ಕರ್ನಾಟಕ ಬರಗಾಲ: ಜನ ಗುಳೆ ಹೋಗದಂತೆ ಊರಲ್ಲೇ ಉದ್ಯೋಗ ಕೊಡಿ, ಅಧಿಕಾರಿಗಳಿಗೆ ಡಿಸಿಎಂ ಸೂಚನೆ
ತುಮಕೂರು: ಬರಗಾಲ ಹಿನ್ನೆಲೇ ವಿವಿಧ ಭಾಗಗಳಲ್ಲಿ ಉದ್ಯೋಗ ಅರಸಿ ವಲಸೆ ಹೋಗುತ್ತಿದ್ದಾರೆ. ಅಧಿಕಾರಿಗಳು ಕೂಡಲೇ ʼವಿಬಿ ಜಿ ರಾಮ್ ಜಿʼ ಯೋಜನೆಯಡಿ ಅವರಿಗೆ ಉದ್ಯೋಗ ನೀಡುವ ಮೂಲಕ ಗುಳೆ ಹೋಗುವುದನ್ನು ತಪ್ಪಿಸಿ. ಜನರ ಸಮಸ್ಯೆಗಳಿಗೆ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಬೇಕು. ಎಲ್ಲ ಜನಪ್ರತಿನಿಧಿಗಳು ಜನರ ಅಹವಾಲುಗಳನ್ನು ಕೇಳಬೇಕಿದೆ. ಅಧಿಕಾರಿಗಳು ಜನರಿಗೆ ಸ್ಪಂದಿಸುತ್ತಿಲ್ಲ ಎಂಬ ಕಾರಣಕ್ಕೆ 'ಪ್ರಜಾಸೇವಾ ಇಲಾಖೆ' ಪ್ರಾರಂಭಿಸಲಾಗಿದೆ ಎಂದು ಡಿಸಿಎಂ ಮತ್ತು ಕಂದಾಯ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಮಂಗಳವಾರ ಸಿಎಂ ಡಿ.ಕೆ.ಶಿವಕುಮಾರ್ ಅವರು ವಿಧಾನಸೌಧದಲ್ಲಿ ರಾಜ್ಯದ ಎಲ್ಲ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರೊಂದಿಗೆ ನಡೆಸಿದ ವೀಡಿಯೋ ಸಂವಾದದಲ್ಲಿ ಅವರು ಕುಣಿಗಲ್ ತಹಶೀಲ್ದಾರ್ ಕಚೇರಿಯಿಂದ ಭಾಗವಹಿಸಿ ಮಾತನಾಡಿದರು.

ಈ ವೇಳೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರು ಸಿಎಂ ಆದ ನಂತರ ಸರ್ಕಾರವನ್ನು ಜನರ ಹತ್ತಿರ ತೆಗೆದುಕೊಂಡು ಹೋಗಿ ಕೆಲಸ ಮಾಡುವುದಕ್ಕೆ ಆದ್ಯತೆ ನೀಡಿದ್ದಾರೆ. ಎಲ್ಲ ಜನಪ್ರತಿನಿಧಿಗಳು ಜನರ ಅಹವಾಲುಗಳನ್ನು ಕೇಳಬೇಕಿದೆ. ಅಧಿಕಾರಿಗಳು ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕು.
