Education: ಶಿಕ್ಷಣದ ಹೊಣೆ ಸರ್ಕಾರದಷ್ಟೇ ಅಲ್ಲ, ಇಡೀ ಸಮಾಜದ್ದು ಎಂದಿದ್ಯಾಕೆ ಸಚಿವ ಮಧು ಬಂಗಾರಪ್ಪ ?

ಕರ್ನಾಟಕವೂ ಸಾಕ್ಷರತೆಯ ಪಯಣದಲ್ಲಿ ದೊಡ್ಡ ಹೆಜ್ಜೆಗಳನ್ನಿರಿಸಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಹೇಳಿದ್ದಾರೆ. ಪ್ರತಿ ಸೆಪ್ಟೆಂಬರ್ 8ರಂದು ನಾವು ಅಂತರರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಿಸುತ್ತೇವೆ. ಈ ದಿನ ಬಂದಾಗಲೆಲ್ಲ ನನ್ನ ಮನಸ್ಸು ಸಹಜವಾಗಿಯೇ ಕರ್ನಾಟಕದ ಹಳ್ಳಿಗಳ ಶಾಲೆಗಳತ್ತ ಹೊರಳುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸುವಾಗ ಮಣ್ಣಿನ ನೆಲದ ಮೇಲೆ ಚಾಪೆ ಹಾಸಿಕೊಂಡು ಕಲಿಯುವ ಮಕ್ಕಳನ್ನೂ, ತಮ್ಮ ಹೆಸರನ್ನು ಮೊದಲ ಬಾರಿಗೆ ಬರೆಯಲು ಕಲಿತಾಗ ಕಣ್ಣುಗಳಲ್ಲಿ ಮೂಡುವ ಸಂತೋಷವನ್ನೂ ನೋಡಿದ್ದೇನೆ. ಆಗಲೆಲ್ಲ ನನಗೆ ಅನಿಸಿದ್ದು ಒಂದೇ - ಅಕ್ಷರವೆಂದರೆ ಕೇವಲ ಒಂದು ಕೌಶಲ್ಯವಲ್ಲ; ಅದು ಬದುಕಿನ ಬಾಗಿಲು ತೆರೆಯುವ ಬೆಳಕು ಎಂದಿದ್ದಾರೆ.

ಕರ್ನಾಟಕವೂ ಸಾಕ್ಷರತೆಯ ಪಯಣದಲ್ಲಿ ದೊಡ್ಡ ಹೆಜ್ಜೆಗಳನ್ನು ಇಟ್ಟಿದೆ. ಸ್ವಾತಂತ್ರ್ಯಾನಂತರದ ದಶಕಗಳಲ್ಲಿ ರಾಜ್ಯದ ಸಾಕ್ಷರತಾ ಪ್ರಮಾಣ ಶೇಕಡ 20ರಷ್ಟಿದ್ದರೆ, ಇಂದು ಅದು ಶೇಕಡ 85ಕ್ಕೂ ಹೆಚ್ಚು ತಲುಪಿದೆ. ಇದು ಹೆಮ್ಮೆಯ ಸಾಧನೆ. ಆದರೆ ಈ ಸಂಖ್ಯೆಗಳ ಹಿಂದೆ ಇರುವ ಅಸಮಾನತೆಗಳನ್ನು ನಾವು ಮರೆಯಬಾರದು. ಗ್ರಾಮೀಣ-ನಗರ ಪ್ರದೇಶಗಳ ನಡುವೆ, ಪುರುಷ-ಮಹಿಳೆಯರ ನಡುವೆ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳ ನಡುವೆ ಇನ್ನೂ ಸಾಕ್ಷರತಾ ಅಂತರವಿದೆ. ಈ ಅಂತರವನ್ನು ಕಡಿಮೆ ಮಾಡುವುದು ನಮ್ಮ ಮುಂದಿರುವ ಪ್ರಮುಖ ಜವಾಬ್ದಾರಿ.

