ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಗೆ ಮುಹೂರ್ತ ಫಿಕ್ಸ್: ಮಹತ್ವದ ಮಾಹಿತಿ ನೀಡಿದ ಡಿ ಕೆ ಸುರೇಶ್
ಬೆಂಗಳೂರು, ನವೆಂಬರ್ 06: ಮುಂದಿನ ವರ್ಷ ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ಗ್ರೇಟರ್ ಬೆಂಗಳೂರು ಚುನಾವಣೆ ನಡೆಸುವ ಕುರಿತು ಚರ್ಚೆ ನಡೆಯುತ್ತಿದೆ. ಚುನಾವಣೆ ನಡೆಸುವ ಕುರಿತು ಅಗತ್ಯವಿರುವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪಕ್ಷ ಕೂಡ ನಮ್ಮ ಕಾರ್ಯಕರ್ತರಿಗೆ ಅಗತ್ಯ ತಯಾರಿ ಮಾಡಿಕೊಳ್ಳಲು ಸೂಚನೆ ನೀಡಿದೆ ಎಂದು ಬಮೂಲ್ ಅಧ್ಯಕ್ಷರಾದ ಡಿ.ಕೆ. ಸುರೇಶ್ ಅವರು ಹೇಳಿದರು.
ಬೂತ್ ಮಟ್ಟದಲ್ಲಿನ ತಯಾರಿಗೆ ತಿಳಿಸಿದೆ. ಸುಪ್ರೀಂ ಕೋರ್ಟ್ ಕಳೆದ ವಾರವಷ್ಟೇ ವಾರ್ಡ್ ನಿಗದಿಗೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆ ಹೊರಡಿಸಲು ಕಡೇಯ ಕಾಲಾವಕಾಶ ನೀಡಿದೆ. ನಂತರ ಮೀಸಲಾತಿ ಪ್ರಕ್ರಿಯೆ ನಡೆಯಬೇಕಿದ್ದು, ಎಲ್ಲವನ್ನು ಹಂತಹಂತವಾಗಿ ನಡೆಸಲು ಸಿಎಂ ಹಾಗೂ ಡಿಸಿಎಂ ಬದ್ಧರಾಗಿದ್ದಾರೆ. ಮತ್ತೆ ಮುಂದೂಡಿಕೊಂಡು ಹೋದರೆ ಸುಪ್ರೀಂ ಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಳ್ಳಬೇಕಾಗುತ್ತದೆ ಎಂದರು. ಪ್ರತಿ ಚುನಾವಣೆಯಲ್ಲೂ ಎಲ್ಲರಿಗೂ ಟಾಸ್ಕ್ ಇದ್ದೇ ಇರುತ್ತದೆ. ಯಾವುದೇ ಚುನಾವಣೆಯಾದರೂ ಅದನ್ನು ಗೆಲ್ಲುವುದು ಪಕ್ಷದ ಜವಾಬ್ದಾರಿ ಎಂದು ಹೇಳಿದರು.

ತಾಲೂಕು ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆ ಕುರಿತು ಮಾತನಾಡಿ, ಈಗ ಮೀಸಲಾತಿ ನಡೆಯುತ್ತಿದೆ. 50% ಮೀಸಲಾತಿಯನ್ನು ಒಬಿಸಿ, ಹಿಂದುಳಿದವರಿಗೆ ನೀಡಬೇಕಾದಾಗ ನಿಖರತೆ ಇರಬೇಕು. ಈ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ಆದೇಶ ಕೂಡ ಪ್ರಕಟವಾಗಿದ್ದು, ಯಾವ ಮಾನದಂಡದ ಆಧಾರದ ಮೇಲೆ ಇದನ್ನು ಮಾಡುತ್ತೀರಿ ಎಂದು ಕೇಳಿದೆ. ಇದು ಅಂತಿಮಗೊಳಿಸಿದ ನಂತರ ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿ ಎದುರಿಸಬೇಕಾಗುತ್ತದೆ. ಸರ್ಕಾರದ ಬಳಿ ಎಸ್.ಸಿ, ಎಸ್ ಟಿ ಜನಸಂಖ್ಯೆ ಪ್ರಮಾಣ ಇದೆ. ಬೇರೆ ಸಮುದಾಯಗಳ ಜನಸಂಖ್ಯೆ ದಾಖಲೆ ಇಲ್ಲ. ಈ ಪ್ರಕ್ರಿಯೆ ಮುಗಿದ ಬಳಿಕ ಪಂಚಾಯ್ತಿ ಚುನಾವಣೆ ನಡೆಯಲಿದೆ. ಮುಂದಿನ 6-7 ತಿಂಗಳಲ್ಲಿ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದೆ. ಈ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದರು.
ಸಚಿವ ಸಂಪುಟ ಬದಲಾವಣೆ ಜೊತೆಗೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬೇಡಿಕೆ ಇದ್ದು, ನಿಮ್ಮ ಹೆಸರೂ ಮುಂಚೂಣಿಯಲ್ಲಿದೆ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಸುಮ್ಮನೇ ಇಲ್ಲದಿರುವ ನನ್ನ ಹೆಸರು ಯಾಕೆ ಹೇಳುತ್ತೀರಾ? ಅಧ್ಯಕ್ಷರ ಬದಲಾವಣೆ ಬಗ್ಗೆ ನನಗೆ ಗೊತ್ತಿಲ್ಲ. ಇದು ವರಿಷ್ಠರಿಗೆ ಬಿಟ್ಟ ವಿಚಾರಗಳು. ಅವರು ಏನು ಹೇಳುತ್ತಾರೋ ಅದನ್ನು ಕೇಳುತ್ತೇವೆ ಎಂದು ಡಿ ಕೆ ಸುರೇಶ್ ಹೇಳಿದರು. ಅಧ್ಯಕ್ಷ ಸ್ಥಾನ ಬದಲಾವಣೆ ಯಾವಾಗ ಬೇಕೋ ಆವಾಗ ಬದಲಾವಣೆ ಆಗಲಿದೆ. ಈಗ ಅದಕ್ಕೆ ಅರ್ಜೆಂಟಿಲ್ಲ ಎಂದು ತಿಳಿಸಿದರು.
ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗಬೇಕು ಎಂದು ಅಭಿಮಾನಿಗಳು ಸಂಕಲ್ಪ ಮಾಡುತ್ತಿರುವ ಬಗ್ಗೆ ಕೇಳಿದಾಗ, ಅಭಿಮಾನಿಗಳು ಈ ರೀತಿ ಆಸೆ ಪಡುವುದು ಸಹಜ ಪ್ರಕ್ರಿಯೆ. ಅಭಿಮಾನಿಗಳು ತಮ್ಮ ನಾಯಕರು ಸಿಎಂ ಆಗಬೇಕು ಎಂದು ಬಯಸುತ್ತಾರೆ. ಇದು ನಿರಂತರ ಪ್ರಕ್ರಿಯೆ. ಕೆಲವರು ಕುಮಾರಸ್ವಾಮಿ ಆಗಬೇಕು ಅಂತಾರೆ, ಮತ್ತೆ ಕೆಲವರು ವಿಜಯೇಂದ್ರ ಆಗಬೇಕು ಅಂತಾರೆ, ಮತ್ತೆ ಕೆಲವರು, ಅಶ್ವತ್ಥ್ ನಾರಾಯಣ, ಅಶೋಕ್, ಪರಮೇಶ್ವರ್, ಸತೀಶ್ ಜಾರಕಿಹೊಳಿ ಸಿಎಂ ಆಗಬೇಕು ಅಂತಾ ಬಯಸುತ್ತಾರೆ. ಆಯಾ ಊರಿನಲ್ಲಿ ಅವರ ನಾಯಕರು ಆಗಬೇಕು ಎಂದು ಬಯಸುತ್ತಾರೆ. ಮತ್ತೆ ಕೆಲವರು ವೇದಿಕೆ ಮೇಲೆ ನಾಲ್ಕು ಒಳ್ಳೆ ಮಾತುಗಳನ್ನು ಆಡಿ ತಮ್ಮ ಅಭಿಮಾನ ತೋರಿಸುತ್ತಾರೆ. ಇದೆಲ್ಲವು ರಾಜಕಾರಣದ ಭಾಗ. ಇದರ ಬಗ್ಗೆ ದೊಡ್ಡ ಚರ್ಚೆ ಅಗತ್ಯವಿಲ್ಲ. ಈ ಬಗ್ಗೆ ಪಕ್ಷ ಹೈಕಮಾಂಡ್ ಹಂತದಲ್ಲಿ ತೀರ್ಮಾನ ಮಾಡಲಾಗುವುದು ಎಂದರು.












Click it and Unblock the Notifications