ಕರ್ನಾಟಕ ವೈಮಾಂತರಿಕ್ಷ-ರಕ್ಷಣಾ ಕ್ಲಸ್ಟರ್ ಅಭಿವೃದ್ಧಿ: 6000 ಕೋಟಿ ರೂ ಹೂಡಿಕೆ, 54000 ಉದ್ಯೋಗ ಸೃಷ್ಟಿ
Karnataka Industry Updates: ಕರ್ನಾಟಕ ರಾಜ್ಯದಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಮೂರು ವರ್ಷಗಳಲ್ಲಿ ವೈಮಾಂತರಿಕ್ಷ, ರಕ್ಷಣೆ, ಎಂಆರ್‌ಒ, ತಯಾರಿಕಾ ಕ್ಲಸ್ಟರ್ ಅಭಿವೃದ್ಧಿಗೊಳಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ ಹೇಳಿದರು.
ಬುಧವಾರ ಖನಿಜ ಭವನದಲ್ಲಿ ಕಂಪನಿಯ ಉನ್ನತಾಧಿಕಾರಿಗಳ ಜೊತೆಗೆ ನಡೆದ ವಿಸ್ತೃತ ಸಮಾಲೋಚನೆಯ ನಂತರ ಸಚಿವರು ಈ ಮಾಹಿತಿ ನೀಡಿದರು. ವೈಮಾಂತರಿಕ್ಷ ಹಾಗೂ ರಕ್ಷಣಾ ವಲಯದ ಬೆಂಗಳೂರು ಮೂಲದ ಆ್ಯಕ್ಸಿಸ್‌ಕೇಡ್ಸ್ ಏರೊಸ್ಪೇಸ್ ಇನ್‌ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್, ರಾಜ್ಯದಲ್ಲಿ ಬರೋಬ್ಬರಿ 6,000 ಕೋಟಿ ಮೊತ್ತದ ಬಂಡವಾಳ ಹೂಡಿಕೆಗೆ ಒಲವು ತೋರಿದೆ ಎಂದು ಹೇಳಿದರು.

200 ಎಕರೆ ಪ್ರದೇಶದಲ್ಲಿ ವೈಮಾಂತರಿಕ್ಷ, ರಕ್ಷಣೆ, ಸೆಮಿಕಂಡಕ್ಟರ್ ಹಾಗೂ ಕೃತಕ ಬುದ್ಧಿಮತ್ತೆ (ಎಐ) ನಾವೀನ್ಯತೆ ಕ್ಷೇತ್ರಗಳಲ್ಲಿ ಉತ್ಪಾದನೆ, ಪರೀಕ್ಷೆ ಮತ್ತು ನಿರ್ವಹಣೆಯ ಸಮಗ್ರ ಕೇಂದ್ರ ಸ್ಥಾಪಿಸಲಾಗುತ್ತದೆ. ಇದು ಆ್ಯಕ್ಸಿಸ್‌ಕೇಡ್ಸ್ ಏರೊಸ್ಪೇಸ್‌ನ ಮುಖ್ಯ ಉದ್ದೇಶವಾಗಿದೆ. ಜಾಗತಿಕ ಪಾಲುದಾರಿಕೆಯಡಿ ದೇಶೀಯವಾಗಿ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರವನ್ನೂ ಸ್ಥಾಪಿಸಲಿದೆ ಎಂದರು.
54,000 ಉದ್ಯೋಗ ಸೃಷ್ಟಿ
ಕಂಪನಿಯು ಹಂತ ಹಂತವಾಗಿ ಒಟ್ಟು 6,000 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಲಿದೆ. ಇದರಿಂದ ರಾಜ್ಯದಲ್ಲಿ ಪ್ರತ್ಯಕ್ಷವಾಗಿ 20 ಸಾವಿರ ಹಾಗೂ ಪರೋಕ್ಷವಾಗಿ 54 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ. ಕ್ಷಿಪಣಿ ತಯಾರಿಕೆಯ ಪೂರಕ ಸೌಲಭ್ಯ , ರೇಡಾರ್- ಸಂವೇದಕ, ಯುದ್ಧ ವಿಮಾನಗಳ ದುರಸ್ತಿ - ನಿರ್ವಹಣೆ ಸೌಲಭ್ಯ (ಎಂಆರ್‌ಒ) ಸೇರಿದಂತೆ ವೈಮಾಂತರಿಕ್ಷ ಹಾಗೂ ರಕ್ಷಣಾ ವಲಯದ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಕಂಪನಿ ಉದ್ದೇಶಿಸಿದೆ.
