ಬಿಸಿಲಿನ ತಾಪದಿಂದ ಬಚಾವಾಗಲು ಆಯುಷ್ ಸಚಿವಾಲಯ ನೀಡಿದ ಮಹತ್ವದ ಸಲಹೆಗಳು ಇಲ್ಲಿದೆ
ದೇಶದ ಹಲವು ಭಾಗಗಳಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಬೇಗೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರ ಜನಜೀವನ ತತ್ತರಗೊಂಡಿದೆ. ತೀವ್ರವಾದ ಹೀಟ್‌ವೇವ್ (ಬಿಸಿಗಾಳಿ) ಪರಿಣಾಮದಿಂದಾಗಿ ದೇಹದಲ್ಲಿ ನೀರಿನ ಪ್ರಮಾಣ (Dehydration) ವೇಗವಾಗಿ ಕಡಿಮೆಯಾಗುತ್ತಿದ್ದು, ಜನರು ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಈ ಹಿನ್ನಲೆಯಲ್ಲಿ ಸಾರ್ವಜನಿಕರು ಆರೋಗ್ಯ ರಕ್ಷಣೆಗಾಗಿ ಆಯುರ್ವೇದ, ಯೋಗ, ಸಿದ್ಧ, ಯುನಾನಿ ಹಾಗೂ ಹೋಮಿಯೋಪಥಿ ಪದ್ಧತಿಗಳ ಆಧಾರದ ಮೇಲೆ ಈ ಸಲಹೆಗಳನ್ನು ನೀಡಲಾಗಿದ್ದು, ಸಾಮಾನ್ಯ ಜನರಿಂದ ಹಿಡಿದು ಮಕ್ಕಳು, ವೃದ್ಧರು, ಗರ್ಭಿಣಿಯರು, ಹೊರಾಂಗಣದಲ್ಲಿ ಕೆಲಸ ಮಾಡುವ ಕಾರ್ಮಿಕರು ಹಾಗೂ ಕ್ರೀಡಾಪಟುಗಳವರೆಗೂ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಸಾಕಷ್ಟು ನೀರು ಕುಡಿಯುವುದು ಮುಖ್ಯ
ತೀವ್ರ ಬಿಸಿಲಿನ ಸಮಯದಲ್ಲಿ ದೇಹದಲ್ಲಿ ನೀರಿನ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಆದ್ದರಿಂದ ದಿನವಿಡೀ ಸಾಕಷ್ಟು ನೀರು ಕುಡಿಯುವುದು ಅಗತ್ಯವಾಗಿದೆ. ಜೊತೆಗೆ ಮಜ್ಜಿಗೆ, ಎಳನೀರು, ನಿಂಬೆಹಣ್ಣಿನ ಪಾನೀಯಗಳು ಮತ್ತು ಎಲೆಕ್ಟ್ರೋಲೈಟ್ ಇರುವ ದ್ರವಗಳನ್ನು ಸೇವಿಸುವಂತೆ ಸಲಹೆ ನೀಡಲಾಗಿದೆ. ಮಧ್ಯಾಹ್ನ ಸಮಯದಲ್ಲಿ ನೇರ ಬಿಸಿಲಿಗೆ ಹೋಗುವುದನ್ನು ತಪ್ಪಿಸಬೇಕು. ಹಗುರವಾದ ಹತ್ತಿ ಬಟ್ಟೆಗಳನ್ನು ಧರಿಸುವುದರಿಂದ ದೇಹಕ್ಕೆ ತಂಪು ಸಿಗುತ್ತದೆ.
ಯಾರೆಲ್ಲಾ ಹೆಚ್ಚಿನ ಎಚ್ಚರಿಕೆ ವಹಿಸಬೇಕು?
ಬಿಸಿಲಿನ ಪ್ರಭಾವ ಎಲ್ಲರ ಮೇಲಾಗುತ್ತದೆ, ಆದರೆ ಈ ಆರೋಗ್ಯ ವಿಚಾರದಲ್ಲಿ ಈ ಕೆಳಗಿನವರು ವಿಶೇಷ ಕಾಳಜಿ ವಹಿಸುವುದು ಒಳ್ಳೆಯದು ಸಚಿವಾಲಯ ತಿಳಿಸಿದೆ:
ಶಿಶುಗಳು, ಮಕ್ಕಳು, ಗರ್ಭಿಣಿಯರು, ವೃದ್ಧರು, ಹೊರಾಂಗಣದಲ್ಲಿ ಕೆಲಸ ಮಾಡುವ ಕಾರ್ಮಿಕರು ಹಾಗೂ ಹೃದಯ ಸಂಬಂಧಿ ಸಮಸ್ಯೆ, ರಕ್ತದೊತ್ತಡದಂತಹ ದೀರ್ಘಕಾಲದ ಆರೋಗ್ಯ ಸಮಸ್ಯೆ ಹೊಂದಿರುವವರು ಹೆಚ್ಚು ಜಾಗರೂಕರಾಗಿರಬೇಕು ಎಂದು ಆಯುಷ್ ಸಚಿವಾಲಯ ತಿಳಿಸಿದೆ.
ಡಿಹೈಡ್ರೇಶನ್ ಲಕ್ಷಣಗಳು ಯಾವುವು?