Education Minister Madhu Bangarappa Says Education Is Everyone s Responsibility Not Just the Government s

ಶಿಕ್ಷಣದ ಗುಣಮಟ್ಟ ಮತ್ತು ಸಮಾನ ಅವಕಾಶವನ್ನು ಕೇಂದ್ರದಲ್ಲಿಟ್ಟುಕೊಂಡು ರಾಜ್ಯದಲ್ಲಿ ಕೈಗೊಂಡಿರುವ ಪ್ರಮುಖ ಪ್ರಯತ್ನಗಳಲ್ಲಿ ಕರ್ನಾಟಕ ಸಾರ್ವಜನಿಕ ಶಾಲೆಗಳ (Karnataka Public Schools - KPS) ಮಾದರಿ ಪ್ರಮುಖವಾದುದು. LKGಯಿಂದ ದ್ವಿತೀಯ ಪಿಯುಸಿವರೆಗೆ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಒಂದೇ ಸೂರಿನಡಿ ಒದಗಿಸುವುದು ಇದರ ಉದ್ದೇಶ.

ಇಂದು ರಾಜ್ಯಾದ್ಯಂತ 308 KPS ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಸುಮಾರು 2.83 ಲಕ್ಷ ಮಕ್ಕಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸುಮಾರು 450 ಹೆಚ್ಚುವರಿ KPS ಶಾಲೆಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ. ದೀರ್ಘಾವಧಿಯಲ್ಲಿ ಪ್ರತಿ ಗ್ರಾಮ ಪಂಚಾಯತಿಗೆ ಒಂದು KPS ಶಾಲೆ ತಲುಪಿಸುವ ಮೂಲಕ ರಾಜ್ಯದಲ್ಲಿ ಒಟ್ಟು 6,000 KPS ಶಾಲೆಗಳ ಜಾಲ ನಿರ್ಮಿಸುವ ಆಶಯವಿದೆ ಪ್ರತಿ ಶಾಲೆಯ ಉನ್ನತೀಕರಣಕ್ಕೆ ಸುಮಾರು ₹4 ಕೋಟಿ ವೆಚ್ಚವಾಗಲಿದ್ದು, ವಿವಿಧ ಮೂಲಗಳಿಂದ ಸಂಪನ್ಮೂಲಗಳನ್ನು ಒಗ್ಗೂಡಿಸಲಾಗುತ್ತಿದೆ.

KPS ಮಾದರಿಯ ಮತ್ತೊಂದು ವಿಶೇಷತೆ ಎಂದರೆ ಪೋಷಕರಿಗೆ ತಮ್ಮ ಮಕ್ಕಳನ್ನು ಕನ್ನಡ ಅಥವಾ ಇಂಗ್ಲಿಷ್ ಮಾಧ್ಯಮದಲ್ಲಿ ಓದಿಸುವ ಆಯ್ಕೆ. ಮಾತೃಭಾಷೆಯ ಮಹತ್ವವನ್ನು ಉಳಿಸಿಕೊಂಡೇ, ಇಂಗ್ಲಿಷ್ ಭಾಷೆಯ ಮೇಲಿನ ಪೋಷಕರ ಆಸಕ್ತಿ ಮತ್ತು ಭವಿಷ್ಯದ ಉದ್ಯೋಗಾವಕಾಶಗಳ ಅಗತ್ಯವನ್ನು ಸಮತೋಲನಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ.

ಶಾಲೆಯ ಅಭಿವೃದ್ಧಿ ಸರ್ಕಾರದ ಜವಾಬ್ದಾರಿ ಮಾತ್ರವಾಗಬಾರದು. ಅದಕ್ಕಾಗಿಯೇ "ನಮ್ಮ ಶಾಲೆ ನಮ್ಮ ಜವಾಬ್ದಾರಿ" ಎಂಬ ಪರಿಕಲ್ಪನೆಗೆ ನಾವು ಒತ್ತು ನೀಡಿದ್ದೇವೆ. ಸ್ಥಳೀಯ ಸಮುದಾಯವೇ ತನ್ನ ಶಾಲೆಯ ಬಗ್ಗೆ ಕಾಳಜಿ ವಹಿಸಿ, ಕಟ್ಟಡ, ಶುಚಿತ್ವ, ಮಕ್ಕಳ ಹಾಜರಾತಿ ಮತ್ತು ಕಲಿಕೆಯ ವಾತಾವರಣದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕು.

