E Khata Updates: ಪ್ರಾಪರ್ಟಿಗಳಿಗೆ ಇ -ಖಾತಾ ಬಜೆಟ್‌ನಲ್ಲಿ ಹೇಳಿದ್ದೇನು, ಈ ವಿಷಯ ನೆನಪಿರಲಿ!
ಕರ್ನಾಟಕ ಸರ್ಕಾರವು ಪ್ರಾಪರ್ಟಿಗಳಿಗೆ ಇ -ಖಾತಾ ನೀಡುವುದನ್ನು ಕಡ್ಡಾಯ ಮಾಡಿದೆ. ಇದರೊಂದಿಗೆ ಕರ್ನಾಟಕ ಸರ್ಕಾರದ 2025- 2026ನೇ ಸಾಲಿನ ಬಜೆಟ್‌ನಲ್ಲಿ ಇ- ಖಾತಾ ಹಾಗೂ ಆಸ್ತಿಗಳಿಗೆ ಸಂಬಂಧಿಸಿದಂತೆ ಹಲವು ಪ್ರಮುಖ ಅಂಶಗಳನ್ನು ಹಂಚಿಕೊಳ್ಳಲಾಗಿದೆ. ಆಸ್ತಿ ನೋಂದಣಿಯನ್ನು ಸುಗಮಗೊಳಿಸಲು ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಇ - ಖಾತಾ ವ್ಯವಸ್ಥೆಯನ್ನು ಪರಿಚಯಿಸಿದೆ. ಈ ಕ್ರಮವು ಆಸ್ತಿ ವಂಚನೆ ಮತ್ತು ತೆರಿಗೆ ತಪ್ಪಿಸಲು ಆಸ್ತಿಗಳ ಮೌಲ್ಯ ಕಡಿಮೆ ಮಾಡುವುದನ್ನು ನಿಯಂತ್ರಿಸುವ ಉದ್ದೇಶವನ್ನೂ ಹೊಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಅಲ್ಲದೆ ಇ ಖಾತಾಗೆ ಸಂಬಂಧಿಸಿದಂತೆ ಮತ್ತೊಂದು ಅಪ್ಡೇಟ್ ಅನ್ನು ಸಹ ಕೊಡಲಾಗಿದೆ.
ಇ ಖಾತಾ ಆಸ್ತಿ ವ್ಯಾಪ್ತಿಯಿಂದ ಹೊರಗುಳಿದವರನ್ನು ಆಸ್ತಿ ವ್ಯಾಪ್ತಿಗೆ ತರುತ್ತದೆ. ದಾಖಲೆಗಳನ್ನು ನೋಂದಾಯಿಸುವಾಗ ವಂಚನೆ ಮತ್ತು ದುರುಪಯೋಗವನ್ನು ತಡೆಗಟ್ಟಲು ಸರ್ಕಾರವು ಪ್ರಸಕ್ತ ವರ್ಷದಿಂದ ನೋಂದಾಯಿಸಲಾಗದ ದಾಖಲೆಗಳಿಗೆ ಸಹ ಡಿಜಿಟಲ್ ಇ - ಸ್ಟ್ಯಾಂಪಿಂಗ್ ಜಾರಿ ಮಾಡಿರುವುದಾಗಿ ಹೇಳಿದೆ.

ಇನ್ನು ಅನೇಕ ಜಾಗಗಳಲ್ಲಿ ಒಂದು ಆಸ್ತಿಯಿಂದ ಇನ್ನೊಂದು ಆಸ್ತಿಯ ಮಾರ್ಗ ಮಾರ್ಗಸೂಚಿ ಮೌಲ್ಯದಲ್ಲಿ ವ್ಯತ್ಯಾಸಗಳನ್ನು ಸರಿಪಡಿಸುವ ಉದ್ದೇಶದಿಂದ ಜಿಐಎಸ್ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಇದರಿಂದ ವೈಜ್ಞಾನಿಕವಾಗಿ ದರ ನಿಗದಿ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.
