E- khata: ಇ - ಖಾತಾ ಮಾಡಿಸಲು ಗಡುವು ನಿಗದಿ ಮಾಡಿದ ಸರ್ಕಾರ, ದಿನಾಂಕ ವಿವರ ಇಲ್ಲಿದೆ
ಆಸ್ತಿ ನೋಂದಣಿಯಲ್ಲಿ ಲೋಪ ಹಾಗೂ ಅಕ್ರಮ ಆಸ್ತಿ ಮಾರಾಟ ಸೇರಿದಂತೆ ವಿವಿಧ ಕಾರಣಕ್ಕಾಗಿ ಆಸ್ತಿಗಳಿಗೆ ಸರ್ಕಾರ ಇ - ಖಾತಾ ಕಡ್ಡಾಯ ಮಾಡಿದೆ. ಇದೀಗ ಇ -ಖಾತಾ ಪ್ರಕ್ರಿಯೆಗೆ ಗಡುವು ನಿಗದಿ ಮಾಡಲಾಗಿದೆ. ಇ - ಖಾತಾ ಮಾಡಿಸಿಕೊಳ್ಳುವುದಕ್ಕೆ ಸಾಕಷ್ಟು ಗೊಂದಲ ಆಗುತ್ತಿದೆ ಎಂದು ಕೆಲವು ಆಸ್ತಿದಾರರು ಆರೋಪ ಮಾಡುತ್ತಿದ್ದಾರೆ. ಈ ನಡುವೆಯೇ ಇ - ಖಾತಾ ಮಾಡಿಸಿಕೊಳ್ಳುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂತಿಮ ದಿನಾಂಕವನ್ನು ನಿಗದಿ ಮಾಡಿದ್ದಾರೆ.
ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರಗಳನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ. ಆಸ್ತಿ ವ್ಯಾಪ್ತಿಯಿಂದ ಕೆಲವರು ಹೊರಗೆ ಉಳಿದಿದ್ದು. ಇದರಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ ಪ್ರಮುಖ ಪಾಲಿಕೆಗಳು ಹಾಗೂ ಸರ್ಕಾರಕ್ಕೆ ಆರ್ಥಿಕ ನಷ್ಟವುಂಟಾಗುತ್ತಿದೆ. ಬೆಂಗಳೂರಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲೇ ಅಂದಾಜು 15 ಲಕ್ಷ ಆಸ್ತಿ ಇರುವವರು ಖಾತಾಗಳನ್ನೇ ಮಾಡಿಸಿಕೊಂಡಿಲ್ಲ.

ಇದರಿಂದ ಈ ಆಸ್ತಿದಾರರು ತೆರಿಗೆ ವ್ಯಾಪ್ತಿಯಿಂದ ಹೊರಗುಳಿದಿದ್ದು, ಸರ್ಕಾರಕ್ಕೆ ಪ್ರತಿ ತಿಂಗಳೂ ಕೋಟ್ಯಾಂತರ ರೂಪಾಯಿ ನಷ್ಟವುಂಟಾಗುತ್ತಿದೆ. ಇದಕ್ಕೆ ಕೂಡಲೇ ಕಡಿವಾಣ ಹಾಕಬೇಕು. ಅಲ್ಲದೆ ಕರ್ನಾಟಕದ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 30 ಲಕ್ಷ ಆಸ್ತಿಗಳಿಗೆ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರೋಬ್ಬರಿ 90 ಲಕ್ಷಕ್ಕಿಂತ ಹೆಚ್ಚು ಆಸ್ತಿಗಳು ಖಾತಾ ವ್ಯಾಪ್ತಿಗೆ ಒಳಪಟ್ಟಿಲ್ಲ ಎಂದು ಸರ್ಕಾರ ಹೇಳಿದೆ.
