ಆಸ್ಪತ್ರೆಗಳಲ್ಲಿ ರೋಗಿಗಳನ್ನು ನಿರ್ಲಕ್ಷಿಸಿದ್ರೆ ಕಟ್ಟುನಿಟ್ಟಿನ ಕ್ರಮ, ಆರೋಗ್ಯ ಸಚಿವರ ಎಚ್ಚರಿಕೆ
ಬೆಂಗಳೂರು, ಜೂನ್, 09: ಯಾವುದೇ ಆಸ್ಪತ್ರೆಗಳಲ್ಲೇ ಆಗಲಿ ರೋಗಿಗಳನ್ನು ಮಾನವೀಯ ದೃಷ್ಠಿಕೋನದಿಂದ ನೋಡುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆರೋಗ್ಯಾಧಿಕಾರಿಗಳಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದರು.
ಇಂದು ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಹಿರಿಯ ಅಧಿಕಾರಿಗಳು ಹಾಗೂ ಎಲ್ಲಾ ಜಿಲ್ಲಾ ಆರೋಗ್ಯಾಧಿಕಾರಿಗಳ ಜೊತೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ನಿರ್ಲಕ್ಷೆಯಿಂದ ರೋಗಿಗಳಿಗೆ ತೊಂದರೆ ಆದರೆ ಸಹಿಸುವುದಿಲ್ಲ. ಆರೋಗ್ಯ ಇಲಾಖೆ ಸಾರ್ವಜನಿಕ ವಲಯದಲ್ಲಿ ಅತ್ಯಂತ ಸೂಕ್ಷ್ಮತೆ ಹೊಂದಿರುವ ಇಲಾಖೆಯಾಗಿದೆ. ಇಲ್ಲಿ ತುರ್ತಾಗಿ ರೋಗಿಗಳಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸಬೇಕು. ಕೆಲವು ತಪ್ಪುಗಳಿಂದ ರೋಗಿಗಳಿಗೆ ಸಮಸ್ಯೆಗಳಾಗುವುದನ್ನು ನಾವು ನೋಡುತ್ತಿರುತ್ತೇವೆ. ಆದರೆ, ನಿರ್ಲಕ್ಷ್ಯದಿಂದ ರೋಗಿಗಳಿಗೆ ತೊಂದರೆ ಆಗಬಾರದು ಎಂದು ಗೂಂಡುರಾವ್ ಸೂಚನೆ ನೀಡಿದರು.

ಉದಾಸೀನ, ನಿರ್ಲಕ್ಷೆಗಳಿಂದ ಆಸ್ಪತ್ರೆಗಳಲ್ಲಿ ಸಾವು, ನೋವುಗಳು ಸಂಭವಿಸಿದರೆ ನಾವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ತಪ್ಪುಗಳನ್ನು ಸರಿಪಡಿಸೊಣ. ಆದರೆ ನಿರ್ಲಕ್ಷ್ಯ ತೋರಬಾರದು. ಇದು ಅಕ್ಷಮ್ಯ ಅಪರಾಧ ಆಗುತ್ತದೆ. ಈ ರೀತಿಯ ಪ್ರಕರಣಗಳು ಕಂಡುಬಂದರೆ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕ್ರಮ ಕೈಗೊಂಡ ಬಳಿಕ ಅಧಿಕಾರಿಗಳು ಯಾವುದೇ ರಾಜಕೀಯ ಒತ್ತಡ ಹಾಕಿದರೆ, ನಾನು ಮಣಿಯುವವನಲ್ಲ. ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರು ಸಾರ್ವಜನಿಕರಿಗೆ ಪಬ್ಲಿಕ್ ರಿಲೇಷನ್ ಆಫೀಸರ್ ರೀತಿಯಲ್ಲೂ ಕೆಲಸ ಮಾಡಬೇಕು. ಹಾಗೆಯೇ ರೋಗಿಗಳಿಗೆ ಆತ್ಮಸ್ಥರ್ಯ ತುಂಬಬೇಕು. ನೀವೇ ನಿರ್ಲಕ್ಷ್ಯ, ಉದಾಸೀನ ಮಾಡಿದರೆ ರೋಗಿಗಳಿಗೆ ನೆಮ್ಮದಿಯೇ ಇಲ್ಲದಂತೆ ಆಗುತ್ತದೆ ಎಂದು ಎಚ್ಚರಿಸಿದರು.
ಹಾಗೆಯೇ ರಾಜ್ಯಾದ್ಯಂತ ಬೇರೆ ಬೇರೆ ಪ್ರಾದೇಶಿಕ ವಿಭಾಗಗಳಲ್ಲಿ ಪ್ರವಾಸ ಮಾಡುವುದಾಗಿ ಸಭೆಯಲ್ಲಿ ಅಧಿಕಾರಿಗಳಿಗೆ ತಿಳಿಸಿದರು. ಈ ವೇಳೆ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಸಾರ್ವಜನಿಕರ ಅಭಿಪ್ರಾಯಗಳನ್ನು ಕೂಡ ಸಂಗ್ರಹಿಸುತ್ತೇನೆ. ಆಸ್ಪತ್ರೆಗಳಲ್ಲಿ ಅಧಿಕಾರಿಗಳು ಸಾರ್ವಜನಿಕರಿಂದ ಒಳ್ಳೆಯ ಹೆಸರು ಪಡೆಯುವಂತೆ ಕೆಲಸ ಮಾಡಬೇಕು. ಯಾರು ಒಳ್ಳೆಯ ಕೆಲಸ ಮಾಡುತ್ತಾರೆಯೋ ಅಂತಹವರ ಪರ ನಾನಿರುತ್ತೇನೆ. ಅಲ್ಲದೆ ಸರ್ಕಾರದಿಂದಲೂ ಕೂಡ ಸಂಪೂರ್ಣ ಸಹಕಾರ ಕೊಡಿಸುವ ಭರವಸೆಯನ್ನು ವ್ಯಕ್ತಪಡಿಸಿದರು.
ಜಿಲ್ಲಾವಾರು ಪ್ರತಿಯೊಬ್ಬ ಡಿಎಚ್‌ಒಗಳ ಕಾರ್ಯಸಾಮರ್ಥ್ಯದ ವರದಿಯನ್ನು ನೀಡಬೇಕು. ಕಳೆದ ಮೂರು ವರ್ಷಗಳಲ್ಲಿ ಜಿಲ್ಲಾವಾರು ಸರ್ಕಾರಿ ಆಸ್ಪತ್ರೆಗಳಲ್ಲಿ ಏನೆಲ್ಲಾ ಬದಲಾವಣೆಗಳು ಆಗಿದೆ. ಎಷ್ಟು ಪ್ರಗತಿ ಕಂಡಿದ್ದೇವೆ. ಏಲ್ಲಿ ತಪ್ಪುಗಳು ಆಗಿವೆ ಎನ್ನುವ ಮಾಹಿತಿಗಳನ್ನು ನೀಡುವಂತೆ ಸೂಚನೆ ನೀಡಿದರು. .
ಇನ್ನು ರಾಷ್ಟ್ರೀಯ ಹೆಲ್ತ್ ಮಿಷನ್ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಈ ವೇಳೆ ಡಯಾಬಿಟೀಸ್ ಸಮೀಕ್ಷಾ ವರದಿಗಳ ಕುರಿತು ಚರ್ಚೆ ನಡೆಸಿದರು. ಹಲವು ಜಿಲ್ಲೆಗಳಲ್ಲಿ ಡಯಾಬಿಟಿಸ್ 1 ರಿಂದ 2 ಪರ್ಸೆಂಟ್ ಇದೆ ಎಂದು ಸಮೀಕ್ಷೆಯಲ್ಲಿ ಹೇಳಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ಝೀರೋ ಪರ್ಸೆಂಟ್ ಅಂತಾ ವರದಿ ನೀಡಿದ್ದಾರೆ. ಆದರೆ, ಯಾದಗಿರಿ ಡಿ.ಎಚ್.ಒ ಅವರಿಗೆ ಡಯಾಬಿಟಿಸ್ ಇದ್ದ ಹಾಗಿದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಅಲ್ಲದೆ ಎಲ್ಲರೂ ಉತ್ತಮವಾಗಿ ಕೆಲಸ ಮಾಡಿ. ಸಾರ್ವಜನಿಕರಿಗೆ ನೀವು ಒಳ್ಳೆಯದನ್ನು ಮಾಡಿದರೆ, ನಿಮಗೂ ಒಳ್ಳೆಯದಾಗಲಿದೆ ಎಂದು ಇದೇ ವೇಳೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ತಿಳಿಸಿದರು.












Click it and Unblock the Notifications