Education Revolution 2030: ₹2,500 ಕೋಟಿ ವೆಚ್ಚದಲ್ಲಿ 500 KPS ಶಾಲೆಗಳ ಸಮಗ್ರ ಅಭಿವೃದ್ಧಿಗೆ ಡಿಕೆಶಿ ಗುಡ್‌ನ್ಯೂಸ್
Education Revolution 2030: ಶಿಕ್ಷಣ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಶಿಕ್ಷಣದಿಂದಲೇ ಸುಭದ್ರ ಭವಿಷ್ಯದ ಬುನಾದಿ ಎಂದು ಹೇಳಿರುವ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹಲವು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ನಮ್ಮ ಹಳ್ಳಿಯ ಮಣ್ಣಿನ ಪ್ರತಿಭೆಗಳು ವಿಶ್ವದಂಗಳದಲ್ಲಿ ರಾರಾಜಿಸಬೇಕು, ಅವರಿಗೆ ಅತ್ಯುನ್ನತ ಗುಣಮಟ್ಟದ ಶಿಕ್ಷಣದ ಅಮೃತ ದೊರಕಬೇಕು ಎಂಬುದೇ ನಮ್ಮ ಸರ್ಕಾರದ ಅಚಲ ಸಂಕಲ್ಪ. ನಾವು ಕಟ್ಟುತ್ತಿರುವುದು ಕೇವಲ ಇಟ್ಟಿಗೆ-ಸಿಮೆಂಟ್‌ನ ಗೋಡೆಗಳನ್ನಲ್ಲ, ನಾಳಿನ ದೃಢ ಕರ್ನಾಟಕದ ಬುನಾದಿಯನ್ನು! ಇದೇ ನಿಟ್ಟಿನಲ್ಲಿ, ಬರೋಬ್ಬರಿ ₹2,500 ಕೋಟಿ ವೆಚ್ಚದಲ್ಲಿ 500 ಕೆಪಿಎಸ್ ಶಾಲೆಗಳನ್ನು ಸಮಗ್ರವಾಗಿ ಉನ್ನತೀಕರಿಸುವ 'ಶಿಕ್ಷಣ ಕ್ರಾಂತಿ 2030' ಯೋಜನೆಗೆ ಹೆಜ್ಜೆ ಇಟ್ಟಿದ್ದೇವೆ.

ಎಲ್‌ಕೆಜಿಯ ಅಕ್ಷರಾಭ್ಯಾಸದಿಂದ 12ನೇ ತರಗತಿಯವರೆಗೆ, ಆಧುನಿಕ AI ತಂತ್ರಜ್ಞಾನದಿಂದ ಹಿಡಿದು ಬದುಕನ್ನು ಬೆಳಗುವ ಕೌಶಲ್ಯಾಭಿವೃದ್ಧಿಯವರೆಗೆ, ಎಲ್ಲವೂ ಒಂದೇ ಸೂರಿನಡಿ, ಸಂಪೂರ್ಣ ಉಚಿತವಾಗಿ ಲಭ್ಯವಾಗಲಿದೆ. ಇದು ಕೇವಲ ಶಾಲೆಗಳ ಅಭಿವೃದ್ಧಿಯಲ್ಲ, ಮುಂದಿನ 50 ವರ್ಷಗಳ ಕಾಲ ಕನ್ನಡಿಗರನ್ನು ಜಗತ್ತಿನೆದುರು ತಲೆ ಎತ್ತಿ ನಿಲ್ಲುವಂತೆ ಮಾಡುವ ದಿವ್ಯ ಯಜ್ಞ. ಜ್ಞಾನದ ಹಾದಿಯಲ್ಲಿ ಒಟ್ಟಾಗಿ ಸಾಗೋಣ, ಭವ್ಯ ಭವಿಷ್ಯದತ್ತ ಹೆಜ್ಜೆ ಹಾಕುತ್ತಾ, ಬಲಿಷ್ಠ ಕರ್ನಾಟಕವನ್ನು ಕಟ್ಟೋಣ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಒಂದೇ ಆವರಣದಲ್ಲಿ ಸಮಗ್ರ ಶಿಕ್ಷಣ ಎಲ್ಲರಿಗೂ ಉಚಿತ ಮತ್ತು ಗುಣಮಟ್ಟದ ಶಿಕ್ಷಣ
LKG ಯಿಂದ 12ನೇ ತರಗತಿವರೆಗೆ: ಮಕ್ಕಳ ಸಂಪೂರ್ಣ ಶೈಕ್ಷಣಿಕ ಪಯಣ ಒಂದೇ ಸೂರಿನಡಿ, ಅತ್ಯುತ್ತಮ ಗುಣಮಟ್ಟದೊಂದಿಗೆ.
ಪ್ರತಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ (KPS) ಕನಿಷ್ಠ 1,200 ವಿದ್ಯಾರ್ಥಿಗಳಿಗೆ ಕಲಿಯುವ ಅವಕಾಶ
ಗ್ರಾಮೀಣ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಾಲೆಗೆ ತಲುಪಲು ಸಂಪೂರ್ಣ ಉಚಿತ ಸಾರಿಗೆ ಸೌಲಭ್ಯ
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿ: ಒಟ್ಟು 2,500 ಕೋಟಿ ವೆಚ್ಚದ ಯೋಜನೆ (ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ನೆರವು 1,750 ಕೋಟಿ ಹಾಗೂ ರಾಜ್ಯ ಸರ್ಕಾರದ ಪಾಲು 750 ಕೋಟಿ ರೂ.)
2026ರಿಂದ 2030ರ ವರೆಗೆ ತ್ವರಿತ ಅನುಷ್ಠಾನ
ಡಿಜಿಟಲ್ ಕಲಿಕೆ ಮತ್ತು ವೃತ್ತಿಪರ ಮಾರ್ಗದರ್ಶನದ ಮೂಲಕ ಗ್ರಾಮೀಣ ವಿದ್ಯಾರ್ಥಿಗಳನ್ನು ಜಾಗತಿಕ ಸ್ಪರ್ಧೆಗೆ ಸಜ್ಜುಗೊಳಿಸುವುದು
ಬೋಧನಾ ಗುಣಮಟ್ಟ ಹೆಚ್ಚಿಸಲು ಶಿಕ್ಷಕರ ಸಾಮರ್ಥ್ಯ ವೃದ್ಧಿಗೆ ವಿಶೇಷ ಕಾರ್ಯಯೋಜನೆ.
10 ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಗಳ ಫಲಿತಾಂಶ ಸುಧಾರಣೆಗೆ ವಿಶೇಷ ಗಮನ ಮತ್ತು ಕಾರ್ಯತಂತ್ರ.
ದ್ವಿಭಾಷಾ ಬೋಧನೆ, ಕಂಪ್ಯೂಟರ್ ಹಾಗೂ ಕೃತಕ ಬುದ್ಧಿಮತ್ತೆ (AI) ಆಧಾರಿತ ಭವಿಷ್ಯದ ಶಿಕ್ಷಣ
6ನೇ ತರಗತಿಯಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ, ಕೌಶಲ್ಯಾಭಿವೃದ್ಧಿ, ಕ್ರೀಡೆ, ಸಂಗೀತ ಮತ್ತು ಸಾಹಿತ್ಯಕ್ಕೆ ಒತ್ತು.
ಪ್ರತಿ 2 ತಿಂಗಳಿಗೊಮ್ಮೆ ಕಡ್ಡಾಯ ಪೋಷಕರ ಸಭೆ ನಡೆಸಿ, ಮಕ್ಕಳ ನಿರಂತರ ಪ್ರಗತಿಯ ಮೇಲ್ವಿಚಾರಣೆ ಮಾಡಲಾಗುವುದು ಎಂದೂ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ. ಇದು ಕೇವಲ ಶಾಲೆಗಳ ಅಭಿವೃದ್ಧಿಯಲ್ಲ; ಮುಂದಿನ 50 ವರ್ಷಗಳ ಕರ್ನಾಟಕದ ಭವ್ಯ ಭವಿಷ್ಯವನ್ನು ನಿರ್ಮಿಸುವ ಸರ್ಕಾರದ ದೃಢವಾದ ಹೆಜ್ಜೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.


Click it and Unblock the Notifications