ಮೊದಲ ಹಂತದಲ್ಲಿ 1,290 ಕೋಟಿ ರೂಪಾಯಿ, 2ನೆ ಹಂತದಲ್ಲಿ 2,898 ಕೋಟಿ ರೂಪಾಯಿ ಮತ್ತು 3ನೇ ಹಂತದಲ್ಲಿ 1,512 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಲಿದೆ. ನಂತರ ಹಂತ ಹಂತವಾಗಿ ಹೂಡಿಕೆ ಪೂರ್ಣಗೊಳ್ಳಲಿದೆ.
ವಿವಿಧ ವಿಮಾನ ನಿಲ್ದಾಣಗಳ ಪರಿಗಣಿಸಲು ಸಲಹೆ
ಈ ಯೋಜನೆ ಕಾರ್ಯಗತಗೊಳಿಸಲು ಕಂಪನಿಯು ದೇವನಹಳ್ಳಿ ಬಳಿ ಭೂಮಿ ಒದಗಿಸಲು ಮನವಿ ಮಾಡಿಕೊಂಡಿದೆ. 1.8 ಕಿ.ಮೀ ಉದ್ದದ ರನ್ ವೇ ನಿರ್ಮಾಣದ ಉದ್ದೇಶ ಕೂಡ ಇದೆ ಎಂದು ಕಂಪನಿ ಹೇಳಿದೆ. ಹಾಗಾದರೆ ಹಾಸನ, ವಿಜಯಪುರ ಹಾಗೂ ಶಿವಮೊಗ್ಗ ವಿಮಾನ ನಿಲ್ದಾಣಗಳನ್ನು ಬೇಕಾದರೂ ಪರಿಗಣಿಸಬಹುದು ಎಂದು ಸಚಿವರು ಸಲಹೆ ನೀದ್ದಾರೆ. ಹಾಲಿ ಇರುವ ದೇವನಹಳ್ಳಿ ಘಟಕದ ಸನಿಹದಲ್ಲೇ ಈ ಉದ್ದೇಶಿತ ಘಟಕ ಇರಬೇಕು ಎನ್ನುವ ಬೇಡಿಕೆಯನ್ನು ಸಂಸ್ಥೆ ಪ್ರತಿನಿಧಿಗಳು ತಿಳಿಸಿದರು. ನಂತರ ಸಚಿವರು ರನ್ ವೇ ನಿರ್ಮಾಣಕ್ಕೂ ಅನುಕೂಲ ಇರುವ ಕಡೆ ಜಾಗ ಗುರುತಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಇಂದಿನ ಹೂಡಿಕೆ ಮಾತುಕತೆ, ಕೈಗಾರಿಕೆ ಸಂಬಂಧಿಸಿದ ಚರ್ಚೆಗಳಿಗೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎನ್. ಸೆಲ್ವಕುಮಾರ್, ಕೈಗಾರಿಕಾ ಇಲಾಖೆ ಆಯುಕ್ತೆ ಖುಷ್ಬೂ ಗೋಯಲ್, ಮೂಲಸೌಕರ್ಯ ಇಲಾಖೆ ಅಧಕಾರಿಳು ಹಾಗೂ ಆ್ಯಕ್ಸಿಸ್‌ಕೇಡ್ಸ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಶಾರಧಿ ಚಂದ್ರ ಬಾಬು, ನಿರ್ದೇಶಕರು ಸಾಕ್ಷಿಯಾದರು.














Click it and Unblock the Notifications