ಸರ್ಕಾರದ ಅನುದಾನ ಎಷ್ಟೇ ಇದ್ದರೂ, ಸ್ಥಳೀಯ ಒಡೆತನದ ಭಾವನೆ ಇಲ್ಲದೆ ಯಾವುದೇ ಶಾಲೆಯ ಅಭಿವೃದ್ಧಿ ಶಾಶ್ವತವಾಗುವುದಿಲ್ಲ. ಕೆಲವು ಹಳ್ಳಿಗಳಲ್ಲಿ ನಿವೃತ್ತ ಶಿಕ್ಷಕರು ಸ್ವಯಂಪ್ರೇರಿತರಾಗಿ ಸಂಜೆ ಮಕ್ಕಳಿಗೆ ಹೆಚ್ಚುವರಿ ಪಾಠ ಹೇಳುತ್ತಿರುವುದನ್ನು ನಾನು ಕಂಡಿದ್ದೇನೆ. ಇಂತಹ ಪ್ರಯತ್ನಗಳು ನಮಗೆ ಒಂದು ಮಹತ್ವದ ಸಂದೇಶ ನೀಡುತ್ತವೆ - ಶಿಕ್ಷಣದ ಹೊಣೆ ಸರ್ಕಾರದಷ್ಟೇ ಅಲ್ಲ, ಇಡೀ ಸಮಾಜದ್ದು.

ಸಮಾನ ಶಿಕ್ಷಣದ ಅವಕಾಶವನ್ನು ಖಚಿತಪಡಿಸಲು ಪೂರ್ವಪ್ರಾಥಮಿಕ ಹಂತದಿಂದಲೇ ಮಕ್ಕಳನ್ನು ಬೆಂಬಲಿಸುವ ಅಗತ್ಯವಿದೆ. ಬಡ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳಿಗೆ ಖಾಸಗಿ ಶಾಲೆಗಳ ದುಬಾರಿ ಶುಲ್ಕ ಹೊರೆಯಾಗದಂತೆ, KPS ಶಾಲೆಗಳಲ್ಲಿ LKG ಶಿಕ್ಷಣವನ್ನು ಸೇರಿಸಲಾಗಿದೆ. ಸರ್ಕಾರಿ ಶಾಲೆಗಳಲ್ಲಿಯೇ ಔಪಚಾರಿಕ ಪೂರ್ವಪ್ರಾಥಮಿಕ ಶಿಕ್ಷಣ ಒದಗಿಸುವುದು ಇದರ ಪ್ರಮುಖ ಉದ್ದೇಶ. ಮಕ್ಕಳ ಪೌಷ್ಟಿಕತೆ ಮತ್ತು ಕಲಿಕೆ ಪರಸ್ಪರ ಸಂಬಂಧ ಹೊಂದಿವೆ. ಈ ಕಾರಣದಿಂದ LKG, UKG ಮತ್ತು ಪಿಯು ವಿದ್ಯಾರ್ಥಿಗಳಿಗೂ ಬಿಸಿಯೂಟ ಯೋಜನೆಯನ್ನು ವಿಸ್ತರಿಸಲಾಗಿದೆ. ಪಠ್ಯಪುಸ್ತಕ, ಶೂ, ಸಾಕ್ಸ್, ಹಾಲು ಮತ್ತು ಮೊಟ್ಟೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಇದಕ್ಕಾಗಿ ಸರ್ಕಾರ ಸುಮಾರು ₹200 ಕೋಟಿ ಹೆಚ್ಚುವರಿ ವೆಚ್ಚ ಭರಿಸುತ್ತಿದೆ.

ಶಿಕ್ಷಣವನ್ನು ಪಠ್ಯಪುಸ್ತಕಗಳಿಗೆ ಮಾತ್ರ ಸೀಮಿತಗೊಳಿಸಬಾರದು. ಮಕ್ಕಳಲ್ಲಿ ಸೃಜನಶೀಲತೆ, ಶಿಸ್ತು, ಆತ್ಮವಿಶ್ವಾಸ ಮತ್ತು ತಂಡಭಾವ ಬೆಳೆಸುವ ಉದ್ದೇಶದಿಂದ KPS ಶಾಲೆಗಳಲ್ಲಿ ಸಂಗೀತ ಮತ್ತು ದೈಹಿಕ ಶಿಕ್ಷಣ ಶಿಕ್ಷಕರ ನೇಮಕ ಹಾಗೂ ಶಾಲಾ ಬ್ಯಾಂಡ್‌ಗಳಿಗೆ ಒತ್ತು ನೀಡಲಾಗಿದೆ.