ಇ ಖಾತಾ ಮಾಡಿಸುವುದಕ್ಕೆ ಗಡುವು: ರಾಜ್ಯದಲ್ಲಿ ಇನ್ನೂ ಲಕ್ಷಾಂತರ ಜನ ಇ ಖಾತಾ ಮಾಡಿಸಿಕೊಳ್ಳುವುದು ಬಾಕಿ ಉಳಿದಿದೆ. ಬೆಂಗಳೂರಿನಲ್ಲೂ 22 ಲಕ್ಷ ಇ - ಖಾತಾಗಳನ್ನು ಅಪ್‌ಲೋಡ್ ಮಾಡಿರುವುದಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೇಳಿದೆ. ಆದರೆ, ಇನ್ನೂ ಲಕ್ಷಾಂತರ ಜನ ಇ ಖಾತಾ ಮಾಡಿಸಿಕೊಳ್ಳಲು ಪರದಾಡುತ್ತಿದ್ದಾರೆ. ಪರಿಸ್ಥಿತಿ ಈ ರೀತಿ ಇರುವಾಗಲೇ ರಾಜ್ಯ ಸರ್ಕಾರವು ಇ ಖಾತಾ ಪ್ರಕ್ರಿಯೆಯನ್ನು ಮುಗಿಸುವುದಕ್ಕೆ ಗಡುವು ನೀಡಿದೆ.

ಇ ಖಾತಾ ಕೊಡುವುದನ್ನು ಫೆಬ್ರವರಿ 10ರ ಒಳಗೆ ಮುಗಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ಕೊಟ್ಟಿದ್ದಾರೆ. ಫೆಬ್ರವರಿ 10ರ ಒಳಗಾಗಿ ಇ ಖಾತಾ ಮಾಡಿಸಿಕೊಳ್ಳಬೇಕಿದೆ. ಆದರೆ ಇದೇ ಅಂತಿಮ ದಿನಾಂಕ ಎಂದು ಸರ್ಕಾರ ಹೇಳಿಲ್ಲ. ಇನ್ನು ಬೇಗ ಇ ಖಾತಾ ವಿತರಿಸುವಂತೆ ಬಿಬಿಎಂಪಿ, ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಕಂದಾಯ ವಿಭಾಗದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಈ ಸಂಬಂಧ ಅಭಿಯಾನಗಳನ್ನು ನಡೆಸುವಂತೆಯೂ ಸೂಚನೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಇ -ಖಾತಾಗೆ ಸಂಬಂಧಿಸಿದಂತೆ ಬಿಬಿಎಂಪಿಯು ಈಗಾಗಲೇ ವಿವಿಧ ಅಭಿಯಾನಗಳನ್ನು ನಡೆಸುತ್ತಿದೆ. ಆದರೆ ಇ ಖಾತಾ ಮಾಡಿಸಿಕೊಳ್ಳುವ ನಿಟ್ಟಿನಲ್ಲಿ ಇರುವ ಕೆಲವೊಂದು ಗೊಂದಲಗಳು ಇನ್ನೂ ಮುಂದುವರಿದಿವೆ. ಇದೀಗ ಸರ್ಕಾರ ಇ ಖಾತಾ ಪ್ರಕ್ರಿಯೆ ಪೂರ್ಣಗೊಳಿಸುವುದಕ್ಕೆ ಒಂದು ತಿಂಗಳು ಕಾಲಾವಕಾಶ ನೀಡಿದ್ದು, ಈ ಅವಧಿಯಲ್ಲಿ ಸ್ಥಳೀಯ ಸಂಸ್ಥೆಗಳು ಇದನ್ನು ಯಾವ ರೀತಿ ನಿಭಾಯಿಸಲಿದೆ ಎನ್ನುವುದು ಕಾದು ನೋಡಬೇಕಿದೆ.
ಗಡುವು ವಿಚಾರ ಗೊಂದಲ: ರಾಜ್ಯ ಸರ್ಕಾರದ ಗಡುವು ವಿಚಾರವು ಸಾಕಷ್ಟು ಗೊಂದಲಕ್ಕೂ ಕಾರಣವಾಗಿದೆ. ಯಾಕೆಂದರೆ ಈಗಾಗಲೇ ಇ ಖಾತಾ ಬೇಕು ಎಂದು ಲಕ್ಷಾಂತರ ಜನ ರಾಜ್ಯದಲ್ಲಿ ಅರ್ಜಿ ಹಾಕಿದ್ದಾರೆ. ಆದರೆ ಅದರಲ್ಲಿ ಬಹುತೇಕ ಅರ್ಜಿಗಳ ವಿಲೇವಾರಿ ಇನ್ನಷ್ಟೇ ಆಗಬೇಕಿದೆ. ಈ ನಡುವೆ ಗಡುವು ವಿಚಾರ ಗೊಂದಲವನ್ನು ಸೃಷ್ಟಿ ಮಾಡಿದೆ.
