ಜೂನ್ 1ರಿಂದ 'ಕರ್ನಾಟಕ ಪಬ್ಲಿಕ್ ಸ್ಕೂಲ್' ಶುರು: ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ, ಶಿಕ್ಷಣ ಇಲಾಖೆ ಸಭೆಯ ಹೈಲೈಟ್ಸ್ ಇಲ್ಲಿದೆ
ಬೆಂಗಳೂರು: ರಾಜ್ಯದ ಶೈಕ್ಷಣಿಕ ವಲಯದಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಹತ್ವಾಕಾಂಕ್ಷೆಯ 'ಕರ್ನಾಟಕ ಪಬ್ಲಿಕ್ ಸ್ಕೂಲ್' (KPS) ಯೋಜನೆಗೆ ಜೂನ್ 1 ರಂದು ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಿಎಂ, ಶಿಕ್ಷಣ ವ್ಯವಸ್ಥೆಯ ಸುಧಾರಣೆ ಹಾಗೂ ಈ ಬಾರಿಯ ಎಸ್‌ಎಸ್‌ಎಲ್‌ಸಿ, ಪಿಯುಸಿ ಫಲಿತಾಂಶಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು.

ಶಿವಮೊಗ್ಗದಲ್ಲಿ ಜೂನ್ 1ರಂದು ಕರ್ನಾಟಕ ಪಬ್ಲಿಕ್ ಸ್ಕೂಲ್ ಯೋಜನೆಗೆ ಅದ್ಧೂರಿ ಚಾಲನೆ ದೊರೆಯಲಿದೆ. ಒಂದು ಕೆಪಿಎಸ್ ಶಾಲೆಯಲ್ಲಿ ಬರೋಬ್ಬರಿ 1200 ಮಕ್ಕಳಿಗೆ ಪ್ರವೇಶಾವಕಾಶ ಕಲ್ಪಿಸಲಾಗುವುದು. ಎಲ್‌ಕೆಜಿಯಿಂದ ಪಿಯುಸಿವರೆಗೆ ಒಂದೇ ಸೂರಿನಡಿ, ಕನ್ನಡ ಹಾಗೂ ಇಂಗ್ಲಿಷ್ ಎರಡೂ ಮಾಧ್ಯಮಗಳಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ರಾಜ್ಯಾದ್ಯಂತ ಒಟ್ಟು 800 ಕೆಪಿಎಸ್ ಶಾಲೆಗಳು ಸಂಪೂರ್ಣವಾಗಿ ಸಿದ್ಧಗೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಈ ವರ್ಷ 800 ಕೆಪಿಎಸ್ ಶಾಲೆಗಳನ್ನು ಆರಂಭಿಸಲು ಅಗತ್ಯವಿರುವ ಟೆಂಡರ್ ಪ್ರಕ್ರಿಯೆಗಳನ್ನು ಆದಷ್ಟು ಬೇಗನೆ ಪೂರ್ಣಗೊಳಿಸುವಂತೆ ಸಿಎಂ ನಿರ್ದೇಶನ ನೀಡಿದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಈ ಶಾಲೆಗಳಿಗೆ ಶಾಲಾ ಬಸ್ ವ್ಯವಸ್ಥೆ ಕಲ್ಪಿಸುವ ಬಗ್ಗೆಯೂ ಪರಿಶೀಲನೆ ನಡೆಸಲು ಸೂಚಿಸಲಾಗಿದೆ. ಅಲ್ಲದೆ, ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಹಣಕಾಸು ಇಲಾಖೆಗೆ ತಕ್ಷಣವೇ ಪ್ರಸ್ತಾವನೆ ಸಲ್ಲಿಸುವಂತೆ ಆದೇಶಿಸಿದ್ದಾರೆ. ಇದರ ಜೊತೆಗೆ, ಶಾಲಾ ಮಕ್ಕಳಿಗೆ ಉಚಿತ ಪಠ್ಯಪುಸ್ತಕಗಳೊಂದಿಗೆ ಉಚಿತ ನೋಟ್ ಬುಕ್ ವಿತರಿಸುವ ಸರ್ಕಾರದ ಮಟ್ಟದಲ್ಲಿರುವ ಬೇಡಿಕೆಯನ್ನೂ ಪರಿಶೀಲಿಸಲಾಗುತ್ತಿದೆ.