ಉತ್ತರ ಕರ್ನಾಟಕ ಭಾಗದಲ್ಲಿ ಜನ ಗುಳೆ ಹೋಗುತ್ತಿದ್ದಾರೆ. ಕೇಂದ್ರದಿಂದ ʼವಿಬಿ ಜಿ ರಾಮ್ ಜಿ' ಯೋಜನೆಯ ಹಣ ಬರುತ್ತಿಲ್ಲ. ಸದ್ಯದ ಪರಿಸ್ಥಿತಿಗೆ ರಾಜ್ಯ ಸರ್ಕಾರವೇ ಹಣ ಭರಿಸುತ್ತಿದೆ. ಉದ್ಯೋಗ ನೀಡಿದರೆ ಜನರು ಊರು ಬಿಡುವುದನ್ನು ತಪ್ಪಿಸಬಹುದು. ಜನರಿಗೆ ನಾವೇ ಕೆಲಸ ಕೊಟ್ಟು ಊರಿನಲ್ಲಿ ಉಳಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರತಿಯೊಂದು ಜಿಲ್ಲಾ, ತಾಲೂಕು ಮಟ್ಟದಲ್ಲಿ ಅಧಿಕಾರಿಗಳನ್ನು ನಿಯೋಜಿಸಿ, ಜನರು ಸಮಸ್ಯೆಗಳನ್ನು ಆಲಿಸಿ ತ್ವರಿತವಾಗಿ ಪರಿಹಾರ ಕ್ರಮ ಕೈಗೊಳ್ಳುವ ಉದ್ದೇಶದಿಂದ ಪ್ರಜಾಸೇವಾ ಇಲಾಖೆಯನ್ನು ಆರಂಭಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಅನೇಕ ಸಮಸ್ಯೆ ಎದುರಿಸುತ್ತಿದ್ದೇವೆ. ಈಗಲೂ ಸಾಕಷ್ಟು ಜನರು ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ. ಸವಲತ್ತುಗಳು ನೇರವಾಗಿ ಜನರಿಗೆ ತಲುಪಿಸುವುದು ಪೂರ್ಣಪ್ರಮಾಣದಲ್ಲಿ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಯಾರ ಹತ್ತಿರ ಹೋಗಬೇಕು ಎಂಬ ಜನರ ಪ್ರಶ್ನೆಗೆ ಪ್ರಜಾಸೇವಾ ಇಲಾಖೆ ಉತ್ತರವಾಗಲಿದೆ. ಗ್ರಾಮ ಪಂಚಾಯಿತಿಯಿಂದ ವಿಧಾನಸೌಧದವರೆಗೂ ಜನರ ಸಮಸ್ಯೆ ಆಲಿಸಿ, ಸ್ಪಂದಿಸಲಾಗುವುದು ಎಂದರು.
ತುಮಕೂರು ವ್ಯಾಪ್ತಿಯಲ್ಲಿ ತೀವ್ರ ಬರಗಾಲ
ಈ ವರ್ಷ ಬರದ ಪರಿಸ್ಥಿತಿ ಗಂಭೀರವಾಗಿದೆ. ನಿನ್ನೆ ದಿನ ಪಾವಗಡ, ಶಿರಾ, ಮಧುಗಿರಿ, ಕೊರಟಗೆರೆ ತಾಲೂಕುಗಳಲ್ಲಿ ಬರ ಪರಿಸ್ಥಿತಿಯನ್ನು ಪರಿಶೀಲಿಸಿದ್ದೇನೆ. ರೈತರು ಒಂದು ಎಕರೆ ಶೇಂಗಾ ಬಿತ್ತನೆಗೆ ₹40 ಸಾವಿರ ಖರ್ಚು ಮಾಡಿದ್ದಾರೆ. ಅವರಿಗೆ ಒಂದು ರೂ. ವಾಪಸ್ ಬರುವ ಸಾಧ್ಯತೆ ಇಲ್ಲ. ಫಲವತ್ತಾದ ಮಣ್ಣಿನಲ್ಲಿ ಬೆಳೆದ ಅಡಿಕೆ ಬೆಳೆ ನೀರಿನ ಕೊರತೆಯಿಂದ ಸಂಪೂರ್ಣವಾಗಿ ಒಣಗುತ್ತಿವೆ. ಹೀಗಾಗಿ ರೈತರ ಸಂಕಷ್ಟದ ಸಂದರ್ಭದಲ್ಲಿ ಅವರ ನೆರವಿಗೆ ನಿಲ್ಲುವುದು ನಮ್ಮ ಆದ್ಯ ಕರ್ತವ್ಯ ಎಂದರು.
