E-Pauti: ಕಂದಾಯ ಇಲಾಖೆಯಲ್ಲಿ ಡಿಜಿಟಲ್ ಕ್ರಾಂತಿ: ಇ-ಪೌತಿ, ಹಕ್ಕುಪತ್ರಗಳ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಮಹತ್ವದ ಘೋಷಣೆ
E-Pauti: ಇ- ಪೌತಿ, ಭೂಮಿ ಹದ್ದುಬಸ್ತು, ದರಖಾಸ್ತು ಪೋಡಿ ಸೇರಿದಂತೆ ಕಂದಾಯ ಇಲಾಖೆಗೆ ಸಂಬಂಧಿಸಿದ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಅಪ್ಡೇಟ್ಸ್ ಕೊಟ್ಟಿದ್ದಾರೆ.
ಕಲಬುರಗಿಯ ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ ಯೋಜನೆಗಳ ಫಲಾನುಭವಿಗಳಿಗೆ ವಿವಿಧ ಸೌಲಭ್ಯ ( ಹಕ್ಕುಪತ್ರ, ಪಹಣಿ, ಪಿಂಚಣಿ ಮತ್ತಿತ್ತರ ಸೌಲಭ್ಯಗಳ ವಿತರಣೆಗೆ ಚಾಲನೆ ನೀಡಲಾಯಿತು. ಬಹುತೇಕ ರೈತರ ಭೂಮಿಗೆ ಸಂಬಂದಿಸಿದಂತೆ ಹಕ್ಕುಪತ್ರ, ಪಹಣಿ , ಅಕಾರ್ ಬಂದ್, ದರಖಾಸ್ತು ಪೋಡಿ, ಫಾರಂ 94- ಸಿ ಹಾಗೂ 94- ಸಿಸಿ, ಲ್ಯಾಂಡ್ ಬೀಟ್ ಮುಂತಾದ ದಾಖಲಾತಿಗಳು ಪ್ರಸ್ತುತ ಭೂಮಿಗೆ ವಿಸ್ತರಣೆಗೆ ಹೊಂದಿಕೆಯಾಗದೇ ರೈತರಿಗೆ ಸರ್ಕಾರ ಸೌಲಭ್ಯಗಳು ಹಾಗೂ ಬ್ಯಾಂಕ್‌ನಿಂದ ಸಾಲ ಸೌಲಭ್ಯಗಳು ಸಿಗದಂತಾಗಿತ್ತು. ಆದ್ದರಿಂದ ಕಂದಾಯ ಇಲಾಖೆ ಜಿಲ್ಲೆಗೆ ಸಂಬಂಧಿಸಿದಂತೆ ದಾಖಲೆಗಳ ಡಿಜಿಟಲೀಕರಣ ಮಾಡಿ ದಾಖಲೆಗಳನ್ನು ಲಭ್ಯವಾಗುವಂತೆ ಮಾಡಲಾಗಿದೆ. ಹಾಗಾಗಿ ಇದನ್ನು ಒಂದು ಕ್ರಾಂತಿ ಎಂದು ಪರಿಗಣಿಸಬಹುದಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಅಪ್ಡೇಟ್ಸ್ ಕೊಟ್ಟಿದ್ದಾರೆ.

ಇ- ಪೌತಿ, ಭೂಮಿ ಹದ್ದುಬಸ್ತು, ದರಖಾಸ್ತು ಪೋಡಿ ಹಾಗೂ ಜನಸಾಮಾನ್ಯರ ವಿವಿಧ ಯೋಜನೆಗಳ ಅರ್ಜಿಗಳ ವಿಲೇವಾರಿ, ಸೇರಿದಂತೆ ಕಂದಾಯ ಇಲಾಖೆಯಿಂದ ಜನಸಾಮಾನ್ಯರಿಗೆ ದಕ್ಕಬೇಕಾಗಿರುವ ಸೌಲಭ್ಯ ಕಟ್ಟುನಿಟ್ಟಾಗಿ ದೊರಕಿಸಿಕೊಡುವ ಕಾರ್ಯಕ್ಕೆ ಒತ್ತು ನೀಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 25,000 ಸಲ್ಲಿಕೆಯಾದ ಅರ್ಜಿಗಳಲ್ಲಿ ಇದೂವರೆಗೆ 23,447 ಅರ್ಜಿಗಳು ವಿಲೇವಾರಿಯಾಗಿವೆ. ಇನ್ನುಳಿದ ಅರ್ಜಿಗಳ ವಿಲೇವಾರಿಗೆ ಅಗತ್ಯ ಕ್ರಮವಹಿಸಲಾಗಿದೆ ಎಂದಿದ್ದಾರೆ.
1. ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಯೋಜನೆಗಳ ಅಡಿಯಲ್ಲಿ ಜಿಲ್ಲೆಯಲ್ಲಿ ವೃದ್ಯಾಪ್ಯ ವೇತನ - 62,348 , ಸಂಧ್ಯಾ ಸುರಕ್ಷಾ - 1,29,071, ವಿಧವಾ ವೇತನ- 67,048, ಅಂಗವಿಕಲ ವೇತನ - 51,292 ಸೇರಿದಂತೆ ಒಟ್ಟು 3,13,945 ಫಲಾನುಭವಿಗಳು ಲಾಭ ಪಡೆಯುತ್ತಿದ್ದಾರೆ.
2. ಜಿಲ್ಲೆಯ 330 ದಾಖಲೆ ರಹಿತ ಜನವಸತಿಗಳನ್ನು ಕಂದಾಯ ಗ್ರಾಮಗಳಾಗಿ ಘೋಷಣೆ ಮಾಡಲಾಗಿದೆ.
3. ಮೊದಲ ಬಾರಿಗೆ ಭೂಮಿ, ಇ-ಸ್ವತ್ತು ಮತ್ತು ಕಾವೇರಿ ಸಾಫ್ಟವೇರ್‌ಗಳನ್ನು ಏಕೀಕರಿಸಿ ಡಿಜಿಟಲ್ ಹಕ್ಕುಪತ್ರ ವಿತರಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 6060 ಹಕ್ಕುಪತ್ರಗಳನ್ನು ಅನುಮೋದಿಸಲಾಗಿದೆ.
4. ಜಿಲ್ಲೆಯಲ್ಲಿ ಇದೂವರೆಗೆ 33,940 ಇ ಪೌತಿ ಅರ್ಜಿಗಳು ಪೂರ್ಣಗೊಂಡಿವೆ.
5. ಜಿಲ್ಲೆಯ 542 ಪ್ರಕರಣಗಳಲ್ಲಿ 1660 ಮಂಜೂರುದಾರರಿದ್ದು, 978 ದಾಖಲೆಗಳು ದುರಸ್ತಿಯಾಗಿವೆ. 965 ಪಹಣಿಗಳು ಸೃಜನೆಗೊಂಡಿವೆ.
6. ಭೂ ಸುರಕ್ಷಾ ಯೋಜನೆಯಡಿಯಲ್ಲಿ ಒಟ್ಟು 1,41,48,710 ಪುಟಗಳ ದಾಖಲೆಗಳನ್ನು ಡಿಜಿಟಲೀಕರಣ ಕೈಗೊಳ್ಳಲಾಗಿದೆ.
7. ಜಿಲ್ಲೆಯ 8,39,144 ಜಮೀನು ಮಾಲೀಕರಲ್ಲಿ 5, 56, 876 ರೈತರ ಪಹಣಿಗೆ ಆಧಾರ್ ಜೋಡಣೆ ಮಾಡಲಾಗಿದೆ.
8. ಕಲಬುರಗಿ ಜಿಲ್ಲೆಯಲ್ಲಿ 32,390 ಸರ್ಕಾರಿ ಆರ್ ಟಿ.ಸಿಗಳಲ್ಲಿ 31,646 ( 98.60%)ಸರ್ಕಾರಿ ಭೂಮಿಗಳನ್ನು ಗುರುತಿಸಲಾಗಿದೆ.












Click it and Unblock the Notifications