ಡಿ.ಕೆ.ಶಿವಕುಮಾರ್ ಸಾಹೇಬರೇ, 2028ಕ್ಕೆ ನೀವು ಕೂಡ ಮಾಜಿ ಆಗಲಿದ್ದೀರಿ: ನಿಖಿಲ್ ಕುಮಾರಸ್ವಾಮಿ ತಿರುಗೇಟು
ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನಡುವಿನ ರಾಜಕೀಯ ವಾಕ್ಸಮರ ತಾರಕಕ್ಕೇರಿದೆ. ಬಿಡದಿ ಟೌನ್‌ಶಿಪ್ ಹಾಗೂ ರೈತರ ಭೂಮಿ ವಿಚಾರವಾಗಿ ಡಿಕೆಶಿ ವಿರುದ್ಧ ನಿಖಿಲ್ ಕುಮಾರಸ್ವಾಮಿ ಗುಡುಗಿದ್ದಾರೆ. "ಅಧಿಕಾರ ಯಾರಿಗೂ ಶಾಶ್ವತವಲ್ಲ ಡಿ.ಕೆ. ಶಿವಕುಮಾರ್ ಸಾಹೇಬರೇ, ನನ್ನ ಸ್ಟೇಟಸ್ ಬಗ್ಗೆ ಪ್ರಶ್ನೆ ಮಾಡುವ ಮುನ್ನ ನೆನಪಿಟ್ಟುಕೊಳ್ಳಿ, ಬರುವ 2028ರ ವಿಧಾನಸಭಾ ಚುನಾವಣೆ ಮುಗಿಯುತ್ತಿದ್ದಂತೆ ನೀವು ಕೂಡ ಮಾಜಿ ಆಗಲಿದ್ದೀರಿ" ಎಂದು ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
"ರಿಯಲ್ ಎಸ್ಟೇಟ್ ದಲ್ಲಾಳಿಗಳ ಸಭೆ ಮಾಡಿದ್ದು ಯಾವ ಪುರುಷಾರ್ಥಕ್ಕೆ?"
ಬಿಡದಿ ಟೌನ್‌ಶಿಪ್ ಯೋಜನೆ ನೆಪದಲ್ಲಿ ರೈತರನ್ನು ಒಕ್ಕಲೆಬ್ಬಿಸುವ ಸರ್ಕಾರದ ನಡೆ ಹಾಗೂ ಡಿಕೆಶಿ ಅವರ ವೈಯಕ್ತಿಕ ಟೀಕೆಗಳ ವಿರುದ್ಧ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ರೈತರ ಪರಿಸ್ಥಿತಿಯ ಕುರಿತು ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ನಿಖಿಲ್, "ಡಿ.ಕೆ.ಶಿವಕುಮಾರ್ ಅವರೇ, ನೀವು ಒಮ್ಮೆಯಾದರೂ ನಿಜವಾದ ರೈತರ ಗೋಳನ್ನು ಕೇಳಿದ್ದೀರಾ? ಬಿಡದಿ ಭಾಗದ ಸಣ್ಣ ರೈತರು ಹೈನುಗಾರಿಕೆ ಹಾಗೂ ಕೃಷಿ ಮಾಡಿಕೊಂಡು ನೆಮ್ಮದಿಯಿಂದ, ಗೌರವಯುತವಾಗಿ ಬದುಕುತ್ತಿದ್ದಾರೆ. ಅವರ ಹೊಟ್ಟೆಗೆ ಕನ್ನ ಹಾಕುವ ಕೆಲಸ ಮಾಡಬೇಡಿ ಎಂದಿದ್ದಾರೆ.