ಪಶು ಸಂಗೋಪನಾ ಇಲಾಖೆಯಿಂದ ಟೆಂಡರ್ ಕರೆದಿಲ್ಲ!
ಬೋರ್‌ವೆಲ್‌ಗಳು ಬತ್ತಿ ಹೋಗಿವೆ. ಹೊಸದಾಗಿ ಸಾವಿರ ಅಡಿ ಬೋರ್‌ವೆಲ್ ಕೊರೆಸಿದರೂ ನೀರು ಸಿಗುತ್ತಿಲ್ಲ. ಈ ಎಲ್ಲ ಸಮಸ್ಯೆಯನ್ನು ಪ್ರತ್ಯಕ್ಷವಾಗಿ ನೋಡಿದ್ದೇನೆ. ಸರ್ಕಾರ ನಿಮ್ಮ ಜೊತೆಗಿದೆ ಎಂದು ಜನರಿಗೆ ಭರವಸೆ ನೀಡಿದ್ದೇನೆ. ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗುತ್ತಿದೆ. ತುಮಕೂರು ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ಜಿಲ್ಲೆಯಾದ್ಯಂತ ರೈತರಿಗೆ ಒಂದು ಲಕ್ಷ ಕ್ವಿಂಟಾಲ್ ಮೇವಿನ ಬೀಜ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ನೀರಿನ ಸೌಲಭ್ಯ ಇರುವ ರೈತರು ಮೇವು ಬೆಳೆಯುತ್ತಾರೆ. ಹೆಚ್ಚು ಮೇವು ಬೆಳೆದ ರೈತರಿಂದ ಖರೀದಿಸಲಾಗುವುದು. ಪಶು ಸಂಗೋಪನಾ ಇಲಾಖೆಯಿಂದ ಮೇವಿನ ಬೀಜ ವಿತರಿಸಲು ಈವರೆಗೂ ಟೆಂಡರ್ ಕರೆದಿಲ್ಲ. ಈ ಬಗ್ಗೆ ಅಧಿಕಾರಿಗಳು ಶೀಘ್ರದಲ್ಲಿ ಕ್ರಮ ವಹಿಸಬೇಕು ಎಂದು ಸಿಎಸ್ ಶಾಲಿನಿ ರಜನೀಶ್ ಅವರಿಗೆ ಸೂಚನೆ ನೀಡಿದರು.
ಮಳೆ ಮಾಪನಗಳ ದುರಸ್ತಿಗೆ ಸೂಚನೆ
ರಾಜ್ಯದಲ್ಲಿ ಐದು ಸಾವಿರಕ್ಕು ಹೆಚ್ಚು ಮಳೆ ಮಾಪನ ಕೇಂದ್ರಗಳಿವೆ. ಅದರಲ್ಲಿ 2,500 ಮಳೆ ಮಾಪನ ಕೇಂದ್ರಗಳು ಕಾರ್ಯ ನಿರ್ವಹಣೆಯಲ್ಲಿವೆ. ಸರಿ ಇಲ್ಲದ್ದು ಕೂಡಲೇ ದುರಸ್ಥಿಗೊಳಿಸಬೇಕು. ಅಗತ್ಯ ಇರುವ ಕಡೆ ಹೊಸದಾಗಿ ಮಳೆ ಮಾಪನ ಕೇಂದ್ರಗಳನ್ನು ಅಳವಡಿಸುವಂತೆ ಸೂಚನೆ ನೀಡಲಾಗಿದೆ. ಸೆಪ್ಟೆಂಬರ್‌ನಲ್ಲಿ ಬರ ಪರಿಸ್ಥಿತಿ ಮತ್ತಷ್ಟು ತೀವ್ರವಾಗುತ್ತದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಎಲ್ಲ ಅಧಿಕಾರಿಗಳು ಎಮೆರ್ಜೆನ್ಸಿ ಎಂದು ಪರಿಗಣಿಸಿ ಕೆಲಸ ಮಾಡಬೇಕಾಗುತ್ತದೆ. ಎಲ್ಲ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದುಕೊಂಡು ಕೆಲಸ ಮಾಡಬೇಕು ಎಂದು ತಿಳಿಸಿದರು.
ಉದ್ಯೋಗ ನೀಡಿ, 7 ದಿನದಲ್ಲಿ ಹಣ ಪಾವತಿಸಿ
ಚಾಮರಾಜನಗರದಲ್ಲಿ ಜನರಿಗೆ ಉದ್ಯೋಗ ನೀಡದಿದ್ದರೆ ಎಲ್ಲಿಗೆ ಹೋಗುತ್ತಾರೆ. 7000 ಮಾನವ ದಿನಗಳ ಎಂದರೆ ಸಾಲುವುದಿಲ್ಲ. ಬಡವರು ಉದ್ಯೋಗಕ್ಕಾಗಿ ಎಲ್ಲಿಗೆ ಹೋಗುತ್ತಾರೆ. ವಿಬಿ ಜಿ ರಾಮ್ ಜಿ ಯೋಜನೆಯಡಿ ಉದ್ಯೋಗ ನೀಡಿ, ವಲಸೆ ಹೋಗುವುದನ್ನು ತಪ್ಪಿಸಬೇಕು. ಜನರಿಗೆ ತ್ವರಿತಗತಿಯಲ್ಲಿ ಏಳು ದಿನದ ಒಳಗಾಗಿ ಹಣ ಪಾವತಿಸಬೇಕು. ಕೂಲಿ ಹಣ ಪಾವತಿಸಲು ವಿಳಂಬವಾದರೆ ಉದ್ಯೋಗ ನೀಡಿಯೂ ಉಪಯೋಗವಿಲ್ಲದಂತಾಗುತ್ತದೆ ಎಂದು ತಿಳಿಸಿದರು.
ಚಾಮರಾಜನಗರ ಹೆಚ್ಚು ಜಾನುವಾರುಗಳಿರುವ ಜಿಲ್ಲೆ. 24 ವಾರಕ್ಕೆ ಆಗುವಷ್ಟು ಮೇವು ಸಂಗ್ರಹವಿದೆ. ಮುಂದಿನ ದಿನಗಳಲ್ಲಿ ಮೇವಿಗೆ ಸಮಸ್ಯೆಯಾಗದಂತೆ ಕ್ರಮ ವಹಿಸಬೇಕು. ಶಿರಾ ತಾಲೂಕಿನಲ್ಲಿ ಬೇಸಿಗೆಯಲ್ಲಿ ಸುರಿದ ಅಕಾಲಿಕ ಮಳೆಯಿಂದ ದಾಳಿಂಬೆ ಬೆಳೆ ಸಂಪೂರ್ಣ ನಾಶವಾಗಿತ್ತು. ಈವರೆಗೂ ದಾಳಿಂಬೆ ಬೆಳೆ ನಷ್ಟಕ್ಕೆ ಇನ್ಶೂರೆನ್ಸ್ ಕ್ಲಿಯರ್ ಆಗಿಲ್ಲ. ಇದು ರಾಜ್ಯದ್ಯಾಂತ ಇರುವ ಸಮಸ್ಯೆಯಾಗಿದೆ. ರಾಜ್ಯದಲ್ಲಿ ರೈತರಿಗೆ ವಿಮಾ ಹಣ ನೀಡುತ್ತಿಲ್ಲ. ಹಣ ಕಟ್ಟಿಸಿಕೊಳ್ಳುವಾಗ ತೋರಿಸುವ ಆಸಕ್ತಿ, ಬೆಳೆ ನಷ್ಟದ ಸಂರ್ಭದಲ್ಲಿ ಹಣ ಬಿಡುಗಡೆ ಮಾಡಲು ಆಸಕ್ತಿ ತೋರಿಸುತ್ತಿಲ್ಲ. ಈ ಕುರಿತಂತೆ ವಿಮಾ ಕಂಪನಿಯವರೊಂದಿಗೆ ಸಭೆ ನಡೆಸುವ ಅಗತ್ಯತೆ ಇದೆ ಎಂದರು.