Education: 20,000 ಶಿಕ್ಷಕರ ನೇಮಕ ಪ್ರಕ್ರಿಯೆ

ಒಳ್ಳೆಯ ಕಟ್ಟಡಗಳು ಮತ್ತು ಸೌಲಭ್ಯಗಳು ಅಗತ್ಯ. ಆದರೆ ಶಾಲೆಯ ನಿಜವಾದ ಶಕ್ತಿ ಶಿಕ್ಷಕರು. ಶಿಕ್ಷಕರ ಕೊರತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕಕ್ಕೆ 5,000 ಶಿಕ್ಷಕರನ್ನು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರನ್ನೂ ಒಳಗೊಂಡಂತೆ ಇನ್ನೂ 20,000 ಶಿಕ್ಷಕರ ನೇಮಕ ಮಾಡುವ ಕ್ರಮಗಳನ್ನು ಕೈಗೊಳ್ಳಲಾಗಿದೆ. ಒಂಬತ್ತು ವರ್ಷಗಳಿಂದ ಖಾಲಿಯಿದ್ದ ಅನುದಾನಿತ ಶಾಲೆಗಳ ಶಿಕ್ಷಕರ ಹುದ್ದೆಗಳ ಭರ್ತಿ ಪ್ರಕ್ರಿಯೆಯನ್ನೂ ಆರಂಭಿಸಲಾಗಿದೆ.

ಹಳ್ಳಿ ಹಳ್ಳಿಗಳಲ್ಲಿ ಸೀಮಿತ ಸಂಪನ್ಮೂಲಗಳ ನಡುವೆಯೂ ಹಲವು ತರಗತಿಗಳ ಮಕ್ಕಳಿಗೆ ಒಂದೇ ಕೋಣೆಯಲ್ಲಿ ಪಾಠ ಮಾಡುವ ಶಿಕ್ಷಕರನ್ನು ನಾನು ಕಂಡಿದ್ದೇನೆ. ಅವರ ತಾಳ್ಮೆ ಮತ್ತು ಸಮರ್ಪಣೆ ಶ್ಲಾಘನೀಯ. ಆದರೆ ಬೋಧಕೇತರ ಕೆಲಸದ ಹೊರೆ, ತರಬೇತಿಯ ಕೊರತೆ ಮತ್ತು ಸಂಪನ್ಮೂಲಗಳ ಅಭಾವ ಅವರ ಕಾರ್ಯವನ್ನು ಕಷ್ಟಕರಗೊಳಿಸುತ್ತವೆ. ಆದ್ದರಿಂದ ನಿರಂತರ ವೃತ್ತಿಪರ ಅಭಿವೃದ್ಧಿ, ಗುಣಮಟ್ಟದ ತರಬೇತಿ ಮತ್ತು ಗೌರವಯುತ ಕೆಲಸದ ವಾತಾವರಣವನ್ನು ಶಿಕ್ಷಕರಿಗೆ ಒದಗಿಸುವುದು ಅತ್ಯಗತ್ಯ.

ಇಂದು ನಮ್ಮ ಗುರಿ ಕೇವಲ ಪ್ರತಿಯೊಂದು ಮಗುವನ್ನೂ ಶಾಲೆಗೆ ಸೇರಿಸುವುದಲ್ಲ; ಅವರು ಶಾಲೆಯಲ್ಲಿ ಉಳಿದು, ಗುಣಮಟ್ಟದ ಶಿಕ್ಷಣ ಪಡೆಯಬೇಕು. ಇತ್ತೀಚಿನ ವರದಿಗಳು, ಮೂರನೇ ಅಥವಾ ನಾಲ್ಕನೇ ತರಗತಿಯಲ್ಲಿರುವ ಅನೇಕ ಮಕ್ಕಳು ಎರಡನೇ ತರಗತಿಯ ಪಠ್ಯವನ್ನೂ ಸರಾಗವಾಗಿ ಓದಲು ಸಾಧ್ಯವಾಗದಿರುವುದನ್ನು ತೋರಿಸಿವೆ. ಇದನ್ನು "ಕಲಿಕಾ ಬಡತನ" (Learning Poverty) ಎಂದು ಕರೆಯಲಾಗುತ್ತದೆ. ಶಾಲೆಗೆ ಹಾಜರಾಗುವುದು ಮಾತ್ರ ಸಾಕಾಗುವುದಿಲ್ಲ; ನಿಜವಾದ ಕಲಿಕೆ ನಡೆಯಬೇಕು.