ಫಲಿತಾಂಶದಲ್ಲಿ ಭಾರಿ ಜಿಗಿತ
ಸಭೆಯಲ್ಲಿ ರಾಜ್ಯದ ಬೋರ್ಡ್ ಪರೀಕ್ಷೆಗಳ ಫಲಿತಾಂಶದ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಯಿತು. ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 94.10ರಷ್ಟು ಫಲಿತಾಂಶ ದಾಖಲಾಗಿದ್ದು, ಕಳೆದ ವರ್ಷಕ್ಕಿಂತ ಶೇ. 14.06ರಷ್ಟು ಭಾರಿ ಏರಿಕೆ ಕಂಡಿದೆ. ದ್ವಿತೀಯ ಪಿಯುಸಿಯಲ್ಲಿ ಶೇ. 86.48ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕಳೆದ ಬಾರಿಗಿಂತ ಶೇ. 13ರಷ್ಟು ಹೆಚ್ಚಳವಾಗಿದೆ. ವಿಶೇಷವೆಂದರೆ, ಎಸ್‌ಎಸ್‌ಎಲ್‌ಸಿಯಲ್ಲಿ ಈ ವರ್ಷ 2393 ಶಾಲೆಗಳು ಶೇ. 100ರಷ್ಟು ಫಲಿತಾಂಶ ದಾಖಲಿಸಿವೆ. ಇದು ಕಳೆದ ವರ್ಷ ಕೇವಲ 766 ಶಾಲೆಗಳಿಗೆ ಸೀಮಿತವಾಗಿತ್ತು.
ಗ್ರಾಮೀಣ ವಿದ್ಯಾರ್ಥಿಗಳ ಮೇಲುಗೈ
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಎರಡರಲ್ಲೂ ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಎಸ್‌ಎಸ್‌ಎಲ್‌ಸಿಯಲ್ಲಿ ಗ್ರಾಮೀಣ ಭಾಗದ ಉತ್ತೀರ್ಣ ಪ್ರಮಾಣ ಶೇ. 94.80 ಆಗಿದ್ದರೆ, ನಗರ ಪ್ರದೇಶದ್ದು ಶೇ. 93.20 ಆಗಿದೆ. ಪಿಯುಸಿಯಲ್ಲಿ ಗ್ರಾಮೀಣ ವಿದ್ಯಾರ್ಥಿಗಳ ಸಾಧನೆ ಶೇ. 87.62 ರಷ್ಟಿದ್ದರೆ, ನಗರ ಪ್ರದೇಶದ್ದು ಶೇ. 85.95 ರಷ್ಟಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (SC/ST) ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಶೇ. 18ರಷ್ಟು ಏರಿಕೆಯಾಗಿದೆ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಫಲಿತಾಂಶದಲ್ಲಿಯೂ ಗಣನೀಯ ಸುಧಾರಣೆಯಾಗಿದೆ ಎಂದು ಸಭೆಯಲ್ಲಿ ವಿವರಿಸಲಾಯಿತು.
ಸಭೆಯಲ್ಲಿ ಮಾಹಿತಿ ನೀಡಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ, "ಮುಖ್ಯಮಂತ್ರಿಗಳ ಸ್ಪಷ್ಟ ನಿರ್ದೇಶನದಂತೆ ಶಿಕ್ಷಕರು ಮತ್ತು ಪೋಷಕರ ಸಭೆ ನಡೆಸಿ, ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು, ರಾಜ್ಯಮಟ್ಟದಲ್ಲಿ ಪೂರ್ವಭಾವಿ ಪರೀಕ್ಷೆಗಳನ್ನು ನಡೆಸಿದ್ದರಿಂದ ಈ ಬಾರಿಯ ಫಲಿತಾಂಶ ಅತ್ಯುತ್ತಮವಾಗಿ ಮೂಡಿಬಂದಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಸಗಿ ಶಾಲೆಗಳಿಗಿಂತ ಶೇ. 2ರಷ್ಟು ಹೆಚ್ಚು ಫಲಿತಾಂಶ ದಾಖಲಾಗಲು ಅಲ್ಲಿ ನೀಡಲಾದ ವಿಶೇಷ ತರಬೇತಿಯೇ ಕಾರಣ. ಗಮನಾರ್ಹ ಅಂಶವೆಂದರೆ, ಈ ಬಾರಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಮೂರನೇ ಅಂತಿಮ ಪರೀಕ್ಷೆ ಇರುವುದಿಲ್ಲ" ಎಂದು ಸ್ಪಷ್ಟಪಡಿಸಿದರು.












Click it and Unblock the Notifications