ಭಾರತ್ ಜೋಡೋ ಸಂಘ
ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಉದ್ದೇಶದಿಂದ ಭಾರತ್ ಜೋಡೋ ಸಂಘ ಸ್ಥಾಪನೆಗೆ ನಿರ್ಧರಿಸಲಾಗಿದೆ. ಪ್ರತಿಯೊಂದು ಪಂಚಾಯಿತಿಯಲ್ಲಿ ನಾಲ್ಕು ಸಾವಿರ ಜನಸಂಖ್ಯೆ ಇರುವ ಕಡೆ ಒಂದು ಸಂಘ ರಚಿಸಬೇಕು. ಸಂಘದಲ್ಲಿ ಎಲ್ಲ ವರ್ಗದ ಜನರು ಪಾಲ್ಗೊಳ್ಳಬೇಕು. ಸಮಾಜದ ಶೋಷಿತ, ಹಿಂದುಳಿದ ವರ್ಗಗಳನ್ನು ಸಂಘದಿಂದ ಕೈಬಿಡಬಾರದು ಎಂಬ ನಿಟ್ಟಿನಲ್ಲಿ ಸಂಘದ ಸದಸ್ಯತ್ವಕ್ಕೆ ಮೀಸಲಾತಿ ಕಲ್ಪಿಸಲಾಗಿದೆ. ಪಂಚಾಯಿತಿ ಅಧಿಕಾರಿಗಳು ಭಾರತ್ ಜೋಡೋ ಸಂಘಗಳ ಕಾರ್ಯಚಟುವಟಿಕೆಗಳ ಮೇಲೆ ನಿಗಾ ವಹಿಸಬೇಕು. ರಾಷ್ಟ್ರೀಯ ಹಬ್ಬಗಳನ್ನು ಬಹಳ ವಿಜೃಂಭಣೆಯಿಂದ ಆಚರಿಸಬೇಕು. ಯಾವುದೇ ರೀತಿಯ ವ್ಯತ್ಯಾಸಗಳು ಆಗದಂತೆ ನೋಡಲ್ ಅಧಿಕಾರಿಗಳು ನೋಡಬೇಕು ಎಂದರು.
ಸಂಘದ ಕಾರ್ಯಚಟುವಟಿಕೆ ನಡೆಸಲು ಶಾಲಾ-ಕಾಲೇಜುಗಳು, ಪಂಚಾಯಿತಿಗೆ ಸಂಬಂಧಿಸಿದ ಕಟ್ಟಡಗಳನ್ನು ಬಳಸಿಕೊಳ್ಳಬೇಕು. ಇದು ಸರ್ಕಾರಕ್ಕೆ ಫ್ಲ್ಯಾಗ್‌ಶಿಪ್ ಕಾರ್ಯಕ್ರಮ. ಈ ಯೋಜನೆಗೆ 1000 ಕೋಟಿ ರೂ. ಖರ್ಚು ಮಾಡುತ್ತಿದ್ದೇವೆ ಎಂದರೆ ಸಾಮಾನ್ಯ ಕಾರ್ಯಕ್ರಮವಲ್ಲ. ಸಮಾಜದ ನ್ಯೂನತೆಗಳನ್ನು ಸರಿಪಡಿಸಲು ಯುವಕರಿಗೆ ಅವಕಾಶ ಸಿಗುತ್ತದೆ. 10 ಸಾವಿರ ಸಂಘಗಳನ್ನು ಮಾಡುವ ಕೆಲಸ ಯಾವ ರಾಜ್ಯಗಳು ಮಾಡಿಲ್ಲ. ಆಗಸ್ಟ್ ತಿಂಗಳ ಕೊನೆ ವೇಳೆ ಸಂಘದ ನೋಂದಣಿಯನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ. ನೋಂದಣಿ ಪೂರ್ಣಗೊಳಿಸಿದ ಬಳಿಕ ಸಿಎಂ ಅವರು ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.


Click it and Unblock the Notifications
