Dr Rajkumar: ನಟ ಸಾರ್ವಭೌಮ, ಕನ್ನಡಿಗರ ಕಣ್ಮಣಿ ಡಾ. ರಾಜ್ ಕುಮಾರ್ ಬಗ್ಗೆ ಯಾರು ಏನಂದ್ರು, ಇಲ್ಲಿದೆ ವಿವರ
Dr Rajkumar: ಏಪ್ರಿಲ್ 12 ಇಂದು ನಟ ಸಾರ್ವಭೌಮ, ಕನ್ನಡಿಗರ ಕಣ್ಮಣಿ ಡಾ. ರಾಜ್ ಕುಮಾರ್ ಅವರು ಪುಣ್ಯಸ್ಮರಣೆ. ಡಾ.ರಾಜ್ ಕುಮಾರ್ ಅವರ ಪುಣ್ಯ ಸ್ಮರಣೆಯಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸೇರಿದಂತೆ ಹಲವು ಗಣ್ಯರು ರಾಜ್‌ಕುಮಾರ್ ಅವರನ್ನು ಸ್ಮರಿಸಿದ್ದಾರೆ. ಅಣ್ಣಾವ್ರ ಬಗ್ಗೆ ಯಾರು ಏನಂದ್ರು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕನ್ನಡ ಮತ್ತು ಕನ್ನಡಿಗರ ಬಗೆಗೆ ರಾಜ್‌ಕುಮಾರ್ ಅವರಿಗಿದ್ದ ಪ್ರೀತಿ - ಅಭಿಮಾನಕ್ಕೆ ಅವರೇ ಸಾಟಿ. ನೆಲ, ಜಲ, ಭಾಷೆಗೆ ಸಂಬಂಧಿಸಿದ ವಿಚಾರದಲ್ಲಿ ಅನ್ಯಾಯವಾದಾಗಲೆಲ್ಲ ಅದರ ವಿರುದ್ಧ ದನಿಯೆತ್ತಿ, ಹೋರಾಟದ ಮೊದಲ ಸಾಲಿನಲ್ಲಿ ನಿಲ್ಲುತ್ತಿದ್ದ ಅಪ್ಪಟ ಕನ್ನಡಿಗನಾಗಿದ್ದರು.
ಹಲವು ದಶಕಗಳಿಂದ ರಾಜ್‌ಕುಮಾರ್ ಮತ್ತವರ ಕುಟುಂಬದ ಜೊತೆ ನನಗೆ ಒಡನಾಟವಿದೆ. ಪ್ರತಿ ಬಾರಿ ಎದುರು ಸಿಕ್ಕಾಗಲೂ "ಓಹೋಹೊ ನಮ್ ಕಾಡಿನವರು" ಎಂದು ಬಿಗಿದಪ್ಪಿಕೊಳ್ಳುತ್ತಿದ್ದ ರಾಜಣ್ಣನ ಅಕ್ಕರೆ, ಮಮತೆ ಕಂಡು ಅವರೆಡೆಗಿನ ಪ್ರೀತಿ - ಗೌರವ ಮತ್ತೆ ಮತ್ತೆ ಹೆಚ್ಚುತ್ತಿತ್ತು.

ನಟನಾಗಿ, ಗಾಯಕನಾಗಿ, ಓರ್ವ ಕನ್ನಡದ ಕಟ್ಟಾಳುವಾಗಿ ರಾಜಣ್ಣ ನಮ್ಮೆಲ್ಲರ ಎದೆಯಲ್ಲಿ ಅಮರ. ಅವರ ಪುಣ್ಯಸ್ಮರಣೆಯಂದು ನನ್ನ ಅಭಿಮಾನಪೂರ್ವಕ ನಮನಗಳು ಎಂದು ಹೇಳಿದ್ದಾರೆ.
ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು, ನಟಸಾರ್ವಭೌಮ, ಕನ್ನಡ ಕಲಾಲೋಕದ ಧ್ರುವತಾರೆ, ಪದ್ಮಭೂಷಣ ಪುರಸ್ಕೃತ, ಕರ್ನಾಟಕ ರತ್ನ ಡಾ. ರಾಜ್‌ಕುಮಾರ್ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು. ನಾಡಿನ ನೆಲ-ಜಲ ಮತ್ತು ಭಾಷೆಯ ಹಿತಕ್ಕಾಗಿ ಶ್ರಮಿಸಿದ ಬಂಗಾರದ ಮನುಷ್ಯ ಅಣ್ಣಾವ್ರು ಪ್ರತಿಯೊಬ್ಬ ಕನ್ನಡಿಗನ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ದಶಕಗಳ ಕಾಲ ವೈವಿಧ್ಯಮಯ ಪಾತ್ರಗಳ ಮೂಲಕ ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ ಅವರ ಕಲಾ ಸೇವೆ ಅನನ್ಯವಾದುದು. ಈ ನಾಡಿಗೆ ಅವರು ನೀಡಿದ ಕೊಡುಗೆ ಸದಾ ಸ್ಮರಣೀಯ ಎಂದಿದ್ದಾರೆ.
ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು, ಕನ್ನಡ ಚಿತ್ರರಂಗದ ಮೇರುನಟರು, ನಟ ಸಾರ್ವಭೌಮರು, ನಟನೆಯನ್ನೇ ಉಸಿರನ್ನಾಗಿಸಿಕೊಂಡು ಅದನ್ನೇ ಸಮಾಜ ಸುಧಾರಣೆಯ ಮಾಧ್ಯಮವನ್ನಾಗಿ ಮಾಡಿಕೊಂಡಿದ್ದ ಮಹಾನ್ ಮಾನವತಾವಾದಿ ಡಾ.ರಾಜಕುಮಾರ್ ಅವರು. ಅಣ್ಣಾವ್ರ ಪುಣ್ಯಸ್ಮರಣೆಯ ಈ ದಿನದಂದು ಆ ಚೇತನಕ್ಕೆ ನನ್ನ ಭಾವಪೂರ್ಣ ನಮನಗಳನ್ನು ಸಮರ್ಪಿಸುತ್ತೇನೆ ಎಂದು ಹೇಳಿದ್ದಾರೆ.
ಇನ್ನು ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಅವರು, ಕನ್ನಡ ನಾಡಿನ ಸಾಕ್ಷಿಪ್ರಜ್ಞೆ, ನಟ ಸಾರ್ವಭೌಮ, ವರನಟ ಡಾ. ರಾಜ್ ಕುಮಾರ್ ಅವರ ಪುಣ್ಯಸ್ಮರಣೆಯಂದು ಅತ್ಯಂತ ಭಕ್ತಿಪೂರ್ವಕವಾಗಿ ಸ್ಮರಿಸಿ, ನಾವೆಲ್ಲರೂ ನಮಿಸೋಣ. ಡಾ. ರಾಜ್ ಕುಮಾರ್ ಅವರ ಸರಳತೆ, ಕನ್ನಡ ನಾಡಿನ ಮೇಲೆ ಅವರಿಗಿದ್ದ ಬದ್ಧತೆಯನ್ನು ನಾವು ಅಳವಡಿಸಿಕೊಂಡು ಕನ್ನಡ ನಾಡಿನ ಅಭಿವೃದ್ಧಿಗಾಗಿ ಕಂಕಣಬದ್ಧರಾಗಿ ದುಡಿಯುವ ಸಂಕಲ್ಪ ಮಾಡೋಣ ಎಂದಿದ್ದಾರೆ.
ಸಚಿವ ಎಂ.ಬಿ ಪಾಟೀಲ್ ಅವರು, ಕನ್ನಡ ಚಿತ್ರರಂಗದ ಅಪ್ರತಿಮ ಚೇತನ, ಗಾನಗಂಧರ್ವ, ಪದ್ಮಭೂಷಣ ಡಾ. ರಾಜ್ ಕುಮಾರ್ ಅವರ ಪುಣ್ಯಸ್ಮರಣೆಯಂದು ಆ ಮಹಾನ್ ಚೇತನಕ್ಕೆ ಗೌರವದ ನಮನಗಳು. ಕನ್ನಡ ನೆಲದ ಅಸ್ಮಿತೆ, ಸರಳತೆಯ ಸಾಕಾರಮೂರ್ತಿ ಅಣ್ಣಾವ್ರು ಇಂದಿಗೂ ಮತ್ತು ಎಂದೆಂದಿಗೂ ಕನ್ನಡಿಗರ ಹೃದಯ ಸಾಮ್ರಾಜ್ಯದ ಅಧಿಪತಿ. ಕಲೆ, ಸಂಸ್ಕೃತಿ ಮತ್ತು ಕನ್ನಡಾಭಿಮಾನಕ್ಕೆ ಅವರೇ ದಾರಿದೀಪ. ಅವರ ಆದರ್ಶಗಳು ಸದಾ ನಮ್ಮೊಂದಿಗೆ ಇರಲಿದೆ ಎಂದು ಆಶಿಸಿದ್ದಾರೆ.
