ಕಳೆದ ಬಾರಿ ಪ್ರಮಾಣ ವಚನದ ನಂತರ ಕನ್ನಡಿಗರ ಕ್ಷಮೆ ಕೇಳಿದ್ದ ಜಮೀರ್
ಬೆಂಗಳೂರು, ಮೇ 20: ಸಿದ್ದರಾಮಯ್ಯನವರ ಸರ್ಕಾರದಲ್ಲಿ ಅವರ ಆಪ್ತ, ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಕೂಡಾ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಎಂಟು ನಾಯಕರು ಶಪಥ ಸ್ವೀಕರಿಸಲಿದ್ದು ಅದರಲ್ಲಿ ಜಮೀರ್ ಕೂಡಾ ಒಬ್ಬರು.
ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ಬಂದು ಗೆಲುವು ಕಂಡಿದ್ದ ಜಮೀರ್ ಅಹ್ಮದ್‌ಗೆ ಮತ್ತೆ ಸಚಿವ ಸ್ಥಾನ ಒಲಿದಿದೆ. ಸಿದ್ದರಾಮಯ್ಯನವರ ಕೃಪೆಯಿಂದ ಜಮೀರ್‌ಗೆ ಸಚಿವ ಸ್ಥಾನ ಒಲಿದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅಲ್ಪಸಂಖ್ಯಾತ ಸಮುದಾಯದ ಇಬ್ಬರು (ಜಮೀರ್, ಕೆ.ಜೆ.ಜಾರ್ಜ್) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಕಳೆದ ಬಾರಿ ಅಂದರೆ 2018ರಲ್ಲಿ ಯಾವುದೇ ಸರ್ಕಾರಕ್ಕೆ ಬಹುಮತ ಸಿಗದೇ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಮತ್ತು ಕಾಂಗ್ರೆಸ್ಸಿನ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದಿತ್ತು. ಆ ವೇಳೆ, ಜಮೀರ್ ಅಹ್ಮದ್ ಖಾನ್ ಕೂಡಾ ಸಚಿವರಾಗಿದ್ದರು. ಆಹಾರ, ವಕ್ಫ್ ಮತ್ತು ನಾಗರೀಕ ಪೂರೈಕೆ ಖಾತೆಯನ್ನು ಅವರು ನಿಭಾಯಿಸಿದ್ದರು. ಅದಕ್ಕೂ ಮುನ್ನ ಪ್ರಮಾಣ ವಚನದ ವೇಳೆ ಇಂಗ್ಲಿಷ್ ನಲ್ಲಿ ಮಾತಾಡಿ ಸಾಕಷ್ಟು ಟ್ರೋಲ್ ಆಗಿದ್ದರು.
ಜಮೀರ್ ಅಹ್ಮದ್‌ಗೆ ಕನ್ನಡ ಬರುತ್ತದೆಯಾದರೂ ಅವರ ಕನ್ನಡದಲ್ಲಿ ಉರ್ದು ಪ್ರಭಾವ ಹೆಚ್ಚಿದೆ. ಹಾಗಾಗಿ ಅವರ ಉಚ್ಛಾರ ಒಮ್ಮೊಮ್ಮೆ ಹಾಸ್ಯಕ್ಕೆ ಗುರಿಯಾಗುವುದುಂಟು. ಈ ಹಿಂದೆ ಅವರು ಮಾಡಿರುವ ಭಾಷಣಗಳು ಸಾಮಾಜಿಕ ಜಾಲತಾಣದಲ್ಲಿ ಅಪಹಾಸ್ಯಕ್ಕೀಡಾಗಿದ್ದದ್ದೂ ಇದೆ.
ಆ ಕಾರಣಕ್ಕಾಗಿ ಅವರು ಇಂಗ್ಲಿಷ್ ನಲ್ಲಿ ಅಧಿಕಾರ ಪದ, ಗೋಪ್ಯತಾ ಪ್ರಮಾಣ ವಚನವನ್ನು ಇಂಗ್ಲಿಷ್‌ನಲ್ಲಿ ಸ್ವೀಕರಿಸಿ ಅಲ್ಲಾಹ್ ನ ಹೆಸರಿನಲ್ಲಿ ಪ್ರಮಾಣ ಮಾಡಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್, ಆಕ್ರೋಶಕ್ಕೆ ಒಳಗಾದ ನಂತರ ಸಿದ್ದಗಂಗಾ ಮಠದಲ್ಲಿ ಕನ್ನಡಿಗರ ಕ್ಷಮೆ ಕೇಳಿದ್ದರು.
"ಕನ್ನಡ ಕಲಿಯದೆಯೇ ಇರುವುದು ನನ್ನ ದುರದೃಷ್ಟ. ನನ್ನ ಪೋಷಕರು ಕನ್ನಡ ಶಾಲೆಗೆ ನನ್ನನ್ನು ಸೇರಿಸಿರಲಿಲ್ಲ. ಕನ್ನಡಿದ ಜನತೆಗಿಂತ ದುಪ್ಪಟ್ಟು ನೋವು ನನಗಾಗಿದೆ. 'ನಾನು ಬೇಕೆಂದೇ ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾಗಿ ಅನೇಕರು ಆರೋಪಿಸುತ್ತಿದ್ದಾರೆ. ಆದರೆ, ಅದು ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ. ಒಂದು ವೇಳೆ ಉದ್ದೇಶಪೂರ್ವಕವಾಗಿ ಕನ್ನಡದಲ್ಲಿ ಮಾತನಾಡದೆ ಇದ್ದರೆ ನನ್ನನ್ನು ಗಲ್ಲಿಗೇರಿಸಿ' ಎಂದು ಜಮೀರ್ ಅಂದು ಹೇಳಿದ್ದರು.
ಹಾಗಾಗಿ, ಇಂದಿನ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಜಮೀರ್ ಅಹ್ಮದ್ ಖಾನ್, ಇಂಗ್ಲಿಷ್ ಅಥವಾ ಕನ್ನಡದಲ್ಲಿ ಗೋಪ್ಯತಾ ಪ್ರಮಾಣ ತೆಗೆದುಕೊಳ್ಳಲಿದ್ದಾರಾ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications