ಇನ್ನೆರಡು ತಿಂಗಳಲ್ಲಿ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ: ಮಹತ್ವದ ಮಾಹಿತಿ ನೀಡಿದ ಡಿ ಕೆ ಶಿವಕುಮಾರ್
ಬೆಂಗಳೂರು: ಎರಡು ಮೂರು ತಿಂಗಳಿನಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳನ್ನು ನಡೆಸಬೇಕಿದೆ. ಅದಕ್ಕೂ ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದ್ದೇನೆ. ಪ್ರಿಯಾಂಕ್ ಖರ್ಗೆ ಅವರಿಗೂ ಇದರ ಬಗ್ಗೆ ತಿಳಿಸಿದ್ದು, ಮೀಸಲಾತಿ ವಿಚಾರವಾಗಿ ನ್ಯಾಯಾಲಯಗಳಲ್ಲಿ ಇರುವ ಕಂಟಕಗಳನ್ನು ಬಗೆಹರಿಸಿ, ಇನ್ನೆರಡು ತಿಂಗಳಲ್ಲಿ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಗ್ಯಾರಂಟಿ ಸಮಿತಿ ಸದಸ್ಯರು, ಬೆಸ್ಕಾಂ, ಆರೋಗ್ಯ ಸಮಿತಿ ಸೇರಿದಂತೆ ಇತರೇ ಇಲಾಖೆಗಳಿಂದ ನಾಮನಿರ್ದೇಶನ ಮಾಡಿರುವ ಸದಸ್ಯರ ಸಂಖ್ಯೆಯೇ 150- 200 ಇದ್ದು ಇವರೆಲ್ಲರೂ ಹೋರಾಟದ ಜವಾಬ್ದಾರಿ ತೆಗೆದುಕೊಳ್ಳಬೇಕು. ಇದರ ಉಸ್ತುವಾರಿಗೆ ಜಿ.ಸಿ.ಚಂದ್ರಶೇಖರ್ ಅವರ ನೇತೃತ್ವದಲ್ಲಿ ವೀಕ್ಷಕರನ್ನು ನೇಮಿಸಲಾಗುತ್ತದೆ ಎಂದರು. ಅಂದು ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ಎಐಸಿಸಿ ಅಧಿವೇಶನ ಹೇಗೆ ನಡೆಯಿತು ಎನ್ನುವ ಕುರಿತಾದ ಗಾಂಧಿ ಭಾರತ ಪುಸ್ತಕವನ್ನ ರೂಪಿಸಿದ್ದೇನೆ. ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಲಭ್ಯವಿದೆ. ಇದರ ಬಿಡುಗಡೆಗೆ ಮಲ್ಲಿಕಾರ್ಜುನ ಖರ್ಗೆ ಅವರಿಂದ ಬಿಡುಗಡೆ ಮಾಡಿಸಬೇಕು ಎಂದು ಅವರ ಸಮಯ ಕೇಳಿದ್ದೇನೆ. ಇದೇ ಭಾರತ್ ಜೋಡೋ ಸಭಾಂಗಣದಲ್ಲಿ ಬಿಡುಗಡೆ ಮಾಡಲಾಗುವುದು ಎಂದರು.

ಇದರ ನೆನಪಿಗೆ 100 ಕಾಂಗ್ರೆಸ್ ಕಚೇರಿಗಳನ್ನು ನಿರ್ಮಾಣ ಮಾಡಬೇಕು ಎಂದು ಹೊರಟಿದ್ದೇವೆ. ಈಗಾಗಲೇ 70 ಕಾಂಗ್ರೆಸ್ ಕಚೇರಿಗಳು ನಿರ್ಮಾಣವಾಗಿವೆ. ಬೆಂಗಳೂರಿನಲ್ಲೂ ಎರಡು ಕಚೇರಿಗಳ ನಿರ್ಮಾಣ ಮಾಡಲಾಗುವುದು. ಒಂದಕ್ಕೆ ರಾಮಲಿಂಗಾರೆಡ್ಡಿ ಅವರು ಇನ್ನೊಂದು ಕಚೇರಿ ಜವಾಬ್ದಾರಿಯನ್ನು ನಾನು ತೆಗೆದುಕೊಂಡಿದ್ದೇನೆ. ಒಂದು ಜಿಲ್ಲಾ ಕಚೇರಿ ಇನ್ನೊಂದು ರಾಜ್ಯ ಕಚೇರಿ. ಮೈಸೂರಿನಲ್ಲಿಯೂ ಸಹ ದೊಡ್ಡ ಕಚೇರಿ ನಿರ್ಮಾಣ ಮಾಡಲಾಗುವುದು. ಇದರ ಜವಾಬ್ದಾರಿಯನ್ನು ಮುಖ್ಯಮಂತ್ರಿಯವರು ತೆಗೆದುಕೊಂಡಿದ್ದಾರೆ. ಮೈಸೂರು ಕಾಂಗ್ರೆಸ್ ಭವನಕ್ಕೆ ಎಲ್ಲಾ ಯೋಜನೆ ಅಂತಿಮ ಮಾಡಿ ಭೂಮಿಪೂಜೆ ಕೂಡ ನೆರವೇರಿಸಿದ್ದೇನೆ ಎಂದು ಹೇಳಿದರು.
ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಅಧ್ಯಕ್ಷರುಗಳು ಅಡಿಪಾಯ ಹಾಕಲು ಕಾಯಲು ಹೋಗಬೇಡಿ. ಏಕೆಂದರೆ ಮಲ್ಲಿಕಾರ್ಜುನ ಖರ್ಗೆ ಅವರು ಹಾಗು ರಾಹುಲ್ ಗಾಂಧಿಯವರು ಬೆಂಗಳೂರಿನಲ್ಲಿ ವರ್ಚುಯಲ್ ಆಗಿ ಎಲ್ಲಾ ಕಾಂಗ್ರೆಸ್ ಭವನಗಳ ಅಡಿಪಾಯಗಳಿಗೆ ಚಾಲನೆ ನೀಡಲಿದ್ದಾರೆ. ಆದರೆ ಎಲ್ಲಾ ತಯಾರಿಗಳನ್ನು ಈಗಲೇ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದ್ದೇನೆ ಎಂದು ಡಿ ಕೆ ಶಿವಕುಮಾರ್ ಹೇಳಿದರು.
ಮಹಾತ್ಮ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿದು ಇಂದಿಗೆ 101 ವರ್ಷವಾಗಿದೆ. ಕಳೆದ ವರ್ಷ ಬೆಳಗಾವಿಯಲ್ಲಿ ಸಂಭ್ರಮಾಚರಣೆ ಮಾಡುತ್ತಿದ್ದೆವು. ಇಂತಹ ಸಂದರ್ಭದಲ್ಲಿ ಮಹಾತ್ಮ ಗಾಂಧಿ ಅವರ ಹೆಸರನ್ನು ತೆಗೆಯುವ ಕೆಲಸ ಮಾಡಲಾಗುತ್ತಿದೆ. ನಿನ್ನೆ ನಡೆದ ಸಿಡ್ಬ್ಲ್ಯೂಸಿ ಸಭೆಯಲ್ಲಿ ಐತಿಹಾಸಿಕ ತೀರ್ಮಾನ ಕೈಗೊಳ್ಳಲಾಗಿದೆ. ಕಾಂಗ್ರೆಸ್ ಸರ್ಕಾರ ಗ್ರಾಮೀಣ ಭಾಗದಲ್ಲಿ ಬಡವರಿಗೆ ಉದ್ಯೋಗ ನೀಡುವ ಮನರೇಗಾ ಯೋಜನೆ ತಂದಿತ್ತು. ಕೇಂದ್ರ ಬಿಜೆಪಿ ಸರ್ಕಾರ ಈ ಯೋಜನೆಯನ್ನು ಹತ್ಯೆ ಮಾಡಲು ಮುಂದಾಗಿದೆ. ಈ ಯೋಜನೆಯಲ್ಲಿ 60:40 ಅನುಪಾತದಲ್ಲಿ ಅನುದಾನ ಹಂಚಿಕೆ ಮಾಡಿಕೊಳ್ಳುವ ಬದಲಾವಣೆ ತಂದಿದ್ದಾರೆ. ಬರಗಾಲ ಪ್ರದೇಶದಲ್ಲಿ ವರ್ಷಕ್ಕೆ 150 ಮಾನವ ದಿನಗಳ ಉದ್ಯೋಗ ನೀಡಲು ಕಾನೂನಿನಲ್ಲಿ ಸೂಚಿಸಲಾಗಿತ್ತು. ಆದರೆ ಅವರು ನಮ್ಮ ರಾಜ್ಯಕ್ಕೆ ಬರಗಾಲ ಇದ್ದಾಗಲೂ ನೀಡಲಿಲ್ಲ, ಕೋವಿಡ್ ಸಮಯದಲ್ಲೂ ನೀಡಲಿಲ್ಲ ಎಂದರು.
ಕೇಂದ್ರ ಸರ್ಕಾರದ ತರಲಾಗಿರುವ 60:40 ಅನುಪಾತದ ನೂತನ ತಿದ್ದುಪಡಿ ಯೋಜನೆಯನ್ನು ಬಿಜೆಪಿ ಆಡಳಿತ ರಾಜ್ಯಗಳಲ್ಲೂ ಅನುಷ್ಠಾನಕ್ಕೆ ತರಲು ಸಾಧ್ಯವಿಲ್ಲ. ಈ ಹಿಂದೆ ಮನರೇಗಾ ಯೋಜನೆಯನ್ನು ನನ್ನ ತಾಲ್ಲೂಕಿನಲ್ಲಿ ಬಹಳ ಯಶಸ್ವಿಯಾಗಿ ಅಷ್ಠಾನಕ್ಕೆ ತರಲಾಗಿತ್ತು. ಇಡೀ ದೇಶದಲ್ಲಿ ಕನಕಪುರ ಕ್ಷೇತ್ರದಲ್ಲಿ ಅತಿ ಹೆಚ್ಚು ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಲಾಗಿದೆ. ನಾನು ಇದರಲ್ಲಿ ಹಣ ಲೂಟಿ ಮಾಡಿರಬಹುದು ಎಂದು ಪರಿಶೀಲನೆ ಮಾಡಲು ಕೇಂದ್ರ ಸರ್ಕಾರ ಸುಮಾರು ಹತ್ತು ತಂಡಗಳನ್ನು ಕಳುಹಿಸಿ ತನಿಖೆ ಮಾಡಿಸಿತ್ತು. ನಂತರ ಕೇಂದ್ರ ಸರ್ಕಾರ ನಮ್ಮ ಕ್ಷೇತ್ರಕ್ಕೆ ಪ್ರಶಸ್ತಿಯನ್ನು ನೀಡಿದೆ. ನನಗೆ ಪ್ರಶಸ್ತಿ ನೀಡಬೇಕಾಗುತ್ತದೆ ಎಂದು ಪಂಚಾಯ್ತಿ ಅಧ್ಯಕ್ಷರನ್ನು ಕರೆದು ಅವರಿಗೆ ಪ್ರಶಸ್ತಿ ಕೊಟ್ಟರು ಎಂದು ಹೇಳಿದರು.












Click it and Unblock the Notifications