ಅಣ್ಣಾವ್ರು ದೈಹಿಕವಾಗಿ ನಮ್ಮನ್ನಗಲಿ ಇಂದಿಗೆ 20 ವರ್ಷಗಳು. ಅಣ್ಣಾವ್ರು ತೀರಿಕೊಂಡ ಸುದ್ದಿ ಕೇಳಿ ನಾನು ಮತ್ತು ನರೇನ್ ಮರೋಳ ನಮ್ಮ ಆಫೀಸಿನ ಡೈರೆಕ್ಟರ್‌ಗೆ ವಿಷಯದ ಬಗ್ಗೆ ತಿಳಿಸಿ ಆಫೀಸಿನಿಂದ ಸದಾಶಿವನಗರದ ಕಡೆ ಹೊರಟೆವು. ಅಲ್ಲಾಗಲೇ ಜನಸಾಗರ. ಅಭಿಮಾನಿಗಳ ಆರ್ತನಾದ. ವಿಷ್ಣುವರ್ಧನ್ ಮತ್ತು ಭಾರತಿ ಅವರು ಸಾಮಾನ್ಯರಲ್ಲಿ ಸಾಮಾನ್ಯರಂತೆ ಯಾವ ಸೆಕ್ಯೂರಿಟಿ ಇಲ್ಲದೆ ನಮ್ಮ ಮುಂದೆಯೇ ಕಾರ್ ಇಳಿದು ಅಣ್ಣಾವ್ರ ಮನೆಗೆ ಹೋದರು. ಉಳಿದ ಅನೇಕ ನಟರು ಬರಲು ಶುರು ಮಾಡಿದರು ಎಂದು ಅಮರನಾಥ ಶಿವಶಂಕರ್ ಎನ್ನುವವರು ಬರೆದುಕೊಂಡಿದ್ದಾರೆ.
ಅಷ್ಟರಲ್ಲಾಗಲೇ ಕಾಣದ ಕೈಗಳು ಗಲಭೆ ಶುರು ಮಾಡಿದ್ದವು. ನಮ್ಮ ಮನೆಯಲ್ಲಿಯೂ ಗಾಬರಿ. ಅಣ್ಣಾವ್ರ ದರ್ಶನ ಅಷ್ಟು ಚೆನ್ನಾಗಿ ಆಗದಿದ್ದರೂ ಪೂರ್ಣಪ್ರಜ್ಞ ಶಾಲೆಯ ಕ್ರೀಡಾಂಗಣದಲ್ಲಿ ಸಣ್ಣದಾಗಿ ಅವರನ್ನು ನೋಡಲು ಸಾಧ್ಯವಾಯಿತು. ಅದೇ ಕೊನೆ ಕ್ಷಣ. 20 ವರ್ಷಗಳು ಕಳೆದಿವೆ. ಅಣ್ಣಾವ್ರ ಚಿತ್ರಗಳು, ಅವರ ನಡೆ ನುಡಿ ಸಂಸ್ಕಾರ ಭಕ್ತಿ ಎಲ್ಲವೂ ನಮ್ಮ ಮಧ್ಯೆ ಶಾಶ್ವತವಾಗಿವೆ. ಮುಂದಿನ ಪೀಳಿಗೆಗೂ ಅಣ್ಣಾವ್ರನ್ನು ಕೊಂಡೊಯ್ಯುವ ಜವಾಬ್ಧಾರಿ ಕನ್ನಡ ಸಮಾಜದಮೇಲಿದೆ.












Click it and Unblock the Notifications