Education: ಕೋವಿಡ್‌ನಿಂದ ಹಿನ್ನಡೆ

ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಸುಮಾರು ಎರಡು ವರ್ಷಗಳ ಕಾಲ ಶಾಲೆಗಳು ಮುಚ್ಚಿದ್ದರಿಂದ ಮಕ್ಕಳ ಕಲಿಕೆಯ ಮೇಲೆ ಗಂಭೀರ ಪರಿಣಾಮ ಬೀರಿತು. ವಿಶೇಷವಾಗಿ ಸ್ಮಾರ್ಟ್‌ಫೋನ್ ಅಥವಾ ಇಂಟರ್ನೆಟ್ ಸೌಲಭ್ಯವಿಲ್ಲದ ಗ್ರಾಮೀಣ ಮತ್ತು ಬಡ ಕುಟುಂಬಗಳ ಮಕ್ಕಳು ಹೆಚ್ಚು ತೊಂದರೆಗೆ ಒಳಗಾದರು. ಈ ಡಿಜಿಟಲ್ ವಿಭಜನೆ ಕಲಿಕೆಯ ಅಂತರವನ್ನು ಮತ್ತಷ್ಟು ಹೆಚ್ಚಿಸಿತು. ಕಳೆದುಹೋದ ಕಲಿಕೆಯನ್ನು ಮರಳಿ ಕಟ್ಟಿಕೊಡುವ ಪ್ರಯತ್ನಗಳು ಈಗ ಅತ್ಯಂತ ಮುಖ್ಯವಾಗಿವೆ.

ಇದರ ಜೊತೆಗೆ, ಕರ್ನಾಟಕದಂತಹ ರಾಜ್ಯದಲ್ಲಿ ಮಾತೃಭಾಷೆಯಲ್ಲಿನ ಶಿಕ್ಷಣದ ಮಹತ್ವವನ್ನು ನಾವು ಮರೆಯಬಾರದು. ಮಗು ತನ್ನ ಮಾತೃಭಾಷೆಯಲ್ಲಿ ಮೂಲಭೂತ ಪರಿಕಲ್ಪನೆಗಳನ್ನು ಗಟ್ಟಿಯಾಗಿ ಕಲಿತಾಗ ಇತರ ಭಾಷೆಗಳನ್ನೂ ಸುಲಭವಾಗಿ ಕಲಿಯಲು ಸಾಧ್ಯವಾಗುತ್ತದೆ. ಅದೇ ಸಮಯದಲ್ಲಿ ಇಂಗ್ಲಿಷ್ ಭಾಷಾ ಕೌಶಲ್ಯವೂ ಇಂದಿನ ಜಗತ್ತಿನಲ್ಲಿ ಅಗತ್ಯ. ಹೀಗಾಗಿ ಕನ್ನಡದ ಬೇರುಗಳನ್ನು ಗಟ್ಟಿಗೊಳಿಸುತ್ತಲೇ, ಇಂಗ್ಲಿಷ್‌ನ ಕೌಶಲ್ಯವನ್ನು ಬಲಪಡಿಸುವ ಸಮತೋಲಿತ ಶಿಕ್ಷಣವೇ ನಮ್ಮ ದಾರಿ.

"ಒಂದು ಹೆಣ್ಣುಮಗಳಿಗೆ ಶಿಕ್ಷಣ ನೀಡಿದರೆ, ಇಡೀ ಕುಟುಂಬಕ್ಕೆ ಶಿಕ್ಷಣ ನೀಡಿದಂತೆ" ಎಂಬ ಮಾತಿನ ಸತ್ಯವನ್ನು ನಾನು ಅನೇಕ ಬಾರಿ ಕಂಡಿದ್ದೇನೆ. ವಿದ್ಯಾವಂತ ತಾಯಿ ತನ್ನ ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಭವಿಷ್ಯದ ಬಗ್ಗೆ ಹೆಚ್ಚು ಜಾಗೃತಳಾಗಿರುತ್ತಾಳೆ. ಆದರೆ ಬಾಲ್ಯವಿವಾಹ, ಬಡತನ ಮತ್ತು ಸಾಮಾಜಿಕ ನಿರ್ಬಂಧಗಳಿಂದಾಗಿ ಕೆಲವು ಹೆಣ್ಣುಮಕ್ಕಳು ಇನ್ನೂ ಶಿಕ್ಷಣದಿಂದ ದೂರವಾಗುತ್ತಿದ್ದಾರೆ. ಸೈಕಲ್ ವಿತರಣೆ, ಶಿಷ್ಯವೇತನ ಮತ್ತು ವಸತಿ ಶಾಲೆಗಳಂತಹ ಯೋಜನೆಗಳು ಈ ಅಂತರವನ್ನು ಕಡಿಮೆ ಮಾಡಲು ನೆರವಾಗುತ್ತವೆ. ಆದರೂ, ಪ್ರತಿಯೊಂದು ಹೆಣ್ಣುಮಗುವೂ ತನ್ನ ಶಿಕ್ಷಣವನ್ನು ಪೂರ್ಣಗೊಳಿಸುವವರೆಗೆ ನಮ್ಮ ಪ್ರಯತ್ನ ನಿಲ್ಲಬಾರದು.