ಇ ಖಾತಾ ಗಡುವು ಮುಂದುವರಿಸುವ ಸಾಧ್ಯತೆ: ಇನ್ನು ಫೆಬ್ರವರಿ 10 ಅಂತಿಮ ದಿನಾಂಕ ಎಂದು ನಿಗದಿ ಮಾಡಲಾಗಿದೆಯಾದರೂ. ಇದು ಮುಖ್ಯವಾಗಿ ಅಧಿಕಾರಿಗಳಿಗೆ ಸಂಬಂಧಿಸಿದ್ದಾಗಿದೆ. ಇ ಖಾತಾ ಗಡುವಿನ ಒಳಗಾಗಿ ಎಲ್ಲಾ ಇಖಾತಾ ನೀಡಬೇಕು ಎಂದು ಹೇಳಲಾಗಿದೆ. ಈ ಅವಧಿಯಲ್ಲಿ ಆಗದಿದ್ದರೆ ಖಾತಾ ಗಡುವು ಅವಧಿ ವಿಸ್ತರಿಸುವ ಸಾಧ್ಯತೆ ಇದೆ. ಆದರೆ, ಸಾಧ್ಯವಾದಷ್ಟು ಬೇಗ ಇ ಖಾತಾ ಮಾಡಿಸಿಕೊಳ್ಳುವುದು ಉತ್ತಮ.
ಇ ಖಾತಾ ಮಾಡಿಸಲು ಬೇಕಾಗುವ ದಾಖಲೆಗಳು
ಇ- ಖಾತಾ ಪಡೆದುಕೊಳ್ಳಲು ನೀಡಬೇಕಾದ ಪ್ರಮುಖ ದಾಖಲೆಗಳು ಒಂದೇ ಆಗಿರುತ್ತವೆ. ಆದರೆ, ಸ್ಥಳೀಯ ಸಂಸ್ಥೆಗಳಿಗೆ ಅನುಸಾರವಾಗಿ ಇ ಖಾತಾಗೆ ಸಂಬಂಧಿಸಿದಂತೆ ಕೆಲವೊಂದು ದಾಖಲೆಗಳು ಬದಲಾಗುತ್ತವೆ.
ಇ ಖಾತಾ ಮಾಡಿಸಲು ಬೇಕಾಗುವ ಪ್ರಮುಖ ದಾಖಲೆಗಳ ವಿವರ ಈ ರೀತಿ ಇದೆ.
* ನಿಮ್ಮ ಕರಡು ಇ-ಖಾತಾವನ್ನು ವಾರ್ಡ್ ವಾರು ಪಟ್ಟಿಯಲ್ಲಿ ಹುಡುಕಬಹುದಾಗಿದೆ (ನಿಮ್ಮ ವಾರ್ಡ್ ಅನ್ನು ನಿಮ್ಮ ಆಸ್ತಿ ತೆರಿಗೆ ರಶೀದಿಯಿಂದ ತಿಳಿದುಕೊಳ್ಳಿ)
* ಈ ಮಾಹಿತಿಗಳನ್ನು ಆನ್‌ಲೈನ್‌ನಲ್ಲಿ ನಮೂದಿಸಿ ನಿಮ್ಮ ಅಂತಿಮ ಇ-ಖಾತಾವನ್ನು ಮುದ್ರಿಸಿಕೊಳ್ಳಬಹುದಾಗಿದೆ.
(i) ಆಧಾರ್
(ii) ಆಸ್ತಿ ತೆರಿಗೆ ID
(iii) ಕ್ರಯ/ನೊಂದಾಯಿತ ಪತ್ರ ಸಂಖ್ಯೆ
(iv) ಬೆಸ್ಕಾಂ ID (ಖಾಲಿ ನಿವೇಶನ ಆಯ್ಕೆ)
ಇ ಖಾತಾ ಗೊಂದಲಗಳಿಗೆ ಜಾಗೃತಿ: ಇನ್ನು ಈ ಖಾತಾ ಗೊಂದಲಗಳಿಗೆ ಸಂಬಂಧಿಸಿದಂತೆ ಬಿಬಿಎಂಪಿ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆಗಳ ಹಂತದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ವಿಶೇಷ ಅಭಿಯಾನಗಳನ್ನು ಸಹ ಈ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಸರ್ಕಾರ ಸಹ ಇ ಖಾತಾ ಮಾಡಿಸಿಕೊಳ್ಳುವಂತೆ ಆಸ್ತಿದಾರರಿಗೆ ಪ್ರೋತ್ಸಾಹ ಕೊಡುತ್ತಿದೆ.












Click it and Unblock the Notifications