ತಲೆ ಸುತ್ತುವುದು
ತಲೆನೋವು
ವಾಂತಿ ಅಥವಾ ವಾಕರಿಕೆ
ಗಾಬರಿ ಅಥವಾ ಮಾನಸಿಕ ಅಸ್ವಸ್ಥತೆ
ದೇಹದ ಉಷ್ಣಾಂಶ ಹೆಚ್ಚಾಗುವುದು
ನೀರಿನ ಕೊರತೆ
ಮೂರ್ಛೆ ಹೋಗುವುದು ಅಥವಾ ಆಕಸ್ಮಿಕ ಕುಸಿತ
ತುರ್ತು ಪರಿಸ್ಥಿತಿಯಲ್ಲಿ ಈ ಸಂಖ್ಯೆಗೆ ಕರೆ ಮಾಡಿ
ಹೀಟ್‌ಸ್ಟ್ರೋಕ್ ಒಂದು ತುರ್ತು ವೈದ್ಯಕೀಯ ಪರಿಸ್ಥಿತಿ. ಇಂತಹ ಸಂದರ್ಭದಲ್ಲಿ ತಕ್ಷಣ ಚಿಕಿತ್ಸೆ ಪಡೆಯಬೇಕು. ಅಗತ್ಯವಿದ್ದರೆ 108 ಅಥವಾ 102 ತುರ್ತು ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದು.
ಆಯುರ್ವೇದ ಮತ್ತು ಯೋಗ ಪದ್ಧತಿಯ ಪ್ರಕಾರ ಬೇಸಿಗೆಯ ಆರೋಗ್ಯ ಸೂತ್ರಗಳು
ಆಯುರ್ವೇದದ ಪ್ರಕಾರ ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವ ಆಹಾರ ಮತ್ತು ಪಾನೀಯಗಳನ್ನು ಸೇವಿಸುವುದು ಉತ್ತಮ. ನಿಂಬುಕ ಫಲ ಪಾನಕ, ಮಾವಿನ ಪಾನಕ ಹಾಗೂ ಹುಣಸೆಹಣ್ಣಿನ ಪಾನಕಗಳು ದೇಹದ ಉಷ್ಣಾಂಶ ನಿಯಂತ್ರಿಸಲು ಸಹಾಯ ಮಾಡುತ್ತವೆ ಎಂದು ಸಲಹೆ ನೀಡಲಾಗಿದೆ.
ಯೋಗ ಮತ್ತು ಸಿದ್ಧ ಪದ್ಧತಿಯ ಸಲಹೆ
ಯೋಗ ಮತ್ತು ಸಿದ್ಧ ಪದ್ಧತಿಯಲ್ಲಿ ಶೀತಲಿ ಪ್ರಾಣಾಯಾಮ ಮತ್ತು ಸೌಮ್ಯ ಯೋಗಾಭ್ಯಾಸಗಳನ್ನು ಮಾಡುವಂತೆ ಸೂಚಿಸಲಾಗಿದೆ. ಇದು ದೇಹದ ತಾಪಮಾನ ಸಮತೋಲನದಲ್ಲಿಡಲು ಹಾಗೂ ಬಿಸಿಲಿನ ಒತ್ತಡ ಕಡಿಮೆ ಮಾಡಲು ಸಹಕಾರಿ ಎಂದು ಹೇಳಲಾಗಿದೆ.
ಆಹಾರದಲ್ಲಿ ಈ ಪದಾರ್ಥಗಳನ್ನು ಸೇರಿಸಿ
ದೇಹದಲ್ಲಿ ನೀರಿನಂಶವನ್ನು ಸದಾ ಕಾಪಾಡಿಕೊಳ್ಳುಲು ಮತ್ತು ಹೊಟ್ಟೆಯನ್ನು ತಂಪಾಗಿಡಲು ದಿನನಿತ್ಯದ ಆಹಾರದಲ್ಲಿ ಈ ಕೆಳಗಿನ ಹಣ್ಣು ಹಾಗೂ ತರಕಾರಿಗಳನ್ನು ಹೆಚ್ಚಾಗಿ ಬಳಸಿ:
ಸೌತೆಕಾಯಿ
ಕಲ್ಲಂಗಡಿ
ನಿಂಬೆಹಣ್ಣು
ಕರಬೂಜ
ಸೌತೆಕಾಯಿ ಕುಂಬಳಕಾಯಿ
ಟೊಮೆಟೊ
ಹವಾಮಾನ ಮಾಹಿತಿ ಗಮನಿಸಿ
ಸಾರ್ವಜನಿಕರು ಭಾರತೀಯ ಹವಾಮಾನ ಇಲಾಖೆ ನಿಯಮಿತವಾಗಿ ಬಿಡುಗಡೆ ಮಾಡುವ ಹೀಟ್‌ವೇವ್ ಎಚ್ಚರಿಕೆಗಳನ್ನು ಮತ್ತು ಹವಾಮಾನ ಮುನ್ಸೂಚನೆಗಳನ್ನು ತಪ್ಪದೇ ಗಮನಿಸಬೇಕು.














Click it and Unblock the Notifications