Education: ಡಿಜಿಟಲ್ ಯುಗದಲ್ಲಿ ಸಾಕ್ಷರತೆ

ಡಿಜಿಟಲ್ ಯುಗದಲ್ಲಿ ಸಾಕ್ಷರತೆಯ ವ್ಯಾಖ್ಯಾನವೂ ವಿಸ್ತರಿಸಿದೆ. ಇಂದು ಅಕ್ಷರ ಓದುವುದು ಮತ್ತು ಬರೆಯುವುದು ಮಾತ್ರ ಸಾಕಾಗುವುದಿಲ್ಲ. ಡಿಜಿಟಲ್, ಆರ್ಥಿಕ ಮತ್ತು ಆರೋಗ್ಯ ಸಾಕ್ಷರತೆ ಕೂಡ ಅಗತ್ಯ. ಸ್ಮಾರ್ಟ್‌ಫೋನ್ ಬಳಸಿ ಸರ್ಕಾರಿ ಸೇವೆಗಳನ್ನು ಪಡೆಯುವುದು, ಆನ್‌ಲೈನ್ ವಂಚನೆಗಳಿಂದ ತನ್ನನ್ನು ರಕ್ಷಿಸಿಕೊಳ್ಳುವುದು, ಬ್ಯಾಂಕ್ ವ್ಯವಹಾರಗಳನ್ನು ಅರ್ಥಮಾಡಿಕೊಳ್ಳುವುದು ಅಥವಾ ಆರೋಗ್ಯ ಮಾಹಿತಿಯನ್ನು ಸರಿಯಾಗಿ ಗ್ರಹಿಸುವುದು - ಇವೆಲ್ಲವೂ ಇಂದಿನ ಸಾಕ್ಷರತೆಯ ಭಾಗಗಳಾಗಿವೆ.
ಆದ್ದರಿಂದ ಮುಂದಿನ ಹಂತದಲ್ಲಿ ನಾಲ್ಕು ವಿಷಯಗಳಿಗೆ ವಿಶೇಷ ಆದ್ಯತೆ ನೀಡಬೇಕು.

ಮೊದಲನೆಯದು, ಮೂರನೇ ತರಗತಿ ಮುಗಿಯುವ ವೇಳೆಗೆ ಪ್ರತಿಯೊಂದು ಮಗುವೂ ಸರಾಗವಾಗಿ ಓದಲು, ಬರೆಯಲು ಮತ್ತು ಸರಳ ಗಣಿತ ಮಾಡಲು ಸಾಧ್ಯವಾಗುವಂತೆ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನವನ್ನು (FLN) ಖಚಿತಪಡಿಸುವುದು. ಎರಡನೆಯದು, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮತ್ತೆ ಶಿಕ್ಷಣದ ಮುಖ್ಯವಾಹಿನಿಗೆ ತರುವುದು. ಮೂರನೆಯದು, ವಿಶೇಷವಾಗಿ ಮಹಿಳೆಯರು ಮತ್ತು ಹಿಂದುಳಿದ ಸಮುದಾಯಗಳನ್ನು ಗುರಿಯಾಗಿಸಿಕೊಂಡು ವಯಸ್ಕರ ಸಾಕ್ಷರತಾ ಕಾರ್ಯಕ್ರಮಗಳನ್ನು ಬಲಪಡಿಸುವುದು. ನಾಲ್ಕನೆಯದು, ಡಿಜಿಟಲ್ ಸಾಕ್ಷರತೆಯನ್ನು ಸಾಂಪ್ರದಾಯಿಕ ಸಾಕ್ಷರತೆಯೊಂದಿಗೆ ಬೆಸೆದು ಗ್ರಾಮೀಣ-ನಗರ ಅಂತರವನ್ನು ಕಡಿಮೆ ಮಾಡುವುದು ಎಂದೂ ಸಚಿವ ಮಧು ಬಂಗಾರಪ್ಪ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+