಲೋಕಾಯುಕ್ತ ಚಂದ್ರಶೇಖರಯ್ಯ ಸ್ಪರ್ಧಿಸುತ್ತಿದ್ದು, ಅವರು ಇಂದು ಮಧ್ಯಾಹ್ನ 1 ಗಂಟೆಗೆ ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ. ಈ ಮೂಲಕ ಮೈಸೂರಿನಲ್ಲಿ ಜೆಡಿಎಸ್ ಅಭ್ಯರ್ಥಿ ಯಾರು? ಎಂಬ ಕುತೂಹಲಗಳಿಗೆ ತೆರೆಬಿದ್ದಿದೆ.












Click it and Unblock the Notifications