ಇನ್ನು 2024 -25ನೇ ಸಾಲಿನಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಬರೋಬ್ಬರಿ 24,000 ಸಾವಿರ ಕೋಟಿಯನ್ನು ನಿರೀಕ್ಷೆ ಮಾಡಲಾಗಿದೆ ಎಂದು ಹೇಳಲಾಗಿದೆ. ಅಲ್ಲದೆ 2025 -2026ನೇ ಸಾಲಿನಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ 28,000 ಸಾವಿರ ಕೋಟಿ ಆದಾಯ ಸಂಗ್ರಹ ಮಾಡುವ ಗುರಿಯನ್ನು ಕೊಡಲಾಗಿದೆ. ಇನ್ನು ಆಸ್ತಿಗಳ ಮೌಲ್ಯಮಾಪನದಲ್ಲಿ ವಿಶೇಷ ನಿಗಾ ವಹಿಸಲಾಗಿದೆ ಎಂದು ರಾಜ್ಯ ಸರ್ಕಾರವು ಹೇಳಿದೆ. ಹೀಗಾಗಿ, ಆಸ್ತಿದಾರರು ಅಥವಾ ಆಸ್ತಿಯನ್ನು ಖರೀದಿ ಮಾಡುವವರು ಆಸ್ತಿ ಖರೀದಿ ಹಾಗೂ ಆಸ್ತಿ ಮಾರಾಟದ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕು. ಇ ಖಾತಾ ಇರುವುದರಿಂದ ಆಸ್ತಿಯಲ್ಲಿ ಯಾವುದೇ ಲೋಪವಾದರೂ ಸ್ಪಷ್ಟವಾಗಿ ತಿಳಿಯಲಿದೆ.
ಬಿ ಖಾತಾದಿಂದ ಭರ್ಜರಿ ಆದಾಯ: ಇನ್ನು ರಾಜ್ಯ ಸರ್ಕಾರವು ಬರೋಬ್ಬರಿ 40 ರಿಂದ 50 ಲಕ್ಷದಷ್ಟು ಆಸ್ತಿಗಳಿಗೆ ಬಿ ಖಾತಾ ನೀಡಲು ನಿರ್ಧರಿಸಿದೆ. ಅನಧಿಕೃತ ಹಾಗೂ ರೆವಿನ್ಯೂ ಸೈಟ್‌ಗಳಿಗೆ ಬಿ ಖಾತಾ ನೀಡಲಾಗುತ್ತಿದೆ. ಇಲ್ಲಿಯ ವರೆಗೆ ಯಾವುದೇ ಖಾತಾ ಇಲ್ಲದೆ ಒಂದೇ ಬಡಾವಣೆಯಲ್ಲಿ ಮನೆ ಕಟ್ಟಿಕೊಂಡಿದ್ದವರಿಗೆ ಸಂಕಷ್ಟ ಎದುರಾಗಿತ್ತು. ಇದೀಗ ಇದಕ್ಕೆ ಪರಿಹಾರ ಕಂಡುಕೊಳ್ಳಲಾಗಿದೆ. ಮೂರು ತಿಂಗಳ ಅವಧಿಯಲ್ಲಿ ಎಲ್ಲಾ ಅಕ್ರಮ ಆಸ್ತಿಗಳಿಗೂ ಬಿ ಖಾತಾ ನೀಡಲು ನಿರ್ಧರಿಸಲಾಗಿದ್ದು. ಈಗಾಗಲೇ ಸಾವಿರಾರು ಆಸ್ತಿಗಳಿಗೆ ಬಿ ಖಾತಾ ವಿತರಣೆ ಮಾಡಲಾಗಿದೆ.
ಮುಂದಿನ ದಿನಗಳಲ್ಲಿ ಇದರಿಂದ ಕೋಟ್ಯಾಂತರ ರೂಪಾಯಿ ಆದಾಯ ಸರ್ಕಾರಕ್ಕೆ ಹರಿದು ಬರಲಿದೆ ಎಂದು ನಿರೀಕ್ಷೆ ಮಾಡಲಾಗುತ್ತಿದೆ. ಯಾಕೆಂದರೆ ಕೆಲವು ಆಸ್ತಿಗಳು ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗೆ ಉಳಿದಿದ್ದವು. ಇದೀಗ ಈ ಆಸ್ತಿಗಳು ಸಹ ಆಸ್ತಿ ತೆರಿಗೆ ವ್ಯಾಪ್ತಿಗೆ ಬರಲಿವೆ.












Click it and Unblock the Notifications