ರಿಯಲ್ ಎಸ್ಟೇಟ್ ಬ್ರೋಕರ್‌ಗಳು, ದಲ್ಲಾಳಿಗಳು, ಕಮಿಷನ್ ಏಜೆಂಟ್‌ಗಳು ಮತ್ತು ನಿಮ್ಮದೇ ಪಕ್ಷದ ಮುಖಂಡರನ್ನು ಕರೆದು ಸಭೆ ನಡೆಸಿದ್ದೀರಲ್ಲ, ಇದು ಯಾವ ಪುರುಷಾರ್ಥಕ್ಕೆ? ಎಂದು ಪ್ರಶ್ನಿಸಿದ್ದಾರೆ. ಬಿಡದಿ ಟೌನ್‌ಶಿಪ್ ವಿಷಯವಾಗಿ ಸಾರ್ವಜನಿಕವಾಗಿ ಮುಖಾಮುಖಿ ಚರ್ಚೆ ಮಾಡೋಣ ಬನ್ನಿ. ಯಾರದ್ದು ಏನು ಆಸ್ತಿ ಇದೆ, ಎಷ್ಟು ಹಿತಾಸಕ್ತಿ ಇದೆ ಎಂಬುದು ಜನರೆದುರೇ ಚರ್ಚೆಯಾಗಲಿ. ನಮ್ಮ ರೈತರನ್ನು ಒಕ್ಕಲೆಬ್ಬಿಸದಂತೆ ತಡೆಯಲು ನಾವು ಶಕ್ತಿಮೀರಿ ಹೋರಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
"ಸಿಎಂ ಆಗುವ ಹಗಲುಗನಸಿನ ಬೋರ್ಡ್ ಮೊದಲು ನಿಜ ಮಾಡಿಕೊಳ್ಳಿ"
ಡಿ.ಕೆ.ಶಿವಕುಮಾರ್ ಅವರ ಮುಖ್ಯಮಂತ್ರಿ ಆಕಾಂಕ್ಷೆಯ ಕುರಿತು ವ್ಯಂಗ್ಯವಾಡಿರುವ ನಿಖಿಲ್ ಕುಮಾರಸ್ವಾಮಿ, "ಡಿ.ಕೆ.ಅಣ್ಣ, 136 ಶಾಸಕರ ಬಹುಮತ ಬೆನ್ನಿಗಿದೆ ಎಂದು ಬೀಗುತ್ತಿದ್ದೀರಲ್ಲ, ಕಳೆದ ಮೂರು ವರ್ಷಗಳಿಂದ ನೀವು ಸಾಧಿಸಿದ್ದೇನು? ನಿಮ್ಮದೇ ಕಚೇರಿಯಲ್ಲಿ 'ಡಿ.ಕೆ.ಶಿವಕುಮಾರ್ ಆದ ನಾನು...' ಎಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಹಗಲುಗನಸಿನ ಬೋರ್ಡ್ ಹಾಕಿಕೊಂಡು ಕಾಯುತ್ತಾ ಕುಳಿತಿದ್ದೀರಿ. ಮೊದಲು ಆ ಬೋರ್ಡ್ ಅನ್ನು ನಿಜ ಮಾಡಿಕೊಳ್ಳಿ, ಆಮೇಲೆ ಬೇರೆಯವರ ಸಂಖ್ಯಾಬಲದ ಬಗ್ಗೆ ಮಾತನಾಡಿ" ಎಂದು ಮಾತಿನಲ್ಲೇ ತಿವಿದಿದ್ದಾರೆ.
ಕಾಂಗ್ರೆಸ್‌ನೊಳಗಿನ ಆಂತರಿಕ ಭಿನ್ನಾಭಿಪ್ರಾಯವನ್ನು ಕೆಣಕಿದ ನಿಖಿಲ್, "ನಿಮಗೆ ಸಿಕ್ಕ ಅವಕಾಶದ ಕುದುರೆಯನ್ನು ನೀವೇ ಏರಿದ್ದೀರೋ ಅಥವಾ ನಿಮ್ಮನ್ನು ಸ್ವಪಕ್ಷದವರೇ ಕೆಳಗೆ ಇಳಿಸಿದ್ದಾರೋ ಎಂಬ ಸತ್ಯ ಇಡೀ ರಾಜ್ಯದ ಜನತೆಗೆ ಚೆನ್ನಾಗಿ ಗೊತ್ತಿದೆ" ಎಂದು ಲೇವಡಿ ಮಾಡಿದ್ದಾರೆ. ಬಿಡದಿ ಭಾಗದ ಭೂಸ್ವಾಧೀನ ಪ್ರಕ್ರಿಯೆ ಮತ್ತು ರಾಜಕೀಯ ಅಸ್ತಿತ್ವದ ಈ ಹೋರಾಟ ಮುಂಬರುವ ದಿನಗಳಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಮತ್ತಷ್ಟು ಕಿಚ್ಚು ಹೊತ್ತಿಸುವ ಸಾಧ್ಯತೆ ಇದೆ.
ಜೆಡಿಎಸ್ ಅಧಿಕಾರಕ್ಕೆ ಬರುವುದು ಕನಸು ಎಂದಿದ್ದ ಡಿಕೆಶಿ
ಇತ್ತೀಚಿನ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜೆಡಿಎಸ್ ನಾಯಕರ ವಿರುದ್ಧ ಗುಡುಗಿದ್ದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಭರ್ಜರಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬರಲಿದೆ. ಇದರಲ್ಲಿ ಯಾವುದೇ ಸಂಶಯ ಬೇಡ. ಇನ್ನು ಜೆಡಿಎಸ್ ಅಧಿಕಾರಕ್ಕೆ ಬರುವುದು ಕೇವಲ ಕನಸಿನ ಮಾತು ಎಂದಿದ್ದರು.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹಿಂದಿನ ಆಡಳಿತಾವಧಿಯನ್ನು ಕೆಣಕಿದ ಡಿ.ಕೆ. ಶಿವಕುಮಾರ್, "ಕೊಟ್ಟ ಕುದುರೆಯನ್ನು ಏರಲು ಆಗದವನು ವೀರನೂ ಅಲ್ಲ, ಶೂರನೂ ಅಲ್ಲ. ಎಚ್.ಡಿ. ಕುಮಾರಸ್ವಾಮಿ ಅವರು ಇದೇ ವರ್ಗಕ್ಕೆ ಸೇರಿದವರು. ಅವರಿಗೆ ಈ ಹಿಂದೆ ಅಧಿಕಾರ ಸಿಕ್ಕಾಗ ರಾಜ್ಯಕ್ಕೆ ಏನೂ ಮಾಡಲು ಅವರಿಂದ ಸಾಧ್ಯವಾಗಲಿಲ್ಲ. ಕೇವಲ 17 ಜನ ಶಾಸಕರನ್ನು ಇಟ್ಟುಕೊಂಡು ಅವರೇನು ಮಾಡಲು ಸಾಧ್ಯ?" ಎಂದು ಜೆಡಿಎಸ್‌ನ ಸಂಖ್ಯಾಬಲವನ್ನು ಸಾರ್ವಜನಿಕವಾಗಿ ಲೇವಡಿ ಮಾಡಿದ್ದರು. ಇದಕ್ಕೆ ನಿಖಿಲ್ ತಿರುಗೇಟು ನೀಡಿದ್ದಾರೆ.
ಬಿಡದಿ ಟೌನ್‌ಶಿಪ್ ಹಾಗೂ ರಾಜಕೀಯ ಅಸ್ತಿತ್ವದ ಸುತ್ತ ಬೆಳೆದಿರುವ ಈ ವಿವಾದ, ಈಗ ಡಿ.ಕೆ. ಶಿವಕುಮಾರ್ ಮತ್ತು ಕುಮಾರಸ್ವಾಮಿ ಕುಟುಂಬದ ನಡುವಿನ ನೇರ ಜಿದ್ದಾಜಿದ್ದಿಗೆ ಕಾರಣವಾಗಿದ್ದು, ಉಭಯ ಪಕ್ಷಗಳ ನಡುವಿನ ರಾಜಕೀಯ ಕೆಸರೆರಚಾಟ ಮತ್ತಷ್ಟು ತೀವ್ರಗೊಂಡಿದೆ.













Click it and Unblock the Notifications